ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ

ಬೆಂಗಳೂರು 

         ಬರುವ ಜನವರಿ 1 ರ ವೇಳೆಗೆ 18 ವರ್ಷ ತುಂಬಲಿರುವವರು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತ ಚಲಾವಣೆ ಮಾಡಬಹುದು. ಆದರೆ ಇದಕ್ಕಾಗಿ ಹೊಸಬರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಲು ಈಗಲೇ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು.

        ಬರುವ 2019ರ ಜನವರಿ 1ಕ್ಕೆ ಅನ್ವಯವಾಗುವಂತೆ 18 ತುಂಬಿರುವವರು ಅಥವಾ ತುಂಬಲಿರುವವರು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

          ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ನಡೆಯುತ್ತಿರುವ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಹಳೆಯ ಮತದಾರ ಪಟ್ಟಿಯಂತೆ ಚುನಾವಣೆ ನಡೆಸಲಾಗುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿದೆ. ಈ ವರ್ಷ ಆಗಸ್ಟ್ 27 ರಿಂದ ಸೆಪ್ಟೆಂಬರ್ 15 ರವರೆಗೆ ಮತ ಕ್ಷೇತ್ರಗಳಲ್ಲಿ ಅಧಿಕಾರಿಗಳು ಮತದಾರರ ದಾಖಲಾತಿಗಳನ್ನು ಪರಿಶೀಲಿಸಿ, ಮತದಾರರ ಪಟ್ಟಿಯಲ್ಲಿ ಸುಧಾರಣೆ ತಂದಿದ್ದಾರೆ. ಇದರ ಪರಿಣಾಮ ಪರಿಷ್ಕತ ಮತದಾರರ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ ಎಂದರು.

        ನೋಂದಾಯಿತ ಮತದಾರರು ಪರಿಷ್ಕ್ರತ ಪಟ್ಟಿಯಲ್ಲಿನ ದೋಷಗಳನ್ನು ಗ್ರಹಿಸಿ ಸಲಹೆ ಸೂಚನೆ ನೀಡುವಂತೆ ಮನವಿ ಮಾಡಲಾಗಿದೆ. ಪ್ರತಿಯೊಂದು ನೊಂದಾಯಿತ ರಾಜಕೀಯ ಪಕ್ಷಗಳು ಇದರ ಪರಿಶೀಲನೆಗಾಗಿ ಬೂತ್ ಮಟ್ಟದ ಏಜಂಟರನ್ನು ನೇಮಿಸುವಂತೆ ಕೋರಲಾಗಿದೆ. ಲೋಪದೋಷಗಳಿದ್ದರೆ ಅವುಗಳನ್ನು ಸಂಬಂಧಪಟ್ಟ ಮತದಾರರ ಪರಿಷ್ಕರಣಾ ಅಧಿಕಾರಿಗಳ ಗಮನಕ್ಕೆ ತರುವಂತೆ ಸಲಹೆ ನೀಡಲಾಗಿದೆ ಎಂದು ಹೇಳಿದರು.

         ಲೋಕಸಭೆಗೆ ಮುನ್ನ ಅಂತಿಮ ಮತದಾರರ ಪಟ್ಟಿ ಬರುವ ಜನವರಿ 4 ರಂದು ಪ್ರಕಟಿಸಲಾಗುವುದು. ಈಗಿರುವ ಪಟ್ಟಿಯಲ್ಲಿ ಒಟ್ಟು 5 ಕೋಟಿ 3 ಲಕ್ಷ 40 ಸಾವಿರದ 159 ಮತದಾರರಿದ್ದು, ಇವರಲ್ಲಿ 4 ಲಕ್ಷ 65 ಸಾವಿರದ 866 ಮತದಾರರು 18 ಅಥವಾ 19 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಸಂಜೀವ್ ಕುಮಾರ್ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap