ಮದ್ಯ ಮಾರುವವನು ಎಸಿ ರೂಮ್‍ನಲ್ಲಿ ಇದ್ದಾನೆ. ಹಾಲು ಮಾರುವವನು ಬೀದಿಯಲ್ಲಿ ಇದ್ದಾನೆ. ಇದಕ್ಕೆಲ್ಲ ಕಾರಣ ನಮ್ಮನ್ನು ಆಳುವ ರಾಜಕಾರಣಿಗಳು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಾಟೀಲ್ ಆಕ್ರೋಶ

ಕೊರಟಗೆರೆ

             ಮದ್ಯ ಮಾರುವವನು ಎಸಿ ರೂಮ್‍ನಲ್ಲಿ ಇದ್ದಾನೆ. ಹಾಲು ಮಾರುವವನು ಬೀದಿಯಲ್ಲಿ ಇದ್ದಾನೆ. ಇದಕ್ಕೆಲ್ಲ ಕಾರಣ ನಮ್ಮನ್ನು ಆಳುವ ರಾಜಕಾರಣಿಗಳು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಾಟೀಲ್ ಗುಡುಗಿದರು. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಬೊಮ್ಮಲದೇವಿಪುರ ಗ್ರಾಪಂ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

            ಚುನಾವಣೆ ಸಮಯದಲ್ಲಿ ಹಣ, ಎಣ್ಣೆ ಹಂಚಿ ನಮ್ಮ ರೈತರ ಒಳ್ಳೆತನವನ್ನು ಬಂಡವಾಳ ಮಾಡಿಕೊಂಡು ನಮ್ಮ ಸಮಾಧಿಯ ಮೇಲೆ ಸೌಧ ಕಟ್ಟಿ ಮೆರೆಯುತ್ತಿದ್ದಾರೆ. ರೈತರು ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿಯನ್ನು ಯಾವಾಗ ಪ್ರಶ್ನೆ ಮಾಡುವುದಿಲ್ಲವೋ ಅಲ್ಲಿಯವರೆಗೂ ಯಾರೂ ಕೂಡ ನಮ್ಮ ಸಮಸ್ಯೆ ಬಗೆಹರಿಸುವುದಿಲ್ಲ. ನಮ್ಮ ರೈತ ಸಂಘಕ್ಕೆ ಯಾವುದೇ ಜಾತಿ ಇಲ್ಲ, ಯಾವುದೇ ಭೇದವಿಲ್ಲ, ನಾವು ಎಲ್ಲರೂ ಒಂದೇ ಎಂದು ತಿಳಿಸಿದರು.

            ಹಸಿರುಸೇನೆ ರಾಜ್ಯ ಕಾರ್ಯದರ್ಶಿ ಕೆಂಕೆರೆಸತೀಶ್ ಮಾತನಾಡಿ, ದೇಶದ ರೈತ ಸರಕಾರದ ಗುಲಾಮನಲ್ಲ. ಅನ್ನನೀಡುವ ರೈತ ದೇಶದ ಬೆನ್ನೆಲುಬು. ರೈತ ಸಾಲಗಾರನಲ್ಲ, ಸರ್ಕಾರವೇ ರೈತರಿಗೆ ಬಾಕಿದಾರ. ರೈತನಿಲ್ಲದೇ ಬ್ಯಾಂಕು ಇಲ್ಲ, ಸರಕಾರವೂ ಇಲ್ಲ. ಸಾಲಕ್ಕೆ ಹೆದರಿ ರೈತರು ಆತ್ಮಹತ್ಯೆಯ ಯೋಚನೆ ಕೂಡ ಮಾಡಬಾರದು. ನೀವು ಯಾವುದೇ ಸಂದರ್ಭದಲ್ಲಿ ಕರೆದರೂ ನಿಮ್ಮ ಸಮಸ್ಯೆಗೆ ನಾವೆಲ್ಲ ನಿಮ್ಮ ಜೊತೆ ಇರುತ್ತೇವೆ ಎಂದರು.

            ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಿವರತ್ನಮ್ಮ ಮಾತನಾಡಿ, ನಮ್ಮ ಮಹಿಳೆಯರು ಅತಿಹೆಚ್ಚು ಸಂಖ್ಯೆಯಲ್ಲಿ ಹೊಲದಲ್ಲಿ ದುಡಿಯುತ್ತಾರೆ. ಹೊಲದಲ್ಲಿ ಕೆಲಸ ಮಾಡುವ ರೈತನಿಗೆ ಯಾವುದೇ ವಿಮೆ ಇಲ್ಲ. ಎಲ್ಲರಿಗೂ ಪಿಂಚಣಿಯ ಸೌಲಭ್ಯ ಸಿಗಬೇಕು. ಅದಕ್ಕಾಗಿ ಸರಕಾರ ರೈತ ಕಾಯಿದೆಯನ್ನು ರೂಪಿಸಿ, 60 ವರ್ಷ ತುಂಬಿದ ಪ್ರತಿ ರೈತನಿಗೆ 5 ಸಾವಿರ ರೂ. ಮಾಸಿಕ ಪಿಂಚಣಿ ನೀಡಬೇಕು ಎಂದು ರಾಷ್ಟ್ರಪತಿಯವರಿಗೆ ನಮ್ಮ 20 ರೈತ ಸಂಘಗಳು ಮನವಿ ಮಾಡಿವೆ ಎಂದು ಹೇಳಿದರು.

           ಜಿಲ್ಲಾ ಗೌರವಾಧ್ಯಕ್ಷ ಧನÀಂಜಯಾರಾಧ್ಯ ಮಾತನಾಡಿ, ನಮ್ಮ ರೈತರು ಕೃಷಿಕಾರ್ಮಿಕರು ಇನ್ನೂ ಸ್ವ್ವಾತಂತ್ರ್ಯ ಸಿಕ್ಕಿಲ್ಲ. ಕಾಳಸಂತೆಕೋರರಿಗೆ, ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಇವತ್ತು ಸ್ವಾತಂತ್ರ್ಯ ಸಿಕ್ಕಿದೆ. ರಾಜ್ಯ ಮತ್ತು ಕೊರಟಗೆರೆಯಲ್ಲಿ ಕಳೆದ 6 ವರ್ಷದಿಂದ ಮಳೆಯಿಲ್ಲದೇ ಬರಗಾಲದಿಂದ ರೈತರು ಕಂಗಾಲಾಗಿದ್ದಾರೆ. ಶಾಶ್ವತ ನೀರಾವರಿ ಯೋಜನೆಯಾದ ಏತ್ತಿನಹೊಳೆ ಯೋಜನೆ ಬೇಗ ಪ್ರಾರಂಭ ಮಾಡಿ ಇಲ್ಲಿನ ರೈತರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದರು.

            ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘ ತಾಲ್ಲೂಕು ಅಧ್ಯಕ್ಷ ಸಿದ್ದರಾಜು, ಶಿರಾ ಘಟಕದ ಅಧ್ಯಕ್ಷ ಬಸವರಾಜು, ತಾಲ್ಲೂಕು ಘಟಕದ ಪ್ರಸನ್ನಕುಮಾರ್, ಲೋಕೇಶ್, ಶಶಿಧರ್, ಗಂಗಹನುಮಯ್ಯ, ರಾಜಗೋಪಾಲ ರೆಡ್ಡಿ, ತಿಗಳರಪಾಳ್ಯ ಘಟಕದ ಅಧ್ಯಕ್ಷ ಈರಣ್ಣ, ಪದಾಧಿಕಾರಿಗಳಾದ ಮಲ್ಲೇಶಯ್ಯ, ಗೋಪಾಲಯ್ಯ, ಸುಬ್ರಹ್ಮಣ್ಯ, ಶಿವಲಿಂಗಯ್ಯ, ರಾಮಯ್ಯ, ಸತೀಶ್, ಸಿದ್ದಪ್ಪ, ಮಂಜುನಾಥ್, ಶಿವಣ್ಣ, ಬಸವರಾಜು, ವೆಂಕಟೇಶ್, ಅರುಣ್ ಕುಮಾರ್, ನರಸಿಂಹರಾಜು, ಲಕ್ಷ್ಮಣ, ರಾಜು, ಶ್ರೀನಿವಾಸ್, ರಾಮಸ್ವಾಮಿ, ಶಿವರಾಜು, ಉಮೇಶ್, ಸೇರಿದಂತೆ ಇತರರು ಇದ್ದರು.

Recent Articles

spot_img

Related Stories

Share via
Copy link
Powered by Social Snap