ಮಧುಗಿರಿ ಬೆಟ್ಟದಲ್ಲಿ ಪತ್ತೆಯಾಗಿದ್ದ ಶವವನ್ನು ಪ್ರಪಾತದಿಂದ ಮೇಲಕ್ಕೆ ತರುವಲ್ಲಿ ಮಧುಗಿರಿ ಪೋಲೀಸರು ಯಶಸ್ವಿ.

ಮಧುಗಿರಿ :

             ಮಧುಗಿರಿ ಏಕಶಿಲಾ ಬೆಟ್ಟದಲ್ಲಿ ಪತ್ತೆಯಾಗಿದ್ದ ಶವವನ್ನು ಜ್ಯೋತಿ ರಾಜ್ ಅಲಿಯಾಸ್ ಕೋತಿ ರಾಮು ಮತ್ತು ತಂಡದ ಸಹಕಾರದಿಂದ ಪ್ರಪಾತದಿಂದ ಮೇಲಕ್ಕೆ ತರುವಲ್ಲಿ ಮಧುಗಿರಿ ಪೋಲೀಸರು ಯಶಸ್ವಿಯಾಗಿದ್ದಾರೆ.

              ಬೆಳಗಿನ ಜಾವ 5 ಗಂಟೆಗೆ ಆರಂಭವಾದ ಕಾರ್ಯಾಚರಣೆ ಮದ್ಯಾಹ್ನ 1.30 ಗಂಟೆಗೆ ಕೊನೆಗೊಂಡಿದ್ದು, ಮೃತ ದೇಹವನ್ನು ಏಕಶಿಲಾ ಬೆಟ್ಟದ ಮೇಲಿಂದ ಜ್ಯೋತಿ ರಾಜ್ ತಂಡ ಮತ್ತು ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನಿಂದ ಹೊತ್ತು ತರಲಾಯಿತು. ಮೃತ ವ್ಯಕ್ತಿಯು ಮಧುಗಿರಿ ಕಸಬಾ ವ್ಯಾಪ್ತಿಯ ತುಂಗೋಟಿ ಗ್ರಾಮದ ಲಾರಿ ಚಾಲಕ ಹನುಮಂತರಾಜು (40) ಎಂದು ಗುರುತಿಸಲಾಗಿದ್ದು, ಬುಧವಾರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನೂರಾರು ಚಾರಣಿಗರ ಜತೆ ಬೆಟ್ಟವೇರಿದ್ದರೂ ಸಹ ಈ ವ್ಯಕ್ತಿ ಪ್ರಪಾತಕ್ಕೆ ಬಿದ್ದ ಘಟನೆ ಯಾರ ಅರಿವಿಗೂ ಬಂದಿಲ್ಲ. ಈತ ದಾರಿ ತಪ್ಪಿ ಕಾಲು ಜಾರಿ ಮೃತ ಪಟ್ಟನೋ ಅಥವಾ ಆತ್ಮಹತ್ಯೆ ಮಾಡಿಕೊಂಡನೋ ಎಂಬುದು ಪೋಲೀಸ್ ತನಿಖೆಯಿಂದ ಹೊರಬೀಳಬೇಕಿದೆ.

                  ಬುಧವಾರ ಕಾರ್ಯಾಚರಣೆ ನಡೆಸಲು ಹೋಗಿ ವಿಫಲರಾದ ಮಧುಗಿರಿ ಪೋಲೀಸರು ಮಳೆ ಮತ್ತು ಕತ್ತಲಾದ್ದರಿಂದ ವಾಪಾಸ್ಸಾಗಿ ಚಿತ್ರದುರ್ಗದ ಜ್ಯೋತಿರಾಜ್ ಮೊರೆಹೋಗಿದ್ದರು. ಚಿತ್ರದುರ್ಗದಿಂದ ಬಂದ ಜ್ಯೋತಿರಾಜ್ ತಂಡವೂ ಬುಧವಾರ ರಾತ್ರಿಯೇ ಮಧುಗಿರಿಗೆ ಆಗಮಿಸಿತ್ತು, ಗುರುವಾರ ಬೆಳಗಿನ ಜಾವ 5 ಗಂಟೆಗೆ ತಂಡ ಸ್ಥಳೀಯ ಯುವಕರು ಮತ್ತು ಪೋಲೀಸರೊಂದಿಗೆ ಅಗತ್ಯ ಸಲಕರಣೆಗಳು ಮತ್ತು ಬೆಟ್ಟವನ್ನಿಳಿಯಲು ಬೇಕಾದ ಹಗ್ಗದೊಂದಿಗೆ ಬೆಟ್ಟದ ತುತ್ತ ತುದಿಗೆ ತಲುಪಿದ್ದಾರೆ. ಸುಮಾರು 600 ಅಡಿ ಆಳಕ್ಕೆ ಬಿದ್ದ ಶವದ ಬಳಿಗೆ ತಲುಪುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಸತತವಾಗಿ ಸುರಿಯುತ್ತಿದ್ದ ಮಳೆಯಿಂದ ಬೆಟ್ಟವೇರುವುದೇ ತ್ರಾಸದಾಯಕವಾಗಿದ್ದ ಇಂತಹ ಪರಿಸ್ಥಿತಿಯಲ್ಲೂ ಶವ ಬಗ್ಗೆ ಸ್ಥಳೀಯ ಶವ ಹೊರುವ ಯುವಕ ಜಬಿಯ ಬಳಿ ಮಾಹಿತಿ ಪಡೆದು ಕೊಂಡರು.
ನಂತರ ಹಗ್ಗವನ್ನು ಒಂದು ಬಂಡೆಗೆ ಕಟ್ಟಿ ಸುಮಾರು 600 ಅಡಿ ಆಳವಿರುವ ಮಾವಿನದೊಣೆಗೆ ಬಿದ್ದಿದ್ದ ಶವದ ಬಳಿಗೆ ಸತತ ಮಳೆ ಮತ್ತು ಗಾಳಿಯ ನಡುವೆಯೂ ತನ್ನ ಸಹಾಯಕ ಬಸವರಾಜುನೊಂದಿಗೆ ಪ್ರಪಾತಕ್ಕೆ ಇಳಿದು ಶವವನ್ನು ಚೀಲದಲ್ಲಿ ಸುತ್ತಿ ಹಗ್ಗ ಕಟ್ಟಿ ಮೇಲಕ್ಕೆ ಕಳುಹಿಸುವಾಗ ಹಗ್ಗವು ಸಡಿಲವಾಗಿದ್ದರಿಂದ ಸುಮಾರು 45 ನಿಮಿಷಗಳ ಕಾಲ ಶವ ಬೆಟ್ಟದ ಮಧ್ಯ ಭಾಗದಲ್ಲಿಯೇ ಉಳಿದು ಕೊಂಡಿತ್ತು.

            ನಂತರ ಜ್ಯೋತಿರಾಜ್ ಪ್ರಪಾತದಿಂದ ಮೇಲೇರಿ ಹಗ್ಗವನ್ನು ಸರಿಪಡಿಸಿದರು. ಸ್ಥಳೀಯ ಯುವಕರ ನೆರವಿನೊಂದಿಗೆ ಶವವನ್ನು ಬೆಟ್ಟದಿಂದ ಕೆಳಕ್ಕೆ ತರಲಾಗಿದೆ. ಮೇಲಿನಿಂದ ಬಿದ್ದ ರಭಸಕ್ಕೆ ಕಲ್ಲುಗಳಿಗೆ ಸಿಲುಕಿದ ಮೃತ ದೇಹದ ತುಂಬಾ ತರಚಿದ ಗಾಯಗಳಾಗಿವೆ.
ಬೆಟ್ಟದ ಮೇಲೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಪಟ್ಟಣದ ತುಂಬಾ ಹರಡಿ ಬೆಟ್ಟದ ಬುಡದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಶವವನ್ನು ಕೆಳಗಿಳಿಸಿ ತಂದ ಜ್ಯೋತಿರಾಜ್ ಜೊತೆ ಸೆಲ್ಫಿಗಳನ್ನು ತೆಗೆದುಕೊಂಡು ಸಂಭ್ರಮಿಸಿ ಅಭಿನಂದಿಸಿದ ಜನತೆ ಸುಮಾರು 6200 ರೂಗಳ ಆರ್ಥಿಕ ಸಹಾಯ ಮಾಡಿ ಮಾನವಿಯತೆ ಮೆರೆದರು.

                ಕಷ್ಟದಲ್ಲಿ ಸಿಲುಕಿರುವವರಿಗೆ ಸಹಾಯ ಮಾಡುವುದರಲ್ಲಿ ನಾನು ಸಂತೋಷವನ್ನು ಕಾಣುತ್ತಿದ್ದು, ಪೋಲೀಸರ ಕರೆಗೆ ಓಗೊಟ್ಟು ಮಧುಗಿರಿ ಬೆಟ್ಟದಲ್ಲಿ ಬಿದ್ದಿದ್ದ ಮೃತ ದೇಹವನ್ನು ತರುವುದರಲ್ಲಿ ಯಶಸ್ವಿಯಾಗಿದ್ದೇನೆ. ಬೆಟ್ಟದಿಂದ ಕಂದಕಕ್ಕೆ ಇಳಿಯುವಾಗ ಬಹಳ ಜೋರಾಗಿ ಮಳೆ ಮತ್ತು ಗಾಳಿ ಸುರಿಯುದ್ದರೂ ಜೊತೆಗೆ 23 ಆಪರೇಷನ್, 4 ರಾಡ್‍ಗಳನ್ನ ನನ್ನ ದೇಹಕ್ಕೆ ಅಳವಡಿಸಿಕೊಂಡಿದ್ದರೂ ಸಹ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲೇಬೇಕೆಂಬ ದೃಡ ಸಂಕಲ್ಪದಿಂದ ಶವವನ್ನು ಮೇಲಕ್ಕೆ ತಂದಿದ್ದೇನೆ. ಇದಕ್ಕೆ ಸ್ಥಳೀಯರು ನೀಡಿದ ಸಹಕಾರ ಬಹಳ ಅಮೂಲ್ಯ. ಜಿಲ್ಲಾ ಆಡಳಿತ ಅನುಮತಿ ನೀಡಿದರೆ ನವೆಂಬರ್ 1 ರಂದು ಬೆಟ್ಟದ ಹಿಂಭಾಗದಿಂದ ಬೆಟ್ಟವೇರಿ ತೋರಿಸುತ್ತೇನೆ – ಜ್ಯೋತಿರಾಜ್ ಅಲಿಯಾಸ್ ಕೋತಿ ರಾಮ
                ಮಧುಗಿರಿ ಏಕಶಿಲಾ ಬೆಟ್ಟದಲ್ಲಿ ನಿರಂತರವಾಗಿ ಸಾವಿನಂತಹ ಗಂಬೀರ ಪ್ರಕರಣಗಳು ವರದಿಯಾಗುತ್ತಿರುವುದು ದುರಂತ. ಈ ಏಕಶಿಲಾ ಬೆಟ್ಟವು ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ಬರಲಿದ್ದು, ಬೆಟ್ಟವನ್ನೇರುವ ಚಾರಣಿಗರ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ. – ಪಾಲಾಕ್ಷ ಪ್ರಭು ಪಿಎಸೈ ಮಧುಗಿರಿ.

Recent Articles

spot_img

Related Stories

Share via
Copy link
Powered by Social Snap