ಮರಳಿ ಬಿಜೆಪಿ ಬಾವುಟ ಹಿಡಿದ ಬಸವರಾಜ ನಾಯ್ಕ

ದಾವಣಗೆರೆ:

      2018ರ ವಿಧಾನಸಭಾ ಚುನಾವಣೆಯಲ್ಲಿ ಮಾಯಕೊಂಡ ಮೀಸಲು ಕ್ಷೇತ್ರದಿಂದ ಬಿಜೆಪಿ ಟಿಕೇಟ್ ಸಿಗದ ಕಾರಣಕ್ಕೆ ಬಿಜೆಪಿ ತೊರೆದು, ಜೆಡಿಯುನಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಈಗ ಮರಳಿ ಬಿಜೆಪಿ ಬಾವುಟ ಹಿಡಿದಿದ್ದಾರೆ.ನಗರದ ಪಿ.ಬಿ.ರಸ್ತೆಯ ಅರುಣಾ ವೃತ್ತದ ಬಳಿಯಲ್ಲಿರುವ ಬಿಜೆಪಿ ಲೋಕಸಭಾ ಚುನಾವಣಾ ಕಚೇರಿಯಲ್ಲಿ ಸೋಮವಾರ ಸಂಜೆ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರಾದ ಎಸ್.ಎ.ರವೀಂದ್ರನಾಥ್, ಪ್ರೊ.ಎನ್.ಲಿಂಗಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಅವರ ಸಮ್ಮುಖದಲ್ಲಿ ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾದರು.

       ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ್, ಕಳೆದ ಎರಡು ತಿಂಗಳ ಹಿಂದೆಯೇ ಪಕ್ಷದ ಮುಖಂಡ ಮಹಾಬಲೇಶ್ವರಗೌಡ್ರು ಬಸವರಾಜ ನಾಯ್ಕ ಅವರೊಂದಿಗೆ ಸಂಧಾನ ನಡೆಸಿ, ಬಿಜೆಪಿ ಸೇರುವಂತೆ ಮನವೋಲಿಸಿ, ನನ್ನ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ನಾನು ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ.ಎನ್.ಲಿಂಗಣ್ಣ ಹಾಗೂ ಮಾಯಕೊಂಡ ಮಂಡಲ ಅಧ್ಯಕ್ಷ ನಾಗರಾಜ್ ಮಳ್ಳೆಕಟ್ಟೆ ಚರ್ಚಿಸಿದಾಗ, ನಮ್ಮ ಪಕ್ಷದಲ್ಲಿ ಯಾವುದೇ ತಾರತಮ್ಯವಿಲ್ಲ. ಪಕ್ಷಕ್ಕೆ ಬರುವ ಎಲ್ಲರನ್ನೂ ಸೇರಿಸಿಕೊಂಡು ಪಕ್ಷದ ಬಲವರ್ಧನೆ ಮಾಡೋಣ ಎಂಬುದಾಗಿ ಸಮ್ಮತಿ ನೀಡಿದ್ದರ ಹಿನ್ನೆಲೆಯಲ್ಲಿ ಇಂದು ಬಸವರಾಜ ನಾಯ್ಕ ಪಕ್ಷವನ್ನು ಸೇರುತ್ತಿದ್ದು, ನಾಳೆಯಿಂದಲೇ ಜಿಲ್ಲಾದ್ಯಂತ ಸಂಚರಿಸಿ, ಪಕ್ಷ ಸಂಘಟಿಸಲಿದ್ದಾರೆಂದು ತಿಳಿಸಿದರು.

       ಬಸವರಾಜ ನಾಯ್ಕ ಯಾವುದೇ ಆಮೀಷ, ಅಧಿಕಾರಕ್ಕಾಗಿ ಪಕ್ಷವನ್ನು ಸೇರುತ್ತಿಲ್ಲ. ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು, ನನ್ನ ಹಾಗೂ ಎಸ್.ಎ.ರವೀಂದ್ರನಾಥ್ ಅವರ ಕೈಬಲ ಪಡಿಸಲು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆಂದು ಹೇಳಿದರು.

         ನನಗೆ ಕಾಂಗ್ರೆಸ್ ಅಭ್ಯರ್ಥಿಯೇ ಎದುರಾಳಿಯಾಗಿದ್ದಾರೆ. ಜಿಲ್ಲೆಯಲ್ಲಿ ನನ್ನ ಹಾಗೂ ಬಿಜೆಪಿ ಸರ್ಕಾರದ ಸಾಧನೆಯನ್ನು ಹಾಗೂ ನರೇಂದ್ರ ಮೋದಿ ನಾಯಕತ್ವವನ್ನು ಒಪ್ಪಿಕೊಂಡಿದ್ದು, ಈ ಬಾರಿ ಮತ್ತೊಮ್ಮೆ ಮೋದಿ, ಮಗದೊಮ್ಮೆ ಸಿದ್ದೇಶ್ವರ್ ಎಂಬುದಾಗಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.

        ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಮಾತನಾಡಿ, ದೇಶದ ಸಮರ್ಥ ನಾಯಕ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕೆಂಬ ಮಾಯಕೊಂಡ ಕ್ಷೇತ್ರದ ಕಾರ್ಯಕರ್ತರ ಅಭಿಲಾಷೆಯಾಗಿತ್ತು. ಹೀಗಾಗಿ ವೈಯಕ್ತಿಕ ಭವಿಷ್ಯಕ್ಕಿಂತ ದೇಶದ ಭವಿಷ್ಯ ಕಾಪಾಡುವುಡು ಎಲ್ಲರ ಜವಾಬ್ದಾರಿಯಾಗಿದೆ. ಹೀಗಾಗಿ 4ನೇ ಬಾರಿಯೂ ಸಂಸದ ಜಿ.ಎಂ.ಸಿದ್ದೇಶ್ವರ ಅವರನ್ನು ಗೆಲ್ಲಿಸಿಕೊಂಡು ಬರುವ ಮೂಲಕ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕೆಂಬ ಕಾರಣಕ್ಕೆ ಜೆಡಿಎಸ್ ತೊರೆದು, ಬಿಜೆಪಿ ಸೇರುತ್ತಿದ್ದೇನೆ ಎಂದು ತಿಳಿಸಿದರು.
ಕಾರಣಾಂತರದಿಂದ ಈ ಹಿಂದೆ ತಪ್ಪುಗಳಾಗಿದ್ದವು. ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿಕೊಂಡು, ಎಸ್.ಎ.ರವೀಂದ್ರನಾಥ್, ಜಿ.ಎಂ.ಸಿದ್ದೇಶ್ವರ್ ಮಾರ್ಗದರ್ಶನದಲ್ಲಿ ಪಕ್ಷ ಸಂಘಟಿಸುತ್ತೇನೆ ಎಂದರು.

         ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ.ಹರೀಶ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್, ತಾ.ಪಂ. ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಜಿ.ಪಂ.ಸದಸ್ಯರಾದ ನಿರ್ಥಡಿ ನಟರಾಜ್, ಲೋಕೇಶ್, ಮುಖಂಡರಾದ ಮಹಾಬಲೇಶ್ವರಗೌಡ್ರು, ಮಳ್ಳೆಕಟ್ಟೆ ನಾಗರಾಜ್, ಕೃಷ್ಣಕುಮಾರ್ ಕೆ.ಎಸ್, ಧನಂಜಯ ಕಡ್ಲೇಬಾಳು, ಕೆ.ಎನ್.ಓಂಕಾರಪ್ಪ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap