ಯಶಸ್ವಿ ಅಭಿಯಂತರರಾಗಲು ಕೌಶಲ್ಯ ಮೈಗೂಡಿಸಿಕೊಳ್ಳಿ

ದಾವಣಗೆರೆ:

  ಬಿಇ ವಿದ್ಯಾರ್ಥಿಗಳು ಕೌಶಲ್ಯ ಮೈಗೂಡಿಸಿಕೊಂಡಲ್ಲಿ ಯಶಸ್ವಿ ಇಂಜಿನಿಯರ್‍ಗಳಾಗಲು ಸಾಧ್ಯವಾಗಲಿದೆ ಎಂದು ಶ್ರೀಶೈಲ ಎಜುಕೇಷನಲ್ ಟ್ರಸ್ಟ್‍ನ ಕಾರ್ಯದರ್ಶಿ ಜಿ.ಎಂ.ಲಿಂಗರಾಜು ಅಭಿಪ್ರಾಯಪಟ್ಟರು.
ನಗರದ ಜಿಎಂಐಟಿ ಕಾಲೇಜಿನಲ್ಲಿ ಶನಿವಾರ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರ 158ನೇ ಜನ್ಮ ದಿನಾಚರಣೆ ಹಾಗೂ 51ನೇ ಅಭಿಯಂತರರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಲಕ್ಕೆ ತಕ್ಕಂತೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಂದಿಕೊಂಡು ಕೌಶಲ್ಯ ಮೈಗೂಡಿಸಿಕೊಂಡರೆ, ಯಶಸ್ಸು ಕಟ್ಟಿಟ್ಟ ಬುತ್ತಿಯಾಗಲಿದೆ ಎಂದರು.

  ಹಿಂದಿನಿ ಹಾಗೂ ಈಗಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮಧ್ಯೆ ಸಾಕಷ್ಟು ವ್ಯತ್ಯಾಸಗಳಿವೆ. ಹಿಂದಿನ ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯಗಳಿರುತ್ತಿರಲಿಲ್ಲ. ಆದರೆ, ಈಗಿನ ವಿದ್ಯಾರ್ಥಿಗಳೀಕೆ ಸಾಕಷ್ಟು ಸೌಲಭ್ಯಗಳಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳುವ ಮೂಲಕ ಸಾಧನೆಗೆ ಮುಂದಾಗಬೇಕೆಂದು ಕಿವಿಮಾತು ಹೇಳಿದರು.

  ಬೆಂಗಳೂರಿನ ಬ್ಲೂ ನೀಮ್ ಮೆಡಿಕಲ್ ಡಿವೈಸಸ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ವಿಷ್ಣು ಭಟ್ ಮಾತನಾಡಿ, ಡಿಜಿಟಲ್ ಟ್ರಾನ್ಸ್‍ಫೋರ್ಮೇಷನ್ ಎಂಬುದರ ನಿಜವಾದ ಒಳಾರ್ಥವನ್ನು ವಿದ್ಯಾರ್ಥಿಗಳು ಅರಿಯಬೇಕು. ಮುಂಬರುವ ದಿನಗಳಲ್ಲಿ ಡಿಜಿಟಲ್ ಟ್ರಾನ್ಸ್‍ಫೋರ್ಮೇಷನ್‍ನಿಂದಾಗಿ ಇಂಜಿನಿಯರಿಂಗ್‍ನ ಎಲ್ಲಾ ವಿಭಾಗಗಳೂ ಒಟ್ಟಾಗಿ ಒಂದೇ ಸೂರಿನಡಿ ದುಡಿಯಬೇಕಾಗುತ್ತದೆ ಎಂದರು.
ಬೆಂಗಳೂರಿನ ಸ್ಮಾರ್ಟ್ ಎಂಜಿನಿಯರ್ಸ್‍ನ ಮಾಲೀಕ ಟಿ.ಟಿ.ರಾಮಚಂದ್ರ ಮಾತನಾಡಿ, ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರನ್ನು ಪ್ರತ್ಯಕ್ಷವಾಗಿ ಕಂಡಿದ್ದ ದಿನಗಳು, ಸರ್ ಎಂವಿ ಅಣೆಕಟ್ಟೆ ನಿರ್ಮಾಣ, ವಿದ್ಯುತ್ ಉತ್ಪಾದನೆ, ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ರಾಜ್ಯ, ರಾಷ್ಟ್ರದ ಅಭ್ಯುದಯಕ್ಕೆ ನೀಡಿದ ಕೊಡುಗೆಗಳನ್ನು ಒಂದೊಂದಾಗಿ ಸ್ಮರಿಸುವ ಮೂಲಕ ಸರ್ ಎಂ.ವಿ. ಸದಾ ವಿದ್ಯಾರ್ಥಿಗಳು, ಯುವಜನರಿಗೆ ಪ್ರೇರಣೆಯಾಗಿದ್ದಾರೆ ಎಂದರು.

  ಬೆಂಗಳೂರಿನ ಟಿಸಿಎಸ್ ಕಂಪನಿಯ ಟೆಲಿಕಾಂ ಅಂಡ್ ಮೀಡಿಯಾ ಡೆಲಿವರಿಯ ಮುಖ್ಯಸ್ಥ ರಮೇಶ ಪ್ರಸನ್ನ ಮಾತನಾಡಿ, ಡಿಜಿಟಲ್ ಟ್ರಾನ್ಸ್‍ಫೋರ್ಮೇಷನ್‍ನಿಂದಾಗಿ ಹಿಂದಿನ ಕಾಲಕ್ಕೂ ಮತ್ತು ಈಗಿನ ಕಾಲಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಈ ಎಲ್ಲಾ ವಿಚಾರವನ್ನು ವಿದ್ಯಾರ್ಥಿಗಳು ಅರಿಯಬೇಕಾಗಿದೆ. ಜೀವನದಲ್ಲಿ ಸರ್ ಎಂ.ವಿಶ್ವೇಶ್ವರಯ್ಯನಂತಹ ಸಾಧಕರನ್ನು ಸ್ಪೂರ್ತಿಯಾಗಿಟ್ಟುಕೊಂಡು, ಉನ್ನತ ಸಾಧನೆ ಮೆರೆಯಬೇಕು ಎಂದು ಸಲಹೆ ನೀಡಿದರು.

  ಕಾಲೇಜು ಪ್ರಾಚಾರ್ಯ ಡಾ.ಪಿ.ಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ಐಇಐ ಅಧ್ಯಕ್ಷ ವೀರಭದ್ರಪ್ಪನವರು ಸಂಸ್ಥೆ ಕಾರ್ಯದರ್ಶಿ ಜಿ.ಎಂ.ಲಿಂಗರಾಜು ಅವರಿಗೆ ಐಇಐ ಸದಸ್ಯತ್ವದ ಪ್ರಮಾಣಪತ್ರ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತಾಧಿಕಾರಿ ವೈ.ಯು.ಸುಭಾಶ್ಚಂದ್ರ, ಸಿವಿಲ್ ವಿಭಾಗ ಮುಖ್ಯಸ್ಥ ಡಾ.ಎಚ್.ಎಸ್.ಗೋವರ್ದನಸ್ವಾಮಿ, ಇ ಎಸ್ ವಿಭಾಗ ಮುಖ್ಯಸ್ಥ ಡಾ.ಬಿ.ಎಸ್.ಸುನಿಲಕುಮಾರ, ಐಇಐ ಸಂಯೋಜಕ ಡಾ.ಸಿ.ವಿ.ಶ್ರೀನಿವಾಸ, ವಿದ್ಯಾರ್ಥಿ ಅಲ್ಲಮಪ್ರಭು ಮತ್ತಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap