ಯುವ ಶಕ್ತಿಯ ಪರಿಶ್ರಮದಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ-ಶಾಸಕ ಬಿ.ಸತ್ಯನಾರಾಯಣ್

ಶಿರಾ

                ದೇಶದ ಚುಕ್ಕಾಣಿಯನ್ನು ಸಮಗ್ರವಾಗಿ ನಡೆಸುವ ಹಾಗೂ ದೇಶದ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಮ್ಮ ಯುವಕರ ಪಾತ್ರ ಪ್ರಮುಖವಾಗಬೇಕಿದ್ದು, ಯುವಕರನ್ನು ಪ್ರೇರೇಪಿಸುವ ಹಾಗೂ ಅವರ ಸಾಧನೆಗಳನ್ನು ಪುರಸ್ಕರಿಸುಂತಹ ಪ್ರಾಮಾಣಿಕ ಪ್ರಯತ್ನವನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕಿದೆ ಎಂದು ಶಾಸಕ ಬಿ.ಸತ್ಯನಾರಾಯಣ್ ತಿಳಿಸಿದರು.
ಶಿರಾ ನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಬುಧವಾರ ಕೈಗೊಳ್ಳಲಾಗಿದ್ದ 72ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

                 ನಮ್ಮದು ಸ್ವತಂತ್ರ ಭಾರತ ನಿಜ. ಸ್ವತಂತ್ರ ಭಾರತದ ಪರಿಕಲ್ಪನೆಯಲ್ಲಿ ದೇಶದ ಅಭಿವೃದ್ಧಿಯನ್ನು ಹಂತ ಹಂತವಾಗಿ ಕೈಗೊಳ್ಳುವ ಮೂಲ ಉದ್ದೇಶಗಳನ್ನು ಪ್ರತಿಯೊಂದು ಸರ್ಕಾರಗಳೂ ಕೈಗೊಳ್ಳಬೇಕು. ಪ್ರಪಂಚದ ಬಹುತೇಕ ದೇಶಗಳು ಇನ್ನೂ ತಮ್ಮ ಸ್ವಾತಂತ್ರ್ಯತೆಯನ್ನು ಈವರೆಗೂ ಕಾಪಾಡಿಕೊಳ್ಳಲಾಗಿಲ್ಲ. ನಮ್ಮ ದೇಶ ಸ್ವಾತಂತ್ರ್ಯ ಪಡೆದು 72 ವರ್ಷಗಳು ಸಂದಿದ್ದರೂ ಇನ್ನೂ ಸಮಗ್ರ ಅಭಿವೃದ್ಧಿಯತ್ತ ದಾಪುಗಾಲನ್ನು ಹಾಕಲಾಗಿಲ್ಲ. ಇದಕ್ಕೆ ನಮ್ಮಲ್ಲಿನ ರಾಜಕೀಯ ಡೊಂಬರಾಟಗಳೂ ಕಾರಣವಿರಬಹುದು ಎಂದರು.

                  ದೇಶವನ್ನು ಸುಭದ್ರವಾಗಿ ಕಟ್ಟುವ ಕೆಲಸದಲ್ಲಿ ರಾಜಕೀಯ ಬಣ್ಣದ ಲೇಪನಗಳನ್ನು ಯಾರೂ ಕೂಡ ಮಾಡಬಾರದು. ಆಯ್ಕೆಗೊಳ್ಳುವವರೆಗೂ ಒಂದು ಪಕ್ಷವಿರಬೇಕು ನಿಜ ಆದರೆ, ಆಯ್ಕೆಗೊಂಡ ಬಳಿಕ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಅಭಿವೃದ್ಧಿಯ ಕಡೆಗೆ ಎಲ್ಲರೂ ಕೈಜೋಡಿಸಿದಾಗ ಮಾತ್ರ್ರ ಪ್ರಪಂಚದ ಭೂಪಟದಲ್ಲಿ ಭಾರತವು ಮಿನುಗುತಾರೆಯಂತೆ ಕಾಣಲು ಸಾಧ್ಯ ಎಂದರು.

                   ಶಿರಾ ನಗರವೂ ಸೇರಿದಂತೆ ಇಡೀ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾವು ವಿವಿಧ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದು ಈ ಎಲ್ಲಾ ಯೋಜನೆಗಳು ಹಂತ ಹಂತವಾಗಿ ಕಾರ್ಯರೂಪಕ್ಕೆ ಬರಲಿವೆ. ಇದೇ ಶಿರಾ ನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಕೋಟಿ ರೂ.ಗಳ ಅನುದಾನ ಶೀಘ್ರದಲ್ಲಿಯೇ ಮಂಜೂರಾಗಲಿದ್ದು ಕ್ರೀಡಾಂಗಣದ ಒಳಾಂಗಣದ ಅಭಿವೃದ್ಧಿ ನಡೆಯಲಿದೆ. ಕ್ರೀಡಾಂಗಣದ ಒಳಾಂಗಣದ ಅಭಿವೃದ್ಧಿಯಾದ ನಂತರ ಒಳಾಂಗಣ ಕ್ರೀಡಾಂಗಣಕ್ಕೆ ಯುವಕ ಮಿತ್ರ ಹಾಗೂ ಸಾಮಾಜಿಕ ಸೇವೆಯಲ್ಲಿ ತನ್ನದೇ ಆದ ಕೈಂಕರ್ಯಗಳನ್ನು ಕೈಗೊಂಡಿದ್ದ ದಿವಂಗತ ಮಧುಸೂದÀನ್‍ರವರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಬಿ.ಸತ್ಯನಾರಾಯಣ್ ತಿಳಿಸಿದರು.

                    ಶಿರಾ ನಗರದ ಬಹುತೇಕ ರಸ್ತೆಗಳು ಹದಗೆಟ್ಟಿವೆ. ನಗರದ ಅಭಿವೃದ್ಧಿಯೂ ಕುಂಠಿತಗೊಂಡಿರುವ ಕಾರಣದಿಂದಾಗಿ ನಗರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ನಗರಸಭೆಯ ಎಲ್ಲಾ ಸದಸ್ಯರ ಸಹಕಾರದಿಂದ ನಗರದ ಅಭಿವೃದ್ಧಿಯು ಸಮಗ್ರವಾಗಿ ಆಗಬೇಕಿದೆ ಎಂದು ಸತ್ಯನಾರಾಯಣ್ ಅಭಿಪ್ರಾಯಪಟ್ಟರು.

                    ಧ್ವ್ವಜಾರೋಹಣ ನೆರವೇರಿಸಿ ತºಸೀಲ್ದಾರ್ ಗಂಗೇಶ್ ಮಾತನಾಡಿ ದೇಶಪ್ರೇಮವನ್ನು ಮಕ್ಕಳಲ್ಲಿ ಬಿತ್ತುವ ಕೆಲಸವನ್ನು ಹಿರಿಯರು ಮಾಡಬೇಕಿದೆ. ದೇಶದ ಬಗ್ಗೆ ಅಭಿಮಾನ, ಗೌರವಗಳು ಇಲ್ಲದಿದ್ದಲ್ಲಿ ದೇಶಕ್ಕೆ ನಾವು ಸಲ್ಲಿಸುವ ಸೇವೆಯೂ ನಿರರ್ಥಕವಾಗುತ್ತದೆ. ದೇಶದ ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕುವಂತಹ ವಾತಾವರಣ ನಿರ್ಮಾಣಗೊಳ್ಳಬೇಕು ಎಂದರು.

ನಗರಸಭೆಯ ಅಧ್ಯಕ್ಷ ಅಮಾನುಲ್ಲಾಖಾನ್, ತಾ.ಪಂ. ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್, ತಾ.ಪಂ. ಉಪಾಧ್ಯಕ್ಷ ರಂಗನಾಥಗೌಡ, ತಾ.ಪಂ. ಸದಸ್ಯೆ ಮಂಜುಳಾ ಶೇಷಾನಾಯ್ಕ, ನಗರಸಭಾ ಸದಸ್ಯರುಗಳಾದ ಶ್ರೀನಿವಾಸಗುಪ್ತ, ಮಂಜುನಾಥ್, ಬಸವರಾಜು, ಶಾರದಾ ಶಿವಕುಮಾರ್, ಆಂಜಿನಪ್ಪ, ಸರಿತಾ, ಅಬ್ದುಲ್‍ಖಾದಿರ್, ನರಸಿಂಹಯ್ಯ, ತಾ.ಪಂ. ಇ.ಓ. ಡಾ.ನಾಗಣ್ಣ, ಕೃಷಿ ಅಧಿಕಾರಿ ಡಾ.ನಾಗರಾಜು, ನಗರಸಭೆಯ ಆಯುಕ್ತ ಗಂಗಣ್ಣ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು

Recent Articles

spot_img

Related Stories

Share via
Copy link
Powered by Social Snap