ರಾಜಕೀಯೇತರ ವಿಷಯಗಳಿಗೆ ಅನುಮತಿ ತಾಲೂಕುಮಟ್ಟದಲ್ಲಿಯೇ ಪಡೆದುಕೊಳ್ಳಿ: ಡಿಸಿ ರಾಮ್ ಪ್ರಸಾತ್ ಮನೋಹರ್

ಬಳ್ಳಾರಿ

      ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಮಾತ್ರ ಅನುಮತಿಯನ್ನು ಚುನಾವಣಾಧಿಕಾರಿಗಳ ಕಚೇರಿ(ಜಿಲ್ಲಾಧಿಕಾರಿ ಕಚೇರಿ)ಯಲ್ಲಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬಹುದು. ರಾಜಕೀಯೇತರ ವಿಷಯಗಳಿಗೆ ಅನುಮತಿಯನ್ನು ತಾಲೂಕುಮಟ್ಟದಲ್ಲಿಯೇ ಸಹಾಯಕ ಚುನಾವಣಾಧಿಕಾರಿಗಳ ಹತ್ತಿರವೇ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

       ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣೆ ಸಿಬ್ಬಂದಿಯೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ಚುನಾವಣಾ ಸಂದರ್ಭದಲ್ಲಿ ರಾಜಕೀಯೇತರ ವಿಷಯಗಳಿಗೆ ಸಂಬಂಧಿಸಿದಂತೆ ಅನುಮತಿ ಕೋರಿ ಚುನಾವಣಾಧಿಕಾರಿಗಳ ಕಚೇರಿಗೆ ಸಾರ್ವಜನಿಕರು ಬರುವುದು ಮತ್ತು ಅಲೆದಾಡುವುದು ಬೇಡ. ಇದಕ್ಕೆ ಸಂಬಂಧಿಸಿದಂಗತೆ ಸಹಾಯಕ ಚುನಾವಣಾಧಿಕಾರಿಗಳು ಮತ್ತು ಅಲ್ಲಿನ ತಹಸೀಲ್ದಾರರಿಗೆ ಸೂಚನೆ ನೀಡಲಾಗಿದ್ದು,ಅಲ್ಲಿಯೇ ಅನುಮತಿ ಕೋರಿ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬಹುದು ಎಂದರು.

     ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಕಂದಾಯ ಇಲಾಖೆ ಮತ್ತು ವಿವಿಧ ಇಲಾಖೆಗಳ ಸಿಬ್ಬಂದಿ ತಮ್ಮ ಇಲಾಖೆಗಳ ಕೆಲಸಗಳನ್ನೆಲ್ಲಾ ಬದಿಗೊತ್ತಿ ಚುನಾವಣಾ ಕೆಲಸಕ್ಕೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದ ಅವರು ಚುನಾವಣಾ ಕೆಲಸದಲ್ಲಿ ನಿರ್ಲಕ್ಷ್ಯವಹಿಸಿದ್ದು ಕಂಡುಬಂದಲ್ಲಿ ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದರು.

     ಚುನಾವಣಾ ಆಯೋಗಕ್ಕೆ ಪ್ರತಿನಿತ್ಯ ಏನೆಲ್ಲಾ ವರದಿಗಳು ಹೋಗಬೇಕೋ ಅವುಗಳು ಸರಿಯಾಗಿ ಹೋಗುವಂತೆ ನೋಡಿಕೊಳ್ಳಿ; ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದಂತೆ ಈ ಬಾರಿಯೂ ಮಾಡಿ ಎಂದು ಹೇಳಿದ ಅವರು, ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ಸಿಬ್ಬಂದಿ ನಿರ್ವಹಿಸುತ್ತಿರುವ ಕೆಲಸಗಳನ್ನು ಪರಿಶೀಲಿಸಿದರು ಮತ್ತು ಅಗತ್ಯ ಸಲಹೆ-ಸೂಚನೆಗಳನ್ನು ಈ ಸಂದರ್ಭದಲ್ಲಿ ನೀಡಿದರು.

     ಈ ಸಂದರ್ಭದಲ್ಲಿ ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಎಡಿಸಿ ಎಸ್.ಜೆ.ಸೋಮಶೇಖರ್ ಮತ್ತು ಚುನಾವಣಾ ತಹಸೀಲ್ದಾರ್ ಹಲೀಮಾ, ಜಿಲ್ಲಾಧಿಕಾರಿ ಕಚೇರಿಯ ತಹಸೀಲ್ದಾರ್ ವಿಶ್ವಜೀತ್ ಮೆಹತಾ ಸೇರಿದಂತೆ ವಿವಿಧ ನೋಡಲ್ ಅಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap