ರೆಫೇಲ್ ಹಗರಣ ತನಿಖೆಗೆ ಜೆಪಿಸಿ ರಚನೆಗೆ ಆಗ್ರಹ

ದಾವಣಗೆರೆ:

            ರೆಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿರುವ ಹಗರಣದ ತನಿಖೆಗಾಗಿ ಕೇಂದ್ರ ಸರ್ಕಾರವು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ, ಶಾಸಕ ಡಾ.ಶಾಮನೂರು ಶಿವಂಶಕರಪ್ಪನವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
               ನಗರದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಹೊರಟ ಕಾಂಗ್ರೆಸ್ ಕಾರ್ಯಕರ್ತರು, ಜಯದೇವ ವೃತ್ತಕ್ಕೆ ತೆರಳಿ, ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಡಿಸಿ, ಬಹಿರಂಗ ಸಭೆ ನಡೆಸಿ, ಬಳಿಕೆ ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
               ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಕಳೆದ ನಾಲ್ಕೂವರೆ ವರ್ಷದಲ್ಲಿ ಸುಮಾರು 12 ಬಾರಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳ ಬೆಲೆ ಏರಿಕೆ ಮಾಡಿದೆ. ಅಂತರಾಷ್ಟೀಯ ಮಟ್ಟದಲ್ಲಿ ನಮ್ಮ ದೇಶದ ರೂಪಾಯಿ ಮೌಲ್ಯ ಇತಿಹಾಸದಲ್ಲಿ ಕಾಣದಷ್ಟರ ಮಟ್ಟಿಗೆ ಕುಸಿದು, ರೂಪಾಯಿಗೆ ಮರ್ಯಾದೇ ಇಲ್ಲದಂತಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ ವಿತ್ತ ಸಚಿವ ಅರುಣ್ ಜೇಟ್ಲಿ ಅವರುಗಳ ಸಹಕಾರದಿಂದ ವಿಜಯ ಮಲ್ಯ, ಲಲಿತ್ ಮೋದಿ, ನೀರವ್ ಮೋದಿ ಸೇರಿದಂತೆ ದೇಶದ ರಾಷ್ಟ್ರೀಯ ಬ್ಯಾಂಕುಗಳಲ್ಲಿನ ಸಾಲ ತೀರಿಸದೇ, ವಿದೇಶಗಳಿಗೆ ಓಡಿ ಹೋಗಿದ್ದಾರೆ. ಮೊನ್ನೆ ವಿಚಾರಣೆಯ ವೇಳೆಯಲ್ಲಿ ಮಲ್ಯ ದೇಶ ಬಿಡುವ ಮುನ್ನ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗಿದ್ದೆ ಎಂಬುದಾಗಿ ಹೇಳಿಕೆ ನೀಡಿರುವುದೇ ಸಾಕ್ಷಿಯಾಗಿದೆ. ಆದ್ದರಿಂದ ಈ ಉದ್ಯಮಪತಿಗಳು ದೇಶ ಬಿಟ್ಟು ಹೋಗಿರುವುದರ ನೇರ ಹೊಣೆಯನ್ನು ಕೇಂದ್ರ ಸರ್ಕಾರ ಹೊತ್ತಿಕೊಂಡು ದೇಶದ ಜನತೆಗೆ ಸಮರ್ಪಕ ಉತ್ತರ ನೀಡಬೇಕೆಂದು ಒತ್ತಾಯಿಸಿದರು.
                 ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ, ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಆದರೆ, ಕೆಲ ಸಮೀಕ್ಷಾ ಸಂಸ್ಥೆಗಳಿಗೆ ಹಣ ನೀಡಿ, ದೇಶದಲ್ಲಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂಬ ಸುಳ್ಳು ವರದಿಗಳನ್ನು ಪ್ರಚಾರ ಮಾಡಿಸಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ, ರಾಜಾಸ್ತಾನ, ಮಧ್ಯಪ್ರದೇಶಗಳಲ್ಲಿ ಬಿಜೆಪಿ ಒಂದು ಸೀಟು ಗೆಲ್ಲಲಾಗುವುದಿಲ್ಲ ಎಂದು ಭವಿಷ್ಯ ನುಡಿದರು.
               ಬರುವ ಲೋಕಸಭಾ ಚುನಾವಣೆಯಲ್ಲಿ ರೈತರ ಮತ ಪಡೆಯಬೇಕೆಂಬ ಕಾರಣಕ್ಕೆ ಕೇಂದ್ರ ಸರ್ಕಾರ ಈಗ ರೈತರನ್ನು ನೆನಪಿಸಿಕೊಂಡು, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುತ್ತಿದೆ. ಆದರೆ, ಅವರ ಯಾವ ಹೇಳಿಕೆಗಳು ಕಾರ್ಯರೂಪಕ್ಕೆ ಬಂದಿಲ್ಲ. ದೇಶದ ಎಲ್ಲ ವರ್ಗದ ಜನರು ಮೋದಿಯನ್ನು ತೆಗಳುತ್ತಿದ್ದಾರೆ. ಮೋದಿ ಹಿಟ್ಲರ್‍ಗಿಂತಗಲೂ ದೊಡ್ಡ ಸರ್ವಾಧಿಕಾರಿಯಾಗಿದ್ದಾರೆ. ಇಂಥಹ ಸರ್ವಾಧಿಕಾರಿಯನ್ನು ಅವರ ಸರ್ಕಾರದ ಮತ್ತು ಪಕ್ಷದ ನಾಯಕರೇ ಮನೆಗೆ ಕಳುಹಿಸಲು ನೋಡುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ತಯಾರಗಬೇಕೆಂದು ಕರೆ ನೀಡಿದರು.
               ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಯು.ಪಿ.ಎ.ಸರ್ಕಾರದ ಅವಧಿಯಲ್ಲಿ 2012ರಲ್ಲಿ ಫ್ರಾನ್ಸ್ ಜೊತೆ ಭಾರತ ಒಪ್ಪಂದ ಮಾಡಿಕೊಂಡಂತೆ 526 ಕೋಟಿ ರೂ.ಗೆ ಒಂದು ವಿಮಾನದಂತೆ 126 ರೆಫೆಲ್ ಯುದ್ದ ವಿಮಾನ ಖರೀದಿಸಲು ನಿರ್ಧರಿಸಲಾಗಿತ್ತು. ಆದರೆ, ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 2014ರಲ್ಲಿ ಪ್ರಧಾನಿ ನರೇಂದ್ರಮೋದಿ ಒಂದು ವಿಮಾನಕ್ಕೆ 1650 ಕೋಟಿ ರೂ.ನಂತೆ ಒಂದು ವಿಮಾನದಂತೆ 36 ವಿಮಾನ ಖರೀದಿ ಮಾಡಿ. ರೆಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಸುಮಾರು 41 ಸಾವಿರ ಕೋಟಿ ರೂ.ರೂಗಳಷ್ಟು ಅವ್ಯವಹಾರ ನಡೆಸಿ, ಭ್ರಷ್ಟಾಚಾರ ಮುಕ್ತಭಾರತ ನಿರ್ಮಾಣ ಮಾಡುತ್ತೇವೆಂಬುದಾಗಿ ಬಿಜೆಪಿ ಹೇಳುತ್ತಿರುವುದು ಅತ್ಯಂತ ಹಾಸ್ಯಸ್ಪದವಾಗಿದೆ ಎಂದು ಟೀಕಿಸಿದರು.
               ರೆಫೇಲ್ ಯುದ್ದ ವಿಮಾನ ಖರೀದಯಲ್ಲಿ ಆಗಿರುವ ಅವ್ಯವಹಾರನ್ನು ಕೇಂದ್ರ ಸರ್ಕಾರ ತಕ್ಷಣವೇ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ರಚನೆ ಮಾಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು.
              ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಮೇಯರ್ ಶೋಭಾ ಪಲ್ಲಾಗಟ್ಟೆ, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ಉಪ ಮೇಯರ್ ಚಮನ್ ಸಾಬ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಪಾಲಿಕೆ ಸದಸ್ಯ ದಿನೇಶ್ ಕೆ ಶೆಟ್ಟಿ, ಮುಖಂಡರುಗಳಾದ ಸೈಯದ್ ಸೈಫುಲ್ಲಾ, ಅಯೂಬ್ ಪೈಲ್ವಾನ್, ಎಂ.ಹಾಲೇಶ್, ಕೆ.ಎಸ್.ಬಸವಂತಪ್ಪ, ಓಬಳಪ್ಪ, ಪರಶುರಾಮ್, ಎ.ನಾಗರಾಜ್, ವೀಣಾ ಮಂಜುನಾಥ್, ಅಲಿರಹಮತ್, ಸೈಯದ್ ಖಾಲಿದ್, ವಿಜಯ ಅಕ್ಕಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link
Powered by Social Snap