ಲೋಕಸಭಾ ಚುನಾವಣೆ: ರೌಡಿಗಳಿಂದ ಮುಚ್ಚಳಿಕೆ ಬರೆಸಿಕೊಂಡ ಪೊಲೀಸರು…!!!

ಬೆಂಗಳೂರು

         ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ರೌಡಿ ಚಟುವಟಿಕೆಗಳು ಅಪರಾಧ ಕೃತ್ಯಗಳು ನಡೆಯದಂತೆ ಕಟ್ಟೆಚ್ಚರ ವಹಿಸಿರುವ ನಗರ ಪೊಲೀಸರು ಶನಿವಾರ ತಡರಾತ್ರಿ ಭಾನುವಾರ ಮುಂಜಾನೆ ವರೆಗೆ ಉತ್ತರ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಾರೆಂಟ್ ಜಾರಿಯಾಗಿರುವ ಅಪರಾಧಿಗಳು, ಗಂಭೀರ ಅಪರಾಧ ಕೃತ್ಯಗಳಲ್ಲಿ ತೊಡಗಿರುವ ಆರೋಪಿಗಳೂ ಸೇರಿದಂತೆ 800ಕ್ಕೂ ಹೆಚ್ಚು ಮಂದಿಯ ಮನೆಯ ಮೇಲೆ ದಾಳಿ ನಡೆಸಿದ್ದಾರೆ.

          ಯಶವಂತಪುರ, ಜಾಲಹಳ್ಳಿ, ಮಲ್ಲೇಶ್ವರ, ಶ್ರೀರಾಂಪುರ, ಆರ್‍ಎಂಸಿ ಲೇಔಟ್, ಪೀಣ್ಯ, ಗಂಗಮ್ಮನ ಗುಡಿ, ಹೆಬ್ಬಾಳ, ವಿದ್ಯಾರಣ್ಯಪುರ ಸೇರಿದಂತೆ ಉತ್ತರ ವಿಭಾಗದ 18 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಳಿ ನಡೆಸಿದ ಪೊಲೀಸರು ರೌಡಿಗಳು, ವಾರೆಂಟ್ ಜಾರಿಯಾಗಿರುವ ಅಪರಾಧಿಗಳು, ಗಂಭೀರ ಅಪರಾಧ ಕೃತ್ಯಗಳಲ್ಲಿ ತೊಡಗಿರುವ ಆರೋಪಿಗಳನ್ನು ಠಾಣೆಗಳಿಗೆ ಕರೆತಂದು ವಿಚಾರಣೆ ನಡೆಸಲಾಗಿದೆ.

        ವಿಚಾರಣೆ ನಡೆಸಿದ ಎಲ್ಲ 800 ಮಂದಿಯನ್ನು ಜಾಲಹಳ್ಳಿ ಮೈದಾನದಲ್ಲಿ ಪರೇಡ್ ನಡೆಸಿ ಬರುವ ಚುನಾವಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಯಲ್ಲಿ ತೊಡಗದಂತೆ, ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗದಂತೆ, ಕಾನೂನು ಕೈಗೆತ್ತಿಕೊಳ್ಳುವ ಕೃತ್ಯ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ ಉತ್ತರ ವಿಭಾಗದ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

          ದಾಳಿಯ ವೇಳೆ ಮಚ್ಚು, ಲಾಂಗು ಸೇರಿದಂತೆ ಇನ್ನಿತರ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ರೌಡಿಗಳು, ವಾರೆಂಟ್ ಜಾರಿಯಾಗಿರುವ ಅಪರಾಧಿಗಳು, ಗಂಭೀರ ಅಪರಾಧ ಕೃತ್ಯಗಳಲ್ಲಿ ತೊಡಗಿರುವ ಆರೋಪಿಗಳು ಮಾಡುತ್ತಿರುವ ಕೆಲಸ, ವಿಳಾಸ, ನಡೆಸುತ್ತಿರುವ ಕೃತ್ಯ, ಸಂಬಂಧಿಕರ ವಿವರ, ಮೊಬೈಲ್ ಸಂಖ್ಯೆ, ಇನ್ನಿತರ ಮಾಹಿತಿ ಪಡೆದುಕೊಳ್ಳಲಾಗಿದೆ.

ಮುಚ್ಚಳಿಕೆ

         ಚುನಾವಣೆ ವೇಳೆ ರೌಡಿ ಚಟುವಟಿಕೆಗಳನ್ನು ನಡೆಸುವುದು, ಅಪರಾಧ ಕೃತ್ಯಗಳಲ್ಲಿ ತೊಡಗುವುದು ಕಂಡು ಬಂದರೆ ಅಂತಹವರನ್ನು ಜಾಮೀನು ರಹಿತ ವಾರಂಟ್‍ನಡಿ ಬಂಧಿಸುವುದಲ್ಲದೆ ಅಗತ್ಯ ಬಿದ್ದರೆ ಗೂಂಡಾಕಾಯ್ದೆ ದಾಖಲಿಸುವುದಾಗಿ ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.ರೌಡಿ ಚಟುವಟಿಕೆಗಳಲ್ಲಿ ತೊಡಗದೆ, ಅಕ್ರಮ ಕೃತ್ಯಗಳಿಗೆ ಕೈಹಾಕದೆ ಇರುವವರನ್ನು ರೌಡಿಯ ಪಟ್ಟಿಯಿಂದ ಕೈಬಿಡುವ ಬಗ್ಗೆಯೂ ಚಿಂತನೆ ನಡೆಸಲಾಗಿದ್ದು, ದಾಳಿ ನಡೆಸಿದ ರೌಡಿಗಳು, ಅಪರಾಧಿಗಳು, ಹಳೆಯ ಆರೋಪಿಗಳಿಂದಲೂ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap