ವಚನದಿನ

ಹಾನಗಲ್ಲ :

             ಕನ್ನಡ ಸಾಹಿತ್ಯದಲ್ಲಿ ಅತ್ಯಂತ ಸರಳ ಹಾಗೂ ಸಹೃದಯತೆಯಿಂದ ನಮ್ಮ ಮನಸ್ಸನ್ನು ಮುಟ್ಟಿ ಸಚ್ಚಿತ್ತಗೊಳಿಸುವ ವಚನ ಸಾಹಿತ್ಯ ಪ್ರಚಾರ ಪ್ರಸಾರದ ವಚನದಿನ ಇಡೀ ಕರ್ನಾಟಕದ ಎಲ್ಲ ತಾಲೂಕುಗಳಲ್ಲಿ ಏಕಕಾಲಕ್ಕೆ ಆಚರಣೆಗೊಳ್ಳುತ್ತಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪೂರ ತಿಳಿಸಿದರು.
              ಗುರುವಾರ ಹಾನಗಲ್ಲಿನ ಜನತಾ ಬಾಲಕಿಯರ ಪ್ರೌಢಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ಹಾನಗಲ್ಲ ತಾಲೂಕು ಘಟಕ, ಕದಳಿ ಮಹಿಳಾ ವೇದಿಕೆ ಸಂಯುಕ್ತವಾಗಿ ಆಯೋಜಿಸಿದ ವಚನದಿನ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ಸುತ್ತೂರು ಜಗದ್ಗುರು ಲಿಂ.ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನ ಮತ್ತು ಹಾನಗಲ್ಲಿನ ಮಹಾದಾನಿ ದಿ.ಫಕ್ಕೀರಪ್ಪ ಮಹರಾಜಪೇಟ ಅವರ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಚನಗಳು ನಮ್ಮ ಹತ್ತಿರದಲ್ಲಿದ್ದು, ನಮ್ಮೋಳಗಿನ ಕಳೆ ಕಳೆದು ಉತ್ತಮ ಬೆಳೆ ಬೆಳೆಯಲು ಸಹಕಾರಿಯಾದವುಗಳು. ಇಂತಹ ವಚನಗಳಪ್ರಚಾರ ಹಾಗೂ ಪ್ರಸಾಕ್ಕೆ ಶರಣ ಸಾಹಿತ್ಯ ಪರಿಷತ್ತು ಇಡೀ ರಾಜ್ಯದಲ್ಲಿ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.
                 ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಡಾ.ವಿಶ್ವನಾಥ ಬೋಂದಾಡೆ, ವಚನ ಸಾಹಿತ್ಯದಲ್ಲಿ ಪ್ರತಿಪಾದಿತವಾಗಿರುವ ವಿಶ್ವ ಮೌಲ್ಯಗಳು ಎಂಬ ವಿಷಯದ ಕುರಿತು ಮಾತನಾಡಿ, ವಚನಗಳು ಕನ್ನಡ ಸಾಹಿತ್ಯದ ಸಾರಸ್ವತ ಲೋಕವನ್ನು ಬೆಳಗಿದ ಶ್ರೇಷ್ಠ ಸಾಹಿತ್ಯವಾಗಿದೆ. ಮನುಷ್ಯನ ಸಾರ್ಥಕ ಜೀವನಕ್ಕೆ ಇವು ಮಾದರಿಯಾಗಿವೆ. ಜಗತ್ತಿಗೆ ಸಂಸತ್‍ನ್ನು ಕೊಟ್ಟ ಮೊದಲ ಕೊಡುಗೆ ಅದು ಶರಣ ಸಂಕುಲ ಹಾಗೂ ವಚನ ಸಾಹಿತ್ಯ. ವಚನಗಳ ಸಂವಿಧಾನ ಇಡೀ ಜಗತ್ತಿಗೆ ಮಾದರಿ. ಎಂಟೊಂಬತ್ತು ಶತಮಾನಗಳು ಕಳೆದರೂ ಎಲ್ಲ ಕಾಲಕ್ಕೂ ಹೊಸ ಚಿಂತನೆ ನೀಡುವ ಶಕ್ತಿ ವಚನಗಳಿಗಿದೆ ಎಂದರು.
                ಶಿಕ್ಷಕಿ ಎಸ್.ವಿನುತಾ ಮಾತನಾಡಿ, ವಚನ ಸಂಪತ್ತನ್ನು ಉಳಿಸಿಕೊಟ್ಟ ಮಹಾತ್ಮರನ್ನು ನೆನೆಯಲೇ ಬೇಕು. ತಾಳೆಗರಿಗಳ ಮೇಲೆ ಬರಹ ರೂಪವಾಗಿದ್ದ ವಚನ ಸಾಹಿತ್ಯ ಪೂಜೆ ಹೆಸರಿನಲ್ಲಿ ನೀರು ಬೆಂಕಿ ತಾಗಿ, ನಿರ್ಲಕ್ಷ ಮುಂತಾದ ಕಾರಣಕ್ಕಾಗಿ ನಾಶವಾಗುತ್ತಿದ್ದವು. ಇಂತಹ ಸಾಹಿತ್ಯ ಉಳಿಸುವಲ್ಲಿ ಫ.ಗು.ಹಳಕಟ್ಟಿಯವರು ಮೊದಲ ಗೌರವಕ್ಕೆ ಪಾತ್ರರಾಗುತ್ತಾರೆ ಎಂದರು.
                ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯೋಪಾಧ್ಯಾಯ ಕೆ.ಕೆ.ರೂಪಶ್ರೀ, ಸರಳವಾದ ಈ ವಚನ ಸಾಹಿತ್ಯವನ್ನು ಮಕ್ಕಳ ಮನಸ್ಸಿನಲ್ಲಿ ಜಾಗೃತಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಾಗಿದೆ. ಶಾಲೆಗಳಲ್ಲಿ ಮೊದಲಾಗಿ ಎಲ್ಲೆಡೆ ವಚನ ಪ್ರಚಾರ ಪ್ರಸಾರಕ್ಕೆÉ ಒಗ್ಗೂಡಿ ಮುಂದಾಗೋಣ ಎಂದರು.
                ನಗರ ಅಧ್ಯಕ್ಷ ಗಿರೀಶ ದೇಶಪಾಂಡೆ ಆಶಯ ಮಾತುಗಳನ್ನಾಡಿದರು. ಸಾಹಿತಿಗಳಾದ ಎಂ.ಪ್ರಸನ್‍ಕುಮಾರ, ಸಂತೋಷ ಬಿದರಗಡ್ಡೆ ವಚನ ವಿಶ್ಲೇಷಣೆ ಮಾಡಿದರು. ದತ್ತಿ ದಾನಿಗಳಾದ ಗೌರಮ್ಮ ಫಕ್ಕಿರಪ್ಪ ಮಹರಾಜಪೇಟ, ಸರಸ್ವತಿ ಮಹಿಳಾ ಮಂಡಳದ ಗೌರವಾಧ್ಯಕ್ಷೆ ನೀಲಮ್ಮ ಉದಾಸಿ, ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ನಿರಂಜನ ಗುಡಿ, ನಿಕಟಪೂರ್ವ ತಾಲೂಕು ಅಧ್ಯಕ್ಷ ವಿ.ಪಿ.ಗುರಪ್ಪನವರ, ನಗರ ಕಾರ್ಯದರ್ಶಿ ಎಸ್.ವಿ.ಹೊಸಮನಿ, ಕದಳಿ ವೇದಿಕೆ ಗೌರವಾಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಅಧ್ಯಕ್ಷೆ ಅಕ್ಕಮ್ಮ ಕುಂಬಾರಿ, ಕಾರ್ಯದರ್ಶಿ ರೇಖಾ ಶೆಟ್ಟರ ಅತಿಥಿಗಳಾಗಿದ್ದರು.
ದುರ್ಗಾಲಕ್ಷ್ಮೀ ಕುಲಕರ್ಣಿ ಹಾಗೂ ವೇದಶ್ರೀ ಕರಗುದರಿ ಪ್ರಾರ್ಥನೆ ಹಾಡಿದರು, ಸಹನಾ ಹಳೇಕೋಟಿ ಸ್ವಾಗತಿಸಿದರು. ಪ್ರತೀಕ್ಷಾ ಪವಾರ ಹಾಗೂ ಪ್ರಗತಿ ಹುನಗನಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಮಡಿವಾಳರ ವಂದಿಸಿದರು.

Recent Articles

spot_img

Related Stories

Share via
Copy link
Powered by Social Snap