ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ

ಬೆಂಗಳೂರು:

                   ಸಂಪುಟ ವಿಸ್ತರಣೆ ಸಂಬಂಧ ಪಕ್ಷದ ವರಿಷ್ಠರ ಜತೆ ಚರ್ಚಿಸಲು ದೆಹಲಿಗೆ ತೆರಳಿದ್ದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಅವರು ವಿದೇಶ ಪ್ರವಾಸದಲ್ಲಿರುವುದರಿಂದ ಬರಿಗೈಯಲ್ಲಿ ದೆಹಲಿಯಿಂದ ವಾಪಸ್ಸಾಗಿದ್ದಾರೆ.
ಹಾಗಾಗಿ ಸಂಪುಟ ವಿಸ್ತರಣೆ ಮತ್ತಷ್ಟು ತಡವಾಗುವುದು ನಿಶ್ಚಿತ. ಶ್ರಾವಣದಲ್ಲಿ ಸಂಪುಟ ವಿಸ್ತರಣೆಯಾಗದಿದ್ದರೆ ಸಚಿವಕಾಂಕ್ಷಿಗಳ ಅಸಮಾಧಾನ ಭುಗಿಲೆದ್ದು ಅಲ್ಲೋಲ ಕಲ್ಲೋಲಗಳಿಗೆ ಕಾರಣವಾಗಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ವರಿಷ್ಠರನ್ನು ಭೇಟಿ ಮಾಡಿ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಅವರೊಡನೆ ಚರ್ಚಿಸಿ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳ ನೇಮಕ ಆದಷ್ಟು ಶೀಘ್ರ ಆಗಬೇಕು. ಇಲ್ಲದಿದ್ದರೆ ರಾಜಕೀಯವಾಗಿ ಅಚ್ಚರಿಯ ಬೆಳವಣಿಗೆಗಳು ನಡೆಯಬಹುದು ಎಂಬುದನ್ನು ವರಿಷ್ಠರಿಗೆ ಮನವರಿಕೆ ಮಾಡಲು ಗುರುವಾರ ದೆಹಲಿಗೆ ತೆರಳಿದ್ದರು.

                   ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಜರ್ಮನಿ ಪ್ರವಾಸದಲ್ಲಿರುವುದರಿಂದ ಯಾವುದೇ ಚರ್ಚೆ ಮಾತುಕತೆಗಳು ಸಾಧ್ಯವಾಗಿಲ್ಲ. ಕಾಂಗ್ರೆಸ್‍ನ ನೂತನ ಖಜಾಂಚಿ ಅಹಮದ್ ಪಟೇಲ್ ಅವರ ಭೇಟಿಗಷ್ಟೆ ಉಪಮುಖ್ಯಮಂತ್ರಿಗಳ ಈ ದೆಹಲಿ ಭೇಟಿ ಸೀಮಿತವಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುವ ಕೆ.ಸಿ. ವೇಣುಗೋಪಾಲ್ ಅವರು ಕೇರಳದಲ್ಲಿ ಪ್ರವಾಹ ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

                   ಅಚ್ಚರಿಯ ಬೆಳವಣಿಗೆ ಶ್ರಾವಣಮಾಸದಲ್ಲಾದರೂ ಸಂಪುಟ ವಿಸ್ತರಣೆಯಾಗಿ ಸಚಿವ ಸ್ಥಾನ ಸಿಗಬಹುದು ಎಂಬ ಕಾಂಗ್ರೆಸ್‍ನ ಹಿರಿಯ ಶಾಸಕರ ನಿರೀಕ್ಷೆ ಹುಸಿಯಾಗಿ ಅಸಮಾಧಾನಕ್ಕೆ ಎಡೆಯಾಗಿದೆ. ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ನೇಮಕವೂ ತಡವಾಗಿರುವುದು ಶಾಸಕರು ಹಾಗೂ ಮುಖಂಡರುಗಳ ಆಕ್ರೋಶಕ್ಕೆ ಕಾರಣವಾಗಿದೆ.

                   ಒಳಗೊಳಗೆ ಸಮ್ಮಿಶ್ರ ಸರ್ಕಾರದ ನಾಯಕರ ವಿರುದ್ಧ ಕೆಂಡಕಾರುತ್ತಿರುವ ಇವರುಗಳು ಸದ್ಯಕ್ಕೆ ಮೌನವಾಗಿದ್ದಾರಾದರೂ ಮುಂದೆ ಇವರ ಅಸಮಾಧಾನ, ಸಿಟ್ಟು ಯಾವ ರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Recent Articles

spot_img

Related Stories

Share via
Copy link
Powered by Social Snap