ಸಧ್ಯದಲ್ಲೇ ಹಳೇ ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಷ

ದಾವಣಗೆರೆ:

        ಸ್ಮಾರ್ಟ್ ಸಿಟಿ ಯೋಜನೆಯಡಿ ಹಳೇ ಬಸ್ ನಿಲ್ದಾಣಕ್ಕೆ ಸಧ್ಯದಲ್ಲೇ ‘ಜಿ ಪ್ಲಸ್” ಮಾದರಿಯಲ್ಲಿ ಆಧುನಿಕ ಸ್ಪರ್ಷ ದೊರೆಯಲಿದೆ.
ಹೌದು… ಖಾಸಗಿ ಬಸ್ ನಿಲ್ದಾಣವೆಂದೇ ಖ್ಯಾತಿ ಪಡೆದಿರುವ ನಗರದ ಪಿಬಿ ರಸ್ತೆಯಲ್ಲಿರುವ ಹಳೇ ಬಸ್ ನಿಲ್ದಾಣವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ನವೀಕರಣ ಮಾಡಲು ಕೈಗೆತ್ತಿಕೊಳ್ಳಲಾಗಿದ್ದು, ಪ್ರಸ್ತುತ ಬರೀ ಮಳಿಗೆಗಳನ್ನು ಹೊಂದಿ, ಪ್ರಯಾಣಿಕರಿಗೆ ಯಾವುದೇ ಅನುಕೂಲ ಇಲ್ಲದ ಹಳೇ ಬಸ್ ನಿಲ್ದಾಣ ಸಧ್ಯದಲ್ಲೇ ಹೈಟೆಕ್ ಸ್ಪರ್ಷ ಪಡೆಯಲಿದೆ.

         28 ಕೋಟಿ ರೂ. ವೆಚ್ಚದಲ್ಲಿ ಹಳೇ ಬಸ್ ನವೀಕರಣಕ್ಕೆ ಕೆಯುಐಡಿಎಫ್‍ಸಿಯಿಂದ ಮಂಜೂರಾತಿ ದೊರೆತಿದ್ದು, ಬಸ್ ನಿಲ್ದಾಣ ಹೇಗಿರಬೇಕೆಂಬುದರ ಬಗ್ಗೆ ನೀಲನಕ್ಷೆಯೂ ಸಿದ್ಧವಾಗಿದ್ದು, ಇಲ್ಲಿ ಕಾಮಗಾರಿ ಕೈಗೊಳ್ಳುವ ಉದ್ದೇಶದಿಂದ ಇಲ್ಲಿನ ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ನಗರದ ಪ್ರೌಢ ಶಾಲಾ ಮೈದಾನಕ್ಕೆ ಸ್ಥಳಾಂತರಿಸಲು ಈಗಾಗಲೇ ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ್ ಹಾಗೂ ಶಾಸಕ ಎಸ್.ಎ.ರವೀಂದ್ರನಾಥ್ ಭೂಮಿ ಪೂಜೆ ನೆರವೇರಿಸಿದ್ದು, ನಿನ್ನೆಯಿಂದ (ಬುಧವಾರದಿಂದ) ಕಾಮಗಾರಿಯೂ ಆರಂಭವಾಗಿದೆ.

        ಹಳೇ ಬಸ್ ನಿಲ್ದಾಣಕ್ಕೆ ಸಂಬಂಧಿಸಿದಂತೆ ಇರುವ ಒಂದು ಎಕರೆ ಮೂರು ಗುಂಟೆ ಜಾಗದಲ್ಲಿ `ಜಿ’ ಪ್ಲಸ್ ಮಾದರಿಯಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಿಸಲುದ್ದೇಶಿಸಲಾಗಿದ್ದು, ನಿಲ್ದಾಣದ ಸೆಲ್ಲರ್‍ನಲ್ಲಿ (ಕೆಳಗಡೆಯಲ್ಲಿ) ದ್ವಿಚಕ್ರ, ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಅದರ ಮೇಲೆ ಬಸ್‍ಗಳ ನಿಲುಗಡೆಗೆ ವ್ಯವಸ್ಥೆ ಹಾಗೂ ಪಕ್ಕದಲ್ಲಿ ವಾಣಿಜ್ಯ ಸಂಕೀರ್ಣಗಳು ಸಹ ತಲೆ ಎತ್ತಲಿವೆ.
ನಿಲ್ದಾಣದ ಸೆಲ್ಲರ್‍ನಲ್ಲಿ ಸುಮಾರು 100 ಬೈಕ್‍ಗಳ ಹಾಗೂ 60 ಕಾರುಗಳ ಪಾರ್ಕಿಂಗ್‍ಗೆ ವ್ಯವಸ್ಥೆ ಆಗಲಿದೆ. ಅದರ ಮೇಲೆ ಸುಮಾರು 12 ಬಸ್‍ಗಳು ಸಾಲಾಗಿ ಒಂದೇ ಕಡೆ ನಿಲ್ಲುವಷ್ಟು ಉದ್ದದ ನಿಲ್ದಾಣ ನಿರ್ಮಾಣವಾಗಲಿದೆ. ಅಲ್ಲದೆ, ಇಲ್ಲಿ ಯಾವ ಊರಿನ ಬಸ್ ಎಲ್ಲಿ ನಿಲ್ಲುತ್ತದೆ ಎಂಬುದನ್ನು ತೋರಿಸಲು ಡಿಜಿಟಲ್ ಸೂಚನಾ ಫಲಕ ಅಳವಡಿಕೆಯಾಗಲಿದೆ. ಹಾಗೂ ಪಾಲಿಕೆ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ವಾಣಿಜ್ಯ ಮಳಿಗೆಗಳನ್ನು ಸಹ ನಿರ್ಮಾಣ ಮಾಡಲುದ್ದೇಶಿಸಲಾಗಿದೆ. ಬಸ್ ನಿಲ್ದಾಣದ ಆಗುಹೋಗುಗಳನ್ನು ಗಮನಿಸಲು ಸಿ.ಸಿ. ಕ್ಯಾಮೆರಾ ಅಳವಡಿಕೆಯಾಗಲಿವೆ.

          ಈ ಬಸ್ ನಿಲ್ದಾಣ ಎತ್ತರದಲ್ಲಿ ನಿರ್ಮಾಣವಾಗುವುದರಿಂದ ಪ್ರಯಾಣಿಕರಿಗೆ ಅನುಕೂಲ ಆಗಲೆಂಬ ಉದ್ದೇಶದಿಂದ ಲಿಫ್ಟ್ ಅಥವಾ ಮೆಟ್ಟಿಲು ಅಥವಾ ಸ್ವಯಂ ಚಾಲಿತ ಮೆಟ್ಟಿಲುಗಳನ್ನು ನಿರ್ಮಿಸಲಾಗುತ್ತದೆ. ಎಲ್ಲ ಕಡೆ ಹೋಗುವ ಬಸ್‍ಗಳು ಒಂದೇ ಕಡೆ ಮುಖ ಮಾಡಿ ನಿಲ್ಲಲ್ಲಿವೆ. ಇದರಿಂದಾಗಿ ಪ್ರಯಾಣಿಕರು ಮೆಟ್ಟಿಲು ಹತ್ತಿ ಬರುವ ಬದಿಗೇ ಬಸ್‍ಗಳ ಬಾಗಿಲು ಇರುತ್ತದೆ. ಅವರು ಮತ್ತೆ ಬಸ್‍ಗಳ ನಡುವೆ ಆ ಕಡೆ ಈ ಕಡೆ ದಾಟಲು ಅವಕಾಶ ಇರುವುದಿಲ್ಲ. ಎಲ್ಲಾ ಬಸ್‍ಗಳು ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣದ ಕಡೆಯಿಂದ ಬಂದು ಪಿ.ಬಿ.ರೋಡ್‍ನಿಂದ ಒಳ ಪ್ರವೇಶಿಸುತ್ತವೆ. ಹರಿಹರಕ್ಕೆ ಹೋಗುವ ಕಡೆಯಿಂದ ನಿಲ್ದಾಣದಿಂದ ಪಿ.ಬಿ.ರೋಡ್‍ಗೆ ಇಳಿದು ಹೋಗಬೇಕಾದ ಮಾರ್ಗದ ಕಡೆಗೆ ಸಂಚರಿಸಲಿವೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap