ಸಮ್ಮಿಶ್ರ ಸರ್ಕಾರ ಪತನವಾದರೆ ನಾವು ಹೊಣೆಯಲ್ಲ: ಸತೀಶ ಜಾರಕಿಹೊಳಿ ಹೊಸ ಬಾಂಬ್‌

ಬೆಳಗಾವಿ

            ಕಾಂಗ್ರೆಸ್‌ನ ಬೇರೆ ಶಾಸಕರು ಬಿಜೆಪಿಗೆ ಹೋಗಿ, ಸಮ್ಮಿಶ್ರ ಸರ್ಕಾರ ಪತನವಾದರೂ ಆಗಬಹುದು. ಅದಕ್ಕೆ ನಾವು (ಜಾರಕಿಹೊಳಿ ಸಹೋದರರು) ಹೊಣೆಯಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ ಇಲ್ಲಿ ಭಾನುವಾರ ಹೊಸ ಬಾಂಬ್‌ ಸಿಡಿಸಿದರು.

             ನಾಳೆ ಸರ್ಕಾರ ಬಿದ್ದರೆ ಯಾರು ಏನು ಮಾಡಲಾಗುತ್ತದೆ? ನಾವಂತೂ ಕಾಂಗ್ರೆಸ್‌ ಬಿಟ್ಟು ಹೋಗುವುದಿಲ್ಲ. ನಮ್ಮಲ್ಲಿಯೇ ಬೇರೆಯವರು ಬಿಜೆಪಿಗೆ ಹೋದರೆ? 24 ಗಂಟೆಗಳಲ್ಲಿ ಏನು ಬೇಕಾದರೂ ಆಗಬಹುದು ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

              ಹಿಂದೆ ನಮ್ಮ ಇಬ್ಬರು ಶಾಸಕರು ಹೋಗಿದ್ದರು. ಮತ್ತೆ ವಾಪಸಾಗಿದ್ದಾರೆ. ಈಗಲೂ ಯಾರಾದರೂ ಹೋದರೆ ಅದು ಅವರವರ ವೈಯಕ್ತಿಕ ವಿಷಯ. ಅದಕ್ಕೆ ನಾವು ಜವಾಬ್ದಾರರಲ್ಲ. ಯಾರಿಗೂ ಏನೂ ಹೇಳುವುದಕ್ಕೆ ಆಗುವುದಿಲ್ಲ. ಸರ್ಕಾರ ಬಿದ್ದರೆ ನಾನೇನು ಮಾಡಲಾಗುತ್ತದೆ? ಎಂದು ಮಾರ್ಮಿಕವಾಗಿ ಕೇಳಿದರು.

                ಈ ರೀತಿ ಮಾಡಿ, ಆ ರೀತಿ ಮಾಡಿ ಎಂದು ಸಿದ್ದರಾಮಯ್ಯ ಅವರು ನನಗಾಗಲೀ, ರಮೇಶ ಜಾರಕಿಹೊಳಿ ಅವರಿಗಾಗಲೀ ಹೇಳಿಲ್ಲ. ಹೇಳಿಕೊಟ್ಟು ಮಾಡಿಸುವಂಥದ್ದು ಏನೂ ಇಲ್ಲ. ಹೀಗಾಗಿ, ಈಗ ಅವರು ಕರೆದು ಬುದ್ಧಿ ಹೇಳುವಂತಹ ಪ್ರಶ್ನೆ ಇಲ್ಲ. ಚರ್ಚಿಸಲು ವಿಷಯಗಳೂ ಇಲ್ಲ. ಅಂತಹ ಬೆಳವಣಿಗೆಗಳೂ ನಡೆದಿಲ್ಲ; ಸಮಸ್ಯೆಗಳೂ ಉದ್ಭವವಾಗಿಲ್ಲ. ಆದರೂ ಕರೆದರೆ ಹೋಗಿ ಚರ್ಚಿಸುತ್ತೇವೆ. ಸೋಮವಾರ ಬೆಂಗಳೂರಿಗೆ ಹೋಗುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದರು.

               ಸಚಿವ ರಮೇಶ ಜಾರಕಿಹೊಳಿ‌ ನಾಪತ್ತೆಯಾಗಿದ್ದಾರಲ್ಲಾ ಎಂಬ ಪ್ರಶ್ನೆಗೆ, ಅವರು ಎಲ್ಲಿಯೂ ಹೋಗಿಲ್ಲ. ಗೋಕಾಕದಲ್ಲೇ ಇದ್ದಾರೆ. ನಾನು ಮಂತ್ರಿಯಾಗಿದ್ದಾಗಲೂ ಸರ್ಕಾರಿ ಕಾರು ಬಳಸುತ್ತಿರಲಿಲ್ಲ. ಅದೇ ರೀತಿ‌ ಅವರು ಕೂಡ ಮಾಡುತ್ತಿದ್ದಾರೆ. ಇದರಲ್ಲಿ ರಹಸ್ಯವೇನೂ ಇಲ್ಲ. ಜಿಲ್ಲೆಯ ರಾಜಕಾರಣದಲ್ಲಿ ಬೇರೆಯವರು ಮಧ್ಯಪ್ರವೇಶ ಮಾಡಬಾರದು ಎನ್ನುವುದು ನಮ್ಮ ಬೇಡಿಕೆಯಾಗಿತ್ತು. ಇದನ್ನು ವರಿಷ್ಠರು ಬಗೆಹರಿಸಿದ್ದಾರೆ. ಹೀಗಾಗಿ, ಸಮಸ್ಯೆಗಳು ಬಗೆಹರಿದಿವೆ ಎಂದರು.

                 ಬಿಜೆಪಿಯವರು ಕೆಲವರಿಗೆ ಆಹ್ವಾನ ನೀಡಿರಬಹುದು. ಹಣದ ಆಮಿಷವನ್ನೂ ಒಡ್ಡಿರಬಹುದು. ನನಗಂಗೂ ಆ ಬಗ್ಗೆ ಗೊತ್ತಿಲ್ಲ. ಯಾರ‍್ಯಾರು ಹೋಗುತ್ತಿದ್ದಾರೆ ಎನ್ನುವ ಮಾಹಿತಿ ನನಗೆ ಇಲ್ಲ. ಹಣದ ಆಮಿಷದ ಕುರಿತು ಈಗಾಗಲೇ ಐಟಿಗೆ ದೂರು ಸಲ್ಲಿಕೆಯಾಗಿದೆ. ತನಿಖೆಯೂ ನಡೆಯುತ್ತಿದೆ ಎಂದು ಹೇಳಿದರು.ನಮ್ಮಿಂದ ಸಮ್ಮಿಶ್ರ ಸರ್ಕಾರಕ್ಕೆ ನಮ್ಮಿಂದ ತೊಂದರೆಯಾಗುವುದಿಲ್ಲ ಎಂದೂ ಹೇಳಿದರು.

Recent Articles

spot_img

Related Stories

Share via
Copy link
Powered by Social Snap