ಸರ್ಕಾರದ ಷರತ್ತು : ಹೆಚ್ಚಿನ ರೈತರಿಗೆ ಪ್ರಯೋಜನವಿಲ್ಲ

ದಾವಣಗೆರೆ:

      ಸಾಲ ಮನ್ನಾಕ್ಕೆ ಸರ್ಕಾರ ಸಾಕಷ್ಟು ಷರತ್ತು ವಿಧಿಸಿರುವುದರಿಂದ ಹೆಚ್ಚಿನ ಸಂಖ್ಯೆಯ ರೈತರಿಗೆ ಇದರಿಂದ ಪ್ರಯೋಜನವಾಗುವುದಿಲ್ಲ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಾವರ್ಯಾ ನಾಯ್ಕ ಅಭಿಪ್ರಾಯಪಟ್ಟರು.

      ನಗರದ ಜನತಾ ಬಜಾರ್ ಸಭಾಂಗಣದಲ್ಲಿ ಗುರುವಾರ ರಾಜ್ಯ ಸಹಕಾರ ಮಹಾಮಂಡಳ, ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ದಾವಣಗೆರೆ ಮತ್ತು ಜಗಳೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಏರ್ಪಡಿಸಿದ್ದ ಒಂದು ದಿನದ ಜಿಲ್ಲಾ ವಿಶೇಷ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

      ಡಿಸಿಸಿ ಬ್ಯಾಂಕ್ 2018 ಜುಲೈ 10ರವರೆಗೆ ರೈತರಿಗೆ ಒಟ್ಟು 228 ಕೋಟಿ ರೂ. ಸಾಲ ನೀಡಿದೆ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಘೋಷಿಸಿದ್ದ ಸಾಲ ಮನ್ನಾ ಫಲಾನುಭವಿಗಳಾಗಿ, ಮತ್ತೆ ಸಾಲ ಪಡೆದವರಿಗೂ ಈ ಬಾರಿ ಸಾಲ ಮನ್ನಾ ಆಗಲಿದೆ. ಆದರೆ, ಸಾಲ ಮನ್ನಾಕ್ಕೆ ಸರ್ಕಾರ ಸಾಕಷ್ಟು ನಿಯಮ ವಿಧಿಸಿರುವುದರಿಂದ ಕಡಿಮೆ ರೈತರ ಸಾಲ ಮಾತ್ರ ಮನ್ನಾ ಆಗಲಿದ್ದು, ನಾವು ನೀಡಿರುವ 228 ಕೋಟಿ ರೂ. ಸಾಲದಲ್ಲಿ 180 ಕೋಟಿ ರೂ. ಮಾತ್ರ ಮನ್ನಾ ಆಗಬಹುದು ಎಂದರು.

      ಖಾತೆ ಚಾಲ್ತಿದಾರರಿಗೆ ಮಾತ್ರ ಸಾಲ ಮನ್ನಾ ಆಗಲಿದ್ದು, ಸಾಲದ ಹೊರಬಾಕಿಯಲ್ಲಿ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಮಾತ್ರ ಸಾಲ ಮನ್ನಾ ಅನ್ವಯಿಸುತ್ತದೆ. ಕೂಡು ಕುಟುಂಬದಲ್ಲಿ ಬೇರೆ ಬೇರೆ ಸದಸ್ಯರು ಸಾಲ ಮಾಡಿದ್ದರೆ, ಮನ್ನಾ ಅನ್ವಯಿಸುವುದಿಲ್ಲ. ಸಾಲ ಮಾಡಿದಾತ ಮರಣ ಹೊಂದಿದ್ದರೆ, ಆತನ ವಾರಸುದಾರನಿಗೆ ಸಾಲ ಮನ್ನಾ ಯೋಜನೆ ಅನ್ವಯವಾಗುತ್ತದೆ. ಸಾಲ ಮನ್ನಾ ಸೌಲಭ್ಯವು ಪ್ರಾಥಮಿಕ ಪತ್ತಿನ ಸಹಕಾರ ಸಂಘ, ಲ್ಯಾಂಪ್ಸ್, ಡಿಸಿಸಿ ಬ್ಯಾಂಕ್ ಮತ್ತು ಪಿಕಾರ್ಡ್ ಬ್ಯಾಂಕ್‍ಗಳು ವಿತರಿಸಿದ ಬೆಳೆ ಸಾಲದ ಪೈಕಿ 2018 ಜುಲೈ 10ಕ್ಕೆ ಹೊಂದಿರುವ ಹೊರಬಾಕಿ ಸಾಲಕ್ಕೆ ಮಾತ್ರ ಅನ್ವಯಿಸುತ್ತದೆ. 2018 ಜು.10ಕ್ಕೆ ಹೊರಬಾಕಿ ಇರುವ ಮೊತ್ತವನ್ನು ಸರ್ಕಾರದ ಆದೇಶ ಜಾರಿಯಾಗುವ ದಿನಾಂಕಕ್ಕೆ ಪೂರ್ಣವಾಗಿ ಮರುಪಾವತಿಸಿದ್ದಲ್ಲಿ ಮನ್ನಾ ಆಗಬೇಕಾದ ಮೊತ್ತವನ್ನು ರೈತರ ಉಳಿತಾಯ ಖಾತೆಗೆ ಜಮಾ ಮಾಡಲಾಗುವುದು ಎಂದು ಅವರು ವಿವರಿಸಿದರು.

      ಬೆಳೆ ಸಾಲ ಪಡೆದ ರೈತರು ಸರ್ಕಾರಿ, ಸಹಕಾರಿ ಮತ್ತು ಇತರೇ ಕ್ಷೇತ್ರದ ನೌಕರರಾಗಿದ್ದು, ಮಾಸಿಕ 20 ಸಾವಿರಕ್ಕಿಂತ ಹೆಚ್ಚಿನ ವೇತನ/ಪಿಂಚಣಿ ಪಡೆಯುತ್ತಿದ್ದಲ್ಲಿ, ಅಂತಹ ರೈತರಿಗೆ ಸಾಲ ಮನ್ನಾ ಯೋಜನೆ ಅನ್ವಯಿಸುವುದಿಲ್ಲ. ಕಳೆದ 3 ವರ್ಷದಲ್ಲಿ ಯಾವುದಾದರೂ 1 ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿರುವ ರೈತರಿಗೂ ಈ ಯೋಜನೆ ಅನ್ವಯಿಸುವುದಿಲ್ಲ. ರೈತರ ಕೃಷಿ ಉತ್ಪನ್ನ ಒತ್ತೆ ಇಟ್ಟು ನೀಡುವ ಸಾಲ, ಚಿನ್ನಾಭರಣ ಅಡವಿಟ್ಟುಕೊಂಡುವ ನೀಡುವ ಆಭರಣ ಸಾಲ, ವಾಹನ ಖರೀದಿಸಲು ನೀಡುವ ಸಾಲ, ಮೀನುಗಾರಿಕೆ, ಪಶುಆಹಾರ ಖರೀದಿ, ಸ್ವಸಹಾಯ ಗುಂಪು ಮತ್ತು ಜಂಟಿ ಭಾದ್ಯತಾ ಗುಂಪುಗಳಿಗೆ ನೀಡುವ ಸಾಲಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ ಎಂದು ಅವರು ತಿಳಿಸಿದರು.

      ಕಾರ್ಯಕ್ರಮ ಉದ್ಘಾಟಿಸಿದ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಜೆ.ಎಸ್.ವೇಣುಗೋಪಾಲ ರೆಡ್ಡಿ ಮಾತನಾಡಿ, ನಮ್ಮ ಬ್ಯಾಂಕ್ ಬೇನಾಮಿಯಾಗಿ 50 ಕೋಟಿ ರೂ. ಸಾಲ ನೀಡಿದೆ ಎಂಬುದು ಶುದ್ಧಸುಳ್ಳು. ಬಡವರು, ರೈತರಿಗೆ ನೀಡಿದ ಸಾಲ ಇದಾಗಿದ್ದು, ಬೇನಾಮಿ ಸಾಲವಲ್ಲ ಎಂದು ಸ್ಪಷ್ಟಪಡಿಸಿದರು.

      ಮಹಾಮಂಡಳದ ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್ ನಿರ್ದೇಶಕರಾದ ಸಿ.ಚಂದ್ರಶೇಖರ್, ಆರ್.ಬಸವರಾಜಪ್ಪ, ಜಿ.ಡಿ.ಗುರುಸ್ವಾಮಿ, ಉಪಾಧ್ಯಕ್ಷ ಎಸ್.ಬಿ.ಶಿವಕುಮಾರ್, ಹೆಚ್.ಬಿ.ಭೂಮೇಶ್ವರಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೆ.ಎಂ.ಜಗದೀಶ್ ನಿರೂಪಿಸಿದರು. ಕೆ.ಹೆಚ್.ಸಂತೋಷ್ ಕುಮಾರ್ ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap