ಸರ್ಕಾರಿ ಆಸ್ಪತ್ರೆಯ ವಿಶ್ರಾಂತಿ ಗೃಹದ ರಸ್ತೆ ಕಾಮಗಾರಿ ಕಳಪೆ : ಸಾರ್ವಜನಿಕರ ಆರೋಪ

ಹರಿಹರ :

 

      ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಡೆಯುತ್ತಿರುವ ವಿಶ್ರಾಂತಿ ಗೃಹದ ರಸ್ತೆ ಕಾಮಗಾರಿ ಕಳಪೆಯಾಗಿ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

      ಆಸ್ಪತ್ರೆ ಆವರಣದಲ್ಲಿ ನೂತನ ವಿಶ್ರಾಂತಿ ಗೃಹ ಹಾಗೂ ಅದಕ್ಕೆ ರಸ್ತೆ ನಿರ್ಮಿಸುವ ಕಾಮಗಾರಿಗೆ ಇತ್ತೀಚಿಗೆ ಶಾಸಕ ಎಸ್.ರಾಮಪ್ಪ ಗುದ್ದಲಿಪೂಜೆ ನೆರವೇರಿಸಿದ್ದರು.

      ಅದರಂತೆ ಕಾಮಗಾರಿ ಪ್ರಗತಿಯಲ್ಲಿದ್ದು, ಆಸ್ಪತ್ರೆ ಮುಖ್ಯ ಕಟ್ಟಡದ ಎಡಭಾಗದಿಂದ ವಿಶ್ರಾಂತಿ ಗೃಹಕ್ಕೆ ತೆರಳಲು ಅಂದಾಜು 10 ಅಡಿ ಅಗಲದ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತಿದೆ. ಆದರೆ ಸಿಸಿ ರಸ್ತೆ ನಿರ್ಮಾಣಕ್ಕೆ ಅನುಸರಿಸಬೇಕಾದ ವಿಧಾನಗಳಲ್ಲಿ ಲೋಪವಾಗುತ್ತಿದೆ ಅಲ್ಲದೆ ಕಾಮಗಾರಿಗೆ ನಿಗಧಿತ ಗುಣಮಟ್ಟದ ಜಲ್ಲಿ, ಸಿಮೆಂಟ್, ಮರಳು, ಕಬ್ಬಿಣ ಬಳಸುತ್ತಿಲ್ಲವೆಂದು ಸ್ಥಳೀಯರು ದೂರಿದ್ದಾರೆ.

      ರಸ್ತೆ ನಿರ್ಮಿಸಬೇಕಾದ ಭೂಮಿ ಕರಿ ಮಣ್ಣಿನಿಂದ ಕೂಡಿರುವುದರಿಂದ ಮಣ್ಣನ್ನು ಹೊರತೆಗೆದು, ಆಳದಲ್ಲಿ ಗ್ರ್ಯಾವಲ್ಲ ಹಾಕಿ, ಅದರ ಮೇಲೆ 40 ಎಂಎಂ ಜೆಲ್ಲಿಕಲ್ಲು ಮಿಶ್ರಿತ ಕಾಂಕ್ರೀಟ್ ಹಾಕಬೇಕು. ಅದರ ಮೇಲೆ ಕಬ್ಬಿಣ ನಂತರ 20 ಎಂಎಂ ಜಿಲ್ಲಿಕಲ್ಲು ಮಿಶ್ರಿತ ಕಾಂಕ್ರೀಟ್ ಹಾಕಿ ಸಮತಟ್ಟುಗೊಳಿಸಬೇಕು. ಆದರೆ ಈ ರಸ್ತೆ ಕಾಮಗಾರಿಯಲ್ಲಿ ಆಳಕ್ಕೆ ಮಣ್ಣು ತೆಗೆದು ಗ್ರ್ಯಾವಲ್ ಹಾಕಿಲ್ಲ.

   ಭೂಮಿಯ ಮೇಲ್ಪದರದ ಮಣ್ಣು ಮಾತ್ರ ತೆಗೆದು, ಒಂದು ಹಂತ ಬರಿ ಜಲ್ಲಿಕಲ್ಲು ನಂತರ ಕಬ್ಬಿಣವನ್ನೆ ಉಪಯೋಗಿಸದೆ ಮತ್ತೊಂದು ಹಂತದಲ್ಲಿ ಕಾಂಕ್ರೀಟ್ ಮಿಶ್ರಿತ ಜಲ್ಲಿಕಲ್ಲು ಹಾಕಿ, ಕೈತೊಳೆದುಕೊಳ್ಳುತ್ತಿದ್ದಾರೆ. ಇಲ್ಲಿ ಬಳಸುವ ಜಲ್ಲಿಕಲ್ಲು ಸಹ ಮಣ್ಣು ಮಿಶ್ರಿತವಾಗಿದೆ. ಚಿಕ್ಕ ರಸ್ತೆ ಕೆಲಸವೆ ಹೀಗಾದರೆ ಗುತ್ತಿಗೆದಾರರು ವಿಶ್ರಾಂತಿ ಗೃಹ ಹೇಗೆ ನಿರ್ಮಿಸುತ್ತಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
 

 
      ಕಣ್ಣೆದುರೆ ಕಳಪೆ ಕಾಮಗಾರಿ ನಡೆಯುತ್ತಿದ್ದರೂ ಆಸ್ಪತ್ರೆ ಅಧಿಕಾರಿಗಳು ನಮಗೆ ಸಂಬಂಧವೇ ಇಲ್ಲವೆಂದು ಕಣ್ಮುಚ್ಚಿ ಕುಳಿತಿರುವುದು ನೋಡಿದರೆ ಗುತ್ತಿಗೆದಾರರೊಂದಿಗೆ ಷಾಮೀಲಾಗಿರುವ ಸಂಶಯವಿದೆ. ಕೂಡಲೆ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಸ್ಥಳಕ್ಕೆ ಬಂದು ಕಾಮಗಾರಿ ಪರಿಶೀಲಿಸಬೇಕು.
                                                                                                -ನಾಗರಾಜಗೌಡ, ಕರವೇ ಅಧ್ಯಕ್ಷ
 
 
ಆಸ್ಪತ್ರೆ ಆಡಳಿತಾಧಿಕಾರಿಗೆ ಮಾಹಿತಿಯೇ ಇಲ್ಲ :
      ಸಾರ್ವಜನಿಕರ ಆರೋಪದ ಬಗ್ಗೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ|ಹನುಮಾನಾಯ್ಕ ಅವರಿಗೆ ವಿಚಾರಿಸಿದರೆ ಕಾಮಗಾರಿ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ, ಯಾವ ಅನುದಾನದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ, ಗುತ್ತಿಗೆದಾರರು ಯಾರು, ಕಾಮಗಾರಿಯ ಎಸ್ಟಿಮೇಷನ್, ವಿವರಗಳು ಯಾವವೂ ನಮಗೆ ಗೊತ್ತಿಲ್ಲ ಎಂದು ಜಾರಿಕೊಂಡರು.
 

Recent Articles

spot_img

Related Stories

Share via
Copy link
Powered by Social Snap