ಸಸಿ ವಿತರಣಾ ಕಾರ್ಯಕ್ರಮ

ಹಾನಗಲ್ಲ :

            ಹಣ್ಣು ಹಾಗೂ ತರಕಾರಿ ಬೆಳೆಗಳಿಗೆ ವರ್ಷದಾದ್ಯಂತ ಬೇಡಿಕೆಯಿರುವುದರಿಂದ ಆಯಾ ಕಾಲಕ್ಕೆ ಫಲ ನೀಡುವ ಮಾವು, ಚಿಕ್ಕು, ಪೇರು, ನಿಂಬೆ, ನೆಲ್ಲಿ, ಸೀತಾಫಲದಂಥ ಬೆಳೆಗಳನ್ನು ಬೆಳೆಯುವತ್ತ ರೈತರು ಕೃಷಿಯನ್ನು ಪರಿವರ್ತಿಸುವ ಅಗತ್ಯವಿದೆ ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದರು.
             ಶನಿವಾರ ತಾಲೂಕಿನ ಹಸನಾಬಾದ ಗ್ರಾಮದಲ್ಲಿ ಕೃಷಿ ಹಾಗೂ ತೋಟಗಾರಿಕೆ ಮತ್ತು ಅರಣ್ಯ ಇಲಾಖೆಗಳ ಸಹಯೋಗದಲ್ಲಿ ನಡೆದ ರೈತ ಫಲಾನುಭವಿಗಳಿಗೆ ಸಸಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತ ಸಮುದಾಯ ಅನಿವಾರ್ಯವಾಗಿ ತೋಟಗಾರಿಕೆ ಬೆಳೆಗಳತ್ತ ಹೊರಳುತ್ತಿದೆ. ಇದರ ಮಧ್ಯೆ ಅತಿ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ತರಕಾರಿಯತ್ತಲೂ ವಾಲುತ್ತಿದ್ದಾರೆ. ಸರ್ಕಾರ ನೀರಾವರಿ ಹಾಗೂ ವಿದ್ಯುತ್ ಸಮರ್ಪಕವಾಗಿ ನೀಡಿದರೆ ಕೃಷಿ ವಲಯ ಚೇತರಿಸಿಕೊಳ್ಳಬಹುದಾಗಿದೆ. ತಾಲೂಕಿನಲ್ಲಿ ಮಾವು ಬೆಳೆ ಸಮೃದ್ಧವಾಗಿದೆ. ಆದರೆ ಮಧ್ಯವರ್ತಿಗಳನ್ನೇ ಆಶ್ರಯಿಸಿ ಮಾರುಕಟ್ಟೆ ಪ್ರವೇಶಿಸುವಂತಾಗಿದೆ. ರಫ್ತುವಲಯ ಸ್ಥಾಪನೆಯಾದರೆ ಇದು ಉದ್ಯಮವಾಗಿ ಬೆಳೆಯಬಲ್ಲದು.                 ರೈತರು ಪಾರಂಪರಿಕ ಭತ್ತ, ಗೋವಿನಜೋಳ, ಹತ್ತಿ ಸೋಯಾ ಬೆಳೆಗಳನ್ನು ಸ್ವಲ್ಪ ಸ್ವಲ್ಪವಾಗಿ ಕಡಿಮೆ ಮಾಡಿ ಬೇರೆ ವಾಣಿಜ್ಯ ಬೆಳೆಗಳನ್ನು ಕೈಗೆತ್ತಿಕೊಳ್ಳಬೇಕು. ಬೇರೆ ಬೇರೆ ಅವಧಿಯಲ್ಲಿ ಫಲ ನೀಡುವುದರಿಂದ ನಿರಂತರವಾಗಿ ಹಣ ಪಡೆಯಬಹುದಾಗಿದೆ. ಕಾಲಮಾನ ಬದಲಾಗುತ್ತಿದ್ದು, ಬೇಸಿಗೆ ದಿನಗಳೇ ಹೆಚ್ಚಾಗುತ್ತಿವೆ. ಅರಣ್ಯ ಪರಿಸರ ನಾಶವಾಗುತ್ತಿರುವುದು ಆತಂಕ ತಂದಿದೆ. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಮುಂದುವರೆದರೆ ಅರಣ್ಯ ನಿರ್ಮಾಣದ ಜೊತೆಯಲ್ಲಿ ಆದಾಯವನ್ನೂ ನಿರೀಕ್ಷಿಸಬಹುದಾಗಿದೆ ಎಂದು ಸಲಹೆ ಮಾಡಿದರು.
                 ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ತಾಲೂಕಾಧ್ಯಕ್ಷ ಮರಿಗೌಡ ಪಾಟೀಲ, ತಾಲೂಕು ಪಂಚಾಯತ ಮಾಜಿ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, ರವಿಕಿರಣ ಪಾಟೀಲ ಮಾತನಾಡಿ, ಕೃಷಿ, ಅರಣ್ಯ, ತೋಟಗಾರಿಕೆ ಗ್ರಾಪಂಗಳು ಉಚಿತವಾಗಿ ಸಸಿಗಳನ್ನು ವಿತರಿಸುತ್ತಿವೆ. ಆದರೆ ಉಚಿತ ಸಸಿಗಳೆಂದು ಮನೆ ಬಾಗಿಲಲ್ಲಿಟ್ಟು ಒಣಗಿಸಬೇಡಿ, ಅವೆಲ್ಲವೂ ಸಾರ್ವಜನಿಕರ ತೆರಿಗೆ ಹಣದಿಂದ ಇಲಾಖೆಯವರು ಬೆಳೆಸಿದವುಗಳಾಗಿವೆ. ಅಗತ್ಯವಿರುವವರು ಮಾತ್ರ ಸಸಿ ಪಡೆದುಕೊಳ್ಳಲಿ. ಎಲ್ಲರ ಹೊಲ-ಗದ್ದೆಗಳಲ್ಲೂ ಗಿಡಗಳನ್ನು ಬೆಳೆಸಿದರೆ ಆರ್ಥಿಕ ಸಮಸ್ಯೆಗಳು ಬಂದಾಗ ರೈತ ಆತ್ಮಹತ್ಯೆಗೆ ಮುಂದಾಗದೇ, ಈ ಗಿಡ ಮರಗಳನ್ನು ಮಾರಿ ಸಮಸ್ಯೆ ನೀಗಿಸಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.
                  ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ವೈ.ಶ್ರೀಧರ್, ಅರಣ್ಯಾಧಿಕಾರಿಗಳಾದ ಜೆ.ಎಸ್,ಮಹರಾಜಪೇಟ್, ವಿ.ಎಸ್.ಮಹರಾಜಪೇಟ್, ಗ್ರಾಪಂ ಅಧ್ಯಕ್ಷ ಪಾರವ್ವ ಹನುಮನಕೊಪ್ಪ, ಮುನೀರಮ್ಹದ್ ಹಂಚಿನಮನಿ, ಮಹೇಶ ಹಿರೇಮಠ, ಗದಿಗಯ್ಯ ಹಿರೇಮಠ, ಬಂಗಾರಗೌಡ ಪಾಟೀಲ, ಬಿ.ಎ.ಕೂಡಲಮಠ ವೇದಿಕೆಯಲ್ಲಿದ್ದರು. ತೋಟಗಾರಿಕೆ ಅಧಿಕಾರಿ ನೀಲಕಂಠ ಪ್ರಾಸ್ತಾವಿಕ ಮಾತನಾಡಿದರು. ಎಂ.ಟಿ.ಬಾಗೇವಾಡಿ ಸ್ವಾಗತಿಸಿದರು.

Recent Articles

spot_img

Related Stories

Share via
Copy link
Powered by Social Snap