ಸಹ್ಯಾದ್ರಿ ಪರ್ವತ ಶ್ರೇಣಿಯನ್ನು ಉಳಿಸಿ ಬೆಳೆಸೋಣ

ದಾವಣಗೆರೆ:

    ಮಲ್ನಾಡ ಹಸಿರು, ಬಯಲು ಸೀಮೆ ಉಸಿರು ಆಗಿರುವ ನಿಸರ್ಗದತ್ತ ಅರಣ್ಯ ಸಂಪತ್ತು ಸಹ್ಯಾದ್ರಿ ಪರ್ವತ ಶ್ರೇಣಿಯನ್ನು ಎಲ್ಲರೂ ಸೇರಿ ಉಳಿಸಿ, ಬೆಳೆಸೋಣ ಎಂದು ಅಪ್ಪಿಕೊ ಚಳುವಳಿ ಕರ್ನಾಟಕದ ಪಾಂಡುರಂಗ ಹೆಗಡೆ ಕರೆ ನೀಡಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಪಶ್ಚಿಮ ಘಟ್ಟ ಉಳಿಸಿ ಅಭಿಯಾನ, ಕರ್ನಾಟಕ ಪರಿಸರ ಅಧ್ಯಯನ ಕೇಂದ್ರ ಶಿವಮೊಗ್ಗ, ಸಾಮಾಜಿಕ ಅರಣ್ಯ ಇಲಾಖೆ, ಫೆವಾರ್ಢ, ಸ್ಪೂರ್ತಿ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 35ನೇ ವರ್ಷದ ಸಹ್ಯಾದ್ರಿ ದಿನದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

   ಕಳೆದ 4 ವರ್ಷದ ಹಿಂದೆ ಬರಗಾಲ ಎದುರಾಗಿದ್ದ ಸಂದರ್ಭದಲ್ಲಿ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲೂ ಕುಡಿಯುವ ನೀರಿಗೆ ಹಾಹಾಕಾರ   ಎದುರಾಗಿತ್ತು. ಇಂಥಹ ಗಂಭೀರ ಸ್ಥಿತಿಗೆ ಸಹ್ಯಾದ್ರಿ ತಲುಪಿದೆ. ಹೀಗಾಗಿ ಸಹ್ಯಾದ್ರಿಯ ರಕ್ಷಣೆ ಅನಿವಾರ್ಯವಾಗಿದ್ದು, ಉಳಿಸಿ-ಬೆಳೆಸಿ-ಮಿತವಾಗಿ ಬಳಸಿ ಎಂಬ ಘೋಷ ವಾಕ್ಯದೊಂದಿಗೆ ಸಹ್ಯಾದ್ರಿ ಪರ್ವತ ಶ್ರೇಣಿಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.
ಸಾಮಾನ್ಯವಾಗಿ ಬಹುತೇಕರಲ್ಲಿ ಸಹ್ಯಾದ್ರಿ ಶ್ರೇಣಿಯನ್ನು ಪಶ್ಚಿಮಘಟ್ಟದವರು ಮಾತ್ರ ಉಳಿಸಬೇಕೆಂಬ ಅಭಿಪ್ರಾಯ ಇರುವುದು ಸರಿಯಲ್ಲ. ಇದು ಮಲ್ನಾಡ ಹಸಿರು ಹಾಗೂ ಬಯಲು ಸೀಮೆಯ ಉಸಿರು ಆಗಿರುವುದರಿಂದ ಎಲ್ಲರೂ ಸೇರಿ ಸಹ್ಯಾದ್ರಿ ಪರ್ವತ ಶ್ರೇಣಿಯನ್ನ ಉಳಿಸಿ ಸಂರಕ್ಷಣೆ ಮಾಡೋಣ ಎಂದು ಕಿವಿಮಾತು ಹೇಳಿದರು.

   ಘಟ್ಟ ಪ್ರದೇಶದಲ್ಲಿ ಶೇ.66 ರಷ್ಟು ಹಾಗೂ ಬಯಲು ಸೀಮೆಯಲ್ಲಿ ಶೇ.33 ರಷ್ಟು ಅರಣ್ಯವಿದೆ ಎಂಬ ನಿಯಮವಿದೆ. ಆದರೆ, ಗೂಗಲ್ ಸಂಸ್ಥೆ ನಡೆಸಿದ ಅಧ್ಯಯನದಿಂದ ಪಶ್ಚಿಮಘಟ್ಟದಲ್ಲಿ ಕೇವಲ ಶೇ.30 ರಷ್ಟು ಅರಣ್ಯ ಇದೆ ಎಂಬುದನ್ನು ತಿಳಿಸಿದೆ. ಇದಲ್ಲದೇ, ಗಾಡಗಲ್ ವರದಿ ಈ ಘಟ್ಟ ಪ್ರದೇಶದಲ್ಲಿ ಶೇ.10 ರಷ್ಟು ಮಾತ್ರ ಅರಣ್ಯ ಇದೆ ಎಂಬ ಮಾಹಿತಿ ನೀಡಿದೆ. ಪಶ್ಚಿಮ ಘಟ್ಟದಲ್ಲಿ ಮರಗಳನ್ನು ಕಡಿದು, ಅರಣ್ಯ ಸಂಪತ್ತು ನಾಶ ಮಾಡುತ್ತಿರುವುದರಿಂದಲೇ ಭೂಮಿ ಸಡಿಲವಾಗಿ, ಮಳೆಯ ನೀರಿನಲ್ಲಿ ಮಣ್ಣು ಕೊಚ್ಚುಕೊಂಡು ಬಂದು ತುಂಗಭದ್ರಾ ಡ್ಯಾಂ ತುಂಬಿದೆ. ಇದರಲ್ಲಿ ನೀರಿಗಿಂತ ಹೂಳಿನ ಪ್ರಮಾಣವೇ ಹೆಚ್ಚಿದೆ ಎಂದು ಬೇಸರ ವ್ಯಕ್ತಪಡಿಸಿದರು.

  ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರದ ನಿರ್ದೇಶಕ ಕೆ.ಎಲ್.ಜನಾರ್ಧನ್ ಮಾತನಾಡಿ, ಮನುಷ್ಯನಿಂದ ಪ್ರಕೃತಿಯ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯವನ್ನು ಸಹಿಸಲು ಸಾಧ್ಯವಾಗದೇ, ಸಹ್ಯಾದ್ರಿ ಪರ್ವತ ಶ್ರೇಣಿ ಅಳುತ್ತಿದೆ, ಬೊಬ್ಬೊ ಹಾಕುತ್ತಿದೆ. ಇದಕ್ಕೆ ಮೊನ್ನೆ ಕೊಡಗು, ಮಡಿಕೇರಿ, ಕೇರಳದಲ್ಲಿ ನಡೆದ ಪ್ರವಾಹವೇ ಉತ್ತಮ ನಿದರ್ಶನವಾಗಿದೆ. ಸಹ್ಯಾದ್ರಿ ಪರ್ವತ ಶ್ರೇಣಿ ಇದ್ದರೆ ಮಾತ್ರ ಬಯಲು ಸೀಮೆಯವರು ಬದುಕಲು ಸಾಧ್ಯ. ಹೀಗಾಗಿ ಎಲ್ಲರೂ ಸೇರಿ ದಕ್ಷಿಣ ಭಾರತದ ಬಹುದೊಡ್ಡ ಜಲಮೂಲ, ನೀರಿನ ಸಂಗ್ರಹಕಾರವಾಗಿರುವ ಸಹ್ಯಾದ್ರಿ ಪರ್ವತ ಶ್ರೇಣಿಯನ್ನು ರಕ್ಷಣೆ ಮಾಡೋಣ ಎಂದರು.

   ಭಾರತಕ್ಕೆ ಬ್ರಿಟೀಷರು ಬರುವ ಮುನ್ನ ಅರಣ್ಯವನ್ನು ಕಾಡಿನಲ್ಲೆ ನೆಲೆ ಕಂಡುಕೊಂಡಿದ್ದ ಕಾಡು ಜನರು, ಆದಿವಾಸಿಗಳು, ಬುಡಕಟ್ಟಿನವರು ಸಂರಕ್ಷಣೆ ಮಾಡುತ್ತಿದ್ದರು. ಆದರೆ, ಬ್ರಿಟೀಷರು ಭಾರತಕ್ಕೆ ಕಾಲಿಟ್ಟ ಮೇಲೆ ತಮ್ಮ ಖಜಾನೆಯನ್ನು ಭರ್ತಿ ಮಾಡಿಕೊಳ್ಳಲು ಅರಣ್ಯ ಸಂಪತ್ತನ್ನು ಲೂಟಿ ಮಾಡಿದರು. ಬಳಿಕ ನಂತರ ಬಂದ ಸ್ವತಂತ್ರ ಭಾರತ ಸರ್ಕಾರ ಸಹ ಖಜಾನೆ ತುಂಬಿಸಿಕೊಳ್ಳಲು ಅರಣ್ಯ ಸಂಪತ್ತನ್ನು ಬಳಸಿಕೊಂಡಿತ್ತು. ಹೀಗಾಗಿ 1970ರ ವರೆಗೆ ಅರಣ್ಯ ಇಲಾಖೆಯ ಡಿಕ್ಷನರಿಯಲ್ಲಿ ಅರಣ್ಯ ಸಂರಕ್ಷಣೆ ಎಂಬ ಪದವೇ ಇರಲಿಲ್ಲ. ಆದರೆ, ಅಷ್ಟೊತ್ತಿಗೆ ಅರಣ್ಯ ಸಂಪತ್ತು ನಾಶವಾಗಿದೆ ಎಂಬ ಕೂಗು ಎದ್ದ ನಂತರಲ್ಲಿ ಅರಣ್ಯ ಸಂರಕ್ಷಣೆಗೆ ಇಲಾಖೆ ಮುಂದಾಗಿದೆ ಅಷ್ಟೆ ಎಂದು ಮಾಹಿತಿ ನೀಡಿದರು.

  ಕರ್ನಾಟಕ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಕೆ.ಬಿ.ರೂಪಾ ನಾಯ್ಕ್ ಮಾತನಾಡಿ, ಇತ್ತೀಚೆಗೆ ಮಡಿಕೇರಿ, ಕೊಡಗು ಹಾಗೂ ಕೇರಳದಲ್ಲಿ ಸಂಭವಿಸಿದ ನೆರೆ ಪ್ರವಾಹಕ್ಕೆ ಮನುಷ್ಯನ ಅತೀ ಆಸೆಯೇ ಕಾರಣವಾಗಿದೆ. ನಮ್ಮ ಕಣ್ಣ ಮುಂದೆ ಮರೆ ಕಡೆದರೂ ಯಾರೂ ಸಹ ಅದನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ನಮ್ಮ ಜವಾಬ್ದಾರಿಯನ್ನು ನಾವು ಎಲ್ಲಿಯ ವರೆಗೆ ಅರಿಯುವದಿಲ್ಲವೋ ಅಲ್ಲಿಯ ವರೆಗೆ ಇಂಥಹ ದುರಂತ, ಅವಘಡಗಳು ನಡೆಯುತ್ತಲೇ ಇರುತ್ತವೆ. ಆದ್ದರಿಂದ ನಮ್ಮ ಜವಾಬ್ದಾರಿ ಅರಿತು ಪರಿಸರ ರಕ್ಷಣೆಗೆ ಮುಂದಾಗಬೇಕೆಂದು ಹೇಳಿದರು.

  ವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿ ಎನ್.ಬಿ.ಮಂಜುನಾಥ ಮಾತನಾಡಿ, ದೇಶದ ಐದು ರಾಜ್ಯಗಳಲ್ಲಿ ವಿಸ್ತರಿಸಿರುವ ಪಶ್ಚಿಮಘಟ್ಟವು 1500 ಕಿ.ಮೀ. ನಷ್ಟಿದೆ. ಇದನ್ನು ಸಂರಕ್ಷಿಸಿದರೆ ಮಾತ್ರ ನೀರು ಸಿಗಲಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿ ಕುಸಿಯುತ್ತಿದೆ. ಜನರ ಸಹಕಾರ ಇಲ್ಲದೇ ಕಾಡು ಉಳಿಸಲು ಸಾಧ್ಯವೇ ಇಲ್ಲ ಎಂದರು.   
ಕಾಲೇಜಿನ ಪ್ರಾಂಶುಪಾಲ ಡಾ.ದಾದಪೀರ್ ನಿವಿಲೇಹಾಳ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಫೆವಾರ್ಡನ ಮಂಜುನಾಥ, ನವೀನ್ ಮತ್ತಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap