ಹೇಮಾವತಿ ನೀರಿಗಾಗಿ ಡಿ.10 ತೂಬಿನ ಬಳಿ ಪ್ರತಿಭಟನೆ

ತುರುವೇಕೆರೆ
              ಜಿಲ್ಲಾಡಳಿತ ಕೂಡಲೇ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರು ಹರಿಸಬೇಕೆಂದು ಒತ್ತಾಯಿಸಿ ಶಾಸಕ ಮಸಾಲಜಯರಾಮ್ ನೂರಾರು ರೈತರೊಡಗೂಡಿ ತಾಲ್ಲೂಕಿನ ಚಾಕುವಳ್ಳಿ ಪಾಳ್ಯ ಡಿ.10ರ ತೂಬಿನ ಬಳಿ ಪ್ರತಿಭಟನೆ ನಡೆಸಿ ಉಪವಾಸ ಕೈಗೊಂಡಿದ್ದಾರೆ.
ಶಾಸಕ ಮಸಾಲ ಜಯರಾಮ್ ಮಾತನಾಡಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಸಚಿವರುಗಳು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ನಮ್ಮ ತಾಲ್ಲೂಕಿಗೆ ಹರಿಯುವ ಹೇಮಾವತಿ ನೀರನ್ನು ಹರಿಸದೆ ಕೆರೆ ಕಟ್ಟೆಗಳನ್ನು ತುಂಬಿಸದೆ ತಾಲ್ಲೂಕಿಗೆ ಅನ್ಯಾಯ ಮಾಡಿ ಶಿರಾ, ಕುಣಿಗಲ್, ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದರು. ಮೊದಲು 15 ದಿನಗಳಿಗೊಮ್ಮೆ ಎಂಬ ವೇಳಾಪಟ್ಟಿಯಲ್ಲಿ ತಾಲ್ಲೂಕಿಗೆ ನೀರು ಹರಿಸಲಾಗುತ್ತಿತ್ತು. ಆದರೆ ಜಿಲ್ಲಾ ಸಚಿವರುಗಳ ರಾಜಕಾರಣದಿಂದ 45 ದಿನ ನೀರು ಬಿಡಲು ಸಾಧ್ಯವಿಲ್ಲ ಎಂಬ ಆದೇಶ ಮಾಡಿದ್ದಾರೆ. ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ವೇಳಾಪಟ್ಟಿಯನ್ನು ಈ ಕೂಡಲೇ ನೀಡಬೇಕು ಎಂದು ಒತ್ತಾಯಿಸಿ ಸುಮಾರು ವರ್ಷದಿಂದ ಮಳೆಯಾಗದೆ ಕೆರೆಗಳಲ್ಲಿ ನೀರು ತುಂಬದೆ ತೆಂಗು, ಅಡಿಕೆ ತೋಟಗಳು ಒಣಗಿದ್ದು ಬೋರ್‍ವೆಲ್ ಗಳು ಸಹ ಬತ್ತಿದ್ದು ಕುರಿ, ಮೇಕೆ, ದನ ಕರುಗಳಿಗೆ ಕುಡಿಯುಲು ನೀರಿಲ್ಲದೆ ರೈತರು ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
                ಸರ್ಕಾರ ಹಾಗೂ ಜಿಲ್ಲಾಡಳಿತವೆ ಹೊಣೆ : ತಾಲ್ಲೂಕಿನ ಎಲ್ಲ ಕೆರೆಗಳಿಗೂ ನೀರು ಹರಿಸುವವರೆಗೂ ನಮ್ಮ ಉಪವಾಸ ಸತ್ಯಗ್ರಹವನ್ನು ನಿಲ್ಲಿಸಲ್ಲ. ಕಳೆದ 20 ವರ್ಷಗಳಿಂದ ಅನ್ನ ನೀಡುವ ರೈತರು ಬೀದಿಗೆ ಬಿದ್ದಿದ್ದಾರೆ. ಅಂತಹ ರೈತರಿಗಾಗಿ ನಾವು ಪ್ರಾಣ ತ್ಯಾಗಕ್ಕೂ ಸಿದ್ದನಿದ್ದೇನೆ. ಡಿ.8, ಡಿ.10ರ ಚಾನಲ್‍ನಲ್ಲಿ ನೀರು ಹರಿದು ಸುಮಾರು 30 ವರ್ಷ ಕಳೆದಿದೆ. ಈ ಭಾಗದ ರೈತರು ನೀರಿಲ್ಲದೆ ರೋಸಿ ಹೋಗಿದ್ದಾರೆ. ಕೂಡಲೇ ಅಧಿಕಾರಿಗಳು ನಿರ್ಧಾರ ತೆಗೆದುಕೊಂಡು ನೀರು ಹರಿಸಬೇಕು. ಇಲ್ಲವಾದರೆ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.
              ನಮ್ಮ ಭೂಮಿನೂ ಇಲ್ಲ ನೀರು ಇಲ್ಲ: ಹೇಮಾವತಿ ನೀರು ತುಮಕೂರಿಗೆ ಹರಿಯಲು ನಾವು ಲಕ್ಷಾಂತರ ಮೌಲ್ಯದ ಭೂಮಿಯನ್ನು ಕಳೆದುಕೊಂಡಿದ್ದೇವೆ. ಹೇಮಾವತಿ ನೀರನ್ನು ಪಡೆಯುವ ಹಕ್ಕು ನಮಗೂ ಇದೆ. ಮೊದಲು ನಮ್ಮ ಕೆರೆಗಳಿಗೆ ನೀರು ಬಿಡಿ, ನೀರು ಇಲ್ಲದೆ ರೈತರು ಸಾಯುತ್ತಿದ್ದಾರೆ. ಹೇಮಾವತಿ ನೀರಿಗಾಗಿ ಪ್ರಾಣ ಬಿಡಲು ಸಿದ್ದರಿದ್ದೇವೆ. ಚಾನಲ್‍ಗೆ ಹಾರುತ್ತೇವೆ ಎಂದು ಕೆಲವು ರೈತರು ಹೇಮಾವತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
               ಸ್ಥಳದಲ್ಲಿ ನೂರಾರು ಪೊಲೀಸರು ಮೊಕ್ಕಾಂ: ಶಾಸಕ ಮಸಾಲಜಯರಾಮ್ ಉಪವಾಸ ಕೈಗೊಂಡಿದ್ದು ರೈತ ಸಂಘದ ಮುಖಂಡರು, ನೂರಾರು ರೈತರು ಆಗಮಿಸಿ ಶಾಮಿಯಾನ ಹಾಕಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಕುಣಿಗಲ್ ಡಿವೈಎಸ್‍ಪಿ, 5 ಸಿಪಿಐ, 10 ಎಸ್.ಐ, 1 ಡಿ.ಆರ್ ಹಾಗೂ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
                ಸ್ಥಳಕ್ಕೆ ಹೇಮಾವತಿ ಇಲಾಖೆ ಸಿ.ಇ ರಾಮಕೃಷ್ಣಪ್ಪ ಭೇಟಿ ನೀಡಿ ಇನ್ನು 10 ದಿನ ಕಾಲಾವಕಾಶ ನೀಡಿ ನೀರು ಹರಿಸಲಾಗುವುದು ಎಂದು ಶಾಸಕರ ಮನವೊಲಿಸುವ ಪ್ರಯತ್ನ ಮಾಡಿದರು. ಇದಕ್ಕೆ ಒಪ್ಪದ ಶಾಸಕರು ಹಾಗೂ ರೈತರುಗಳು ತಾಲ್ಲೂಕಿನ ಕೆರೆಗಳನ್ನು ತುಂಬಿಸಿಕೊಂಡು ನಂತರ ಎಲ್ಲಿಗೆ ಬೇಕಾದರು ನೀರು ತೆಗೆದುಕೊಂಡು ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
                ಪ್ರತಿಭಟನೆಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ದುಂಡರೇಣುಕಪ್ಪ, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ರಾಮಣ್ಣ, ಡಿ.ಆರ್.ಬಸವರಾಜು, ವಿ.ಟಿ.ವೆಂಕಟರಾಮಯ್ಯ, ಬಿಜೆಪಿ ಉಪಾಧ್ಯಕ್ಷ ಪಟೇಲ್ ದೊಡ್ಡನರಸೇಗೌಡ, ಕಲ್ಲಬೋರನಹಳ್ಳಿಮಂಜುನಾಥ್, ರೈತ ಮುಖಂಡರಾದ ಕೆಂಕೆರೆಸತೀಶ್, ಶ್ರೀನಿವಾಸ್‍ಗೌಡ, ಸೋಮಶೇಖರ್ ಪ್ರಸಾದ್, ಸಿದ್ದು, ಜಯಶೀಲ, ಅನಿತಾ, ಶೇಖರ್ ಸೇರಿದಂತೆ ಸುತ್ತಮುತ್ತ ಗ್ರಾಮಗಳ ನೂರಾರು ರೈತರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

Recent Articles

spot_img

Related Stories

Share via
Copy link
Powered by Social Snap