15 ಕೋಟಿ ವೆಚ್ಚದಲ್ಲಿ ಕೈಗಾರಿಕಾ ಯೋಜನೆ : ಸಚಿವ

0
69

ಗುಬ್ಬಿ
                ತಾಲ್ಲೂಕಿನಲ್ಲಿ ಸುಮಾರು 15 ಕೋಟಿ ವೆಚ್ಚದಲ್ಲಿ ಕೈಗಾರಿಕಾ ಯೋಜನೆಗಳನ್ನು ಜಾರಿಗೊಳಿಸುವ ಮಹತ್ವದ ಯೋಜನೆ ರೂಪಿಸಲಾಗಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
               ತಾಲ್ಲೂಕಿನ ಹಾರನಹಳ್ಳಿ, ಎಸ್.ಕೊಡಗಿಹಳ್ಳಿ, ಗಳಗ, ಕೊಂಡಾಪುರ, ನಂದಿಪುರ ಮತ್ತು ಪೆಮ್ಮನಹಳ್ಳಿ ಗ್ರಾಮಗಳಿಗೆ ಎಸ್.ಸಿ.ಪಿ ಎತ್ತಿನಹೊಳೆ ಯೋಜನೆ ಅಡಿಯಲ್ಲಿ 1.70 ಲಕ್ಷ ಹಣದಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಮೊದಲಿಗೆ ಜಿಯೋಟೆಕ್ಸ್ ಟೈಲ್ಸ್ ಯೋಜನೆ ಮಾಡಲಾಗುತ್ತಿದೆ. ಆನಂತರ ರಾಜ್ಯದ ಹಲವು ಭಾಗದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದೆಂದು ತಿಳಿಸಿದರು.
               ಕಳೆದ ವರ್ಷ ಕೇರಳ ಮತ್ತು ತಮಿಳುನಾಡು ರಾಜ್ಯದ ತೆಂಗು ಉತ್ಪನ್ನಗಳಿಂದ 2800 ಕೋಟಿಯಷ್ಟು ತೆಂಗು ನಾರಿನ ಉತ್ಪನ್ನಗಳನ್ನು ತಯಾರು ಮಾಡಿ ಮಾರಾಟ ಮಾಡಿದ್ದಾರೆ. ಇದರಿಂದ ಉದ್ಯೋಗ ಹಾಗೂ ಆದಾಯ ಎರಡು ಬಂದಿದೆ ಎಂದು ತಿಳಿಸಿದ ಅವರು, ರಾಜ್ಯದಲ್ಲಿಯೂ ಸಹ ಇಂತಹ ಉದ್ಯಮಗಳನ್ನು ಪ್ರಾರಂಭಿಸಲು ಚಿಂತನೆ ನಡೆಸಲಾಗಿದ್ದು, ಸೆ. 17 ರಂದು ಅಲ್ಲಿಗೆ ತೆರಳಿ ಅಲ್ಲಿನ ಕೈಗಾರಿಕೆಗಳು, ಉತ್ಪನ್ನಗಳು ಮತ್ತು ಮಾರುಕಟ್ಟೆಯಂತಹ ಎಲ್ಲಾ ವಿಚಾರಗಳನ್ನು ತಿಳಿಯಲು ನಮ್ಮ ಅಧಿಕಾರಿಗಳು ತಂಡದೊಂದಿಗೆ ತೆರಳಿ ರಾಜ್ಯದಲ್ಲಿಯೂ ಸಹ ಯೋಜನೆ ರೂಪಿಸಲಾಗುತ್ತದೆ. ಅದಕ್ಕೆ ಎಷ್ಟು ಹಣ ಬೇಕಾಗುತ್ತದೆ ಎಂಬುದನ್ನು ಚರ್ಚೆ ಮಾಡಿ ಯೋಜನೆ ಮಾಡಲಾಗುತ್ತದೆ ತಿಳಿಸಿದರು.
               ಕೇಂದ್ರ ಸರ್ಕಾರದಲ್ಲಿಯೂ ಸಹ ಸ್ವ-ಉದ್ಯೋಗದ ಯೋಜನೆಗಳಿದ್ದು ಅದನ್ನು ಸಹ ಬಳಕೆ ಮಾಡಿಕೊಳ್ಳಲಾಗುತ್ತದೆ. ರಾಜ್ಯದಲ್ಲಿ ಲಕ್ಷಾಂತರ ಉದ್ಯೋಗವನ್ನು ಸೃಷ್ಟಿ ಮಾಡುವಂತಹ ಕೆಲಸ ಮಾಡಲಾಗುತ್ತಿದ್ದು ಸ್ತ್ರೀ ಶಕ್ತಿ ಗುಂಪುಗಳಿಗೂ ಸಹ ಸ್ವ-ಉದ್ಯೋಗ ನೀಡುವಂತಹ ಕೆಲಸ ಮಾಡಲಾಗುತ್ತದೆ ಹಾಗೂ ಅವರಿಗೆ ತರಬೇತಿ ನೀಡಲಾಗುತ್ತದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಕ್ಕಳಿಗೆ ಸೂಕ್ತ ತರಬೇತಿ ನೀಡುವುದರ ಜೊತೆಗೆ ಅದಕ್ಕೆ ಅಗತ್ಯವಿರುವ ಸೌಲಭ್ಯ ಒದಗಿಸುವುದರ ಜೊತೆಗೆ ಸ್ತ್ರೀಶಕ್ತಿ ಸಂಘಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗುತ್ತದೆ. ರಾಜ್ಯದ 13 ಜಿಲ್ಲೆಗಳಲ್ಲಿ ತೆಂಗು ಬೆಳವಣಿಗೆ ಇದೆ ಹಾಗೂ 44 ಹೋಬಳಿಗಳಲ್ಲಿ ಹೆಚ್ಚು ತೆಂಗು ಬೆಳೆಯುವ ಭಾಗದಲ್ಲಿ ನಾರಿನ ಉತ್ಪನ್ನಗಳ ತಯಾರಿಕೆಗೆ ತರಬೇತಿ ನೀಡಿ ಉದ್ಯೋಗ ನೀಡುವಂತಹ ಮಹತ್ವದ ಕೆಲಸ ಮಾಡಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್, ಸದಸ್ಯ ರೇವಣ್ಣ, ತಾ.ಪಂ ಸದಸ್ಯ ತಿಮ್ಮೆಗೌಡ, ಗ್ರಾಮ ಪಂಚಾಯತಿ ಅಧ್ಯಕ್ಷ ಎನ್.ಎಲ್ ಗೌಡ, ಪ್ರತಾಪ್, ಯೋಗೀಶ್, ಗುತ್ತಿಗೆದಾರರಾದ ಬಸವರಾಜು, ರಘು, ಮುಖಂಡರಾದ ಹಾರನಹಳ್ಳಿ ಪ್ರಭಣ್ಣ, ನವೀನ್, ಅಭಿವೃದ್ಧಿ ಅಧಿಕಾರಿ ಸರೋಜಮ್ಮ, ದೇವಿಕಾ, ದಿವಾಕರ್, ಪ್ರಕಾಶ್ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here