18 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ: ಉತ್ತಮ ಆಡಳಿತ ರಾಜ್ಯಗಳ ಟಾಪ್ 5ರಲ್ಲಿ ಬಿಜೆಪಿಗೆ ಒಂದೇ ಸ್ಥಾನ

0
15

ಮುಂಬೈ:

      ಭಾರತದ 29 ರಾಜ್ಯಗಳ ಪೈಕಿ ಮೈತ್ರಿಯೊಂದಿಗೆ ಬಿಜೆಪಿ 18 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದು ದೇಶದ ಉತ್ತಮ ಆಡಳಿತ ನೀಡುವ ರಾಜ್ಯಗಳ ಟಾಪ್ ಐದರಲ್ಲಿ ಮಾತ್ರ ಬಿಜೆಪಿ ಸರ್ಕಾರದ ಕೇವಲ ಒಂದು ರಾಜ್ಯ ಮಾತ್ರ ಸ್ಥಾನ ಪಡೆದಿದೆ.

      ಬೆಂಗಳೂರು ಮೂಲದ ಥಿಂಕ್ ಟ್ಯಾಂಕ್ ಪಬ್ಲಿಕ್ ಅಫೇರ್ಸ್ ಸೆಂಟರ್(ಪಿಎಸಿ) 2018ರ ಅತ್ಯುತ್ತಮ ಆಡಳಿತ ನಡೆಸುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಅಗ್ರಸ್ಥಾನಲ್ಲಿದೆ. ಇನ್ನು ತಮಿಳುನಾಡು, ತೆಲಂಗಾಣ ಹಾಗೂ ಬಿಜೆಪಿ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ಉತ್ತಮ ಆಡಳಿತ ನೀಡುವ ಅಗ್ರ ಐದು ರಾಜ್ಯಗಳಾಗಿವೆ.
ಕೇರಳದಲ್ಲಿ ಸಿಪಿಐ, ತಮಿಳುನಾಡಿನಲ್ಲಿ ಎಐಎಡಿಎಂಕೆ, ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ.

      ಇನ್ನು ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳು ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ(ಪಿಐಐ)ದಲ್ಲಿ ಕೊನೆಯ ಸ್ಥಾನದಲ್ಲಿದೆ. ಇನ್ನು ಸಣ್ಣ ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶ ಅಗ್ರಸ್ಥಾನದಲ್ಲಿದೆ. ಇನ್ನುಳಿದಂತೆ ಗೋವಾ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರ ಅಗ್ರ ಐದು ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

      ಪಿಎಸಿ 2016ರಿಂದ ವಾರ್ಷಿಕವಾಗಿ ಈ ಪಟ್ಟಿಯನ್ನು ಬಿಡುಗಡೆ ಮಾಡುತ್ತಾ ಬಂದಿದೆ. 30 ವಿಷಯಗಳ ಕುರಿತಂತೆ ದತ್ತಾಂಶ-ಆಧಾರಿತ ಚೌಕಟ್ಟಿನ ಆಧಾರದ ಮೇಲೆ ರಾಜ್ಯಗಳ ಆಡಳಿತ ನಿರ್ಣಹಣೆಯನ್ನು ಪರಿಶೀಲಿಸಿ, ಅವುಗಳು ಒದಗಿಸುವ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಆಧರಿಸಿ ಪಟ್ಟಿ ಪ್ರಕಟ ಮಾಡುತ್ತದೆ.

      1994ರಲ್ಲಿ ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ವಿದ್ವಾಂಸ ಸ್ಯಾಮ್ಯುಯೆಲ್ ಪಾಲ್ ಅವರು ಥಿಂಕ್ ಟ್ಯಾಂಕ್ ಸ್ಥಾಪನೆ ಮಾಡಿದ್ದರು.

LEAVE A REPLY

Please enter your comment!
Please enter your name here