2008 ರ ಸಾಮ್ಯತೆ ಪಡೆದ 2018ರ ಚುನಾವಣೆ

0
17

ತುಮಕೂರು:                                                                         -ಸಾ.ಚಿ.ರಾಜಕುಮಾರ

2018ರ ವಿಧಾನಸಭಾ ಚುನಾವಣಾ ಫಲಿತಾಂಶ ಗಮನಿಸಿದರೆ 2008ರ ಇತಿಹಾಸ ಮರುಕಳಿಸಿರುವ ಸ್ಥಿತಿಯಲ್ಲಿ ಪಕ್ಷಗಳ ಬಲಾಬಲ ಕಂಡುಬರುತ್ತಿದೆ.

2008ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 11 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ ಮೂರು ಸ್ಥಾನಗಳನ್ನು ಪಡೆದಿದ್ದವು. ಜೆಡಿಎಸ್ 4 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಈ ಬಾರಿ ಕಾಂಗ್ರೆಸ್ 2008ರ ರೀತಿಯಲ್ಲಿ ಮೂರು ಸ್ಥಾನಗಳನ್ನು ಅದೇ ರೀತಿ ಜೆಡಿಎಸ್ 4 ಸ್ಥಾನಗಳನ್ನು ಪಡೆದುಕೊಂಡಿದೆ. ಬಿಜೆಪಿ 1 ಸ್ಥಾನವನ್ನು ಹೆಚ್ಚಿಸಿಕೊಂಡಿದೆ. ಬಿಜೆಪಿಯ ಒಂದು ಸ್ಥಾನ ಹೆಚ್ಚಿರುವುದನ್ನು ಹೊರತುಪಡಿಸಿದರೆ ಚುನಾವಣಾ ಇತಿಹಾಸ 2008ರ ಚಿತ್ರಣವನ್ನೇ ನೀಡುತ್ತದೆ.
2008 ರಲ್ಲಿ ಶಿರಾ, ಕೊರಟಗೆರೆ ಹಾಗೂ ಕುಣಿಗಲ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಬಿಜೆಪಿಯು ತುಮಕೂರು ನಗರ, ತುಮಕೂರು ಗ್ರಾಮಾಂತರ ಹಾಗೂ ತಿಪಟೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಚಿಕ್ಕನಾಯಕನಹಳ್ಳಿ, ಗುಬ್ಬಿ, ತುರುವೇಕೆರೆ ಹಾಗೂ ಮಧುಗಿರಿಯಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯ ಮೆರೆದಿತ್ತು.

2013 ರ ಚುನಾವಣೆಯಲ್ಲಿ ಜೆಡಿಎಸ್ 6 ಸ್ಥಾನಗಳನ್ನು ಪಡೆಯುವ ಮೂಲಕ 2008ರ ಅವಧಿಗಿಂತ ಎರಡು ಸ್ಥಾನಗಳನ್ನು ಹೆಚ್ಚಿಸಿಕೊಂಡಿತ್ತು. ಕಾಂಗ್ರೆಸ್ ಸಹ ಮತ್ತೊಂದು ಸ್ಥಾನವನ್ನು ಅಧಿಕವಾಗಿ ಪಡೆಯುವ ಮೂಲಕ ತನ್ನ ಸ್ಥಾನ ವೃದ್ಧಿಸಿಕೊಂಡಿತು. ಮೂರು ಕ್ಷೇತ್ರಗಳಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ 2 ಸ್ಥಾನಗಳನ್ನು ಕಳೆದುಕೊಂಡು (ತಿಪಟೂರು ಮತ್ತು ತುಮಕೂರು ನಗರ) 1 ಸ್ಥಾನಕ್ಕೆ ಮಾತ್ರ (ತುಮಕೂರು ಗ್ರಾಮಾಂತರ) ಸೀಮಿತವಾಯಿತು.

ತುಮಕೂರು ನಗರದಲ್ಲಿ ಅಧಿಪತ್ಯ ಸ್ಥಾಪಿಸಿದ್ದ ಬಿಜೆಪಿಯ ಶಿವಣ್ಣ ಅವರನ್ನು ಮಣಿಸಿ ಕಾಂಗ್ರೆಸ್‍ನ ಡಾ. ಎಸ್.ರಫೀಕ್ ಅಹಮದ್ ನೂತನವಾಗಿ 2013 ರಲ್ಲಿ ವಿಧಾನಸಭೆ ಪ್ರವೇಶಿಸಿದರು. ಶಿವಣ್ಣ ಅವರಿಗೆ ಇದ್ದ ವಿರೋಧಿ ಅಲೆ ಹಾಗೂ ರಫೀಕ್ ಅಹಮದ್ ಅವರ ಸಜ್ಜನಿಕೆ ಆಗ ಗೆಲುವಿನ ದಡ ಸೇರಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ರಫೀಕ್ ಅಹಮದ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು. ಜೆಡಿಎಸ್‍ನ ಗೋವಿಂದರಾಜು ಸಾಕಷ್ಟು ಮತಗಳನ್ನು ಕಸಿಯುವ ಮೂಲಕ ಗೆಲುವಿನ ಸಮೀಪಕ್ಕೆ ಬಂದರೂ ದಡ ತಲುಪಲು ಸಾಧ್ಯವಾಗಲಿಲ್ಲ.

ತುಮಕೂರು ಗ್ರಾಮಾಂತರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಆದಾಗಿನಿಂದ ಅಂದರೆ, 2008 ರಿಂದ ಬಿ.ಸುರೇಶ್‍ಗೌಡ ಅವರೇ ಸತತವಾಗಿ ಗೆಲುವು ಸಾಧಿಸಿದ್ದರು. ಕಳೆದ ಬಾರಿ ಜೆಡಿಎಸ್‍ನ ಡಿ.ಸಿ.ಗೌರಿಶಂಕರ್ ಪ್ರಬಲ ಸ್ಪರ್ಧೆಯೊಡ್ಡಿದ್ದರು. ಆಗ ಕೆಜೆಪಿಯೂ ಸ್ಪರ್ಧೆಯಲ್ಲಿತ್ತು. ಇದರಿಂದಾಗಿ ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಅಲ್ಲಿನ ಮತದಾರ ಜೆಡಿಎಸ್ ಕೈ ಹಿಡಿದಿದ್ದಾನೆ. ಆ ಮೂಲಕ ತುಮಕೂರು ಗ್ರಾಮಾಂತರದಲ್ಲಿ ಹ್ಯಾಟ್ರಿಕ್ ಆಗುವ ಸುರೇಶ್ ಗೌಡ ಅವರ ಕನಸನ್ನು ಭಗ್ನಗೊಳಿಸಿದ್ದಾರೆ.

ಗುಬ್ಬಿಯಲ್ಲಿ ಕಳೆದ ಬಾರಿಯೇ ಎಸ್.ಆರ್.ಶ್ರೀನಿವಾಸ್ ಹ್ಯಾಟ್ರಿಕ್ ಹೀರೋ ಆಗಿದ್ದರು. ಈ ಬಾರಿ ಅವರ ಗೆಲುವಿಗೆ ನಾನಾ ರೀತಿಯ ಅಡೆತಡೆಗಳು ಇದ್ದವು. ಅವೆಲ್ಲವನ್ನೂ ಜೈಯಿಸಿಕೊಂಡು ಸತತವಾಗಿ ನಾಲ್ಕನೇ ಬಾರಿ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಕಳೆದ ಬಾರಿಯೂ ಇಲ್ಲಿ ಜಿ.ಎನ್.ಬೆಟ್ಟಸ್ವಾಮಿ ತೀವ್ರ ಪೈಪೋಟಿ ನೀಡಿದ್ದಂತೆ ಈ ಬಾರಿಯೂ ಶ್ರೀನಿವಾಸ್ ಅವರಿಗೆ ತೀವ್ರ ಸ್ಪರ್ಧೆ ನೀಡಿದ್ದಾರೆ.

ಕುಣಿಗಲ್‍ನಲ್ಲಿ 2008 ರಲ್ಲಿ ಕಾಂಗ್ರೆಸ್‍ನ ಬಿ.ಬಿ.ರಾಮಸ್ವಾಮಿಗೌಡ ಶಾಸಕರಾಗಿದ್ದರು. 2013 ರಲ್ಲಿ ಜೆಡಿಎಸ್‍ನ ಡಿ.ನಾಗರಾಜಯ್ಯ ಶಾಸಕರಾದರು. ಕಾಂಗ್ರೆಸ್‍ನಲ್ಲಿ ಎರಡು ಬಣಗಳಾದವು. 2018ರ ಚುನಾವಣೆಯಲ್ಲಿಯೂ ಕಾಂಗ್ರೆಸ್‍ನಲ್ಲಿ ಬಣಗಳು ಮುಂದುವರೆದರೂ ಚುನಾವಣೆಯ ಸಮಯದಲ್ಲಿ ಅದನ್ನು
ಶಮನ ಮಾಡಲಾಯಿತು. ಪರಿಣಾಮ ಮತ್ತೆ ಕಾಂಗ್ರೆಸ್ ತನ್ನ ಕ್ಷೇತ್ರವನ್ನು ತೆಕ್ಕೆಗೆ ಸೆಳೆದುಕೊಂಡಿತು. ಬಿಜೆಪಿಯ ಡಿ.ಕೃಷ್ಣಕುಮಾರ್ ಇಲ್ಲಿ ಪಕ್ಷಕ್ಕಿಂತ ವೈಯಕ್ತಿಕವಾಗಿ ನೆಲೆ ಕಂಡುಕೊಂಡಿದ್ದು ಕಾಂಗ್ರೆಸ್‍ಗೆ ತೀವ್ರ ಸ್ಪರ್ಧೆವೊಡ್ಡಿರುವುದನ್ನು ಕಾಣಬಹುದು.

ತುರುವೇಕೆರೆಯಲ್ಲಿ ಸತತವಾಗಿ ಎಂ.ಟಿ.ಕೃಷ್ಣಪ್ಪ ಅವರೇ ಆರಿಸಿ ಬರುತ್ತಿದ್ದರು. ಈ ಬಾರಿ ಮತದಾರ ಅವರ ವಿರುದ್ಧ ಮುನಿಸಿಕೊಂಡಂತಿದೆ. ಹೀಗಾಗಿ ಜೆಡಿಎಸ್ ವಶದಲ್ಲಿದ್ದ ಆ ಕ್ಷೇತ್ರ ಈಗ ಬಿಜೆಪಿ ಪಾಲಾಗಿದೆ. ಮಸಾಲ ಜಯರಾಂ ಸಾಮಾಜಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿದ್ದು, ಈ ಬಾರಿ ಅವರನ್ನು ಗೆಲುವಿನತ್ತ ಮತದಾರ ಕರೆದೊಯ್ದಿದ್ದಾನೆ.
ತಿಪಟೂರನ್ನು ಬಿಜೆಪಿ ಮತ್ತೆ ತನ್ನ ವಶಕ್ಕೆ ಪಡೆದಿದೆ. 2008 ರಲ್ಲಿ ಬಿ.ಸಿ.ನಾಗೇಶ್ ಶಾಸಕರಾಗಿದ್ದರು. ತನ್ನ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. 2013 ರಲ್ಲಿ ಕಾಂಗ್ರೆಸ್ ಈ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆಯಿತು. 2013 ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‍ನಲ್ಲಿ ಟಿಕೆಟ್ ಗೊಂದಲ ಉಂಟಾಯಿತು. ಮೊದಲಿನಿಂದಲೂ ಪ್ರಚಾರದಲ್ಲಿದ್ದ, ನಿರಾಳವಾಗಿದ್ದ ಬಿ.ಸಿ.ನಾಗೇಶ್ ನಿರೀಕ್ಷೆಯಂತೆಯೇ ಜಯ ಸಾಧಿಸಿ ಮತ್ತೆ ಶಾಸಕರಾದರು.
ಚಿಕ್ಕನಾಯಕನಹಳ್ಳಿಯಲ್ಲಿ ಈ ಬಾರಿ ಸಿ.ಬಿ.ಸುರೇಶ್‍ಬಾಬು ಹ್ಯಾಟ್ರಿಕ್ ಆಗುವ ಕನಸು ಕಾಣುತ್ತಿದ್ದರು. 2008 ಮತ್ತು 2013 ರಲ್ಲಿ ಶಾಸಕರಾಗಿದ್ದು, ಈ ಬಾರಿಯೂ ವಿಧಾನಸಭೆ ಪ್ರವೇಶಿಸುವ ಹವಣಿಕೆಯಲ್ಲಿದ್ದರು. ಆದರೆ ಅಲ್ಲಿನ ಅನಿರೀಕ್ಷಿತ ಬೆಳವಣಿಗೆಗಳು ಅವರನ್ನು ಹ್ಯಾಟ್ರಿಕ್ ಆಗಲು ಬಿಡಲಿಲ್ಲ. ಬಿಜೆಪಿಯಿಂದ ಸ್ಪರ್ಧಿಸಿದ್ದ ಜೆ.ಸಿ.ಮಾಧುಸ್ವಾಮಿ ಮತ್ತೆ ವಿಧಾನಸಭೆ ಪ್ರವೇಶಿಸಿದ್ದಾರೆ.

ಶಿರಾ ಕ್ಷೇತ್ರದಲ್ಲಿ ಟಿ.ಬಿ.ಜಯಚಂದ್ರ ಅನಭಿಷಿಕ್ತ ದೊರೆಯಾಗಲು ಹೊರಟಿದ್ದರು. ಆದರೆ ಅವರೇ ಮಾಡಿಕೊಂಡ ಕೆಲವು ಎಡವಟ್ಟುಗಳು ಹಾಗೂ ಅವರ ವಿರೋಧಿ ಅಲೆ ಈ ಬಾರಿ ಸೋಲು ಅನುಭವಿಸುವಂತಾಯಿತು. 1994 ಮತ್ತು 2004 ರಲ್ಲಿ ಶಾಸಕರಾಗಿ, ಸಚಿವರಾಗಿಯೂ ಅಧಿಕಾರ ನಿರ್ವಹಿಸಿದ್ದ ಬಿ.ಸತ್ಯನಾರಾಯಣ ಅವರಿಗೆ ಈ ಬಾರಿ ಆ ಕ್ಷೇತ್ರದ ಮತದಾರರು ಮಣೆ ಹಾಕಿದರು. ಜಯಚಂದ್ರ ಅವರನ್ನು ಸೋಲಿಸಲು ದೊಡ್ಡ ಪಡೆಯೇ ನಿರ್ಮಾಣವಾಯಿತು.
ಕೊರಟಗೆರೆಯಲ್ಲಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಈ ಬಾರಿ ಮತ್ತೆ ಆ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಬಾರಿ ಜೆಡಿಎಸ್ ಪಾಲಾಗಿತ್ತು. ಮಧುಗಿರಿಯಲ್ಲಿಯೂ ಕಾಂಗ್ರೆಸ್‍ಗೆ ಹೋಗಿದ್ದ ಸ್ಥಾನವನ್ನು ಜೆಡಿಎಸ್ ಮರಳಿ ಪಡೆದಿದೆ. ಪಾವಗಡದಲ್ಲಿಯೂ ವೆಂಕಟರವಣಪ್ಪ ಮತ್ತೆ ಮರಳಿ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here