2020 ರೊಳಗೆ ನಗರಕ್ಕೆ ಸಂಪೂರ್ಣ ಕುಡಿಯುವ ನೀರಿನ ಭರವಸೆ: ಜ್ಯೋತಿಗಣೇಶ್

0
24

  ತುಮಕೂರು:

      2020 ರೊಳಗೆ ತುಮಕೂರು ನಗರಕ್ಕೆ ಸಂಪೂರ್ಣ ಕುಡಿಯುವ ನೀರಿನ ಸಮಸ್ಯೆ ಹಾಗೂ ಯು.ಜಿ.ಡಿ. ಸಮಸ್ಯೆ ಬಗೆಹರಿಸಲಾಗುವುದು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಭರವಸೆ ನೀಡಿದರು.

      ಅವರು ನಗರದ ಸಪ್ತಗಿರಿ ಬಡಾವಣೆಯ 2ನೇ ಹಂತ (ದಕ್ಷಿಣ) ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಗರದಲ್ಲಿ ಸುಮಾರು 20 ಓವರ್ ಹೆಡ್ ಟ್ಯಾಂಕರ್‍ಗಳ ಅಗತ್ಯವಿದ್ದು, ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದರು.

      ಬುಗುಡಗನಹಳ್ಳಿ, ತುಮಕೂರು ಅಮಾನಿಕೆರೆ, ಮರಳೂರು ಕೆರೆಗಳನ್ನು ಹೇಮಾವತಿ ನೀರಿನಿಂದ ತುಂಬಿಸುವುದರ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುವುದು. ಬರೀ ಬುಗುಡನಹಳ್ಳಿ ಕೆರೆಯಿಂದ ಮಾತ್ರ ಈ ಸಮಸ್ಯೆ ನೀಗದು ಎಂದ ಅವರು, ಬೆಸ್ಕಾಂ ಇಲಾಖೆಗೆ ಯುಜಿ ಲೈನ್ ಎಳೆಯುವ ಕಾರ್ಯಕ್ಕೆ 100 ಕೋಟಿ ರೂ. ಹಣ ಬಿಡುಗಡೆಯಾಗಿದ್ದು, ನಗರದಾದ್ಯಂತ ಮತ್ತೆ ರಸ್ತೆ ಅಗೆಯಲಾಗುವುದು. ಇದರಿಂದ ಆಗುವ ತೊಂದರೆಯನ್ನು ನಾಗರಿಕರು ಸಹಿಸಿಕೊಳ್ಳುವುದರ ಮೂಲಕ ಇಲಾಖೆಯ ಜೊತೆ ಸಹಕರಿಸಬೇಕೆಂದು ತಿಳಿಸಿದರು.

      ತುಮಕೂರು ನಗರದಲ್ಲಿ ಈಗ ಡಾಂಬರೀಕರಣ ರಸ್ತೆ ಆಗಿರುವುದು ಕೇವಲ 200 ರಿಂದ 250 ಕಿ.ಮೀ ಮಾತ್ರ. ಇನ್ನೂ 750 ರಿಂದ 800 ಕಿ.ಮೀ ವರೆಗೆ ಡಾಂಬರೀಕರಣ ಅಗಬೇಕಾಗಿದೆ. ಬಹುತೇಕ ವಾರ್ಡ್‍ಗಳಲ್ಲೂ ಈ ಸಮಸ್ಯೆ ಕಂಡುಬರುತ್ತಿದೆ. ಹಂತ ಹಂತವಾಗಿ ಈ ಸಮಸ್ಯೆ ಬಗೆಹರಿಸುವುದಾಗಿ ಶಾಸಕರು ತಿಳಿಸಿದರು.

      ಅಮೃತ್ ಯೋಜನೆಯಲ್ಲಿ ಸಾಕಷ್ಟು ಹಣ ಇರುವುದರಿಂದ ರಾಜಕಾಲುವೆ ಮತ್ತು ಪಾರ್ಕ್ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ಎಲ್ಲಾ ಬಡಾವಣೆಗಳ ನಾಗರಿಕ ಸಮಿತಿಗಳ ಸದಸ್ಯರನ್ನು ಕರೆದು ಅಲ್ಲಿ ಆಗಬೇಕಾದ ಸಮಸ್ಯೆಗಳ ಕುರಿತು ಚರ್ಚಿಸುವ ಮೂಲಕ ಬಗೆಹರಿಸಲಾಗುವುದು ಎಂದು ಜ್ಯೋತಿಗಣೇಶ್ ತಿಳಿಸಿದರು.

      ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ 30ನೇ ವಾರ್ಡಿನ ಪಾಲಿಕೆ ಸದಸ್ಯ ಎನ್.ಆರ್.ನಾಗರಾಜರಾವ್ ಮಾತನಾಡಿ ಬೇರೆ ವಾರ್ಡಿಗಿಂತ ಈ ವಾರ್ಡಿನಲ್ಲಿ ಯುಜಿಡಿ, ಗ್ಯಾಸ್, ವಾಟರ್ ಲೈನ್ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದ್ದು, ಇದಾದ ಬಳಿಕ ಮುಂದಿನ ಅನುದಾನ ಬಂದ ಕೂಡಲೇ ಜಲ್ಲಿ ರಸ್ತೆ ಮತ್ತು ಡಾಂಬರೀಕರಣ ಕೈಗೆತ್ತಿಕೊಳ್ಳಲಾಗುವುದು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಈ ಬಡಾವಣೆಯ ವಿವಿಧ ರಸ್ತೆಗಳ ಸಮಸ್ಯೆಗಳನ್ನು ಕಾಲ್ನಡಿಗೆಯಲ್ಲಿ ಓಡಾಡುವ ಮೂಲಕ ವೀಕ್ಷಿಸಿದರು.

      ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೆ.ರಾಮಯ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಎ.ಎಂ.ದೇವರಾಜು, ಉಪಾಧ್ಯಕ್ಷ ಆಂಜಿನಪ್ಪ, ಖಜಾಂಚಿ ಪಿ.ಪಳನಿಸ್ವಾಮಿ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

      ಇದೇ ಸಂದರ್ಭದಲ್ಲಿ ಸಪ್ತಗಿರಿ ಬಡಾವಣೆಯ ಮೂಲಭೂತ ಸೌಕರ್ಯಗಳಾದ ರಸ್ತೆ ಡಾಂಬರೀಕರಣ, ಸಿ.ಸಿ. ಚರಂಡಿ ನಿರ್ಮಾಣ, ಪ್ರಯಾಣಿಕರ ತಂಗುದಾಣ ನಿರ್ಮಾಣ, ಮಾದರಿ ಉದ್ಯಾನವನ ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕರಿಗೆ ಮನವಿಯನ್ನು ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here