0
30

ಪಾವಗಡ :-

             ಸ್ವಾಮಿ ವಿವೇಕಾನಂದರು ಅಮೆರಿಕಾದ ಚಿಕಾಗೋ ನಗರದಲ್ಲಿ 125 ವರ್ಷದ ಹಿಂದೆ ನೀಡಿದ ಅದ್ಭುತ ಭಾಷಣದ ಸ್ಮರಣಾರ್ಥ ಪಾವಗಡದಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ಅದ್ಧೂರಿಯಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
              ಕಾರ್ಯಕ್ರಮವು ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಸಮೂಹದ ಮೆರವಣಿಗೆಯಿಂದ ಆರಂಭವಾಗಿ ಎಸ್.ಎಸ್.ಕೆ. ರಂಗಮಂದಿರಕ್ಕೆ ತಲುಪಿತು. ಮೆರವಣಿಗೆಯಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಅಲಂಕಾರವನ್ನು ಮಾಡಿದ ವಾಹನ ಪಾವಗಡದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಕಾರ್ಯಕ್ರಮದ ವೇದಿಕೆಗೆ ತಲುಪಿತು. ಸ್ವಾಮಿ ವಿವೇಕಾನಂದರ ಈ ಅಲಂಕೃತ ರಥವನ್ನು ಪೂಜ್ಯ ಶ್ರೀ ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮೀಜಿ, ಪರಮ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ಹಾಗೂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಡಾ.ಜಿ.ವಿ.ಶಶಿಕಿರಣ್ ಮತ್ತು ಎಲ್ಲ ಪ್ರಾಂಶುಪಾಲರ ಹಾಗೂ ಭಕ್ತರ ಸಮ್ಮುಖದಲ್ಲಿ ಬರಮಾಡಿಕೊಳ್ಳಲಾಯಿತು.
                ಸರಿಸುಮಾರು ಸಾವಿರಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿ / ವಿದ್ಯಾರ್ಥಿನಿಯರು ಹಾಗೂ ಶ್ರೀರಾಮಕೃಷ್ಣ ಸೇವಾಶ್ರಮದ ಭಕ್ತರು ಕೂಡಿದ ಈ ಅದ್ಭುತ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಸ್ವಾಮಿ ವಿವೇಕಾನಂದರ ಗೀತೆಗಳ ಮೂಲಕ ಕಾರ್ಯಕ್ರಮ ಆರಂಭವಾಯಿತು. ಸಭೆಯನ್ನು ಉದ್ದೇಶಿಸಿ ಸ್ವಾಗತಿಸಿದ ಡಾ.ಜಿ.ವಿ.ಶಶಿಕಿರಣ್ ರವರು ಶ್ರೀ ರಾಮಕೃಷ್ಣ ಸೇವಾಶ್ರಮದ ಕಾರ್ಯವೈಖರಿಗಳನ್ನು ಹೃತ್ಪೂರ್ವಕವಾಗಿ ಶ್ಲಾಘಿಸಿ ಯಾವುದೇ ಕಾರ್ಯಕ್ರಮವಿದ್ದಲ್ಲಿ ತಮ್ಮ ಸಂಸ್ಥೆ ಸದಾ ಸ್ವಾಮಿ ಜಪಾನಂದಜೀ ರವರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತದೆ ಎಂದು ವಿವರಿಸಿದರು.
                 ಶ್ರೀ ಶ್ರೀ ಚರಮೂರ್ತಿ ಬೇಲಿ ಮಠ ಸ್ವಾಮಿಗಳು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಪನ್ಯಾಸ ನೀಡುತ್ತಿರುವುದು ತಮ್ಮ ಸೌಭಾಗ್ಯ ಎಂದು ಬಣ್ಣಿಸಿದರು.
                 ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಜೀವನ ಹಾಗೂ ಸಂದೇಶವನ್ನು ಪ್ರತಿಯೊಬ್ಬ ಯುವಕ ,ಯುವತಿಯರು ಅಳವಡಿಸಿಕೊಳ್ಳಬೇಕೆಂದು ನುಡಿದರು.
                  ಜಪಾನಂದ ಸ್ವಾಮಿರವರು ಮಾತನಾಡಿ ಸ್ವಾಮಿ ವಿವೇಕಾನಂದರ ಜೀವನದಲ್ಲಿ ಕಾಣುವ ಮೂರು ಮಹಾ ನದಿಗಳಾದ ಶಾಸ್ತ್ರ, ಗುರು, ಹಾಗೂ ಮಾತೃ ಭೂಮಿ ಪರಿಚಯವನ್ನು ತಮ್ಮದೇ ಆದ ಶೈಲಿಯಲ್ಲಿ ನೆರೆದ ಸಭಿಕರಿಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಯುವ ಜನತೆ ಇಡೀ ವಿಶ್ವದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಭಾರತದಲ್ಲಿ ಕಾಣಬರುತ್ತಿದ್ದು ನವಭಾರತ ನಿರ್ಮಾಣದ ಪಾಂಚಜನ್ಯವನ್ನು ಮೊಳಗಿಸಿ ಸ್ವಾಮಿ ವಿವೇಕಾನಂದರ ಚಿಂತನಾಧಾರೆಯಲ್ಲಿ ತೊಡಗಿಸಿಕೊಂಡಲ್ಲಿ ದೇಶದ ಅಭಿವೃದ್ಧಿ ಸರ್ವತೋಮುಖದಲ್ಲಿ ಸಾಗುತ್ತದೆ ಎಂದು ವಿವರಿಸಿದ ಅವರು ವಿಶ್ವಕ್ಕೆ ಭಾರತದ ಕೊಡುಗೆಯನ್ನು ವಿವರಿಸುತ್ತಾ ವಿಜ್ಞಾನದಲ್ಲಿ, ವೈದ್ಯಕೀಯ ವಿಭಾಗದಲ್ಲಿ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಎಲ್ಲ ವಿಭಾಗದಲ್ಲಿಯೂ ಭಾರತ ವಿಶ್ವಕ್ಕೆ ನೀಡಿದ ಕೊಡುಗೆಯನ್ನು ಕಾರ್ಯಕ್ರಮದಲ್ಲಿ ತಿಳಿಸಿದರು.

LEAVE A REPLY

Please enter your comment!
Please enter your name here