ಮಾನವನ ಜೀವನದಲ್ಲಿ ದುಂಬಿಯ ಮಹತ್ವ..?

0
42

ಸಂಬಂಧಿತ ಚಿತ್ರ     ಹಿಂದಿನವರು ಎಂಬತ್ನಾಲ್ಕು ಲಕ್ಷ ಜೀವರಾಶಿಗಳು ಭೂಮಿಯ ಮೇಲೆ ವಾಸಿಸುತ್ತಿವೆ ಎಂದಿದ್ದಾರೆ. ಮಾನವನಿಗೆ ಬುದ್ದಿ, ವಿವೇಚನಾಶಕ್ತಿ, ವಿವೇಕ ಇರುವುದರಿಂದ ಜೀವಿಗಳಲ್ಲಿ ಮಾನವ ಜೀವಿಯೇ ಶ್ರೇಷ್ಠವಾದುದು! ” ಮಾನವ ಜನ್ಮ ದೊಡ್ಡದು ಇದ ಹಾಳು ಮಾಡಬೇಡಿ ಹುಚ್ಚಪ್ಪಗಳಿರಾ” ಎಂದು ಪುರಂದರದಾಸರು ಹಾಡಿದ್ದಾರೆ.

      ಆಧುನಿಕ ಮಾನವ ತನ್ನ ದುರಾಸೆಯಿಂದ ಅನೇಕ ಜೀವರಾಶಿಗಳ ಕುಲಕ್ಕೆ ಮಂಗಳ ಹಾಡುತ್ತಿದ್ದಾನೆ. ಮಾನವ ಬದುಕಲು ಅವನಿಗೆ ಸಸ್ಯಗಳಂತೆ ಎಲ್ಲ ಜೀವಿಗಳು ಬಹು ಮುಖ್ಯ ಎಂದು ತಿಳಿದಾಗಿನಿಂದ ಒಂದು ಕಡೆ ಅವುಗಳ ಉಳಿಸುವ ಪ್ರಯತ್ನಗಳನ್ನು ನಡೆಸುತ್ತಾ ಮತ್ತೊಂದು ಕಡೆ ಅವುಗಳ ನಾಶ ಅವ್ಯಾಹತವಾಗಿ ನಡೆಯಿಸುತ್ತಾ ಇಬ್ಬಗೆ ನೀತಿಯ ಬದಲಿಸಲಾಗದೆ ಇದರಿಂದ ಪ್ರಕೃತಿಯಲ್ಲಿ ಉಂಟಾಗುತ್ತಿರುವ ಅಸಮತೋಲನ ತಡೆಯಲಾಗದೆ ಅಸಹಾಯಕನಾಗುತ್ತಿದ್ದಾನೆ. ಇಕ್ಕಟ್ಟಿಗೆ ಸಿಲುಕುತ್ತಿದ್ದಾನೆ ಅನ್ನಿಸುತ್ತಿದೆ. ಇದರಿಂದ ಮಾನವನಿಗೆ ತೊಂದರೆ ಆಗಬಹುದು ಎಂಬುದನ್ನು ಅರಿತ ಪ್ರಯುಕ್ತ ಇರುವ ಎಲ್ಲ ಗಿಡ-ಮರಗಳ, ಜೀವಿಗಳ ರಕ್ಷಿಸಿ ಪ್ರಕೃತಿಯಲ್ಲಿ ಸಮತೋಲನ ಉಂಟು ಮಾಡುವ ಒತ್ತಡದಲ್ಲಿ ಸಿಲುಕಿದ್ದಾನೆ. 

ಸಂಬಂಧಿತ ಚಿತ್ರ

      ಮಾನವ ಭಾವಿಸಿದ್ದಾನೆ ದುಂಬಿ ಎಂಬುದೊಂದು ಸಾಮಾನ್ಯ ಕೀಟ ಎಂದು. ಆದರೆ ಅದರ ಅಸಾಮಾನ್ಯ ಕಾರ್ಯದ ಬಗ್ಗೆ ಗಮನ ಹರಿಸಿದ್ದರೂ ಮಹತ್ವ ತಿಳಿಯುವ ಪ್ರಯತ್ನ ಮಾಡುತ್ತಿಲ್ಲ. ದುಂಬಿ ಮತ್ತು ಇಂತಹ ಅನೇಕ ಕೀಟಗಳು ಬೆಳಗಾಗುತ್ತಿದ್ದಂತೆ ಪ್ರತಿದಿನ ಹೂವುಗಳನ್ನು ಅರಸಿ ಬಹು ದೂರದವರೆಗೆ ಹೋಗಿ ಅಸಂಖ್ಯಾತ ಹೂವುಗಳ ಮೇಲೆ ಕುಳಿತು ಕುಳಿತು ಏಳುವುದನ್ನು ಗಮನಿಸಿರುತ್ತೇವೆ. ಏಕೆ ಹೀಗೆ ಹೂಗಳ ಮೇಲೆ ದುಂಬಿಗಳು ಕುಳಿತು ಕುಳಿತು ಏಳುತ್ತವೆ. ಎಂಬ ಪ್ರಶ್ನೆ ಮಕರಂದ ಸಂಗ್ರಹಿಸಲು ಹಾಗೆ ಮಾಡುತ್ತವೆ ಎಂಬ ಉತ್ತರವನ್ನು ಪಡೆದು ತಣಿಯುತ್ತದೆ. ಅವಕ್ಕೆ ಮಕರಂದ ಬೇಕು ಅದಕ್ಕೆ ಅವು ಸಂಗ್ರಹಿಸಲು ಹೋಗುತ್ತವೆ ಅಂದುಕೊಳ್ಳುತ್ತೇವೆ. ಅವು ಇನ್ನೂ ಹೆಚ್ಚಿನ ಮಹತ್ವದ ಕಾರ್ಯ ಮಾಡುವುದನ್ನು ತಿಳಿಯುವ ಗೋಜಿಗೇ ಹೋಗಿರುವುದಿಲ್ಲ. 
      ಹೂವಿನಿಂದ ಹೂವಿಗೆ ಮಕರಂದ ಹೀರಲು ಹೂವಿನ ಮೇಲೆ ಕುಳಿತುಕೊಳ್ಳುವುದು ಏಳುವುದು ಮಾಡುವಾಗ ಇವು ಪರಾಗಸ್ಪರ್ಶ ಮಾಡುತ್ತವೆ. ಸಸ್ಯದ ಸಂತಾನೋತ್ಪತ್ತಿಯ ಭಾಗ ಹೂ. ಅದರಲ್ಲಿ ಪರಾಗಸ್ಪರ್ಷ ನಡೆಯುತ್ತದೆ. ಪರಾಗರೇಣು ( ಗಂಡು ಲಿಂಗಾಣು ) ಶಲಾಕಾಗ್ರವನ್ನು ತಲುಪುವುದನ್ನು ಪರಾಗಸ್ಪರ್ಷ ಎನ್ನುತ್ತೇವೆ. ಶಲಾಕಾಗ್ರವು ಪರಾಗರೇಣುಗಳನ್ನು ಅಂಡಾಶಯ (ಹೆಣ್ಣು ಲಿಂಗಾಣುಗಳಿರವ ಭಾಗ) ವನ್ನು ತಲುಪಿಸುತ್ತದೆ. ಇದರಿಂದ ಗಂಡು ಮತ್ತು ಹೆಣ್ಣು ಲಿಂಗಗಳು ಸಂಯೋಗ ಹೊಂದಲು ಸಹಾಯವಾಗುತ್ತದೆ. ಇದರಿಂದ ಹೂವುಗಳು ಈಚಾಗಲು, ಕಾಯಾಗಲು ಹಣ್ಣಾಗಲು, ಬೀಜಗಳು ಉಂಟಾಗಿ ಅವು ಸಸ್ಯಗಳಾಗಿ ಆ ಮೂಲಕ ಆ ಸಸ್ಯದ ವಂಶಾಭಿವೃದ್ಧಿಯಾಗಲು ಸಹಾಯವಾಗುತ್ತದೆ.
ಸಂಬಂಧಿತ ಚಿತ್ರ
      ಹೀಗೆ ಪರಾಗಸ್ಪರ್ಶ ಉಂಟಾದ ಪರಿಣಾಮದಿಂದ ಆಗುವ ಕಾಯಿ, ಹಣ್ಣು, ಬೀಜ, ಸಸ್ಯಗಳು ಸಸ್ಯಾಹಾರಿಗಳಿಗೆ ಆಹಾರವಾಗುತ್ತವೆ. ಅದು ಮಕರಂಧ ಹೀರಲು ಹೂಗಳ ಮೇಲೆ ಕುಳಿತುಕೊಳ್ಳುತ್ತದೆ ವಿನಾ ಪರಾಗಸ್ಪರ್ಶ ಮಾಡಲು ಅಲ್ಲ. ಅದು ದುಂಬಿಗಳ ಉದ್ಧೇಶವೂ ಅಲ್ಲ, ಕರ್ತವ್ಯವೂ ಅಲ್ಲ. ಆದರೂ ಅದರಿಂದ ಪರಾಗ ಸ್ಪರ್ಶವಾಗುವುದನ್ನು ಯಾರಿಂದ ಏಕೆ ಅದರಿಂದನೂ ತಡೆ ಹಿಡಿಯಲಾಗುವುದಿಲ್ಲ. ಒಂದು ರೀತಿ ಈ ಸಸ್ಯ ಮತ್ತು ದುಂಬಿಯ ಮಧ್ಯ ದುಂಬಿ ಮಕರಂದ ಪಡೆದುದರ ಬದಲಿ ಸಸ್ಯಗಳಿಗೆ ಪರಾಗಸ್ಪರ್ಷ ಮಾಡಿಕೊಡುವ ಅಲಿಖಿತ ಕ್ರಿಯೆಯ ಕರಾರು ಆಗಿದೆಯೆಂದೆನಿಸುತ್ತದೆ. ಪರಾಗ ಸ್ಪರ್ಶ ಆಗದೆ ಕಾಯಿ, ಹಣ್ಣು, ಬೀಜಗಳು ಉಂಟಾಗಿ, ಬೀಜಗಳು ನೆಲಕ್ಕೆ ಬಿದ್ದು ಸಸ್ಯಗಳಾಗಿ ಸಂತಾನೋತ್ಪತ್ತಿ ಆಗವುದಿಲ್ಲ.  ಪರಾಗಸ್ಪರ್ಶ ಆಗದಿದ್ದರೆ ರೈತ ಬೆಳೆ ಬೆಳೆದು ಜಗತ್ತಿನ ತುತ್ತಿನ ಚೀಲ ತುಂಬಿಸಲು ಸಾಧ್ಯವಾಗುವುದಿಲ್ಲ. ಹೀಗೆ ಬೆಳೆ ಬೆಳೆಯಲಾಗದಿದ್ದರೆ ಸಸ್ಯಾಹಾರಿಗಳು ಹೇಗೆ ಬದುಕಲು ಸಾಧ್ಯ..? ಸಸ್ಯಾಹಾರಿಗಳನ್ನೇ ಆಹಾರಕ್ಕಾಗಿ ಅವಲಂಬಿಸಿರುವ ಮಾಂಸಾಹಾರಿಗಳ ಗತಿ ಏನು..? ಪ್ರಕೃತಿಯಲ್ಲಿ ಸಾಮಾನ್ಯ ಕೀಟವಾದ ದುಂಬಿಯ ಪಾತ್ರ ಇಷ್ಟು ಮಹತ್ವದ್ದಾಗಿದೆ. ಎಲ್ಲ ಹೂಗಳಿಗೂ ಪರಾಗಸ್ಪರ್ಶ ದುಂಬಿ ಒಂದರಿಂದಲೇ ಮಾಡಲು ಸಾಧ್ಯವಿಲ್ಲ. ಇದರ ಜತೆಗೆ ಅನೇಕ ಕೀಟಗಳು ಪಕ್ಷಿಗಳು, ಗಾಳಿ, ಮುಂತಾದವು ಪರಾಗಸ್ಪರ್ಷಕ್ಕೆ ಕಾರಣಗಳಾಗಿವೆ. ಅವುಗಳಲ್ಲಿ ದುಂಬಿಯದು ಮುಖ್ಯ ಪಾತ್ರವಾಗಿದೆ. 
ದುಂಬಿ ಗೆ ಚಿತ್ರದ ಫಲಿತಾಂಶ
   ಇಂದು ಮಾನವ ತನ್ನ ದುರಾಸೆಯಿಂದ ದುಂಬಿಗಳ ನೆಲೆಯಾದ ಕಾಡನ್ನು ನಾಶವಾಗುವಂತೆ ಮಾಡಿದ್ದಾನೆ. ಹೆಜ್ಜೇನು ಗೂಡು ಕಟ್ಟುತ್ತಿದ್ದ ಎತ್ತರವಾದ ಹೆಮ್ಮರಗಳು ನಾಶವಾದ ಪ್ರಯುಕ್ತ ಅವು ಗೂಡು ಕಟ್ಟಲು ನಾಡಿಗೆ ಬಂದು ಬಹು ಮಹಡಿ ಕಟ್ಟಡಗಳನ್ನು ನೀರಿನ ಟ್ಯಾಂಕುಗಳನ್ನು ಆಶ್ರಯಿಸುವಂತಾಗಿದೆ. ಇದು ಒಮ್ಮೊಮ್ಮೆ ಅಪಾಯಕಾರಿಯಾಗುತ್ತದೆ. ಕಾಡು ಕಡಿಮೆಯಾದ ಪ್ರಯುಕ್ತ ಗಿಡ ಮರಗಳಲ್ಲಿ ಗೂಡು ಕಟ್ಟುತ್ತಿದ್ದ ತುಡುವೆ ಜೇನು, ಚಿಟ್ ಜೇನುಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ.
      ಕಾಡಿನ ನಾಶವಾಗುತ್ತಿರುವುದರಿಂದ ಮಕರಂಧದ ಆಗರಗಳಾದ ಹೂವುಗಳ ಸಂಖ್ಯೆಯೂ ಕಡಿಮೆಯಾಗಿದೆ. ಮಕರಂಧಕ್ಕಾಗಿ ದುಂಬಿಗಳು ದೂರ ದೂರ ಹೋಗಬೇಕಿದೆ. ಪ್ರಯುಕ್ತ ಕಾಡನ್ನು ರಕ್ಷಿಸಿ ಬೆಳೆಯಿಸಿ ಅದರಿಂದಾಗುವ ಅನೇಕ ಅನುಕೂಲಗಳ ಮಾನವ ಪಡೆಯಲೇಬೇಕಿದೆ.
ದುಂಬಿ ಗೆ ಚಿತ್ರದ ಫಲಿತಾಂಶ
      ದುಂಬಿಗಳು ಪರಾಗ ಸ್ಪರ್ಶಕ್ಕಷ್ಟೇ ಕಾರಣವಾಗಿ ಸಸ್ಯ ಕುಲ ಹೆಚ್ಚಲು, ಸಸ್ಯಹಾರಿಗಳಿಗೆ ಆಹಾರ ಆಗುವಂತಾಗಲಷ್ಟೇ ಕಾರಣವಾಗಿಲ್ಲ. ಅವು ಹೂವಿನಲ್ಲಿರುವ  ಮಕರಂಧವನ್ನು ಜೇನಾಗಿ ಪರಿವರ್ತಿಸಿ ಗೂಡಿನಲ್ಲಿ ತನಗಾಗಿ ಸಂಗ್ರಹಿಸಿದರೂ ಅದನ್ನು ಮಾನವ ಕದ್ದೋ ದೌರ್ಜನ್ಯ ಮಾಡಿಯೋ ಪಡೆದು ಆಹಾರಕ್ಕಾಗಿ ಮತ್ತು ಔಷಧಿಗಳಿಗಾಗಿ ಉಪಯೋಗಿಸಿ ಅದಕ್ಕೆ ಋಣಿಯಾಗಿದ್ದಾನೆ.
      ಜೇನುತುಪ್ಪ ಅನೇಕ ಪೋಷಕಾಂಶಗಳ ಆಗರ. ಆಯುರ್ವೇದದಲ್ಲಿ ಇದನ್ನು ಆಹಾರವೂ ಔಷಧಿಯಾಗಿಯೂ ಆಗಿ ಬಳಸುತ್ತಾರೆ. ಕೇವಲ ಜೇನು ತುಪ್ಪವನ್ನಷ್ಟೇ ಸೇವಿಸಿದರೂ ಮಾನವನಿಗೆ ಅನೇಕ ಲಾಭಗಳಿವೆ. ರಕ್ತ ಶುದ್ದಿ ಮಾಡುವುದು ಮುಖ್ಯವಾದ ಅನುಕೂಲಗಳಲ್ಲಿ ಒಂದು. ಇದಕ್ಕೆ ಬೇಡಿಕೆ ಇರುವುದರಿಂದ ಇಂದು ಇದು ಒಂದು ಉಧ್ಯಮವಾಗಿದೆ. ಕರಡಿ, ಹದ್ದು ಮುಂತಾದ ಜೀವಿಗಳು ಇದನ್ನು ಆಹಾರವಾಗಿ ತಿನ್ನಲು ಇಷ್ಟಪಡುತ್ತವೆ.
    ನಮ್ಮ ಸುತ್ತಮುತ್ತ ಇರುವ ಕೀಟಗಳಲ್ಲಿ ಒಂದು ಸಾಮಾನ್ಯ ಕೀಟದ ಮಹತ್ವ ಇಷ್ಟಾದರೆ ಇನ್ನೂ ಎಷ್ಟೋ ಎಂತೆಂತಹವೋ ಕೀಟಗಳು ಇವೆ. ಅವುಗಳ ಮಹತ್ವ ಇನ್ನೆಷ್ಟಿರಬೇಕು. ತಿಳಿದು ರಕ್ಷಿಸುವ ಪ್ರಯತ್ನ ಆಗಬೇಕಿದೆ. ಹೀಗೆ ಕೆಲವು ಜೀವಿಗಳ ನಾಶ ಆಹಾರ ಸರಪಳಿಗೂ ತೊಂದರೆ ಉಂಟು ಮಾಡಬಹುದು. ಅನೇಕ ಜೀವಿಗಳು, ಜೀವ ಪ್ರಭೇದಗಳು ಮಾನವನ ದುರಾಸೆಯ ಫಲವಾಗಿ ಈಗಾಗಲೇ ನಶಿಸಿ ಹೋಗಿವೆ. ಎಷ್ಟೋ ಜೀವಿಗಳು ಕಾಡಿನಲ್ಲಿ ಆಹಾರ ನೀರು ದೊರೆಯದೆ ಅಲೆಯುತ್ತಿವೆ. ಕೆಲವು ಆಹಾರ, ನೀರು ಸಿಗದೆ ಸತ್ತರೆ, ಮತ್ತೆ ಕೆಲವು ಆಹಾರಕ್ಕಾಗಿ ನಾಡಿಗೆ ನುಗ್ಗಿ ಇದಕ್ಕೆಲ್ಲಾ ಕಾರಣನಾದವನ ಮೇಲೆ ದಾಳಿ ಮಾಡಿ ಸೇಡು ತೀರಿಸುತ್ತಿವೆಯೆನೋ ಎಂಬಂತೆ ಆಹಾರ ಪಡೆಯುವಾಗ ಮಾನವನ ಮೇಲೆ, ಅವನು ಸಾಕಿದ ಜೀವಿಗಳ ಮೇಲೆ ಧಾಳಿ ಮಾಡಿ ಅನಾಹುತಗಳು ಆಗುವಂತೆ ಮಾಡುತ್ತಿವೆ.
ದುಂಬಿ ಗೆ ಚಿತ್ರದ ಫಲಿತಾಂಶ
      ಮನುಷ್ಯನಿಗೇ ನೀರಿನ ಅಭಾವ ಇನ್ನಿಲ್ಲದೆ ಬಾದಿಸುತ್ತಿದೆ. ತಾನು ಭೂಮಿಯ ಸಾವಿರಾರು ಅಡಿಗಳ ಆಳದಲ್ಲಿರುವ ನೀರನ್ನು ಭೂಮಿಯನ್ನು ಕೊರೆದು ಮೇಲಕ್ಕೆತ್ತಿ ತನ್ನ ಬಾದೆ ತೀರಿಸಿಕೊಳ್ಳುತ್ತಿದ್ದಾನೆ. ಆದರೆ ಕಾಡು ಪ್ರಾಣಿಗಳು ಹೀಗೆ ಮಾಡಿ ನೀರು ಪಡೆಯಲು ಸಾಧ್ಯವಿಲ್ಲ. ಮತ್ತೆ ಅವಕ್ಕೆ ನೀರು ಎಲ್ಲಿಂದ ದೊರೆಯಲು ಸಾಧ್ಯ..? ಮಾನವ ಕಾಡು ನಾಶಮಾಡಿದ ಪರಿಣಾಮ ನೀರು ಸಿಗದೆ ಅನೇಕ ಜೀವಿಗಳು ಸಾಯುವಂತಾಗಿದೆ. ಮುಂದೆ ಮಾನವನಿಗೂ ನೀರು ಸಿಗದಾಗಬಹುದು. ಹಾಗೆ ಆಗದ ಮುನ್ನ ಮಾನವ ಎಚ್ಚೆತ್ತುಕೊಂಡು ಕಾಡು ಉಳಿಸುವ, ರಕ್ಷಿಸುವ, ಬೆಳೆಸುವ ಮಹತ್ವದ ಕಾರ್ಯ ಮಾಡಬೇಕಿದೆ. ಆ ಮೂಲಕ ಜೀವಿಗಳ ರಕ್ಷಿಸಬೇಕಿದೆ.
      ರೈತನ ಮಿತ್ರ ಎಂದು ಕರೆಯುವ ಎರೆ ಹುಳ ಭೂಮಿಯೊಳಗಿದ್ದು, ಭೂಮಿಯ ಫಲವತ್ತತೆ ಹೆಚ್ಚಿಸಿ, ಇಳುವರಿ ಹೆಚ್ಚಲು ಕಾರಣವಾದ ಪ್ರಯುಕ್ತ ಅದನ್ನು ರೈತನ ಮಿತ್ರ ಎಂದರು! ಇಂದು ರಾಸಾಯನ ಗೊಬ್ಬರ, ಕ್ರಿಮಿ ನಾಶಕ, ಕೀಟ ನಾಶಕ, ಮಾರ್ಜಕ, ಡಿಡಿಟಿ ಸಿಂಪಡಣೆ … ಮಿತಿಮೀರಿರುವುದರಿಂದ ಈ ಜೀವಿ ನಶಿಸುತ್ತಿದೆ. ಇದರಿಂದ ಇನ್ನು ಕೆಲವೇ ವರ್ಷಗಳಲ್ಲಿ ಬೆಳೆ ಬೆಳೆವ ಭೂಮಿ ಬರಡಾಗುವ ಸಾಧ್ಯತೆ ಇದೆ.
ಸಂಬಂಧಿತ ಚಿತ್ರ
      ಹೀಗೆ ಮಾನವ ತನಗೆ ಸಹಾಯ ಮಾಡುವ ಒಂದೊಂದೇ ಜೀವಿಯ ಕುಲ ನಾಶಕ್ಕೆ ಕಾರಣವಾಗುತ್ತಾ ಪರೋಕ್ಷವಾಗಿ ತನ್ನ ಚರಮ ಗೀತೆ ತಾನೇ ಬರೆದುಕೊಳ್ಳುತ್ತಿದ್ದಾನೇನೋ ಅನ್ನಿಸುತ್ತಿದೆ. ಹಾಗೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅವನನ್ನೇ ಅವಲಂಭಿಸಿದೆ. ಅವನಿಗೆ ನಾನು ಎಂಬ ಭಾವ ತೊಲಗಿ ನಾವು ಎಂಬ ಭಾವ ಬರಬೇಕು. ಮಾನವನಿಗೆ ಇರುವಷ್ಟು  ಭೂಮಿಯ ಮೇಲೆ ಬದುಕುವ ಹಕ್ಕು ಗಿಡ ಮರ ಪ್ರಾಣಿ ಪಕ್ಷಿಗಳಿಗೂ ಇದೆ ಎಂಬುದು ತಿಳಿಯಬೇಕು. ಮಾನವನ ಬದುಕು ಈ ಪರಿಸರವನ್ನು ಅವಲಂಭಿಸಿದೆ, ಈ ಪರಿಸರದ ಬದುಕಿನಿಂದ ಮಾನವನ ಬದುಕು ಸುಂದರವಾಗಿದೆ ಎಂಬ ಸತ್ಯ ತಿಳಿದು ಪರಿಸರವ ಉಳಿಸಲು ಶ್ರಮಿಸಬೇಕಿದೆ. ಕಾಡಿದ್ದರೆ ಜೀವಿಗಳು, ಅವಿದ್ದರೆ ಮಾನವ ಎಂದು ತಿಳಿದು ಕಾಡಿನ ಪರಿಸರ ಉಳಿಸಿ ಬೆಳೆಸಿ ಜೀವವೈವಿಧ್ಯ ನಶಿಸದಂತೆ ಕಾಪಾಡಬೇಕಿದೆ. ಅವುಗಳ ಉಳಿವಿನಲ್ಲಿ ಮಾನವನ ಬದುಕಿದೆ, ಉಳಿವಿದೆ, ನಗುವಿದೆ, ಸಕಲ ಸೌಭಾಗ್ಯವಿದೆ.

– ಕೆ ಟಿ ಸೋಮಶೇಖರ ಹೊಳಲ್ಕೆರೆ

LEAVE A REPLY

Please enter your comment!
Please enter your name here