ತೆಂಗಿನ ಅಂತರ್ ಬೆಳೆಯಾಗಿ ವಿದೇಶಿ ತಳಿ : ಬಯಲುಸೀಮೆಗೆ ವರವಾಗಿ ಬಂದಿದೆ ಆಪಲ್ ಬಾರೆ

0
21

ಹುಳಿಯಾರು:

   ತೆಂಗಿನ ಅಂತರ್ ಬೆಳೆಯಾಗಿ ವಿದೇಶಿ ತಳಿ ಆಪಲ್ ಬಾರೆಯನ್ನು ಇಲ್ಲೊಬ್ಬ ರೈತ ಬೆಳೆದು ಉತ್ತಮ ಇಳುವರಿಯೊಂದಿಗೆ ಉತ್ತಮ ಆದಾಯ ಪಡೆಯುತ್ತಿದ್ದಾರೆ.
ಹೌದು, ಅಚ್ಚರಿಯಾದರೂ ಇದು ಸತ್ಯ. ಹುಳಿಯಾರಿನ ಉಮಾ ಸ್ಟೋರ್ಸ್‍ನ ಎಂ.ಎಸ್.ಭದ್ರೀಶ್ ಅವರು ಈ ಸಾಹಸಕ್ಕೆ ಮುಂದಾಗಿದ್ದು ತಮ್ಮ ಬರಕನಹಾಲ್ ಸಮೀಪದ ತೋಟದಲ್ಲಿ 1500 ಗಿಡಗಳನ್ನು ನಾಟಿ ಮಾಡಿದ್ದಾರೆ. ಅಲ್ಲದೆ ಮೊದಲ ಬಾರಿಗೆ ಬಂಪರ್ ಇಳುವರಿ ಪಡೆದು ಮೊದಲ ಪ್ರಯತ್ನದಲ್ಲೇ ಕೈ ತುಂಬ ಕಾಸು ನೋಡಿದ್ದಾರೆ. ಅಲ್ಲದೆ ಸ್ಥಳೀಯರಿಗೂ ಈ ವಿದೇಶಿ ತಳಿಯ ಹಣ್ಣಿನ ರುಚಿ ತೋರಿಸುತ್ತಿದ್ದಾರೆ.

   ತೆಂಗಿನ ಮಧ್ಯೆ ಅಂತರ್ ಬೆಳೆಯಾಗಿ ಈ ಹಿಂದೆ ಸೀಬೆ, ಸಪೋಟ, ದಾಳಿಂಬೆ ಬೆಳೆದಿದ್ದೆ. ಆದರೆ ನಿರ್ವಹಣೆಯಲ್ಲಿ ಈ ಎಲ್ಲ ಬೆಳೆಯೂ ಹೆಚ್ಚು ಹಣ ಕೇಳುತ್ತಿತ್ತು. ಅಲ್ಲದೆ ನೀರೂ ಸಹ ಯತ್ತೇಚ್ಚವಾಗಿ ಬೇಕಾಗಿತ್ತು. ಖರ್ಚು ಮತ್ತು ಆದಾಯಕ್ಕೆ ಹೋಲಿಸಿದರೆ ಹೇಳಿಕೊಳ್ಳುವಂತಹ ಲಾಭ ಬರುತ್ತಿರಲಿಲ್ಲ. ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಪ್ರಯಾಣ ಮಾಡುವಾಗ ರೈತರೊಬ್ಬರ ಜಮೀನಿನಲ್ಲಿ ಈ ತಳಿ ನೋಡಿ ಹೈದರಾಬಾದ್‍ನಿಂದ 1500 ಗಿಡಗಳನ್ನು ತಂದು ನಾಟಿ ಮಾಡಿದೆ ಎನ್ನುತ್ತಾರೆ ರೈತ ಭದ್ರೀಶ್.

    ಒಂದು ವರ್ಷದಿಂದ ಗಿಡ ಬೆಳೆಸಿದ್ದು ಒಂದು ವರ್ಷಕ್ಕೆ ಒಂದು ಗಿಡಕ್ಕೆ ನರ್ಸರಿಯಿಂದ ಗಿಡ ತಂದ ವೆಚ್ಚವೂ ಸೇರಿ ಗೊಬ್ಬರ, ಔಷಧಿ ಸೇರಿ 150 ರೂ. ಖರ್ಚಾಗಿದೆ. ಮೊದಲ ಬೆಳೆಯಾಗಿ ಈಗ ಒಂದು ಗಿಡಕ್ಕೆ 5 ರಿಂದ 10 ಕೆ.ಜಿ. ಫಸಲು ಬಂದಿದ್ದು ಕೆ.ಜಿ.ಗೆ 15 ರೂಗಳಿಂದ 25 ರೂಗಳಿಗೂ ಮಾರಾಟ ಮಾಡಿದ್ದೇನೆ. ಈಗಾಗಲೇ ಬಹುತೇಕ ನನ್ನ ಬಂಡವಾಳ ಹಿಂದಿರುಗಿದ್ದು ಮುಂದಿನ ದಿನಗಳಲ್ಲಿ 30 ರಿಂದ 80 ಕೆ.ಜಿ ಇಳುವರಿ ಬರುತ್ತದೆ ಎಂದು ವಿವರಿಸುತ್ತಾರೆ.

    ಒಟ್ಟಾರೆ ಮಳೆಯಾಶ್ರಿತ ಪ್ರದೇಶವಾದ ಇಲ್ಲಿ ಸತತ 10 ವರ್ಷಗಳಿಂದ ಉತ್ತಮ ಮಳೆಯಾಗದೆ ತೆಂಗು, ಅಡಿಕೆ ಒಣಗುತ್ತಿದೆ. ಅಂತರ್ಜಲವೂ ಸಹ ತೀವ್ರ ಕುಸಿತವಾಗಿದ್ದು ನೋಡ ನೋಡುತ್ತಿದ್ದಂತೆ ನೂರಾರು ಎರಕೆ ತೋಟ ಸಂಪೂರ್ಣ ನಾಶವಾಗಿದೆ. ಹಾಗಾಗಿ ಮಳೆ ನಂಬಿ ಕೃಷಿ ಮಾಡುವ ಧೈರ್ಯ ಈ ಭಾಗದ ರೈತರಲ್ಲಿ ಎಂದೋ ಇಲ್ಲದಾಗಿ ಹೊಟ್ಟೆಪಾಡಿಗಾಗಿ ಪೇಟೆ ಸೇರುತ್ತಿದ್ದಾರೆ. ಇಂತಹ ಭೀಕರ ಸ್ಥಿತಿ ಎದುರಿಸುತ್ತಿರುವ ತಾಲ್ಲೂಕಿಗೆ ಆಪಲ್ ಬಾರೆ ವರವಾಗಿದೆ. ಆದರೆ ಉಮಾಸ್ಟೋರ್ಸ್ ಭದ್ರೀಶ್ ಅವರಂತೆ ಇತರ ರೈತರೂ ಆಪಲ್ ಬಾರೆ ಬೆಳೆಯಲು ಉತ್ಸುಕತೆ ತೋರಬೇಕಿದೆ ಅಷ್ಟೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here