ಬರಗಾಲದಿಂದ ತತ್ತರಿಸಿರುವ ರೈತರ ಜೊತೆ ಅಧಿಕಾರಿಯ ಉದ್ದಟತನ

0
43

ಕೊರಟಗೆರೆ:

  ಬರಗಾಲದ ಛಾಯೆಗೆ ಸತತ ಕಳೆದ 15-20 ವರ್ಷಗಳಿಂದ ನಲುಗಿ ಹೋಗಿರುವ ಕೊರಟಗೆರೆ ತಾಲ್ಲೂಕಿನ ರೈತರಿಗೆ ಆಸರೆಯಾಗಬೇಕಿದ್ದ ತೋಟಗಾರಿಕೆ ಅಧಿಕಾರಿಯೊಬ್ಬರು ಏಕಾಧಿಪತ್ಯ ದೋರಣೆಯಲ್ಲಿ ತುಘಲಕ್ ಆಡಳಿತ ನಡೆಸುವ ಮೂಲಕ ಬರಗಾಲದ ರೈತರ ಬಾಳಿಗೆ ಬರೆ ಎಳೆಯುವ ವರ್ತನೆ ತಾಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

   ಕೊರಟಗೆರೆ ತಾಲ್ಲೂಕು ಕಳೆದ 20 ವರ್ಷಗಳಿಂದ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆಯಾಗುತ್ತಿದೆ. ಮಳೆ ಬೆಳೆ ಇಲ್ಲದೆ ರೈತರು ಸಂಕಷ್ಟ ಅನುಭವಿಸಿ, ಅಲ್ಪ ಸ್ವಲ್ಪ ಮಳೆ ನೆಚ್ಚಿ ಜೊತೆಗೆ ಅಂತರ್ಜಲ ಮಟ್ಟ ಕುಸಿದು ದಿನದಿಂದ ದಿನಕ್ಕೆ ನೀರು ಕುಸಿದು, ಬರುವ ಅಲ್ಪ ಸ್ವಲ್ಪ ನೀರು ನಿಲ್ಲುವ ಸ್ಥಿತಿ ತಲುಪಿ, ದಿಕ್ಕು ಕಾಣದೆ ಪರಿತಪಿಸುವಂತಹ ಈ ಸಂದರ್ಭದಲ್ಲಿ ರೈತ ಪರ ನಿಲ್ಲಬೇಕಾದ ತೋಟಗಾರಿಕೆ ಅಧಿಕಾರಿ ಪುಷ್ಪಲತಾ ರೈತರಿಗೆ ಸ್ಪಂದಿಸದೆ ಹಲವು ಸಬೂಬು ಹೇಳುವ ಮೂಲಕ ತುಘಲಕ್ ಆಡಳಿತ ನಡೆಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

   ರೈತರಿಗೆ ಸಾಮಾನ್ಯವಾಗಿ ಆಶ್ರಯ ನೀಡುವಂತಹ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳು ಈ ಇಲಾಖೆಗಳ ಸಹಯೋಗದಲ್ಲೆ ರೈತ ತನ್ನ ಬೇಸಾಯಕ್ಕೆ ಅನುಕೂಲವಾಗುವ ಸರ್ಕಾರಿ ಸವಲತ್ತುಗಳನ್ನು ಪಡೆಯುವಂತಹದ್ದು. ಇಂತಹ ರೈತಪರ ಇಲಾಖೆಯಲ್ಲಿ ತೋಟಗಾರಿಕಾ ಇಲಾಖೆ ಕೊರಟಗೆರೆ ತಾಲ್ಲೂಕಿನಲ್ಲಿ ಅಕ್ಷರಶಃ ಸಹ ರೈತರ ಸಂಪರ್ಕಕ್ಕೆ ಸಿಗದೆ ಇಲ್ಲಿನ ಅಧಿಕಾರಿಯ ಬೇಜವಾಬ್ದಾರಿತನ ಹಾಗೂ ರೈತ ವಿರೋಧಿ ನೀತಿ, ರೈತರ ಬಾಳಿನಲ್ಲಿ ಸಂಕಷ್ಟ ಮೂಡಿಸಿದೆ. ಗ್ರಾಮೀಣ ಪ್ರದೇಶದ ರೈತ ದಿನಂ ಪ್ರತಿ ಇಲಾಖೆಗೆ ಅಲೆದು ತೋಟಗಾರಿಕೆ ಇಲಾಖೆ ಅಧಿಕಾರಿ ಪುಷ್ಪಲತಾ ವಿರುದ್ದ ಹಿಡಿ ಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

    ತೋಟಗಾರಿಕೆಇಲಾಖೆಯಲ್ಲಿ ಸಾಮಾನ್ಯವಾಗಿ ರೈತರಿಗೆ ಅನುಕೂಲಕರವಾಗುವ ರೀತಿಯಲ್ಲಿ ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿದಂತೆ ರೈತರಿಗೆ ಮಾಹಿತಿ ನೀಡುವುದು, ಯೋಗ್ಯ ಗುಣಮಟ್ಟದ ಬೀಜ, ಕಸಿ ಸಸಿಗಳನ್ನು ಸರಬರಾಜು ಮಾಡುವುದು, ಬೇಸಾಚಿ ಕ್ರಮ ಮತ್ತು ಸಸ್ಯ ಸಂರಕ್ಷಣಾ ಕ್ರಮ, ತಾಂತ್ರಿಕ ತಿಳಿವಳಿಕೆ ಮತ್ತು ಸಲಹೆ ನೀಡುವುದು.

 

 

 

 

 

 

 

  ದುರ್ಬಲ ವರ್ಗ, ಆರ್ಥಿಕವಾಗಿ ಹಿಂದುಳಿದ ರೈತರುಗಳಿಗೆ ಹಾಗೂ ಬುಡಕಟ್ಟು ಜನಾಂಗಕ್ಕೆ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಬರುವ ಅನುದಾನ ಬಳಕೆ ಮಾಡುವಲ್ಲಿ ರೈತರ ಪರವಾಗಿ ಸ್ಪಂದಿಸುವಂತಹ ಕೆಲಸ ಮಾಡುವ ತೋಟಗಾರಿಕಾ ಇಲಾಖಾ ಅಧಿಕಾರಿಗಳು ಕೊರಟಗೆರೆ ತಾಲ್ಲೂಕಿನಲ್ಲಿ ಇದಕ್ಕೆ ವಿರುದ್ದವಾಗಿ ವರ್ತಿಸುತ್ತಿದ್ದು, ರೈತರಿಗೆ ಸಮರ್ಪಕ ಮಾಹಿತಿ ನೀಡದೆ ಸರ್ಕಾರದಿಂದ ಬರುವಂತಹ ಪೌಷ್ಟಿಕ ಖನಿಜಾಂಶವುಳ್ಳ ಗೊಬ್ಬರ, ಇನ್ನಿತರ ಕೀಟನಾಶಕ ಔಷಧಿಗಳು ಮತ್ತು ಪೌಷ್ಟಿಕತೆ ಇರುವಂತಹ ಔಷಧಿಗಳನ್ನು ಸಮರ್ಪಕವಾಗಿ ವಿತರಿಸದೆ ಅಧಿಕಾರಿಗಳಿಗೆ ಹತ್ತಿರವಿರುವ ಬೆರಳೆಣಿಕೆ ರೈತರುಗಳಿಗೆ ಹೆಚ್ಚೆಚ್ಚು ನೀಡಿ ಕೈ ತೊಳೆದುಕೊಳ್ಳುತ್ತಾರೆ ಎಂದು ಕೆಲವು ರೈತರು ಅಧಿಕಾರಿ ವಿರುದ್ದ ಆರೋಪ ಮಾಡುತ್ತಿದ್ದಾರೆ.

   ಸರ್ಕಾರ ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದಂತೆ ತಾಲ್ಲೂಕುವಾರು ಎಲ್ಲಾ ಹೋಬಳಿಗಳಿಗೆ ಇಲಾಖೆಯ ಯೋಜನೆಗಳ ಅನುಷ್ಠಾನ ಅನುಕೂಲವಾಗಲೆಂಬ ದೃಷ್ಟಿಯಿಂದ ಹೋಬಳಿಗೊಬ್ಬರಂತೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೆಶಕರ ಕೈಕೆಳಗೆ ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಿ, ಪ್ರತಿ ಕೇಂದ್ರದಲ್ಲಿ ತೋಟಗಾರಿಕಾ ಸಹಾಯಕ ಕಾರ್ಯ ನಿರ್ವಹಿಸಿ, ಅಲ್ಲಿನ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ತೋಟಗಾರಿಕೆ ಬೆಳೆಗಳ ಬಗ್ಗೆ ತಿಳಿವಳಿಕೆ ತಾಂತ್ರಿಕ ಸಲಹೆ ಹಾಗೂ ಮಾರ್ಗದರ್ಶನ ನೀಡಬೇಕು. ಇಲಾಖೆ ರೂಪಿಸುವ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು. ಆದರೆ ಅದಕ್ಕೆ ವ್ಯತಿರಿಕ್ತ ಎಂಬುವಂತೆ ಕೊರಟಗೆರೆ ತಾಲ್ಲೂಕಿನಲ್ಲಿ ಅಧಿಕಾರಿಗಳಿಗೆ ಹಣ ಗಳಿಕೆಯಾಗುವ ಕೆಲಸ ಕಾರ್ಯಗಳಿಗಷ್ಟೇ ಮುತುವರ್ಜಿ ವಹಿಸುತ್ತಿದ್ದು, ರೈತ ಪರವಾದ ಯೋಜನೆಗಳಿಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಗುರುತರ ಆರೋಪ ರೈತರಿಂದ ಕೇಳಿ ಬರುತ್ತಿದೆ.

   ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಹನಿನೀರಾವರಿ ಯೋಜನೆಯಡಿ ತೆಂಗು, ಮಾವು, ಬಾಳೆ, ಸಪೋಟ, ದಾಳಿಂಬೆ, ನುಗ್ಗೆ, ಪರಂಗಿ, ದ್ರಾಕ್ಷಿ, ತರಕಾರಿ ಬೆಳೆ ಸೇರಿದಂತೆ ಸೌಂದರ್ಯ ವರ್ಧಕ ಹೂವುಗಳಿಗೆ ಹಾಗೂ ಹಣ್ಣಿನ ಬೆಳೆಗಳಿಗೆ ಎರಡು ಎಕರೆ ಜಮೀನುವುಳ್ಳ ರೈತರಿಗೆ 90% ಸಹಾಯಧನ, 3 ಹೆಕ್ಟೇರ್ ನಂತರ 45% ಸಹಾಯಧನ ಬಿಡುಗಡೆಯ ಜೊತೆಗೆ ಕೃಷಿಹೊಂಡ, ಮಿನಿ ಟ್ರ್ಯಾಕ್ಟರ್, ಟಿಲ್ಲರ್, ಗ್ರೀನ್ ಹೌಸ್ ಸೇರಿದಂತೆ ಹತ್ತುಹಲವು ಯೋಜನೆಗಳಿಗೆ ರೈತರ ಪರವಾಗಿ ಸರ್ಕಾರ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡುತ್ತಿದ್ದರೂ ರೈತರುಗಳಿಗೆ ಮಾಹಿತಿಯಿಲ್ಲದೆ ರಾಜಕಾರಣಿಗಳ ಹಿಂಬಾಲಕರು ಅಥವಾ ಅಧಿಕಾರಿಗಳಿಗೆ ಕಮಿಷನ್ ನೀಡುವಂತಹ ಬೆರಳೆಣಿಕೆ ರೈತರುಗಳಿಗೆ ಮಾತ್ರ ಇಲ್ಲಿನ ಅಧಿಕಾರಿಗಳು ಮಣೆ ಹಾಕುತ್ತಿದ್ದಾರೆ. ಅಲ್ಲದೆ ಕೃಷಿಹೊಂಡ, ಗ್ರೀನ್ ಹೌಸ್, ಕೃಷಿ ಯಂತ್ರೋಪಕರಣದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿಬರುತಿವೆ. ಒಂದೆ ಕುಟುಂಬ ಹಲವು ಯೋಜನೆಗಳ ಫಲಾನುಭವಿಯಾಗಿ ಆಯ್ಕೆಯಾಗಿರುವುದು ಇಲಾಖಾ ಭ್ರಷ್ಟಾಚಾರಕ್ಕೆ ಕೈಗನ್ನಡಿಯಂತಿದೆ. ಮೇಲಿನ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಕೆಲವು ರೈತರು ಆಗ್ರಹಿಸಿದ್ದಾರೆ.

   ಒಟ್ಟಾರೆ ಕೊರಟಗೆರೆ ತಾಲ್ಲೂಕಿನ ತೋಟಗಾರಿಕಾ ಇಲಾಖೆಯ ತಾಲ್ಲೂಕು ಹಿರಿಯ ಸಹಾಯಕ ನಿರ್ದೆಶಕಿ ಪುಷ್ಪಲತಾ ಅವರ ತುಘಲಕ್ ಧೋರಣೆಯಿಂದ ರೈತಾಪಿ ವರ್ಗ ತತ್ತರಿಸಿ ಹೋಗಿದೆ. ಈ ಅಧಿಕಾರಿಯನ್ನು ಉಪಮುಖ್ಯಮಂತ್ರಿ ಕ್ಷೇತ್ರದಲ್ಲಿ ಇನ್ನೂ ಉಳಿಸಿಕೊಂಡಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ರೈತರ ಪರ ಕೆಲಸ ಮಾಡುವಂತಹ ಅಧಿಕಾರಿಯನ್ನು ಶೀಘ್ರವಾಗಿ ನೇಮಿಸುವ ಮೂಲಕ ತಾಲ್ಲೂಕಿನ ರೈತರಿಗೆ ಸಹಕಾರಿಯಾಗಬೇಕು ಎಂಬುದು ರೈತರ ಒತ್ತಾಯವಾಗಿದೆ.

ನಟರಾಜು ಸಿ.ಎಸ್ ಚಿಂಪುಗಾನಹಳ್ಳಿ : ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ನರೇಗಾ ಯೋಜನೆಯಡಿ ಕಳೆದ 8 ತಿಂಗಳುಗಳ ಹಿಂದೆ ಬಾಳೆ ನೆಟ್ಟಿದ್ದು, ಈವರೆಗೂ ನಮಗೆ ಹಣ ಮಂಜೂರು ಮಾಡದೆ, ತೋಟಗಾರಿಕಾ ಅಧಿಕಾರಿ ಪುಷ್ಪಲತಾ ವಿನಾಕಾರಣ ಅಲೆದಾಡಿಸುತ್ತಿದ್ದಾರೆ. ತೋಟಗಾರಿಕಾ ಇಲಾ ಖೆಗೆ ಸುಮಾರು 15 ರಿಂದ 20 ಬಾರಿ ಅಲೆದಾಡಿದ್ದು, ಸುಮಾರು ಬಾರಿ ಅಧಿಕಾರಿ ಕಛೇರಿಯಲ್ಲಿ ಇರುವುದಿಲ್ಲ. ಇರುವ ಸಂzರ್ಭದಲ್ಲಿ ವಿಚಾರಿಸಿದರೆ ಉಡಾಫೆ ಉತ್ತರ ನೀಡಿ ಪ್ರತಿಬಾರಿ ಒಂದೊಂದು ಅರೆಉತ್ತರ ನೀಡುತ್ತಾ ಸತಾಯಿಸುತ್ತಿದ್ದಾರೆ. ಬರಗಾಲದ ಸಂದರ್ಭದಲ್ಲಿ ಆಶ್ರಯವಾಗಬೇಕಿದ್ದ ಅಧಿಕಾರಿಗಳು ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿರುವುದು ದುರದೃಷ್ಟಕರ.

  ಅಜಿತ್, ನರೇಗಾ ಎಂಜಿನಿಯರ್ : ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿಯಲ್ಲಿ ತಾಲ್ಲೂಕಿನ 24 ಗ್ರಾ.ಪಂ ಗಳ ಪೈಕಿ 12 ಗ್ರಾ.ಪಂ ಗಳಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ತಾಂತ್ರಿಕ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದು, ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಕೆಲಸ ನಿರ್ವಹಿಸಲು ತೋಟಗಾರಿಕಾ ಅಧಿಕಾರಿ ಸಮರ್ಪಕವಾಗಿ ಸ್ಪಂದಿಸುವುದಿಲ್ಲ. ಈ ಹಿಂದೆ ಗ್ರಾ.ಪಂ ಲಾಗಿನ್‍ನಲ್ಲಿ ಕೆಲಸ ನಿರ್ವಹಿಸುವಾಗ ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಹಣ ಪಾವತಿಸಿದ್ದೇವೆ. ಆದರೆ ಇತ್ತೀಚೆಗೆ ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದಂತಹ ಯೋಜನೆಗಳ ಅನುಷ್ಠಾನವನ್ನು ನಮ್ಮ ಲಾಗಿನ್‍ನಲ್ಲೆ ನಿರ್ವಹಿಸಿ ಎಂದು ಒತ್ತಡ ಹಾಕಿ ಕೆಲಸ ನಿರ್ವಹಿಸುತ್ತಿದ್ದರಾದರೂ ಈ ಇಲಾಖೆಗೆ ಸಂಬಂಧಿಸಿದಂತೆ 4 ಕೆಲಸಗಳ ನಿರ್ವಹಣೆ ಮಾಡಲಾಗದೆ ತೋಟಗಾರಿಕಾ ಇಲಾಖೆಯ ಅಧಿಕಾರಿ ಪುಷ್ಪಲತಾ ಅವರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದಿಂದ ರೋಸಿ ಹೋದಂತಾಗಿದೆ. ಇವರ ಉಡಾಫೆ ಉತ್ತರಕ್ಕೆ ಯಾವುದೇ ಕೆಲಸ ಕಾರ್ಯಗಳು ಪೂರ್ಣಗೊಂಡಿರುವುದಿಲ್ಲ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here