ಕೂಡಿ ಬಾಳಿದರೆ ಸ್ವರ್ಗ

      ಆನಂದ ಆ ಮನೆಯ ಚಿಕ್ಕ ಯಜಮಾನನೆನಿಸಿಕೊಂಡಿದ್ದ. ಅಕ್ಕ ತಂಗಿಯರ ನಡುವೆ ಮುದ್ದಾಗಿ ಬೆಳೆದವನು. ಸ್ನೇಹ ವೃಂದದಲ್ಲೂ ಅಷ್ಟೇ ಉತ್ತಮ ಬಾಂಧವ್ಯ ಬೆಳೆಸಿಕೊಂಡವನು. ಗುರು ಹಿರಿಯರು, ಬಂಧು ಬಳಗವನ್ನು ಕಂಡರೆ ಪ್ರೀತಿ ಮತ್ತು ಅಭಿಮಾನ. ಮನೆಗೆ ಬಂದವರೆಲ್ಲರೂ ಆನಂದನ ನಡೆ ನುಡಿಯನ್ನು ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು. ಓದಿನಲ್ಲೂ ಮುಂದಿದ್ದ ಆನಂದ ಆಗಿನ್ನೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ. ಆದರೂ ಅವನ ಕಣ್ಣಲ್ಲಿ ಹೊಸತನ ಮಿಂಚುತ್ತಿತ್ತು. ತಂತ್ರಜ್ಞಾನ ಅವನ ದೈನಂದಿನ ಮಂತ್ರವಾಗಿತ್ತು. ತಂದೆ ತಾಯಿಗಳ ವಿಶ್ರಾಂತಿ ಜೀವನ ಮತ್ತು ಅವನ ಮುಂದಿನ ಶ್ರೇಯೋಭಿವೃದ್ಧಿಯ ಪೂರ್ವಾಲೋಚನೆಯಿಂದ ಹುಟ್ಟೂರಿನಲ್ಲಿ ಒಂದು ಪುಟ್ಟ ತೋಟವನ್ನು ನಿರ್ಮಿಸುವ ಸಿದ್ಧತೆಯನ್ನು ಆಗಾಗಲೇ ನೆಡೆಸಿದ್ದ.

      ಇತ್ತ ಆನಂದನ ತಂದೆ ನಾಗೇಂದ್ರಪ್ಪನವರು ಸರ್ಕಾರಿ ಸೇವೆಯಲ್ಲಿದ್ದು ಉತ್ತಮ ಬದುಕನ್ನು ರೂಪಿಸಿಕೊಂಡವರು. ತಮ್ಮ ಕೆಲಸಕಾರ್ಯಗಳಲ್ಲಿ ಮೆಲ್ಲ ಮೆಲ್ಲನೆ ಮೇಲೇರುತ್ತಾ ಬಂದವರು. ನಿಷೇಧಾತ್ಮಕ ಭಾವನೆಗಳನ್ನು ಹೊರತಳ್ಳಿ, ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳುವ ಉಪಾಯವನ್ನು ಕಂಡುಕೊಂಡವರು. ಪ್ರಾಮಾಣಿಕ ಪ್ರಯತ್ನದಿಂದ ಮೊದಲಿಗೆ ತಮ್ಮಲ್ಲಿ ತಾವು ನಂಬಿಕೆ ಮತ್ತು ವಿಶ್ವಾಸವನ್ನು ಇಟ್ಟುಕೊಂಡು ಯಾರಾದರೂ ಒಳ್ಳೆಯ ವ್ಯಕ್ತಿ ಎಂದು ಪ್ರಶಂಸಿಸಿದರೆ ಅವರ ವ್ಯಕ್ತಿತ್ವದ ಬಗ್ಗೆ ಸ್ವತಃ ವಿಮರ್ಶಿಸಿಕೊಂಡು ಬದುಕುವ ಸ್ವಭಾವ. ಹಾಗಾಗಿ ಅವರು ಕೆಲಸ ಮಾಡುವ ಕಡೆಗಳಲೆಲ್ಲ ಒಳ್ಳಯ ಹೆಸರು.

      ಆದರೆ ನಾಗೇಂದ್ರಪ್ಪನವರ ಹುಟ್ಟೂರಿನಲ್ಲಿ ಅವರದ್ದು ಕೂಡು ಕುಟುಂಬವಾದ್ದರಿಂದ ಅಲ್ಲಿನ ಹಲವಾರು ಸಾಂದರ್ಭಿಕ ಜವಾಬ್ದಾರಿಯನ್ನು ಇವರೇ ವಹಿಸಿಕೊಳ್ಳಬೇಕಾಗಿತ್ತು. ಕಾರಣ, ಆ ಮನೆಯಲ್ಲಿ ಕಲಿತವರಾರೂ ಇರಲಿಲ್ಲ. ಆದರೆ ಆರ್ಥಿಕ ಸಂಪತ್ತಿಗೇನೂ ಕೊರತೆಯಿರಲಿಲ್ಲ. ಕಾಲಚಕ್ರ ತೇಲಿದಂತೆ ಆ ಮನೆಯ ಹಿರಿಯವರೆಲ್ಲರೂ ಒಬ್ಬರಾದಂತೆ ಮತ್ತೊಬ್ಬರು ವಿಧಿವಶರಾದರು. ಕಾಲನ ಆಟ, ದುಡಿಯುವವರಿಲ್ಲದ ಆ ಮನೆಯ ಸಂಪತ್ತು ಕ್ರಮೇಣ ಕ್ಷೀಣಿಸುತ್ತ ಬಂತು. ತುಂಬಿದ ಕಣಜಗಳು ಬರಿದಾಗುತ್ತಾ ಬಂದವು.

      ದಿನಕಳೆದಂತೆ ನಾಗೇಂದ್ರಪ್ಪನವರ ಮಗ ಆನಂದನ ಸ್ವಭಾವ, ನಡೆ ನುಡಿ, ಆಚಾರ ವಿಚಾರಗಳಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆಗಳು ಕಂಡುಬಂದರೂ ಅವನ ಮೇಲಿನ ಅತಿಯಾದ ಪ್ರೀತಿಯಿಂದ ನಾಗೇಂದ್ರಪ್ಪನವರು ಆನಂದನ ವರ್ತನೆಯ ಬಗ್ಗೆ ವಿಚಾರಿಸಲು ಹೋಗಲಿಲ್ಲ. ಕೆಲವು ಸಲ ಆನಂದ ರಾತ್ರಿ ವೇಳೆ ಸ್ನೇಹಿತರ ಕೊಠಡಿಯಲ್ಲಿ ತಂಗುತ್ತೇನೆಂದು ಹೇಳಿ ಹೋಗಿದ್ದೂ ಉಂಟು. ಆನಂದನ ಸ್ನೇಹಿತರೆಲ್ಲರೂ ಕೂಡ ಒಳ್ಳೇಯ ಪರಿಸರದಲ್ಲಿ ಬೆಳೆದವರಂತೆ ನಾಗೇಂದ್ರಪ್ಪನವರ ಮನದಲ್ಲಿ ಗುರ್ತಿಸಿಕೊಂಡಿದ್ದರು. ಮನೆಯಲ್ಲಿ ಯಾವುದೇ ಶುಭಕಾರ್ಯಗಳು ನಡೆದರೂ ಆತ್ಮೀಯವಾಗಿ ಮನೆಯವರಂತೆ ಓಡಾಡಿಕೊಂಡು ಕೆಲಸಕಾರ್ಯಗಳನ್ನು ನಿರ್ವಹಿಸುತ್ತ ಮೆಚ್ಚುಗೆ ಪಡೆದಿದ್ದರು.
ಇತ್ತ ನಾಗೇಂದ್ರಪ್ಪನವರು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಮದುವೆಮಾಡಿ ಇದ್ದ ಆರ್ಥಿಕ ವ್ಯವಸ್ಥೆಯಲ್ಲಿಯೇ ಒಂದು ಪುಟ್ಟ ಮನೆಯನ್ನು ಕಟ್ಟಿಸಿದ್ದರು. ಈ ಎಲ್ಲ ಸತ್ಕಾರ್ಯಗಳು ನಡೆದು ಇನ್ನೂ ಮೂರು ತಿಂಗಳು ಕಳೆದಿರಲೇ ಇಲ್ಲ. ಆನಂದ ಇದ್ದಕಿದ್ದ ಹಾಗೆ ತನ್ನ ಅಮ್ಮನಿಗೆ ಆಶ್ಚರ್ಯಕರ ರೀತಿಯಲ್ಲಿ ಒಂದು ಸುದ್ಧಿಯನ್ನು ಮುಟ್ಟಿಸಿದ. ಇದಾದ ಒಂದೆರಡು ದಿನಗಳಲ್ಲೆ ಆನಂದನ ಸ್ನೇಹಿತರ ಮನೆಯವರು ತಮ್ಮ ಮಗಳು ಸರೋಜಳ ಮದುವೆಯ ಪ್ರಸ್ಥಾಪವನ್ನು ತಂದರು. ನಾಗೇಂದ್ರಪ್ಪನವರಿಗೆ ಆಶ್ಚರ್ಯ. ಈ ಮೊದಲು ಇದಾವುದರ ಹಿನ್ನೆಲೆಯೂ ಅವರಿಗೆ ತಿಳಿದಿರಲಿಲ್ಲ. ಆನಂದನೂ ಕೂಡ ನಾನು ಸರೋಜಳನ್ನೆ ಮದುವೆಯಾಗುವುದಾಗಿ ಹಠ ಮಾಡಿದ. ನಾಗೇಂದ್ರಪ್ಪನವರಾದರೊ ಮಗನ ಆಸೆಗೆ ತಣ್ಣೀರೆರಚದೆ ಅವನ ಮೇಲಿನ ಪ್ರೀತಿ ಮತ್ತು ಮಮಕಾರದಿಂದ ಮದುವೆಗೆ ಸಮ್ಮತಿ ಸೂಚಿಸಿದರು.

      ಮದುವೆಯೇನೋ ಪ್ರೀತಿ ವಿಶ್ವಾಸದಿಂದ ಸರಳವಾಗಿಯೇ ನಡೆಯಿತು. ಆನಂತರದ ದಿನಗಳಲ್ಲಿ ಏಕೋ ಏನೋ ಆನಂದನ ಸ್ವಭಾವದಲ್ಲಿ ಹಲವು ಬದಲಾವಣೆಗಳನ್ನು ಕಂಡು ನಾಗೇಂದ್ರಪ್ಪನವರಿಗೆ ಒಂದು ರೀತಿ ಅಸಮಧಾನವೆನಿಸಿದರೂ ಸನ್ನಿವೇಶವನ್ನು ಸಮಾಧಾನದಿಂದಲೇ ಸ್ವೀಕರಿಸಿದರು.

      ಇತ್ತ ಬುದ್ಧಿಶಕ್ತಿ ಕುಟುಂಬದಿಂದ ಬಂದ ಸರೋಜ ತುಂಬಾ ಓದಿಕೊಂಡವಳೂ ಕೂಡ. ‘ಮನೆಕೆಲಸವನ್ನು ಉತ್ತಮ ರೀತಿಯಲ್ಲಿ ವ್ಯವಸ್ಥಿತವಾಗಿ ನಿರ್ವಹಿಸುವವಳು, ಕತ್ತಲೆಯಿಂದ ಬೆಳಕಿನೆಡೆಗೆ ಸಾಗುತ್ತಾ ಸತ್ಸಂಗ, ವಿನಯ, ತಪ್ಪುನಡೆದರೂ ತಿದ್ದಿಕೊಂಡು ಹೋಗುವ ಸ್ವಭಾವ, ನೋವು ನಲಿವುಗಳನ್ನು ಅರ್ಥೈಸಿಕೊಂಡು ಸ್ಪಂದಿಸುವ ಕಾಳಜಿ, ಒಟ್ಟಾರೆ ನಲ್ಮೆಯಿಂದಲೆ ನಲಿವು ಹಾಗೂ ಪ್ರೀತಿಗೆ ಇಡೀ ಸಂಸಾರವನ್ನು ಒಂದುಗೂಡಿಸುವ ಶಕ್ತಿ ಇರುತ್ತದೆ ಎಂಬುದನ್ನು ಅರಿತವಳು’ – ಹೀಗೆ ಹಲವು ನಿರೀಕ್ಷೆಗಳನ್ನು ಹೊಂದಿದ್ದ
ನಾಗೇಂದ್ರಪ್ಪನವರಿಗೆ ಈ ಎಲ್ಲ ನಿರೀಕ್ಷೆಗಳು ಹುಸಿಯಾಗಿ ನಿರಾಸೆ ಕಾರ್ಮೋಡ ಕವಿದಿತ್ತು. ಸರೋಜ ನಾಗರೀಕ ಪ್ರಪಂಚದ ಸಂಪರ್ಕವೇ ಇಲ್ಲವೇನೋ ಎನ್ನುವಂತೆ ವರ್ತಿಸುತ್ತಿದ್ದು, ಉತ್ತಮ ಜೀವನ ಒಂದು ಕಲೆ ಎನ್ನುವದನ್ನು ಅವರು ಮರೆತಂತಿತ್ತು.

      ಸಂದರ್ಭ ಹೀಗಿರುವಾಗಲೆ ಇದನ್ನು ಕಂಡ ನಾಗೇಂದ್ರಪ್ಪನವರು ಅವರಿಬ್ಬರ ಮನಸ್ಸಿಗೆ ನೋವಾಗಬಾರದೆಂದು ಭಾವಿಸಿ ‘ನೀವು ಸುಖವಾಗಿರಿ’ ಎಂದು ಹರಸಿ ತಾವು ನಿರ್ಮಿಸಿದ ಮನೆಯನ್ನು ಮಗನಿಗೆ ವಹಿಸಿಕೊಟ್ಟು ಆ ಮನೆಯಿಂದ ಹೊರ ಬಂದರು. ಇಷ್ಟಾದರೂ ಬೀಗರ ಮನೆಯವರು ಕೂಗಳತೆಯ ಬಡಾವಣೆಯಲ್ಲಿದ್ದರೂ ಹೀಗೇಕೆ ? ಎಂದು ವಿಚಾರಿಸುವುದಾಗಲಿ ಅಥವಾ ಒಂದು ದಿನವಾದರು ಮನೆಗೆ ಬಂದು ಹೋಗುವ ಸೌಜನ್ಯವನ್ನೂ ತೊರಿದವರಲ್ಲ. ಹೀಗೆ ನಾಲ್ಕೈದು ವರ್ಷಗಳು ಕಳೆದಿತ್ತು. ಆನಂದ ಮತ್ತು ಸರೋಜ ದಂಪತಿಗಳಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳು. ಆನಂದನ ತಂದೆ ತಾಯಿ ಇದನ್ನು ತಿಳಿದು “ಈ ಮಕ್ಕಳು ತಣ್ಣಗೆ ನಮ್ಮ ಮನೆ ಬೆಳಗುವ ಪುಟ್ಟ ಬೆಳಕಿನ ಕುಡಿಯಾಗಲಿ” ಎಂದು ಮನಸಾರೆ ಹರಸಿದರು.

      ಕಾಲಚಕ್ರ ಉರುಳಿದಂತೆ ಆನಂದ ಚಿಂತಾಮಗ್ನನಾಗಿದ್ದ. ಅವನ ಕಣ್ಣು ಮತ್ತು ದೇಹ ಮುರುಕು ಗೋಡೆಯ ಬಿರುಕಿನಂತಾಗಿತ್ತು. ಆರ್ಥಿಕ ಸಂಕಷ್ಟದ ಪರಿಸ್ಥಿತಿಯಿಂದಾಗಿ ಮನಸ್ಸು ಬೆಚ್ಚಿ ನಡುಗಿತ್ತು. ಒಂದು ದಿನ ಆನಂದ ನೊಂದು ಬೆಂದು ಪಶ್ಚಾತ್ತಾಪಪಟ್ಟು “ಪೋಷಕರ ಕಣ್ಗಾವಲು ಮತ್ತು ಬೆಂಬಲವಿದ್ದರೆ ಆ ಮನೆಗೆ ಶ್ರೇಯಸ್ಸು, ಪ್ರೀತಿ ತ್ಯಾಗವೇ ನೈಜ ಸಂಸಾರದ ಲಕ್ಷಣ, ಸಂಸಾರದಲ್ಲಿ ಶಾಂತಿ ಇದ್ದರೆ ಮಾತ್ರ ಸುಖೀ ಜೀವನ, ಸುಧಾರಣೆಯ ಮಾರ್ಗ, ಕೂಡಿ ಬಾಳಿದರೆ ಸ್ವರ್ಗ”- ಎನ್ನುವ ಮಹನೀಯರ ಮಾತುಗಳನ್ನು ನೆನಪುಮಾಡಿಕೊಂಡು ತೆರೆದ ಹಾಗೂ ಶುದ್ಧ ಮನಸ್ಸಿನ ಚಿಂತನೆಯೊಂದಿಗೆ ಹೊಸ ಬಾಳಿಗೆ ದಾರಿ ಹುಡುಕಿಕೊಂಡಿದ್ದ.

      ಈ ಹೊತ್ತಿಗಾಗಲೇ ತಂದೆ ತಾಯಿಯರ ದಿವ್ಯ ಸ್ಥಾನದ ಅರಿವು ಆನಂದನ ತಲೆಯಲ್ಲಿ ಹೊಕ್ಕಿತ್ತು. ಮಗನ ಪರಿವರ್ತನೆಯನ್ನು ಕಂಡು ನಾಗೇಂದ್ರಪ್ಪನವರ ಕಣ್ಣಲ್ಲಿ ಸಂತೋಷದ ಬೆಳಕು ಮಿಂಚಿತು ಹಾಗೂ ಅವನ ಬದುಕಿನ ಘಟನೆ ಮತ್ತು ವರ್ತಮಾನದ ಸ್ಥಿತಿಗೆ ಹೃದಯ ಮಿಡಿದಿತ್ತು.

 

Recent Articles

spot_img

Related Stories

Share via
Copy link
Powered by Social Snap