ಅವ್ವನ ಅರಸುತಾ..!

1
80
ನಡುಹಗಲ
ಪ್ರಖರ ಬೆಳಕಲಿ
ಲಾಂದ್ರವನ್ಹಿಡಿದು
ಹುಡುಕ ಹೊರಟೆ
ಹಳ್ಳಿಯೊಂದರಲಿ ಅವ್ವನ!
ಎದುರುಗೊಂಡ ಮನುಷ್ಯನ
ಅನುಮಾನಕೆ ನಗರವಾಸಿ ಎಂದೆ
ಕಾರಣ ಅವ್ವನ ಹುಡುಕುತಿಹೆ
ನೋಡಿದಿರಾ ಸ್ವಾಮಿ ಎಂದೆ?
ಬಹಳ ದಿನಗಳೇ ಆಯ್ತು
ನನ್ನವ್ವನ ಕಂಡು
ದಿನದಿಂದ ದಿನಕೆ
ಅವಳ ಕಾಣುವ ಭರವಸೆ 
ಬರಿ ಭ್ರಮೆಯಾಗುತ್ತಿದೆ!
ನನ್ನವ್ವಳೆಂದರೆ…!
ಅಳುವ ಮಗನ ದನಿ ಕೇಳಿ
ಓಡಿ,ಎದೆಗಪ್ಪಿ ಹಾಲುಣಿಸಿ
ಜೋಗುಳವಾಡುತ್ತಿದ್ದಳು
ಎದ್ದಮಗನ ಮೊಗವ ಕಂಡು
ಲೋಚಲೋಚ ಮುತ್ತನಿಟ್ಟು
ಆಸರವಾಗದಿರಲೆಂದು 
ಲಟಿಗೆ ಮುರಿಯಿತ್ತಿದ್ದಳು
ನಖಶಿಖಾಂತ ಎಣ್ಣೆಹಚ್ಚಿ
ಸುಡುನೀರಲಿ ಮೀಯಿಸಿ
ಲೋಬಾನ ಹಾಕಿ,ಕಾಡಿಗೆ ಹಚ್ಚಿ
ಬಿಸಿಲಿಗೆ ಮೈಯನೊಡ್ಡುತ್ತಿದ್ದಳು
ಇರುಳ ಬೆಳಕಲಿ
ಚೆಂದಮಾಮನ ತೋರಿಸಿ
ಚೆಂದಕತೆಗಳ್ಹೇಳುತ
ನಾಲ್ಕು ತುತ್ತು ಹೆಚ್ಚು ಉಣಿಸುತ್ತಿದ್ದಳು
ಎಷ್ಟುದೂರ ಇರಲಿ ಗಮ್ಯ
ಸೊಂಟದಲ್ಲೇ ಹೊತ್ತು ನಡೆಯುತ್ತಿದ್ದಳು
ಬಿಸಿಲು ಬೀಳದಿರಲೆಂದು
ಸೀರೆ ಸೆರಗ ಹೊಚ್ಚುತ್ತಿದ್ದಳು
ಅವಳು ದುಡಿವ ಜಾಗಕೆ
ಮಗನ ಹೊತ್ತು ನಡೆಯುತ್ತಿದ್ದಳು
ಕ್ಷಣಹೊತ್ತು ಅವನ
ನೋಡದೆ ಇರಲೊಲ್ಲಳು
ಹೀಗೆ ಹೇಳುತಿದ್ದೆ
ಅವ್ವನ ಚಹರೆ 
ಮಧ್ಯೆ ನನ್ನ ಮಾತು
ತಡೆದು ನುಡಿದ ಅವನು ಅಲ್ಲೆ
ಇನ್ನೂ ಹುಡುಕಬೇಡ;
ಸಿಗಳು ನಿನ್ನ ಅವ್ವ!
ಅವಳು ಮಮ್ಮಿಯಾಗಿ
ಬಹಳ ದಿನಗಳಾಯ್ತು
ಅವನ ಮಾತು ಕೇಳಿ
ಒಡನೆ ಹಾರಿತು ಲಾಂದ್ರದ ಬೆಳಕು
ಸೂರ್ಯ ಸರಿದ ಮೋಡದ ಮರೆಗೆ
ಮನವು ಸರಿಯಿತು ಮೌನಕೆ
ಮರಳಿ ಹೆಜ್ಜೆ ಹಾಕಿದೆ ನಗರಕೆ
-ರುದ್ರಸ್ವಾಮಿ ಹರ್ತಿಕೋಟೆ.

1 COMMENT

LEAVE A REPLY

Please enter your comment!
Please enter your name here