ಸಮಾನ ಲಿಂಗಾನುಪಾತಕ್ಕೆ ಶ್ರಮಿಸಿ: ಹಂದ್ರಾಳ್

ಬಳ್ಳಾರಿ

        ಮಹಿಳೆಯರ(ಹೆಣ್ಮಕ್ಕಳ) ಸಂಖ್ಯೆ ದಿನೇ ದಿನೇ ತೀರಾ ಕಡಿಮೆಯಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಮಹಿಳೆಯರ ಲಿಂಗಾನುಪಾತ ಹೆಚ್ಚಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಸಮಾನ ಲಿಂಗಾನುಪಾತಕ್ಕೆ ಸರ್ವರು ಶ್ರಮಿಸಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಬಿ.ಹಂದ್ರಾಳ್ ಅವರು ಹೇಳಿದರು.

        ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ತಂತ್ರಗಳ ವಿಧಾನಗಳ(ಲಿಂಗ ಆಯ್ಕೆ ನಿಷೇಧ) ಕಾಯ್ದೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

        ಭ್ರೂಣಲಿಂಗ ಪತ್ತೆ ಕಾನೂನಿಗೆ ವಿರುದ್ಧ ಹಾಗೂ ಶಿಕ್ಷಾರ್ಹ ಅಪರಾಧವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪಿಸಿಪಿಎನ್‍ಡಿಟಿ ಕಾಯ್ದೆ ಜಾರಿಗೆ ತರಲಾಗಿದೆ. ಇದಕ್ಕೆ ಸಮುದಾಯದ ಸಹಕಾರವು ಅಗತ್ಯವಾಗಿದೆ. ಸಮುದಾಯದ ಎಲ್ಲರು ಕೈ ಜೋಡಿಸಿ ಇದಕ್ಕೆ ಕಡಿವಾಣ ಹಾಕಬೇಕು ಎಂದರು.

        ಸಮುದಾಯದ ಹತ್ತಿರದವರಾದ ತಳಮಟ್ಟದ ಕಾರ್ಯಕರ್ತರಾದ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಎನ್‍ಜಿಒಗಳು ಪಿಸಿಪಿಎನ್‍ಡಿಟಿ ಕಾಯ್ದೆ ಕುರಿತು ಹಾಗೂ ಹೆಣ್ಣು-ಗಂಡು ಮಕ್ಕಳು ಸಮಾನ ಎಂಬುದರ ಕುರಿತು ತಿಳಿಸಿಕೊಡಬೇಕು ಎಂದರು.

       ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಾನಾ ಕಾರ್ಯಕ್ರಮಗಳನ್ನು ಹಮ್ಮಿುಕೊಂಡಿವೆ ಎಂದು ವಿವರಿಸಿದ ಅವರು, ಸ್ಕ್ಯಾನಿಂಗ್ ಸೆಂಟರ್‍ಗಳು ಒಳ್ಳೆಯ ಉದ್ದೇಶಕ್ಕಾಗಿ ಇರುವಂತವುಗಳಾಗಿದ್ದು ಅವುಗಳನ್ನು ದುರುಪಯೋಗಪಡಿಸಿಕೊಳ್ಳದಿರಿ. ಹಾಗೆಯೇ ಮಾಡಿದರೇ ಪಿಸಿಪಿಎನ್‍ಡಿಟಿ ಅಡಿ ಕ್ರಮಕೈಗೊಳ್ಳಲಾಗುತ್ತದೆ ಎಂದರು.

        ಮಹಿಳೆ-ಪುರುಷರ ಅಸಮತೋಲನದಿಂದ ಅನೇಕ ಸಮಸ್ಯೆಗಳು ಉಂಟಾಗಲಿವೆ ಎಂಬುದನ್ನು ತಮ್ಮ ಮಾತುಗಳಲ್ಲಿ ವಿವರಿಸಿದ ಅವರು, ಅದಕ್ಕೆ ಅವಕಾಶ ಮಾಡಿಕೊಡದೇ ಸಮತೋಲನದಿಂದ ಇರುವ ನಿಟ್ಟಿನಲ್ಲಿ ಎಲ್ಲರು ಶ್ರಮಿಸಬೇಕು ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ ಅವರು ಮಾತನಾಡಿ, ಗಂಡು-ಹೆಣ್ಣು ಎರಡು ಸಮಾನ ಎಂಬುದರ ಕುರಿತು ಅರಿವು ಮೂಡಿಸಬೇಕಿದೆ. ದೇವರು ಯಾವುದೇ ಮಗುವನ್ನು ನೀಡಿದರೂ ಕೂಡ ಅದನ್ನು ಪಡೆದುಕೊಳ್ಳುವುದು ನಮ್ಮ ಕರ್ತವ್ಯ. ನಿಸರ್ಗವನ್ನು ಅಲುಗಾಡಿಸುವ ಮತ್ತು ಅದಕ್ಕೆ ವಿರುದ್ಧವಾಗಿ ಹೋಗುವ ಕೆಲಸ ನಾವು ಮಾಡಬಾರದು ಎಂದರು.

        ಭ್ರೂಣಲಿಂಗ ಪತ್ತೆ ಮಾಡಿ ಅದು ಹೆಣ್ಣುಮಗು ಅಂತ ತಿಳಿದು ಅದನ್ನು ತೆಗೆಸಿಹಾಕಿದರೇ ಆ ಮಹಿಳೆಗೆ ತನ್ನ ಇಡೀ ಜೀವನಪೂರ್ತಿ ಕಾಡುತ್ತಿರುತ್ತದೆ. ಈ ರೀತಿಯ ಪ್ರಕರಣಗಳನ್ನು ನಾನು ಅನೇಕ ನೋಡಿದ್ದೇನೆ ಎಂದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗೇಶ ಬಿಲ್ವಾ ಅವರು ಮಾತನಾಡಿ, ವರದಕ್ಷಿಣೆ ಎಂಬ ಮಹಾಪಿಡುಗಿಗೆ ಹೆದರಿ ಹೆಣ್ಮಕ್ಕಳನ್ನು ಪಡೆಯುವುದರಿಂದ ಹಿಂಜರಿಯಲಾಗುತ್ತಿದೆ. ಮುಂದೊಂದು ದಿನ ಇದೇ ಪುನರಾವರ್ತನೆಯಾದರೇ ವಧುದಕ್ಷಿಣೆ ನೀಡಿ ಮದುವೆ ಮಾಡಿಕೊಳ್ಳಬೇಕಾಗುತ್ತದೆ ಎಂದರು.

       ಹೆಣ್ಮಕ್ಕಳ ಸಬಲೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಾನಾ ಯೋಜನೆಗಳನ್ನು ಜಾರಿಗೆ ತಂದಿವೆ ಹಾಗೂ ಭ್ರೂಣಹತ್ಯೆ ತಡೆಯುವ ನಿಟ್ಟಿನಲ್ಲಿ ಅನೇಕ ಕಾಯ್ದೆ ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದರು.ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ವಿಜಯಲಕ್ಷ್ಮೀ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪಿಸಿಪಿಎನ್‍ಡಿಟಿ ಕಾಯ್ದೆ ಜಾರಿಗೆ ಬಂದು 16 ವರ್ಷಗಳಾದರೂ ಭ್ರೂಣಲಿಂಗ ಪತ್ತೆ ಮಾಡುವಂತ ಪ್ರಕರಣಗಳು ನಡೆಯುತ್ತಿವೆ. ಈ ಕಾನೂನು ಇದ್ದರೂ ನಿಯಂತ್ರಣಕ್ಕೆ ತರುವುದಕ್ಕೆ ಆಗ್ತಾ ಇಲ್ಲ ಎಂದರು.

        ಸಮುದಾಯದ ಎಲ್ಲರು ಕೈಜೋಡಿಸಿ ಇದಕ್ಕೆ ಕಡಿವಾಣ ಹಾಕಬೇಕು ಎಂಬ ಸದುದ್ದೇಶದಿಂದ ಈ ಕಾರ್ಯಾಗಾರ ಏರ್ಪಡಿಸಲಾಗಿದ್ದು, ಇದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದರು.ಕೆಲ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಭ್ರೂಣಲಿಂಗ ಪತ್ತೆ ಮಾಡುವುದು ಅಪರಾಧವೆಂದು ಪರಿಗಣಿಸಲಾಗುತ್ತದೆ. ಮೊದಲ ಅಪರಾಧಕ್ಕೆ ರೂ.50 ಸಾವಿರ ದಂಡ ಮತ್ತು 3 ವರ್ಷ ಜೈಲು. ಮತ್ತೇ ಎರಡನೇ ಬಾರಿ ಈ ಕಾಯ್ದೆ ಉಲ್ಲಂಘಿಸಿದವರಿಗೆ ರೂ.1ಲಕ್ಷ ದಂಡ ಮತ್ತು 5 ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತದೆ. ಮಹಿಳೆಯರು,ಗಂಡ,ಅಂತ್ತೆ,ಮಾವ ಹಾಗೂ ಇತರೆ ಸಂಬಂಧಿಕರು ಭ್ರೂಣಲಿಂಗ ಪತ್ತೆ ಕ್ರಿಯೆಗೆ ಪ್ರೋತ್ಸಾಹಿಸಿದರೆ ಅಂತವರು ಶಿಕ್ಷೆಗೆ ಗುರಿಯಾಗುತ್ತಾರೆ ಎಂದರು.

         ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವರಾಜ ಹೆಡೆ ಅವರು ಅಧ್ಯಕ್ಷತೆ ವಹಿಸಿದ್ದರು.ಪಿಸಿ ಮತ್ತು ಪಿಎನ್‍ಡಿಟಿ ಕಾಯ್ದೆ ಸಮಿತಿ ಸದಸ್ಯ ಹಾಗೂ ವಕೀಲರಾದ ಪಾಟೀಲ್ ಸಿದ್ದಾರೆಡ್ಡಿ, ಎಫ್‍ಪಿಎಐ ಕಾರ್ಯದರ್ಶಿ ಪಿ.ಜಿ.ವಿಠ್ಠಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಸ್ತ್ರೀರೋಗ ತಜ್ಞರಾದ ಡಾ.ಪ್ರಶಾಂತ ಮತ್ತಿತರರು ಇದ್ದರು.

          ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಅವರು ನಿರೂಪಿಸಿದರು. ಕೆ.ಎಚ್.ಗೋಪಾಲ್ ಪ್ರಾರ್ಥಿಸಿದರು. ಬಂಡೆಪ್ಪ ಟೊಣ್ಣಿ ಅವರು ವಂದಿಸಿದರು.ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಪಿಸಿ ಮತ್ತು ಪಿಎನ್‍ಡಿಟಿ ಕಾಯ್ದೆ ಬಗ್ಗೆ ಕಾನೂನು ಸಲಹೆ ಹಾಗೂ ಉಪನ್ಯಾಸ ನಡೆಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap