ವಿಶ್ವ ಮಣ್ಣು ದಿನಾಚರಣೆ

0
17

ಹಾವೇರಿ

       ಮಣ್ಣು ತಾಯಿಯ ಸಮಾನ, ಮಣ್ಣಿನ ಸಂರಕ್ಷಣೆ ನಮ್ಮೇಲ್ಲರ ಆದ್ಯ ಕರ್ತವ್ಯವಾಗಿದೆ. ಸಧೃಡ ಭೂಮಿ ಇದ್ದರೆ ಸಧೃಡ ಬೆಳೆ ಬೆಳೆಯಲು ಸಾಧ್ಯ ಎಂದು ಹಾವೇರಿ ವಿದಾನಸಭಾ ಕ್ಷೇತ್ರ ಶಾಸಕರಾದ ನೆಹರು ಚ ಓಲೇಕಾರ ಅವರು ಹೇಳಿದರು.

       ಬುಧವಾರ ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲೂಕು ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

       ಅತೀಯಾದ ರಸಗೊಬ್ಬರ ಬಳಕೆಯಿಂದ ಮಣ್ಣು ನಿರ್ಜಿವವಾಗುತ್ತದೆ. ನಾವು ಸತ್ತರೆ ಮಣ್ಣಿಗೆ ಹೋಗುತ್ತೇವೆ. ಆದರೆ ಮಣ್ಣು ಸತ್ತರೆ ಆದರ ಗತಿ ಏನು? ಹಾಗಾಗಿ ನಾವು ಮಣ್ಣನ್ನು ಬರಡು ಮಾಡದೆ ಜೀವಂತವಾಗಿರಿಸುವ ನಿಟ್ಟಿನಲ್ಲಿ ಸಾವಯವ ಗೊಬ್ಬರ ಹಾಗೂ ಸಾವಯವ ರಸಾಯನಗಳನ್ನು ಬಳಕೆಮಾಡಬೇಕು ಎಂದು ಹೇಳಿದರು

         ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಗೌರವ ಪ್ರಾಧ್ಯಾಪಕ ಡಾ.ಎಲ್ ಮಂಜುನಾಥ ಅವರು ಮಾತನಾಡಿ, ಥೈಲಾಂಡ್ ರಾಜನ ಹುಟ್ಟು ಹಬ್ಬದ ಅಂಗವಾಗಿ 1914 ರಿಂದ ಪ್ರತಿ ವರ್ಷ ಡಿಸೆಂಬರ್ 5 ನ್ನು ವಿಶ್ವ ಮಣ್ಣು ದಿನಚಾರಣೆಯನ್ನಾಗಿ ಆಚರಿಸಲಾಗುತ್ತದೆ. ಕೇವಲ ಒಂದು ಇಂಚು ಮಣ್ಣು ತಯಾರಾಗಲು ಸಾವಿರಾರು ವರ್ಷಗಳು ಬೇಕು ಆದರೆ ನಾವೇನಾದರೂ ನಿರ್ಲಕ್ಷ್ಯ ವಹಿಸಿದರೆ, ನಾಶವಾಗಲು ಕೆಲವೇ ದಿನಗಳು ಸಾಕಗುತ್ತೆ. ಒಂದು ಕ್ಯೂಬಿಕ್ ಸೆಂ.ಮಿ ಮಣ್ಣಿನಲ್ಲಿ ಮಿಲಿಯನ್ ಸಂಖ್ಯೆಯಲ್ಲಿ ಸೂಕ್ಮ ಜೀವಿಗಳು ಇರುತ್ತವೆ. ಹಾಗಾಗಿ ಮಣ್ಣು ಉಸಿರಾಡುತ್ತೆ ಹಾಗೂ ಜೀವಂತವಾಗಿದೆ. ಶೇ.95 ರಷ್ಟು ಆಹಾರ ಉತ್ಪಾದನೆ ಮಣ್ಣಿನಿಂದಲೇ ಬೆಳೆಯುತ್ತದೆ ಹಾಗಾಗಿ ಮಣ್ಣಿನ ಸಂರಕ್ಷಣೆಯನ್ನು ಪ್ರತಿಯೊಬ್ಬರು ಮಾಡಬೇಕು ಎಂದು ಹೇಳಿದರು.

          ಪ್ರಗತಿಪರ ರೈತ ನಿಜಲಿಂಗಪ್ಪ ಬಸೇಗಣ್ಣಿ ಮಾತನಾಡಿ, ಹಸಿರು ಕ್ರಾಂತಿಯ ಪರಿಣಾಮದಿಂದ ರಸಗೊಬ್ಬರಗಳನ್ನು ಯಥೇಚ್ಛವಾಗಿ ಉಪಯೋಗಿಸುವುದರಿಂದ ಮಣ್ಣು ಬರಡಾಗುತ್ತಿದ್ದು, ಮಣ್ಣಿನ ಫಲವತ್ತತೆ ಹಾಳುಗುತ್ತಿದೆ. ಆದ್ದರಿಂದ ಮಣ್ಣನ್ನು ಜೀವಂತವಾಗಿಸಲು ಮಣ್ಣು ಉಸಿರಾಡುವಂತೆ ಮಾಡಲು ಜೈವಿಕ ಗೊಬ್ಬರ ಹಾಗೂ ಜೀವಾಮೃತ ಬಳಕೆ ಹೆಚ್ಚಿಗೆ ಮಾಡಬೇಕು. ಸಾವಯವ ಗೊಬ್ಬರಗಳನ್ನು ಸ್ವತ: ರೈತರೇ ಆಸಕ್ತಿಯಿಂದ ತಯಾರಿಸಿಕೊಳ್ಳಬೇಕು ಹಾಗೂ ಸಾವಯವ ವಿಧಾನದಿಂದ ಬೆಳೆಗೆ ಹೆಚ್ಚಿನ ಬೇಡಿಕೆ ಇದೆ ಎಂದು ಹೇಳಿದರು.
ಸಾವಯವ ಪ್ರಾಂತೀಯ ಒಕ್ಕೂಟದ ಉಪಾಧ್ಯಕ್ಷ ಚಂದ್ರಕಾಂತ ಸಂಗೂರು, ತಾಲ್ಲೂಕು ಕೃಷಿಕ ಸಮಾಜ ಪ್ರದಾನ ಕಾರ್ಯದರ್ಶಿ ಬಸವರಾಜ ಹಾದಿಮನಿ, ಬಸವರಾಜ ಡೊಂಕಣ್ಣನವರ, ಶ್ರೀಮತಿ ಎಸ್ ಎಸ್ ಕರ್ಜಗಿ ಅವರು ಮಣ್ಣಿನ ಸಂರಕ್ಷಣೆ ಹಾಗೂ ಮಣ್ಣಿನ ಫಲವತ್ತತೆ ಕುರಿತು ಮಾತನಾಡಿದರು.

             ಹಾವೇರಿ ತಾಲ್ಲೂಕ ಸಹಾಯಕ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಡಿ ಕೊರಚರ ಅವರು ಮಾತನಾಡಿ, ಮಣ್ಣ್ಣು ಒಂದು ಜೀವಂತ ನೈಸರ್ಗಿಕ ಸಂಪತ್ತು. ಈ ಮಣ್ಣಿನಿಂದಲೇ ಸಕಲ ಜೀವರಾಶಿಗಳು ಬದುಕುತ್ತಿವೆ. ಅದನ್ನು ಸುಸ್ಥಿತಿಯಲ್ಲಿ ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ನಾವೆಲ್ಲರೂ ಹಿಂದೆ ಬದುಗಳನ್ನು ನಿರ್ಮಿಸಿಕೊಂಡು ಮಣ್ಣಿನ ಸಂರಕ್ಷಣೆ ಮಾಡುತ್ತಿದ್ದೇವು. ಆದರೆ ಈಗ ಹೆಚ್ಚಿನ ಇಳುವರಿ ಪಡೆಯಲು ಎಲ್ಲಾ ಬದುಗಳನ್ನು ಉಳಿಸದೇ ಸಾಗು ಮಾಡುತ್ತಿದ್ದು ಇದರ ಪರಿಣಾಮ ಮಣ್ಣು ಸವಕಳಿಯಿಂದ ಸಾಕಷ್ಟು ಹಾನಿಯಾಗುತ್ತದೆ. ಅಲ್ಲದೇ ಒಂದೇ ತರಹದ ಬೆಳೆ ಬೆಳೆಯುವದರಿಂದ ಮಣ್ಣಿನ ಫಲವತ್ತಗೆ ಕುತ್ತು ಬರುತ್ತಿದ್ದು ಸಮಗ್ರ ಬೆಳೆ ಬೆಳೆದು ಮಣ್ಣಿಗೆ ಸಾಕಷ್ಟು ಕೊಟ್ಟಿಗೆ ಗೊಬ್ಬರ ನೀಡಿದ್ದಲ್ಲಿ ಒಳ್ಳೆಯ ಇಳುವರಿ ಪಡೆಯಬಹುದು ಎಂದು ಹೇಳಿದರು.

            ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಜು ಕಲಕೋಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ಸತೀಶ ಸಂದಿಮನಿ, ಕೃಷಿಕ ಸಮಾಜದ ಅಧ್ಯಕ್ಷ ಶಿವಪುತ್ರಪ್ಪ ನೀ ಶಿವಣ್ಣನವರ, ತಾಲ್ಲೂಕು ಕೃಷಿಕ ಸಮಾಜದ ನಿರ್ದೇಶಕರುಗಳಾದ ಮಲ್ಲೇಶಪ್ಪ ಮತ್ತಿಹಳ್ಳಿ, ನಾಗಪ್ಪ ವ್ಹಿ ವಿಭೂತಿ, ಪ್ರಕಾಶ ಹಂದ್ರಾಳ, ಫಕ್ಕೀರಪ್ಪ ಜಂಗಣ್ಣನವರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಅನ್ನಪೂರ್ಣ ನಾ ಮುದುಕಮ್ಮನವರ, ಕೃಷಿ ಅಧಿಕಾರಿ ಕೊಟ್ರೇಶ ಗೆಜ್ಲಿ, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ವಿಶ್ವನಾಥ ರೆಡ್ಡೇರ, ಪುಟ್ಟರಾಜು ಜಿ ಹಾವನೂರು, ರೈತ ಸಂಘದ ಪದಾಧಿಕಾರಿಗಳು, ರೈತರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಲಾಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here