ಅಂಬೇಡ್ಕರ್ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಎಷ್ಟು ಸರಿ?

0
11

ಬೆಂಗಳೂರು

      ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ರಾಜಕಾರಣಿಗಳ ನಿಲುವನ್ನು ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅವರು ತೀವ್ರವಾಗಿ ಖಂಡಿಸಿದ್ದಾರೆ.

     ಅಂಬೇಡ್ಕರ್ ಅವರ ಸಾಮಾಜಿಕ ಪ್ರಜಾಪ್ರಭುತ್ವದ ಲಕ್ಷಣಗಳಾದ ಸ್ವಾತಂತ್ರ್ಯ, ಸಹಿಷ್ಣುತೆ ಹಾಗೂ ಸಹೋದರತ್ವ ರೂಢಿಸಿಕೊಂಡು ಗೌರವಿಸುವುದನ್ನು ಬಿಟ್ಟು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ

      ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸಂಸ್ಕೃತ ವಿವಿ ಸಹಯೋಗದೊಂದಿಗೆ ಎರ್ಪಡಿಸಿದ್ದ ಎರಡು ದಿನಗಳ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಗಳ ಹಾಗೂ ಇತರ ಮಹಾಪುರಷರ ತತ್ವಗಳ ತೌಲನಿಕ ಅಧ್ಯಯನ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ತತ್ವ ಸಿದ್ದಾಂತ ಇಲ್ಲದವರು ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.

        ಸೈದ್ಧಾಂತಿಕ ರಹಿತ ರಾಜಕೀಯ ಪಕ್ಷಗಳ ಪಾಲುದಾರರಾಗುವ ಬದಲು, ಸೈದ್ಧಾಂತಿಕ ವಿಚಾರಗಳನ್ನು ಸೃಜನಾತ್ಮಕ ರೀತಿಯಲ್ಲು ಜನಮನಕ್ಕೆ ಮುಟ್ಟಿಸಬೇಕು. ಸೈದ್ಧಾಂತಿಕ ವಿರೋಧದ ಪಕ್ಷಗಳ ವಿರುದ್ಧ ಮಾತನಾಡುತ್ತಾ ಕಾಲವ್ಯಯ ಮಾಡುವುದು ವ್ಯರ್ಥ ರಾಜಕಾರಣವಾಗುತ್ತದೆ. ಜನ ನಮಗೆ ಮುಖ್ಯವಾಗಿದ್ದು, ಅವರೇ ನಮ್ಮ ಆದ್ಯತೆ. ಆನರಲ್ಲಿ ಸಹಿಷ್ಣುತೆ, ಸಮಾನತೆ ರೂಪಿಸುವ ಪ್ರಕ್ರಿಯೆ ಆಗಬೇಕು ಎಂದು ತಿಳಿಸಿದರು.

ವಿಭಿನ್ನ ನೆಲೆ

        ಅಂಬೇಡ್ಕರ್ ಅವರು ಯಾವುದೇ ನಿರ್ದಿಷ್ಟ ಸಮುದಾಯ ಅಥವಾ ವರ್ಗಕ್ಕೆ ಸೇರದ ಪ್ರತಿಭಾನ್ವಿತ ದೇಶಪ್ರೇಮಿ. ಅವರು ಸಾರ್ವಜನಿಕ ಆಸ್ತಿ, ಅಸ್ಪೃಶ್ಯತೆಯ ನೋವು ಅನುಭವಿಸಿ ಅದನ್ನೇ ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡ ಅಂಬೇಡ್ಕರ್ ಅವರನ್ನು ಒಬ್ಬ ಸುಶಿಕ್ಷಿತ, ಹೋರಾಟಗಾರ, ಪತ್ರಕರ್ತ, ವಿಮೋಚನಾವಾದಿ, ಸಂವಿಧಾನ ರಚನೆಕಾರ ಈ ಎಲ್ಲಾ ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು.

        ಅಂಬೇಡ್ಕರ್ ಅವರಿಗೆ ಮಾಕ್ರ್ಸ್ ಅಥವಾ ಕಮ್ಯುನಿಸ್ಟ್ ರ ನಡುವಳಿಕೆ ಬಗ್ಗೆ ವಿರೋಧ ಇತ್ತೇ, ಹೊರತು ಅವರ ಆರ್ಥಿಕ ನೀತಿಗಳ ಬಗ್ಗೆ ಇರಲಿಲ್ಲ. ಅದೇ ರೀತಿ, ಗಾಂಧಿಯವರ ಬಗ್ಗೆಯೂ ವೈಯುಕ್ತಿಕ ದ್ವೇಷ ಅಂಬೇಡ್ಕರ್ ಅವರಿಗೆ ಇರಲಿಲ್ಲ ಎಂದ ಅವರು, ಯಾರೇ ಇರಲಿ ಸೃಜನಶೀಲ ಸಿದ್ದಾಂತ ಬಿಟ್ಟು ಹೊರಬಾರದು ಎಂದು ಬರಗೂರು ಹೇಳಿದರು.

ವ್ಯಕ್ತಿತ್ವ, ಬದುಕು

       ರಾಜಕಾರಣದಲ್ಲಿ ಬೌದ್ಧಿಕ ಕೊರತೆ ಮಾತ್ರವಲ್ಲದೆ, ಭಾಷಾ ಭ್ರಷ್ಟಾಚಾರತೆಯೂ ಹೆಚ್ಚಾಗುತ್ತಿದೆ.ಟೀಕೆಗಳಿಗೆ ರಾಜಕಾರಣಿ ಸೀಮಿತವಾದರೆ, ಮುಂದಿನ ದಿನಗಳಲ್ಲಿ ಅವರಿಂದ ಈ ಸಮಾಜ ಏನನ್ನೂ ನಿರೀಕ್ಷೆ ಮಾಡಬೇಕು ಎಂದು ತಿಳಿಸಿದರು.

         ರಾಜ್ಯ ಎನ್‍ಎಸ್‍ಎಸ್ ಅಧಿಕಾರಿ .ಗುಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಭಾರತ ಕಂಡ ಅಪರೂಪದ ವ್ಯಕ್ತಿಯಾಗಿದ್ದ ಡಾ.ಅಂಬೇಡ್ಕರ್ ಆಗಿನ ಸಂದರ್ಭದಲ್ಲೂ ಸಾಕಷ್ಟು ಅಧ್ಯಯನ ಮಾಡಿ ಮೇಲ್ಮಟ್ಟಕ್ಕೆ ಬಂದವರಾಗಿದ್ದು ಅವರ ವ್ಯಕ್ತಿತ್ವ, ಬದುಕು, ಬೆಳವಣಿಗೆ ಯುವ ಪೀಳಿಗೆಗೆ ಮಾದರಿ ಎಂದು ಹೇಳಿದರು.

          ಈ ಸಂದರ್ಭದಲ್ಲಿ ಸಂಸ್ಕೃತ ವಿವಿ ಕುಲಪತಿ .ಪದ್ಮಾಶೇಖರ್, ಕುಲಸಚಿವೆ ಎಂ.ಶಿಲ್ಪಾ, ಡಾ.ಸಂತೋಷ್ ಸು.ಹನಗಲ್ಲ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here