ಮೇಕೆದಾಟು ಯೋಜನೆಯಿಂದ ಜಿಲ್ಲೆಗೆ ವರದಾನ

0
6

ತುಮಕೂರು:

        ಹೇಮಾವತಿ ನೀರನ್ನೇ ನಂಬಿಕೊಂಡರೆ ಸಾಕಾಗದು. ಇಲ್ಲಿನ ಸಾಧ್ಯಾಸಾಧ್ಯತೆಗಳ ಮೇಲೆ ಹೇಮಾವತಿ ನೀರನ್ನು ಅವಲಂಬಿಸಬೇಕು. ಇದಕ್ಕೆ ಪರ್ಯಾಯವಾಗಿ ಮೇಕೆ ದಾಟು ಯೋಜನೆ, ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಹೆಚ್ಚು ಗಮನ ಹರಿಸಿದರೆ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

         ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲ ಯೋಜನೆಯ ಪ್ರಕಾರ ಹೇಮಾವತಿ ನಾಲಾ ವಲಯಕ್ಕೆ 31 ಟಿಎಂಸಿ ನೀರು ಹಂಚಿಕೆಯಾಗಿತ್ತು. ಆನಂತರ ವಿಭಜನೆಯಾಗಿ 25.85ರಷ್ಟು ನಿಗದಿಯಾಗಿದೆ. ಇಷ್ಟು ನೀರು ತರಲು ಹರಸಾಹಸ ಪಡಬೇಕು. ಮುಂದಿನ ದಿನಗಳಲ್ಲಿ ಮೇಕೆದಾಟು ಯೋಜನೆ ಪೂರ್ಣಗೊಂಡರೆ 31 ಟಿಎಂಸಿ ನೀರನ್ನು ತುಮಕೂರು ನಾಲಾ ವಲಯಕ್ಕೆ ಬಳಸಿಕೊಳ್ಳುವ ಎಲ್ಲ ಅವಕಾಶಗಳಿವೆ ಎಂದರು.

        9600 ಕೋಟಿ ರೂ.ಗಳ ವೆಚ್ಚದಲ್ಲಿ ಮೇಕೆದಾಟು ಯೋಜನೆ ಸಿದ್ಧವಾಗುತ್ತಿದೆ. ಇದು ಪೂರ್ಣಗೊಂಡರೆ ಹೇಮಾವತಿಯಿಂದ ತಮಿಳುನಾಡಿಗೆ ಬಿಡಬೇಕಾಗಿರುವ ನಿಗದಿತ ನೀರಿನ ಪ್ರಮಾಣ ಸ್ಥಗಿತಗೊಳ್ಳುತ್ತದೆ. ನಮ್ಮಲ್ಲಿ ಹೆಚ್ಚು ನೀರು ಬಳಸಿಕೊಳ್ಳಲು ಅವಕಾಶವಾಗುತ್ತದೆ. ಅದೇ ರೀತಿ ಭದ್ರಾಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಗಳು ಪರ್ಯಾಯ ನೀರಿನ ಯೋಜನೆಗಳಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಗೆ ಹೆಚ್ಚು ಅನುಕೂಲಕರ. ಇವೆಲ್ಲವೂ ಶೀಘ್ರವಾಗಿ ಅನುಷ್ಠಾನಗೊಳ್ಳಲು ದೇವೇಗೌಡರು ಮತ್ತೆ ಅಧಿಕಾರದಲ್ಲಿ ಮುಂದುವರೆಯಬೇಕಿದೆ ಎಂದರು.

        ನೀರಾವರಿ ವಿಚಾರದಲ್ಲಿ ದೇವೇಗೌಡರು ತಿಳಿದುಕೊಂಡಿರುವಷ್ಟು ಜ್ಞಾನವನ್ನು ಬೇರೆ ಯಾರೂ ತಿಳಿದಿಲ್ಲ. ಕಾವೇರಿ, ಕೃಷ್ಣಾ ಸಮಸ್ಯೆಗಳು ಎದುರಾದಾಗ ನಾವು ದೇವೇಗೌಡರ ಮೊರೆ ಹೋಗುತ್ತಿದ್ದೆವು. ಅವರ ಮಾರ್ಗದರ್ಶನ ಮತ್ತು ಸಲಹೆಯ ಮೇರೆಗೆ ನಾವೆಲ್ಲ ಕೆಲಸ ಮಾಡಿದ್ದೇವೆ. ಅಂತಹ ಅದ್ಭುತ ಜ್ಞಾನ ಇರುವ ದೇವೇಗೌಡರನ್ನು ಆರಿಸಿದರೆ ನೀರಿನ ಯೋಜನೆಗಳು ಮತ್ತಷ್ಟು ಅನುಕೂಲಕರ ಎಂದರು.

        ಪತ್ರಿಕಾಗೋಷ್ಠಿಯಲ್ಲಿ ವಿಪ ಸದಸ್ಯ ತಿಪ್ಪೇಸ್ವಾಮಿ, ಹಿಂದುಳಿದ ವರ್ಗಗಳ ಅಯೋಗದ ಮಾಜಿ ಸದಸ್ಯ ಗುರುಸ್ವಾಮಿ, ಹಿರಿಯೂರಿನ ಯಾದವ ಜನಾಂಗದ ಮುಖಂಡ ಪಾಪಣ್ಣ, ಹಾರೋಗೆರೆ ಮಹೇಶ್ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here