ನಿಗಮ ಮಂಡಳಿ ನೇಮಕಾತಿ : ಮೌನ ಮುರಿದ ಕುಮಾರಸ್ವಾಮಿ

0
9

ಬೆಂಗಳೂರು

        ನಿಗಮ ಮಂಡಳಿ ನೇಮಕಾತಿ ಕುರಿತು ಇದೆ ಮೊದಲ ಬಾರಿಗೆ ಮೌನ ಮುರಿದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಕೆಲವು ಹುದ್ದೆಗಳ ನೇಮಕಾತಿಯನ್ನು ರಾಜಕೀಯ ಕಾರಣಗಳಿಗಾಗಿ ತಡೆಹಿಡಿಯಲಾಗಿದೆಯೇ ಹೊರತು ಈ ವಿಚಾರದಲ್ಲಿ ಯಾರಿಗೂ ಅಗೌರವ ತೋರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

       ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಾಂತ್ರಿಕ ಕಾರಣಗಳಿಗಾಗಿ ಕಾಂಗ್ರೆಸ್ ಮಾಡಿದ್ದ ಕೆಲವು ನಿಗಮ ಮಂಡಳಿಗಳ ನೇಮಕಾತಿಯನ್ನು ತಡೆಯಲಾಗಿದೆ. ಹೀಗೆಂದ ಮಾತ್ರಕ್ಕೆ ಸರ್ಕಾರಕ್ಕೆ ಅಪಾಯವಿದೆ ಎಂದು ಯಾರೂ ಭಾವಿಸಬೇಕಿಲ್ಲ. ಎಲ್ಲವೂ ಸುಗಮವಾಗಿ ಪರಿಹಾರವಾಗಲಿದೆ ಎಂದಿದ್ದಾರೆ.

       ಆದರೆ, ಸರ್ಕಾರಕ್ಕೆ ಆಪಾಯವಿದೆ. ಸಂಕ್ರಾಂತಿ ನಂತರ, ಶಿವರಾತ್ರಿ ನಂತರ ಸರ್ಕಾರ ಬಿದ್ದು ಹೋಗುತ್ತದೆ ಎಂದು ಡೆಡ್‍ಲೈನ್ ಕೊಡಲಾಗುತ್ತಾ ಬರುತ್ತಿದೆ. ಇದೆಲ್ಲ ಮುಗಿದ ಮೇಲೆ ಯುಗಾದಿಗೂ ಒಂದು ಡೆಡ್‍ಲೈನ್ ಕೊಡಬಹುದು. ಆದರೆ, ನಾನು ಇದಕ್ಕೆಲ್ಲ ತಲೆಕೆಡಿಸಿಕೊಂಡಿಲ್ಲ. ಕೆಡಿಸಿಕೊಳ್ಳುವುದೂ ಇಲ್ಲ. ಸರ್ಕಾರ ಸುಭದ್ರವಾಗಿದೆ. ನೇಮಕಾತಿ ವಿಚಾರದಲ್ಲಿ ಕೆಲವು ನಿರ್ಧಾರಗಳನ್ನು ರಾಜಕೀಯ ಕಾರಣಗಳಿಂದಾಗಿ ತಡೆ ಹಿಡಿದಿದ್ದೇನೆ. ಆದರೆ, ಯಾರಿಗೂ ಅಗೌರವ ತೋರಬೇಕು ಎಂಬ ಅಹಂಕಾರ ನನ್ನದಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಸುಗಮವಾಗಿ ಬಗೆಹರಿಯಲಿದೆ ಎಂದರು.

         ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಕುಟುಂಬದವರು ಆತಂಕ, ಭಯಪಡಬೇಕಾಗಿಲ್ಲ. ಅವರನ್ನು ಭಯೋತ್ಪಾದಕರು ಅಪಹರಣ ಮಾಡಿದ್ದಾರೆಯೇ ಎಂಬುದು ಗೊತ್ತಾಗಬೇಕಾಗಿದೆ. ಈ ವಿಚಾರದಲ್ಲಿ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಅವರ ಜೊತೆ ಮಾತನಾಡಿದ್ದೇವೆ. ಆದಷ್ಟು ಬೇಗ ಕಾಣೆಯಾಗಿರುವ ಮೀನುಗಾರರನ್ನು ಪತ್ತೆ ಸುರಕ್ಷಿತವಾಗಿ ಮನೆಗೆ ಕರೆತರಲು ಸರ್ಕಾರ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದೆ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here