ಬಿಪಿಎಲ್ ಪಡಿತರ ಚೀಟಿಗಳಿಗಾಗಿ ಪರದಾಟ..!!!!

 ತುಮಕೂರು

ವರದಿ:ಭೂಷಣ್ ಮಿಡಿಗೇಶಿ

         ಜಿಲ್ಲೆಯಲ್ಲಿ ಬಿಪಿಎಲ್ ಪಡಿತರ ಚೀಟಿಪಡೆಯುವ ಸಲುವಾಗಿ ಒಂಭತ್ತು ಸಾವಿರಕ್ಕೂ ಹೆಚ್ಚು ಆನ್‍ಲೈನ್ ಅರ್ಜಿಗಳು, ಸಲ್ಲಿಕೆಯಾಗಿವೆ.ಇದರಲ್ಲಿ ಕಂದಾಯ ಮತ್ತು ಆಹಾರ ಇಲಾಖೆಯ ನೌಕರರುಗಳ ಅಸಡ್ಡೆತನದಿಂದಾಗಿ ಏಳು ಸಾವಿರಕ್ಕೂ ಹೆಚ್ಚಿನ ಅರ್ಜಿಗಳು ವಿವಿಧ ಹಂತಗಳಲ್ಲಿ ಅನುಮೋದನೆಗಾಗಿ ಕಾದು ಕುಳಿತಿವೆ. ಸಣ್ಣ ಪುಟ್ಟ ಕೆಲಸಗಳಾದರೂ ಹತ್ತು ಹಲವು ಬಾರಿ ತಾಲ್ಲೂಕು ಕಚೇರಿ, ನಾಡಕಚೇರಿಗಳಿಗೆ ಓಡಾಡಿ ಪಡೆಯಬೇಕಾದ ಸ್ಥಿತಿ ಇನ್ನೂ ತಪ್ಪಿಲ್ಲ.

          ಬಿಪಿಎಲ್ ಪಡಿತರ ಚೀಟಿಯನ್ನು ಪಡೆಯಬೇಕಾದರೆ ಕಡ್ಡಾಯವಾಗಿ ಆನ್‍ಲೈನ್‍ನಲ್ಲಿಯೇ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಇದಕ್ಕೆಂದೇ ಹಲವಾರು ಗಣಕ ಕೇಂದ್ರಗಳೂ ತಲೆಯೆತ್ತಿವೆ. ಒಂದು ಅರ್ಜಿ ಅಪ್ಲೋಡ್ ಮಾಡಲು ನೂರಾರು ರೂಪಾಯಿಗಳನ್ನು ಮುಲಾಜಿಲ್ಲದೆ ವಸೂಲು ಮಾಡುವ ಕೇಂದ್ರಗಳು ಇವೆ ಎಂಬ ಆರೋಪಗಳಿವೆ. ಇದರಲ್ಲಿಯೂ ಸಾಕಷ್ಟು ಶೋಷಣೆಗಳಾಗುತ್ತಿರುವ ಬಗ್ಗೆ ವ್ಯಾಪಕವಾದ ದೂರುಗಳು ಜಿಲ್ಲೆಯಲ್ಲಿ ಸಾಮಾನ್ಯವಾಗಿವೆ. ಕಂದಾಯ ಇಲಾಖೆಯ ನೌಕರರುಗಳಿಗೆ ಈಗ ಸಾಕಷ್ಟು ಕೆಲಸಗಳಿದ್ದರೂ, ಬಡವರ ಪಾಲಿಗೆ ಪಡಿತರ ಚೀಟಿ ಒಂದು ಅಕ್ಷಯ ಪಾತ್ರೆಯಿದ್ದಂತೆ. ಇಂತಹ ಪವಿತ್ರ ಕಾರ್ಯದಲ್ಲಿ ವಿಳಂಬಗತಿಯ ಧೋರಣೆ ಸರಿಯಲ್ಲ.

9227 ಸಾವಿರ ಬೇಡಿಕೆ : 1808 ವಿಲೇವಾರಿ…!!!

            ಕೆಳಹಂತದಲ್ಲಿ ಸಾಕಷ್ಟು ಪ್ರಕ್ರಿಯೆಗಳನ್ನು ದಾಟಿಕೊಂಡು ಬಂದು ಕೊನೆಗೆ ಬೆಂಗಳೂರಿನ ಆಹಾರ ಇಲಾಖೆಯ ಆಯುಕ್ತರ ಕಚೇರಿಗೆ ಸೇರುವ ಈ ಅಂತರ್ಜಾಲದ ಅರ್ಜಿಗಳು, ಅಧಿಕೃತವಾಗಿ ಮುದ್ರಣವಾಗುವುದು ಉಡುಪಿ ಜಿಲ್ಲೆಯ ಮಣಿಪಾಲ್‍ನಲ್ಲಿರುವ ಮುದ್ರಣ ಕೇಂದ್ರದಲ್ಲಿ. ಈ ಕೇಂದ್ರಕ್ಕೆ ನೇರವಾಗಿ ಆಯುಕ್ತರ ಕಚೇರಿಯಿಂದ ರವಾನೆಯಾಗಬೇಕಾಗಿರುವುದರಿಂದ ಸಾಕಷ್ಟು ವಿಳಂಬವಾಗುವ ಅವಕಾಶಗಳಿವೆ. ಹಾಗಾಗಿ ಕಂದಾಯ ಅಥವಾ ಆಹಾರ ಇಲಾಖೆಯಲ್ಲಿ ಪ್ರಕ್ರಿಯೆಗಳು ವಿಳಂಬವಾದರೆ, ಅರ್ಜಿ ಸಲ್ಲಿಸಿರುವ ಫಲಾನುಭವಿ ಬಹಳಷ್ಟು ದಿನ ಕಾಯಬೇಕಾಗುವುದು ಅನಿವಾರ್ಯ.ಈ ಎರಡೂ ಇಲಾಖೆಗಳ ಸಿಬ್ಬಂದಿ ಪಡಿತರ ಚೀಟಿಗಳ ವಿಲೇವಾರಿಯಲ್ಲಿ ಪರಸ್ಪರ ಸಹಕಾರ ಮನೋಭಾವ ತೋರಿ ಬದ್ಧತೆಯಿಂದ ಕೆಲಸಮಾಡಬೇಕಾಗುತ್ತದೆ.

           ತುಮಕೂರು ಜಿಲ್ಲೆಯಲ್ಲಿರುವ ಹತ್ತು ತಾಲ್ಲೂಕುಗಳಲ್ಲಿ ಇಲ್ಲಿಯತನಕ 9227 ಪಡಿತರ ಚೀಟಿಗಳಿಗೆ ಜನ ಅರ್ಜಿ ಹಾಕಿದ್ದಾರೆ. ಇವುಗಳಲ್ಲಿ ಅತಿ ಹೆಚ್ಚು ತುಮಕೂರು ತಾಲ್ಲೂಕಿನ ಅರ್ಜಿಗಳು. ಇಲ್ಲಿ 2211 ಪಡಿತರ ಚೀಟಿಯ ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ 442 ಅರ್ಜಿಗಳನ್ನು ಮಾತ್ರ ಕಂದಾಯ ಇಲಾಖೆಯಿಂದ ಅನುಮೋದಿಸಲಾಗಿದ್ದು, ಉಳಿದ ಅರ್ಜಿಗಳು ಅನುಮೋದನೆಯಾಗದೆ ಉಳಿದುಹೋಗಿವೆ. ಮಧುಗಿರಿ ತಾಲ್ಲೂಕಿನಲ್ಲಿ ಹೊಸಪಡಿತರ ಚೀಟಿಗಳ ವಿಲೇವಾರಿಗಳ ಪ್ರಕ್ರಿಯೆಯಲ್ಲಿ ಅತ್ಯಂತ ಕಳಪೆ ಸಾಧನೆಯಾಗಿದ್ದು, ಸಲ್ಲಿಕೆಯಾಗಿರುವ 743 ಅರ್ಜಿಗಳ ಪೈಕಿ ಕೇವಲ 04 ರÀಷ್ಟು ಅರ್ಜಿಗಳು ಪರಿಶೀಲನೆಯಾಗವೆ. ಒಂದೇ ಒಂದು ಅರ್ಜಿ ಮಾತ್ರ ಅನುಮೋದನೆಯಾಗಿದೆ. ಪ್ರಕ್ರಿಯೆಯ ಎಲ್ಲಾ ಹಂತಗಳನ್ನೂ ದಾಟಿ ಮುದ್ರಣಕ್ಕೆ ಹೋಗಿ, ಅಲ್ಲಿಂದ ಅಂಚೆಯ ಮೂಲಕ 2 ಪಡಿತರ ಚೀಟಿಗಳು ಫಲಾನುಭವಿಗಳಿಗೆ ವಿಲೇವಾರಿಯಾಗಿವೆ. ಇಲ್ಲಿ ಸರಿಸುಮಾರು 723 ಪಡಿತರ ಚೀಟಿಗಳಿಗೆ ಮುಕ್ತಿ ಸಿಕ್ಕಿಲ್ಲ.

ಮುಖ್ಯಾಂಶಗಳು

• ಜಿಲ್ಲೆಯಲ್ಲಿ ಇರುವ ಕುಟುಂಬಗಳ ಸಂಖ್ಯೆ 688741
• ಬಿಪಿಎಲ್ ಕಾರ್ಡುಗಳ ಸಂಖ್ಯೆ 650968
• ಅಂತ್ಯೋದಯ ಕಾರ್ಡುಗಳ ಸಂಖ್ಯೆ 29,963

        ಕೊರಟಗೆರೆ ತಾಲ್ಲೂಕಿನಲ್ಲಿ ಹೊಸಪಡಿತರ ಬಿಪಿಎಲ್ ಚೀಟಿಗಳನ್ನು ಪಡೆಯುವ ಸಲುವಾಗಿ 422 ಅರ್ಜಿಗಳು ಕಂದಾಯ ಇಲಾಖೆಯ ಅನುಮೋದನೆಗಾಗಿ ಸಲ್ಲಿಕೆಯಾಗಿವೆ. ಈ ಅರ್ಜಿಗಳಲ್ಲಿ 340 ಪರಿಶೀಲನೆಯಾಗಿವೆ. ಒಂದು ಅರ್ಜಿ ಮಾತ್ರ ಅನುಮೋದನೆಯಾಗಿದೆ. ಈ ರೀತಿ ಅನುಮೋದನೆಯಾಗಿ ಆಹಾರ ಇಲಾಖೆಗೆ ಸಲ್ಲಿಕೆಯಾಗಿರುವ ಸದರಿ ಅರ್ಜಿಗಳಲ್ಲಿ 3 ಪಡಿತರ ಚೀಟಿಗಳನ್ನು ಅಧಿಕೃತವಾಗಿ ಪರಿಗಣಿಸಿ, ವಿಲೇವಾರಿ ಮಾಡಲಾಗಿದೆ. ಇನ್ನೂ 393 ಅರ್ಜಿಗಳು ಯಾವುದೇ ಪ್ರಕ್ರಿಯೆಗೂ ಒಳಗಾಗದೆ ನೆನೆಗುದಿಗೆ ಬಿದ್ದಿವೆ.

         ಶಿರಾ ತಾಲ್ಲೂಕಿನಲ್ಲಿ 820 ಜನ ಅಂತರ್ಜಾಲದಲ್ಲಿ ಬಿಪಿಎಲ್ ಪಡಿತರ ಚೀಟಿಗಳಿಗಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇದರಲ್ಲಿ 44 ಅರ್ಜಿಗಳನ್ನು ವಿವಿಧ ಕಾರಣಗಳಿಗಾಗಿ ತಿರಸ್ಕರಿಸಿರುವ ಇಲಾಖೆ, ಒಂದೇ ಒಂದು ಪ್ರಕ್ರಿಯೆಯನ್ನು ಕೂಡಾ ಮಾಡದೆ ಅತ್ಯಂತ ಬೇಜವಾಬ್ದಾರಿ ತನವನ್ನು ಪ್ರದರ್ಶಿಸಿರುವ ಮಾಹಿತಿಯಿದೆ. ಆಹಾರ ಇಲಾಖೆಯು ಯಾವುದೇ ಅರ್ಜಿಗಳನ್ನು ಮಾತ್ರ ಮುಂದಿನ ಹಂತಕ್ಕೆ ಕಳುಹಿಸಿರುವ ಮಾಹಿತಿಯಿಲ್ಲ.

        ಹೀಗೆ ಬಡವರ ಪಾಲಿಗೆ ಬರಬೇಕಾದ ಪಡಿತರ ಚೀಟಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಶಿರಾ ತಾಲ್ಲೂಕಿನಲ್ಲಿ ವಿಪರೀತ ವಿಳಂಬ ಧೋರಣೆಯನ್ನು ಎರಡೂ ಇಲಾಖೆಗಳು ಅನುಸರಿಸುತ್ತಿರುವುದು ಸರಿಯಾದ ಕ್ರಮವಲ್ಲ. ಈ ರೀತಿ ವಿಳಂಬಕ್ಕೆ ಕಾರಣಗಳೂ ಸಾಕಷ್ಟಿದ್ದರೂ ಕೈಬಿಸಿಯಾಗದ ಹೊರತು ಕೆಲಸಗಳು ನಡೆಯುವುದಿಲ್ಲವೆಂಬುದಕ್ಕೆ ಇದು ಸಾಕ್ಷಿಯಾಗುತ್ತಿದೆ.

         ಶಿರಾ ತಾಲ್ಲೂಕಿನಲ್ಲಿ 820 ಅರ್ಜಿಗಳು ಪಡಿತರ ಚೀಟಿಯ ನಿರೀಕ್ಷೆಯಲ್ಲಿದ್ದರೂ, ಇಷ್ಟೊಂದು ಪ್ರಮಾಣದ ಬೇಜವಾಬ್ದಾರಿತನ ಎರಡೂ ಇಲಾಖೆಗಳ ಕಂಡುಬರುತ್ತಿರುವುದು ದುರಂತವೇ ಸರಿ. ಶಿರಾ ತಾಲ್ಲೂಕಿನ ಪ್ರಗತಿಯ ಬಗ್ಗೆ ಎರಡೂ ಇಲಾಖೆಯ ಮೇಲಧಿಕಾರಿಗಳು ಗಮನಹರಿಸುವುದು ಸೂಕ್ತ.

        ತುರುವೇಕೆರೆ ತಾಲ್ಲೂಕಿನಲ್ಲಿ ಹೊಸಾ ಬಿಪಿಎಲ್‍ಪಡಿತರ ಚೀಟಿಗಳಿಗಾಗಿ ಅಂತರ್ಜಾಲದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳು 564. ಇದರಲ್ಲಿ 421 ಅರ್ಜಿಗಳ ಪರಿಶೀಲನೆ ನಡೆಸಿರುವ ಕಂದಾಯ ಇಲಾಖೆಯ ಅಧಿಕಾರಿಗಳೂ ಯಾರು ಕಾರ್ಡುಗಳಿಗೆ ಅರ್ಹರಾಗಿದ್ದಾರೆ ಎಂಬ ಮಾಹಿತಿಯನ್ನು ಆಹಾರ ಇಲಾಖೆಗೆ ನೀಡಿದ್ದಾರೆ. ಈ ಅರ್ಜಿಗಳನ್ನು ಪರಿಶೀಲಿಸಿರುವ ಆಹಾರ ಇಲಾಖೆಯ ಸಿಬ್ಬಂದಿವರ್ಗ ಇದರಲ್ಲಿ 413 ಅರ್ಜಿಗಳನ್ನು ಎಲ್ಲಾ ಹಂತಗಳಲ್ಲಿಯೂ ತೇರ್ಗಡೆಗೊಳಿಸಿ ಅನುಮೋದನೆ ನೀಡಿದ್ದಾರೆ. 419 ಕಾರ್ಡುಗಳು ಈಗಾಗಲೇ ವಿಲೇವಾರಿಯಾಗಿವೆ .

        ಕೇವಲ 128 ಕಾರ್ಡುಗಳು ಮಾತ್ರ ಬಾಕಿ ಉಳಿದಿದ್ದು ತುರುವೇಕೆರೆ ತಾಲ್ಲೂಕಿನ ಪ್ರಗತಿ ಬಡವರ ಪರವಾಗಿದೆ ಎನ್ನಬಹುದು.ಇದೇ ರೀತಿ ಪಾವಗಡದಲ್ಲಿ 1130 ಬಿಪಿಎಲ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಲಾಗಿದ್ದು, 1068 ಅರ್ಜಿಗಳು ನೆನೆಗುದಿಗೆ ಬಿದ್ದಿವೆ. 29 ಕಾರ್ಡುಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ.

         ಹೊಸಪಡಿತರ ಚೀಟಿಗೆ ಬೇಡಿಕೆ, ಪಡಿತರ ಚೀಟಿಯ ವಿವರಗಳನ್ನು ತಿದ್ದುಪಡಿ ಮಾಡುವುದು, ಮುಂತಾದ ಕೆಲಸಗಳೆಲ್ಲವೂ ಈಗ ಆನ್ ಲೈನ್‍ನಲ್ಲಿಯೇ ನಡೆಯುವುದರಿಂದ ಹಳ್ಳಿಗಾಡಿನ ಗ್ರಾಹಕರಿಗೆ ಸ್ವಲ್ಪ ಕಷ್ಟವಾಗುತ್ತಿದೆ. ಆದರೆ ಪಾರದರ್ಶಕತೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ಈ ಕ್ರಮ ಸರಿಯೆನಿಸಿದಿರೂ, ಶೋಷಣೆ ಮಾತ್ರ ತಪ್ಪಿಲ್ಲ. ಪಡಿತರ ಚೀಟಿ ಪಡೆಯುವ ಪ್ರತಿ ಹಂತದಲ್ಲಿ ಯಾವುದೇ ಅಧಿಕಾರಿ ರಜೆ ಅಥವಾ ಇನ್ಯಾವುದೇ ಕೆಲಸದ ಮೇಲೆ ತೆರಳಿದರೂ, ವಿಳಂಬ ಖಚಿತ.

         ಇದೂ ಅಲ್ಲದೆ ಸರ್ವರ್ ಬಿಜಿ ಎಂಬ ಸಬೂಬು, ಕರೆಂಟಿನ ತೊಂದರೆ, ಅಧಿಕಾರಿಗಳಿಗೆ ಕಾರ್ಯಭಾರದ ಒತ್ತಡಗಳು, ಜನಸ್ನೇಹಿ ಕೇಂದ್ರಗಳಲ್ಲಿ ಇತರೆ ಇಲಾಖೆಗಳ ಹೆಚ್ಚುವರಿ ಕೆಲಸಗಳ ಕಾಟ ಇವೇ ಮುಂತಾದ ತಾಂತ್ರಿಕ ಕಾರಣಗಳು ವಿಳಂಬಕ್ಕೆ ಕಾರಣವಾಗಬಹುದು. ಆದರೆ ಆದ್ಯತೆಯ ಮೇಲೆ ಪಡಿತರ ಚೀಟಿಗಳ ವಿಲೇವಾರಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲೇಬೇಕಾಗಿರುವುದು ಪ್ರಮುಖವೆನಿಸುತ್ತದೆ.

(ಮುಂದುವರೆಯುವುದು.)

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap