ಮತಹಕ್ಕು ಚಲಾವಣೆಯಿಂದ ಪ್ರಜಾಪ್ರಭುತ್ವಕ್ಕೆ ಬಲ

ಚಿತ್ರದುರ್ಗ:

          ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಎಲ್ಲ ಮತದಾರರು ಮತದಾನ ಮಾಡಿದಾಗ ಮಾತ್ರ ಚುನಾವಣೆ ಮಹತ್ವ ಪಡೆದುಕೊಳ್ಳುತ್ತದೆ. ಮತದಾನ ಎಲ್ಲರ ಹಕ್ಕು ಮತ್ತು ಕರ್ತವ್ಯವಾಗಿದ್ದು, ಮತದಾರರು ಮತದಾನ ಮಾಡುವ ಮೂಲಕ ತಮ್ಮ ಕರ್ತವ್ಯ ನಿಭಾಯಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.

         ನಗರದ ಕೋಟೆ ಪ್ರವೇಶ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿಗಳು ಸ್ವೀಪ್ ಕಾರ್ಯಕ್ರಮದಡಿ ಶುಕ್ರವಾರ ಮತದಾನ ಜಾಗೃತಿಗಾಗಿ ಏರ್ಪಡಿಸಿದ ಮಾನವ ಸರಪಳಿ ಹಾಗು ರಂಗೋಲಿ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

          ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ನಮ್ಮ ಸಂವಿಧಾನ ಪ್ರಜೆಗಳಿಗೆ ನೀಡಿದ್ದು, ಲೋಕಸಭೆ ಚುನಾವಣೆಗೆ ಬರುವ ಏಪ್ರಿಲ್ 18 ರಂದು ಮತದಾನ ನಡೆಯಲಿದೆ. ಎಲ್ಲ ಮತದಾರರು ಮತಗಟ್ಟೆಗೆ ಬಂದು ತಮ್ಮ ಅಮೂಲ್ಯ ಮತವನ್ನು ಚಲಾಯಿಸುವಂತಾಗಬೇಕು. ಶೇ. 100 ರಷ್ಟು ಮತದಾರರು ತಮ್ಮ ಮತ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಿಜವಾದ ಅರ್ಥ ಬರುತ್ತದೆ ಎಂದು ಪ್ರತಿಪಾದಿಸಿದರು

          ಕಳೆದ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆ ಇದ್ದು, ಮತದಾರರು ಮತದಾನದಿಂದ ವಿಮುಖರಾಗಿರುವುದು ಆತಂಕದ ಸಂಗತಿಯಾಗಿದೆ. ಮತದಾರರು ಜಾಗೃತರಾಗಬೇಕು. ಹಣ, ಆಸೆಗೆ ಒಳಗಾಗದೆ ನೈತಿಕವಾಗಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಮತದಾರರಲ್ಲಿ ನೈತಿಕ ಮತದಾನದ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಲುವಾಗಿ ಸ್ವೀಪ್ ಕಾರ್ಯಕ್ರಮದಡಿ ಮಾನವ ಸರಪಳಿ ಹಾಗೂ ರಂಗೋಲಿ ಪ್ರದರ್ಶನದಂತಹ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲ ಮತದಾರರೂ ಸಹ ತಮ್ಮ ಸಂವಿಧಾನಬದ್ಧ ಹಕ್ಕು ಚಲಾಯಿಸಿದಾಗ ಮಾತ್ರ ಇಂತಹ ಕಾರ್ಯಕ್ರಮಗಳ ಉದ್ದೇಶ ಸಫಲವಾಗುತ್ತದೆ ಎಂದರು.

        ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸಬೇಕಾದ್ದು, ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದ್ದು, ಚುನಾವಣೆಯ ಸಂದರ್ಭದಲ್ಲಿ ಮತದಾನ ಮಾಡುವುದು ಸಹ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸಿದಂತಾಗುತ್ತದೆ. ಮತದಾನ ಮಾಡದೇ ಇರುವವರು, ಜನಪ್ರತಿನಿಧಿಗಳಿಗೆ ಅಹವಾಲು ಸಲ್ಲಿಸುವ ನೈತಿಕ ಹಕ್ಕು ಕಳೆದುಕೊಂಡಂತೆ. ಮತದಾರರು ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ, ಆತ್ಮ ಗೌರವವನ್ನು ಕಾಪಾಡುವ ರೀತಿಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

         ಮತದಾನ ಜಾಗೃತಿಗೆ ಜಿಲ್ಲಾ ಐಕಾನ್ ಆಗಿರುವ ಜ್ಯೋತಿರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್, ಉಪವಿಭಾಗಾಧಿಕಾರಿ ವಿಜಯಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಎಲ್ಲ ವಿದ್ಯಾರ್ಥಿಗಳಿಂದ ನೈತಿಕ ಮತದಾನದ ಪ್ರತಿಜ್ಞಾ ವಿಧಿ ಸ್ವೀಕಾರ ನಡೆಯಿತು.

           ಕಾರ್ಯಕ್ರಮದ ಅಂಗವಾಗಿ ನಗರದ ಕೋಟೆ ಆವರಣದಲ್ಲಿ ವಿದ್ಯಾರ್ಥಿಗಳು ಕೈಗೊಂಡ ಮಾನವ ಸರಪಳಿ, ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಹಲವು ವಿದ್ಯಾರ್ಥಿಗಳು ಮತದಾನದ ಮಹತ್ವ ಬಿಂಬಿಸುವ ರೀತಿಯಲ್ಲಿ ಆಕರ್ಷಕ ರಂಗೋಲಿ ಬಿಡಿಸಿ, ಜನರಲ್ಲಿ ಜಾಗೃತಿ ಮೂಡಿಸಿದರು.

           ರಂಗೋಲಿಯಲ್ಲಿ ಮತದಾನದ ಮಹತ್ವ ಸಾರುವ ಹಲವು ಘೋಷ ವಾಕ್ಯಗಳನ್ನು ಬಣ್ಣ ಬಣ್ಣಗಳಿಂದ ರಚಿಸಿದರಲ್ಲದೆ, ಹೂಗಳಿಂದ ಅಲಂಕರಿಸಿದ್ದು, ಆಕರ್ಷಕವಾಗಿತ್ತು. ಶುಕ್ರವಾರ ಬೆಳ್ಳಂಬೆಳಿಗ್ಗೆ ಕೋಟೆ ವೀಕ್ಷಣೆಗೆಂದು ಬಂದ ಹಲವಾರು ಪ್ರವಾಸಿಗರು, ಆಕರ್ಷಕ ರಂಗೋಲಿಯನ್ನು ಆಸಕ್ತಿಯಿಂದ ವೀಕ್ಷಿಸಿದರು. ಒಟ್ಟಾರೆ ಹಾಸ್ಟೆಲ್ ವಿದ್ಯಾರ್ಥಿಗಳು ನಗರದ ಕೋಟೆ ಆವರಣದಲ್ಲಿ ಏರ್ಪಡಿಸಿದ ಮತದಾನ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap