ಕರ್ನಾಟಕದಿಂದ ಮೋದಿ ಸ್ಪರ್ಧೆ ಕೈಬಿಟ್ಟಿದ್ದು ಏಕೆ?

0
116

ಬೆಂಗಳೂರು

        ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸಲು ಬಯಸಿದ್ದ ಪ್ರಧಾನಿ ನರೇಂದ್ರಮೋದಿ ಅಂತಿಮ ಘಳಿಗೆಯಲ್ಲಿ ಜಲಸಂಪನ್ಮೂಲ ಸಚಿವ ಡಿಕೆಶಿ ತಮಗೆ ಪ್ರಬಲ ಪೈಪೋಟಿ ನೀಡಬಹುದು ಎಂಬ ಕಾರಣಕ್ಕಾಗಿ ಸ್ಪರ್ಧಿಸಲು ಹಿಂಜರಿದರೇ?

        ರಾಜ್ಯ ರಾಜಕೀಯದ ಒಳವಲಯಗಳಲ್ಲಿ ನಡೆಯುತ್ತಿರುವ ಚರ್ಚೆಯ ಪ್ರಕಾರ ಹೌದು.ಅಷ್ಟೇ ಅಲ್ಲ,ಮೋದಿಯವರ ಈ ತೀರ್ಮಾನದ ಫಲವಾಗಿ ಅಂತಿಮವಾಗಿ ಹಾನಿ ಅನುಭವಿಸಿದವರು ದಿವಂಗತ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್.ಉನ್ನತ ಮೂಲಗಳ ಪ್ರಕಾರ,ದಕ್ಷಿಣ ಭಾರತದ ಕರ್ನಾಟಕದಿಂದ ತಾವು ಸ್ಪರ್ಧಿಸಿದರೆ ಅಕ್ಕ ಪಕ್ಕದ ರಾಜ್ಯಗಳ ಮೇಲೂ ಅದರ ಪರಿಣಾಮ ಕಾಣಬಹುದು.ರಾಜ್ಯದಲ್ಲೂ ಬಂಪರ್ ಸೀಟುಗಳನ್ನು ಗೆಲ್ಲಬಹುದು ಎಂಬುದು ಪ್ರಧಾನಿ ಮೋದಿ ಅವರ ಉದ್ದೇಶವಾಗಿತ್ತು.

         ಇದೇ ಕಾರಣಕ್ಕಾಗಿ ಕಳೆದ ಆರು ಬಾರಿ ಅನಂತಕುಮಾರ್ ಅವರು ಗೆಲುವು ಸಾಧಿಸಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು.ಹಾಗೆಯೇ ಇದಕ್ಕೆ ಪೂರಕವಾಗುವಂತೆ ಗ್ರೌಂಡ್ ರಿಪೋರ್ಟ್ ರೆಡಿ ಮಾಡಲು ರಾಜ್ಯ ಬಿಜೆಪಿಯ ಉಸ್ತುವಾರಿ ವಹಿಸಿರುವ ಮುರುಳೀಧರರಾವ್ ಅವರಿಗೆ ಸೂಚನೆ ನೀಡಿದ್ದರು.

         ಅದರ ಪ್ರಕಾರ ಮುರುಳೀಧರರಾವ್ ಅವರೂ ಗ್ರೌಂಡ್ ರಿಪೋರ್ಟ್ ಒಂದನ್ನು ತಯಾರಿಸಿ,ಈ ಕ್ಷೇತ್ರದಿಂದ ಸ್ಪರ್ಧಿಸಿದರೆ ಪ್ರಧಾನಿಯವರು ಗೆಲ್ಲುವುದು ಸುಲಭ ಎಂದು ಅಂಕಿ-ಅಂಶಗಳ ಸಮೇತ ವರಿಷ್ಟರಿಗೆ ವಿವರಿಸಿದ್ದರು.

        ಆದರೆ ಕೊನೆಯ ಘಳಿಗೆಯವರೆಗೆ ತಾವು ಸ್ಪರ್ಧಿಸುವುದು ಬಹಿರಂಗವಾಗಬಾರದು ಎಂಬ ಕಾರಣಕ್ಕಾಗಿ ಇಬ್ಬರು ಡೆಮ್ಮಿ ಕ್ಯಾಂಡಿಡೇಟುಗಳನ್ನು ರೆಡಿ ಮಾಡಿಡುವಂತೆ ವರಿಷ್ಟರು ಮುರುಳೀಧರರಾವ್ ಅವರಿಗೆ ಸೂಚಿಸಿದರು.

        ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಬಾವನೆ ದಟ್ಟವಾಗಿದ್ದುದರಿಂದ ಒಂದು ಬಾರಿ ಅವರಿಗೆ ಟಿಕೆಟ್ ನೀಡಿದರೆ ಸ್ಪರ್ಧಾ ಕಣದಿಂದ ಹಿಂದೆ ಸರಿಯುವ ಹಾಗೆ ಮಾಡುವುದು ಕಷ್ಟ ಎಂಬ ಕಾರಣಕ್ಕಾಗಿ ಹಲ ನಾಯಕರ ಜತೆ ರಹಸ್ಯ ಚರ್ಚೆ ನಡೆಸಿದ ಮುರುಳೀಧರರಾವ್ ಅಂತಿಮವಾಗಿ ಶಾಸಕರಾದ ಸುರೇಶ್ ಕುಮಾರ್ ಹಾಗೂ ರವಿ ಸುಬ್ರಮಣ್ಯ ಅವರ ಹೆಸರನ್ನು ಅಂತಿಮಗೊಳಿಸಿದ್ದರು.

        ಆದರೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ನರೇಂದ್ರ ಮೋದಿ ಸ್ಪರ್ಧಿಸಬಯಸಿರುವ ಅಂಶ ಕಾಂಗ್ರೆಸ್ ಹೈಕಮಾಂಡ್‍ನ ಕಿವಿ ತಲುಪಿತು.ಈ ಹಿನ್ನೆಲೆಯಲ್ಲಿಯೇ ಕರ್ನಾಟಕದಲ್ಲಿ ಮೋದಿಗೆ ಹೊಡೆತ ನೀಡಬೇಕು ಎಂಬ ಕಾರಣಕ್ಕಾಗಿ ಅದು ಸಚಿವ ಡಿಕೆಶಿಯನ್ನು ಕಣಕ್ಕಿಳಿಯಲು ಸಿದ್ಧರಾಗಿರಿ ಎಂದು ಸೂಚನೆ ನೀಡಿತು.ಒಂದು ವೇಳೆ ನರೇಂದ್ರಮೋದಿ ಸ್ಪರ್ಧಿಸಿದರೆ ಅವರ ವಿರುದ್ಧ ಮೈತ್ರಿಕೂಟದ ಕ್ಯಾಂಡಿಡೇಟ್ ಆಗಿ ನೀವೇ ಸ್ಪರ್ಧಿಸಿ ಎಂದು ಡಿಕೆಶಿಗೆ ಅದು ಸೂಚನೆಯನ್ನೂ ನೀಡಿತ್ತು.ಅದರನುಸಾರ ಡಿಕೆಶಿ ಕೂಡಾ ಮೋದಿ ವಿರುದ್ಧ ಸ್ಪರ್ಧಿಸಲು ರೆಡಿ ಆಗಿದ್ದರು.

        ಒಂದು ವೇಳೆ ಗೆದ್ದರೆ ಪ್ರಧಾನಿಯೊಬ್ಬರ ಮೇಲೆ ಗೆದ್ದಂತೆ ಆಗುತ್ತದೆ.ಆ ಮೂಲಕ ರಾಷ್ಟ್ರದ ಗಮನ ಸೆಳೆಯಲು ಸಾಧ್ಯವಾಗುತ್ತದೆ ಎಂದು ಬಾವಿಸಿದ ಡಿಕೆಶಿ,ಅದೇ ಕಾಲಕ್ಕೆ ತಮ್ಮ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿರುವ ಬಿಜೆಪಿ ವಿರುದ್ಧ ಗುಡುಗಿದಂತೆಯೂ ಆಗುತ್ತದೆ ಎಂದು ಲೆಕ್ಕ ಹಾಕಿದ್ದರು ಎಂಬುದು ಮೂಲಗಳ ಹೇಳಿಕೆ.

       ಯಾವಾಗ ಕಾಂಗ್ರೆಸ್ ಪಾಳೆಯದಲ್ಲಿ ಡಿಕೆಶಿಯನ್ನು ಮುಂದಕ್ಕೆ ಬಿಡಲು ತೀರ್ಮಾನಿಸಲಾಗಿದೆ ಎಂಬ ಸುದ್ದಿ ಬಿಜೆಪಿ ಹೈಕಮಾಂಡ್‍ಗೆ ತಲುಪಿತೋ?ಆಗ ವರಿಷ್ಟರು:ಒಂದು ವೇಳೆ ಮೋದಿ ವಿರುದ್ಧ ಡಿಕೆಶಿ ಸ್ಪರ್ಧಿಸಿದರೆ ಪರಿಸ್ಥಿತಿ ಹೇಗಿರಬಹುದು?ಎಂದು ಉಸ್ತುವಾರಿ ಮುರುಳೀಧರರಾವ್ ಅವರ ಬಳಿ ಕೇಳಿದರು.

       ಡಿಕೆಶಿ ಸ್ಪರ್ಧಿಸಿದರೂ ಮೋದಿಯವರು ಕನಿಷ್ಟ ಎರಡು ಲಕ್ಷ ಮತಗಳಿಂದ ಗೆಲ್ಲಬಹುದು ಎಂಬ ಉತ್ತರ ಮುರುಳೀಧರಾವ್ ಅವರಿಂದ ಹೋದಾಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ,ಗೆಲುವಿನ ಅಂತರ ಕನಿಷ್ಟ ಐದು ಲಕ್ಷದಷ್ಟು ಎಂಬ ಭರವಸೆ ಇಲ್ಲದೆ ಸ್ಪರ್ಧಿಸುವುದು ಡೇಂಜರ್ ನರೇಂದ್ರ ಮೋದಿ ಅವರಿಗೆ ವಿವರಿಸಿದರು.

        ಕನಿಷ್ಟ ಐದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ಭರವಸೆ ಇಲ್ಲದೆ ಹೋದರೆ ಎರಡು ಲಕ್ಷ ಮತಗಳ ಅಂತರದ ಗೆಲುವು ಅಪಾಯಕಾರಿಯಾಗಬಹುದು.ಎಲ್ಲಕ್ಕಿಂತ ಮುಖ್ಯವಾಗಿ ದೇವೇಗೌಡ ಹಾಗೂ ಡಿಕೆಶಿ ಪರಸ್ಪರ ಕೈಗೂಡಿಸಿರುವುದರಿಂದ ಸಾಂಪ್ರದಾಯಿಕವಾಗಿ ಬಿಜೆಪಿಗೆ ಒಲಿಯುತ್ತಿದ್ದ ಒಕ್ಕಲಿಗರ ಬಹುಸಂಖ್ಯಾತ ಮತಗಳು ಡಿಕೆಶಿ ಕಡೆ ವಾಲಬಹುದು.

      ಹೀಗಾಗಿ ಫಲಿತಾಂಶದಲ್ಲಿ ಏರುಪೇರಾಗಬಹುದು.ಹೀಗಾಗಿ ಬೇರೆಯವರನ್ನು ಕಣಕ್ಕಿಳಿಸುವುದು ಬೆಟರ್ರು ಎಂಬ ಮಾತು ಅಮಿತ್ ಷಾ ಅವರಿಂದ ಕೇಳಿ ಬಂತು.ಆಗ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ನೀಡಬಹುದು ಎಂಬ ಅಭಿಪ್ರಾಯ ಕೇಳಿ ಬಂದರೂ,ಅಷ್ಟೊತ್ತಿಗಾಗಲೇ ಸಂಘಪರಿವಾರದ ಪ್ರಮುಖರೊಬ್ಬರು ತೇಜಸ್ವಿ ಸೂರ್ಯ ಅವರ ಹೆಸರನ್ನು ಮುಂದು ಮಾಡಿದ್ದರು.

      ಹೀಗಾಗಿ ಕೊನೆ ಘಳಿಗೆಯಲ್ಲಿ ಪ್ರಧಾನಿ ನರೇಂದ್ರಮೋದಿ ಹಿಂಜರಿದಂತಾಯಿತು.ತೇಜಸ್ವಿನಿ ಅನಂತಕುಮಾರ್ ಅವರಿಗೆ ದಕ್ಕಬೇಕಿದ್ದ ಸೀಟನ್ನು ಹೊಡೆದುಕೊಳ್ಳಲು ಸಂಘಪರಿವಾರದ ನಾಯಕರೊಬ್ಬರಿಗೆ ಅವಕಾಶ ಸಿಕ್ಕಂತಾಯಿತು ಎಂಬುದು ಮೂಲಗಳ ಹೇಳಿಕೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here