ಗುಬ್ಬಚ್ಚಿಗಳ ಸಂತತಿ ಕುಸಿತ : ಬಸವರಾಜಪ್ಪ

ಚಿತ್ರದುರ್ಗ

        ಇಂದು ಪರಿಸರ ಹಾಗೂ ಗೂಡು ಕಟ್ಟುವ ತಾಣಗಳ ನಾಶದಿಂದಾಗಿ, ಮೊಬೈಲ್‍ಗಳು ಹೊರ ಸೂಸುವ ವಿಕಿರಣ, ಶಬ್ದಮಾಲಿನ್ಯ ಹಾಗೂ ಮಿತಿ ಮೀರಿದ ಕೀಟನಾಶಕದ ಬಳಕೆಯಿಂದಾಗಿ ಗುಬ್ಬಚ್ಚಿಗಳ ಸಂತತಿಯು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕ್ಷೀಣಿಸುತ್ತಿದೆ ಎಂದು ಸರ್ಕಾರಿ ವಿಜ್ಷಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ. ಬಸವರಾಜಪ್ಪ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

       ಪ್ರಾಣಿ ಶಾಸ್ತ್ರ ವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ವಿಜ್ಞಾನ ಕೇಂದ್ರ, ಬ್ರಹ್ಮಕುಮಾರಿ ಈಶ್ವರಿ ಸಂಸ್ಥೆ, ರೋಟರಿ, ಇನ್ನರ್ ವೀಲ್, ಲಯನ್ಸಕ್ಲಬ್, ಸರ್ಕಾರಿ ವಿಜ್ಞಾನ ಕಾಲೇಜು, ವಾಸವಿ ಮಹಿಳಾ ಸಂಘ, ಹಾಗೂ ಇನ್ನಿತರ ಶಾಲೆ, ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ, ವಿಶ್ವಗುಬ್ಬಚ್ಚಿ ದಿನಾಚರಣೆ-ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾದ ಜಾಗೃತಿಕಾರ್ಯಕ್ರಮ ಹಾಗೂ ಪ್ರಾತ್ಯಕ್ಷತೆಯಲ್ಲಿ ಭಾಗವಹಿಸಿ ಮಾತನಾಡಿದರು.

       ಹಿಂದೆಲ್ಲ ಧಾನ್ಯಗಳನ್ನು ಸಂತೆಯಿಂದ ತಂದು, ಅದನ್ನು ಸ್ವಚ್ಛಗೊಳಿಸುವಾಗ ಕಾಳುಗಳನ್ನು ಗುಬ್ಬಿಗಳಿಗಾಗಿಯೇ ಮನೆ ಅಂಗಳಗಳಲ್ಲಿ ಬೀರುತ್ತಿದ್ದರು. ಇದರಿಂದ ಅವುಗಳಿಗೆ ಹೇರಳವಾಗಿ ಆಹಾರ ಸಿಗುತ್ತಿತ್ತು. ಆದರೆ, ಈ ಪದ್ಧತಿಗಳು ಇಂದು ಮರೆಯಾಗಿವೆ ಎಂದ ಅವರು, ಕಣ್ಮರೆಯಾಗುತ್ತಿರುವ ಈ ಗುಬ್ಬಚ್ಚಿಗಳನ್ನು ರಕ್ಷಣೆ ಮಾಡುವ ಸಲುವಾಗಿ ಪ್ರತಿವರ್ಷ ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ.

         2010ರಿಂದ ವಿಶ್ವದ ವಿವಿಧ ದೇಶಗಳಲ್ಲಿ ಈ ಆಚರಣೆ ಪ್ರಾರಂಭವಾಯಿತು. ಪ್ರಕೃತಿ ಸಂರಕ್ಷಣೆಯ ಅಂತರರಾಷ್ಟ್ರೀಯ ಸಂಘಟನೆಯ ವರದಿಯ ಪ್ರಕಾರ, 25 ವರ್ಷಗಳಲ್ಲಿ ಗುಬ್ಬಿಗಳ ಸಂತತಿಯು ಶೇ 71ರಷ್ಟು ಕುಸಿದಿದೆ ಎಂದರು. ಗುಬ್ಬಿಗಳು ಮಾನವರ ನಿಕಟ ಸಂಬಂಧಿ. ಅವುಗಳಿಗೆ ವಾಸಿಸಲು ಅನುಕೂಲವಾಗುವಂತೆ ಮನೆಯ ಸುತ್ತಮುತ್ತ ಮರಗಳನ್ನು ಬೆಳೆಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬೆಳೆದಿರುವ ಗಿಡಗಳ ರೆಂಬೆಗಳಿಗೆ ನೀರು ತುಂಬಿದ ಮಡಿಕೆಗಳನ್ನು ನೇತು ಹಾಕುವುದು, ತಾರಸಿಗಳ ಮೇಲೆ ನೀರು ತುಂಬಿದ ಮಡಿಕೆಗಳನ್ನು ಇಡುವ ಮೂಲಕ ಬೇಸಿಗೆಯಲ್ಲಿ ಅವುಗಳಿಗೆ ದಣಿವಾರಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು. ಗುಬ್ಬಿಗಳು ಮನೆಯಲ್ಲಿ ಗೂಡು ನಿರ್ಮಿಸುವುದು ಸಾಮಾನ್ಯ. ಅದನ್ನು ಅಪಶಕುನವೆಂದು ಗೂಡು ನಾಶ ಮಾಡಬಾರದು ಎಂದು ಕಿವಿ ಮಾತು ಹೇಳಿದರು.

        ಕಾಂಕ್ರೀಟ್ ಕಾಡು, ಸೇತುವೆಗಳು, ಮೆಟ್ರೋ, ವಾಣಿಜ್ಯ ಸಂಕೀರ್ಣ, ಮೊಬೈಲ್ ಟವರುಗಳ ರೇಡಿಯೇಷನ್, ಗೂಡುಕಟ್ಟಲು ಜಾಗವಿಲ್ಲದ ಗಗನ ಚುಂಬಿ ಕಟ್ಟಡ.. ಎಂದು ಅಭಿವೃದ್ಧಿಯತ್ತ ಸಾಗುತ್ತಿರುವ ನಾವು ಅದರ ಸಂತತಿಯನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ತಂದುಕೊಂಡಿದ್ದೇವೆ. ಈಗ ಅದು ಒಂದು ಅಳಿವಿನಂಚಿಗೆ ಸೇರಿರುವ ಪಕ್ಷಿ ಸಂಕುಲಕ್ಕೆ ಸೇರಿದೆ ಎಂದು ಅತಂಕವನ್ನು ವ್ಯಕ್ತಪಡಿಸಿದರು.

        ಸಹಪ್ರಾಧ್ಯಾಪಕರು ಮತ್ತು ಮುಖ್ಯಸ್ಥರುಪ್ರಾಣಿ ಶಾಸ್ತ್ರ ವಿಭಾಗ.ಪ್ರೊ. ಸೈಯದ್ ನಜರುಲ್ಲಾ ಹುಸೇನಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಡಾ|| ಹೆಚ್.ಕೆ.ಎಸ್. ಸ್ವಾಮಿ ಸಹಾಯಕ ಪ್ರಾಧ್ಯಾಪಕರು ಪ್ರಾಣಿ ಶಾಸ್ತ್ರ ವಿಭಾಗದ ಡಾ|| ಧನಂಜಯ.ಎಸ್.ಜಿ .ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಗುಬ್ಬಚ್ಚಿಗಳಿಗಾಗಿ ಮರದ ಟೊಂಗೆಗಳಿಗೆ ನೀರು ಮತ್ತು ಆಹಾರಕ್ಕಾಗಿ ಎರಡು ಪಾತ್ರೆಗಳನ್ನು ಕಟ್ಟುವುದರ ಮೂಲಕ ಅವುಗಳ ಬದುಕಿಗೆ ಸಹಾಯವನ್ನು ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap