ಜಾನಪದ ಕಲೆ, ಕಲಾವಿದರು ಸಾಂಸ್ಕೃತಿಕ ಸಂಪತ್ತು: ತಿಮ್ಮೇಗೌಡ

ತುಮಕೂರು

       ಜಾನಪದ ನಮ್ಮ ಸಾಂಸ್ಕೃತಿಕ ಸಂಪತ್ತು ಅದನ್ನು ಮುಂದಿನ ಪೀಳಿಗೆ ಮುಂದುವರೆಸಿಕೊಂಡು ಹೋಗಲು ಅವರಲ್ಲಿ ಆಸಕ್ತಿ ಬೆಳೆಸಬೇಕು. ಜಾನಪದ ಕಲೆ ಹಾಗೂ ಜಾನಪದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ ತಿಮ್ಮೇಗೌಡ ಹೇಳಿದರು.

      ನಗರದ ಉಪ್ಪಾರಹಳ್ಳಿಯ ಇಂದಿರಾ ಕಾಲೇಜಿನಲ್ಲಿ ಪರಿಷತ್ತಿನ ಜಿಲ್ಲಾ ಘಟಕ, ಇಂದಿರಾ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ನಡೆದ ಜನಪದ ಕಲೋತ್ಸವ ಉದ್ಘಾಟಿಸಿದ ಅವರು, ಇಂದಿನ ಬದಲಾಗುತ್ತಿರುವ ತಂತ್ರಜ್ಞಾನ ಮನಸ್ಥಿತಿ, ಟಿವಿ, ಸಿನಿಮಾ ಸೆಳೆತಗಳ ನಡುವೆ ಇನ್ನೂ ಜಾನಪದ ಕಲೆ ಉಳಿದಿದೆ ಎಂದರೆ ಅದಕ್ಕಿರುವ ಶಕ್ತಿ ಹಾಗೂ ಅದನ್ನು ಬೆಳೆಸಲು ಹೊರಟಿರುವ ಕಲಾವಿದರ ಆಸಕ್ತಿ ಕಾರಣ ಎಂದರು.
ಜನಪದ ಕಲೆಗೆ ಸೂಕ್ತ ವೇದಿಕೆ, ಕಲಾವಿದರಿಗೆ ಪೂರಕ ಅವಕಾಶ, ಪ್ರೋತ್ಸಾಹವನ್ನು ಸರ್ಕಾರ, ಸಮಾಜ ಹಾಗೂ ನಾವೆಲ್ಲ ನೀಡಿ, ನಮ್ಮ ಸಾಂಸ್ಕೃತಿಕ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.

     ನಮ್ಮ ಈ ಶ್ರೀಮಂತ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಎಂಬ ಉದ್ದೇಶದಿಂದ ಡಾ. ಹೆಚ್ ಎಲ್ ನಾಗೇಗೌಡರು 1979 ಜಾನಪದ ಲೋಕ ಕಟ್ಟಿ ದೊಡ್ಡ ಕಲಾ ಸಂಗ್ರಹ ಮಾಡಿ ನೆರವಾಗಿದ್ದಾರೆ. ಕಲಾವಿದರ ಬಳಿಗೇ ಹೋಗಿ ಅವರ ಧ್ವನಿ, ಪ್ರದರ್ಶನವನ್ನು ದಾಖಲು ಮಾಡಿದ್ದಾರೆ, ಶ್ರಮವಹಿಸಿ ಅಂತಹ ಸಾವಿರಾರು ಗಂಟೆಗಳ ದಾಖಲೆ ಸಂಗ್ರಹಿಸಿದ್ದಾರೆ ಎಂದು ಶ್ಲಾಘಿಸಿದರು.

      ಯಾರಿಗೆ ನಮ್ಮ ಸಂಸ್ಕೃತಿ ಬಗ್ಗೆ ಅರಿವು ಇರುವುದೊ, ಯಾರು ಸಂಸ್ಕೃತಿಯನ್ನು ಅನುಸರಿಸುತ್ತಾರೊ ಅವರಿಗೆ ಸಂಸ್ಕಾರವಿರುತ್ತದೆ, ಮನುಷ್ಯನಿಗೆ ಸಂಸ್ಕಾರ ಮುಖ್ಯ, ಜಾನಪದರು ಸಂಸ್ಕಾರವನ್ನು ಸಾರಿ ಹೇಳಿದ್ದಾರೆ ಎಂದು ಟಿ ತಿಮ್ಮೇಗೌಡರು ಹೇಳಿದರು.ಕೆಲವು ಕಲಾವಿದರು ಜನಪದ ಕಲೆಯನ್ನು ಯುವಜನರಿಗೆ ಕಲಿಸಿ, ಮುಂದುವರೆಸುವ ಪ್ರಯತ್ನ ಮಾಡುತ್ತಿದ್ದಾರೆ. ಅನೇಕ ಯುವಕರೂ ಜಾನಪದ ಕಲೆಯಲ್ಲಿ ಆಸಕ್ತಿ ತೋರಿಸಿ, ರೂಢಿಸಿಕೊಂಡು ಕಲಾಪ್ರತಿಭೆ ತೋರುತ್ತಿರುವುದು ಒಳ್ಳೆಯ ಬೆಳವಣಿಗೆ. ನಮ್ಮ ಸಂಸ್ಕೃತಿ ಬಿಟ್ಟು ಪರಕೀಯ ಸಂಸ್ಕೃತಿ ಅನುಸರಿಸಿದರೆ ನಾವು ಮುಂದಿನ ತಲೆಮಾರಿಗೆ ಏನು ನೀಡುತ್ತೇವೆ ಎಂಬುದರ ಅರಿವಿರಲಿ ಎಂದರು.

        ಜಾನಪದ ಪರಿಷತ್ತಿನ ಜಿಲ್ಲಾ ಘಟಕಗಳನ್ನು ಬಲಪಡಿಸಿ, ಜಾನಪದ ಕಲೆ, ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯಕ್ರಮ ರೂಪಿಸಲಾಗುವುದು, ಯುವ ಜನರಲ್ಲಿ ಜಾನಪದದ ಆಸಕ್ತಿ ಬೆಳೆಸಲು ಪ್ರಯತ್ನಿಸಲಾಗುವುದು ಎಂದು ತಿಮ್ಮೇಗೌಡರು ಹೇಳಿದರು.

       ಶಾಸನ ತಜ್ಞ ಡಿ.ವಿ.ಪರಶಿವಮೂರ್ತಿ ಕೃತಿ ಕುರಿತು ಮಾತನಾಡಿ, ವಿಶ್ವ ವಿದ್ಯಾನಿಲಯದ ಯೂಜಿಸಿ ನಿಯಮಕ್ಕೆ ನಿಜವಾದ ಘನತೆ ತಂದ ಕೆಲವೇ ಕೆಲವು ವಿದ್ವಾಂಸರಲ್ಲಿ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಮೊದಲಿಗರಾಗಿ ನಿಲ್ಲುತ್ತಾರೆ. ನಿರ್ಲಿಪ್ತ ನೆಲೆಯ ಈ ವಿದ್ವಾಂಸ ಯಾವತ್ತೂ ಪ್ರಚಾರಗಳಿಗಿಂತ ಕ್ಷೇತ್ರ ಕಾರ್ಯದಲ್ಲಿ ತೊಡಗಿರುವುದು ನಮ್ಮಂತಹವರಿಗೂ ಸಂಕೋಚವಾಗುತ್ತದೆ ಎಂದರು.

       ಮೈಲಾರಲಿಂಗನನ್ನು ಜಾತಿ ಆಚೆಗೆ ಭಕ್ತಿ ಪ್ರಧಾನ ನೆಲೆಯಲ್ಲಿ ಕಂಡು ಪುರಾಣ, ಚರಿತ್ರೆ, ಶಾಸನವನ್ನು ಜಾನಪದದೊಂದಿಗೆ ಸಂವಹನ ಗೊಳಿಸಿರುವ ಕೃತಿ ಎಂದರು.ಕನ್ನಡ ಜನಪದ ಮಹಾಕಾವ್ಯ ಸಂಶೋಧನಾ ಕ್ಷೇತ್ರಕ್ಕೆ ಹೊಸ ಪ್ರಯೋಗ. ಬಹುದೊಡ್ಡ ಶ್ರಮದ, ಬಹು ಶಿಸ್ತಿನ ನೆಲೆಗಳಿಂದಾಗಿ ಈ ಕೃತಿ ಅಪೂರ್ವತೆಯನ್ನು ಪಡೆದುಕೊಂಡಿದೆ.

     ಜನಪದ ಮಹಾಕಾವ್ಯವನ್ನು ಹೇಗೆ ಬಹುಜ್ಞಾನ ಶಿಸ್ತುಗಳಿಂದ ಅಧ್ಯಯನ ಮಾಡಬೇಕು ಎಂಬುದಕ್ಕೆ ಇದಕ್ಕಿಂತ ಮತ್ತೊಂದು ಆಕರ ಗ್ರಂಥ ನಮ್ಮ ಮುಂದೆ ಇಲ್ಲ ಎಂದು ಅಭಿನಂದಿಸಿದರು ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಗೂ ಸಾಹಿತಿ ಡಾ. ಚಿಕ್ಕಣ್ಣ ಯೆಣ್ಣೆಕಟ್ಟೆ ಅವರ ಸಾಂಸ್ಕೃತಿಕ ವೀರ ಮೈಲಾರಲಿಂಗ ಕ್ಷೇತ್ರ ಕಾರ್ಯಾಧಾರಿತ ಅಧ್ಯಯನ ಕೃತಿಯನ್ನು ಹಿರಿಯ ಸಾಹಿತಿ ನಾಡೋಜ ಡಾ. ಕಮಲಾ ಹಂಪನಾ ಬಿಡುಗಡೆ ಮಾಡಿದರು.

         ನಂತರ ಮಾತನಾಡಿದ ಡಾ. ಕಮಲಾ ಹಂಪನಾ, ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೂ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿ ಡಾ. ಚಿಕ್ಕಣ್ಣ ಯೆಣ್ಣೆಕಟ್ಟೆ ಸಿದ್ದಪಡಿಸಿರುವ ಈ ಕೃತಿ ಅಧ್ಯಯನಶೀಲರಿಗೆ ಅಗತ್ಯವಿದೆ ಎಂದರು.ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ತಿರುಗಾಡಿ, ಅನೇಕ ಶಾಸನ. ಐತಿಹಾಸಿಕ ದಾಖಲಾತಿಗಳನ್ನು ಅಧ್ಯಯನ ಮಾಡಿ ಕ್ರೂಢೀಕರಿಸಿ ಕೃತಿ ರಚಿಸಿರುವ ಚಿಕ್ಕಣ್ಣ ಯೆಣ್ಣೆಕಟ್ಟೆ ಅಭಿನಂದನಾರ್ಹರು ಎಂದರು.

       ಇಂದು ಜಾನಪದ ಕಲೆ, ಕಲಾವಿದರು ಕಣ್ಮರೆಯಾಗುತ್ತಿದ್ದಾರೆ, ನಮ್ಮ ಬದುಕಿನ ಭಾಗವಾಗಿರುವ ಜಾನಪದ ಮನೆಯ ಆಚರಣೆಯಂತಾಗಬೇಕು, ಅದರೊಟ್ಟಿಗೆ ಬದುಕು ರೂಪುಗೊಳ್ಳುವಂತಾಗಬೇಕು ಎಂದು ಆಶಿಸಿದರು.ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಾ. ಚಿಕ್ಕಣ್ಣ ಯೆಣ್ಣೆಕಟ್ಟೆ ಪ್ರಾಸ್ತಾವಿಕ ನುಡಿಯಲ್ಲಿ, ಜಾನಪದ ಎಲ್ಲರ ಬದುಕು, ಅದೊಂದು ನಮ್ಮ ಜೀವನ ಕ್ರಮ ಎಂದರು.

         ಇಂತಹ ಶ್ರೇಷ್ಠ ಕಲೆ ಉಳಿಸಲು ಐಎಎಸ್ ಅಧಿಕಾರಿ ಹೆಚ್ ಎಲ್ ನಾಗೇಗೌಡರು, ನಿವೃತ್ತಿ ನಂತರ ಜಾನಪದ ಲೋಕ ಕಟ್ಟಿ, ಕಲೆ ಉಳಿಸುವ, ಈ ಕಲಾವಿದರನ್ನು ಬೆಳಗಿಸುವ ಕೆಲಸ ಮಾಡಿದರು. ಈ ಕಲೆಗೆ ಬೆನ್ನು ತಟ್ಟುವ ಉದ್ದೇಶದಿಂದ ಜಾನಪದ ಪರಿಷತ್ತು ಅನೇಕ ಕಾರ್ಯಕ್ರಮ ರೂಪಿಸುತ್ತಿದೆ ಎಂದರು.ಹಿರಿಯ ಭಾಗವತ, ಕಲ್ಮನೆ ನಂಜಪ್ಪ, ಕಲಾವಿದೆ ಗಂಗಹುಚ್ಚಮ್ಮ, ಮುಖವೇಣಿ ಮೂಡಲಗಿರಿಯಪ್ಪ ಸೇರಿದಂತೆ ಜನಪದ ವಿವಿಧ ಪ್ರಕಾರಗಳ 15 ಕಲಾವಿದರನ್ನು ಸನ್ಮಾನಿಸಲಾಯಿತು.

       ಪರಿಷತ್ತಿನ ಕೋಶಾಧ್ಯಕ್ಷ ಸುಧೀರ್, ಶಾಸನ ತಜ್ಞ ಡಾ.ಡಿ ವಿ ಪರಮಶಿವಮೂರ್ತಿ, ಇಂದಿರಾ ವಿದ್ಯಾಸಂಸ್ಥೆಯ ಸಿ ಶಿವಮೂರ್ತಿ, ರೀಟಾ ಶಿವಮೂರ್ತಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಂಗಪ್ಪ, ಪ್ರೊ. ಮಮತ, ಪತ್ರಕರ್ತ ಜಿ ಇಂದ್ರಕುಮಾರ್ ಮೊದಲಾದವರು ಭಾಗವಹಿಸಿದ್ದರು.ಇದಕ್ಕೂ ಮೊದಲು ಉಪ್ಪಾರಹಳ್ಳಿ ವೃತ್ತದಿಂದ ಹೆಸರಾಂತ ಕಲಾವಿದರ ಜಾನಪದ ಕಲಾಪ್ರದರ್ಶನದ ಮೆರವಣಿಗೆ ಏರ್ಪಡಿಸಲಾಗಿತ್ತು. ಜಿಲ್ಲೆಯ ಪ್ರಾತಿನಿಧಿಕ ಜನಪದ ಕಲೆಗಳಾದ ಮೂಖವೀಣೆ, ಗಣೆ, ಡಮರುಗ, ಸೋಮನ ಕುಣಿತ, ಗೊರವರ ಕುಣಿತ ಮೊದಲಾದ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap