ಜಿಲ್ಲೆಯ ಪ್ರಗತಿಯ ರಥವನ್ನು ಮುಂದೆ ಎಳೆಯೋಣ

ದಾವಣಗೆರೆ:

       ನಿಕಟಪೂರ್ವ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಇಲ್ಲಿಯ ವರೆಗೂ ಎಳೆದು ತಂದಿರುವ ಜಿಲ್ಲೆಯ ಪ್ರಗತಿಯ ರಥವನ್ನು ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಹೆಗಲಿಗೆ ಹೆಗಲುಕೊಟ್ಟು ಮುಂದೆ ಎಳೆಯೋಣ ಎಂದು ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.

       ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಿಕಟಪೂರ್ವ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರಿಗಾಗಿ ಏರ್ಪಡಿಸಿದ್ದ ಭೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

        ಮಹಾತ್ಮ ಗಾಂಧೀಜಿ ಅವರ ಮಾತಿನಂತೆ ಜೀವನವೇ ಒಂದು ಸಂದೇಶ ಎಂಬಂತೆ ರಮೇಶ್ ಅವರ ವ್ಯಕ್ತಿತ್ವವಾಗಿದೆ. ಬಸವಣ್ಣನವರ ಆಶಯದಂತೆ ಯಾವುದೇ ವರ್ಗದ ಜನಸಾಮಾನ್ಯರು ಬಂದರೂ ಅವರನ್ನು ತಾಳ್ಮೆಯಿಂದ ಮಾತನಾಡಿಸಿ, ಸಮಸ್ಯೆಗಳನ್ನು ಅರಿತು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದರು. ಇವರ ತಾಳ್ಮೆ ಮತ್ತು ಆಲಿಸುವಿಕೆಯ ಗುಣವನ್ನು ಬೆಳೆಸಿಕೊಂಡರೇ, ಎಂಥವರೂ ಬೇಕಾದರೂ ಮುಂದೆ ಬರಲು ಸಾಧ್ಯವಾಗಲಿದೆ ಎಂದು ಹೇಳಿದರು.

         ಡಿ.ಎಸ್.ರಮೇಶ್ ಅವರು ಜಿಲ್ಲೆಯಲ್ಲಿ ತಮ್ಮದೇಯಾದಂಥ ಛಾಪು ಮೂಡಿಸಿ ಹೋಗಿದ್ದಾರೆ ಎಂದ ಅವರು, ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಸಹ ಉತ್ತಮ ಜ್ಞಾನಿ ಹಾಗೂ ದಕ್ಷ ಅಧಿಕಾರಿಯಾಗಿದ್ದಾರೆ. ನಿಕಟಪೂರ್ವ ಜಿಲ್ಲಾಧಿಕಾರಿಗಳಿಗೆ ಕೊಟ್ಟ ಸಹಕಾರವನ್ನು ಇವರಿಗೂ ನೀಡುವ ಮೂಲಕ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡ್ಡೊಯ್ಯೊಣ ಎಂದರು.

         ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಮಾತನಾಡಿ, ತಾವು ಹೊಸದಾಗಿ ಬಂದ ಹೊಸ್ತಿಲಿನಲ್ಲಿ ವಿಧಾನಸಭಾ ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವುದು ಸವಾಲಾಗಿತ್ತು. ಆದರೆ, ಡಿ.ಎಸ್.ರಮೇಶ್ ಅವರು ಪೊಲೀಸ್ ಇಲಾಖೆಗೆ ನೀಡಿದ ಸಹಕಾರ ಮತ್ತು ಮಾರ್ಗದರ್ಶನದಿಂದ ಜಿಲ್ಲೆಯಲ್ಲಿ ಶಾಂತಿಯುತ ಚುನಾವಣೆ ನಡೆಸಲು ಸಾಧ್ಯವಾಯಿತು ಎಂದರು.

        ರಮೇಶ್ ಅವರಷ್ಟು ತಾಳ್ಮೆಯಿಂದ ಇರುವ ಅಧಿಕಾರಿಯನ್ನು ನಾನು ನೋಡಿಯೇ ಇಲ್ಲ. ಸಂಯಮ ಹಾಗೂ ಶಿಸ್ತಿಗೆ ಇನ್ನೊಂದು ಹೆಸರೇ ರಮೇಶ್ ಆಗಿದ್ದಾರೆ. ಇವರ ಅಧಿಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಒಳ್ಳೆಯ ಅಭಿವೃದ್ಧಿ ಕೆಲಸಗಳಾಗಿವೆ. ಈಗ ನೂತನ ಜಿಲ್ಲಾಧಿಕಾರಿಗಳಾಗಿ ಆಗಮಿಸಿರುವ ಡಾ.ಬಗಾದಿ ಗೌತಮ್ ಅವರು ಸಹ ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿದ್ದಾರೆ ಎಂದರು.

        ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ನಜ್ಮಾ ಮಾತನಾಡಿ, ರಮೇಶ್ ಅವರು ಎಷ್ಟೆ ಜನರು ಬಂದರೂ ಎಲ್ಲರನ್ನು ತಾಳ್ಮೆಯಿಂದ ಮಾತನಾಡಿಸಿ, ಬೆಳಿಗ್ಗೆಯಿಂದ ಸಂಜೆಯ ವರೆಗೂ ಕಚೇರಿಯಲ್ಲಿ ಕೂತು ಜನರ ಸಮಸ್ಯೆ ಅರಿತು ಆ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಕೆಲಸ ಮಾಡುತ್ತಿದ್ದರು. ಅಲ್ಲದೆ, ಎಲ್ಲಾ ಅಧಿಕಾರಿಗಳಲ್ಲಿ ಅವರವರ ಜವಾಬ್ದಾರಿಯನ್ನು ಅರ್ಥ ಮಾಡಿಸುವ ಮೂಲಕ ಕೆಲಸ ಪಡೆಯುತ್ತಿದ್ದರು. ಇಂಥಹ ದಕ್ಷ ಅಧಿಕಾರಿ ಮುಂದೆ ಸಿಗಲು ಸಾಧ್ಯವಿಲ್ಲ ಎಂದರು.

        ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಸಹ ದಕ್ಷ ಹಾಗೂ ನೇರ ನಿಷ್ಠುರವಾದಕ್ಕೆ ಹೆಸರು ವಾಸಿಯಾಗಿದ್ದಾರೆ. ಎಲ್ಲಾ ಅಧಿಕಾರಿಗಳು ಇವರಿಗೆ ಸಹಕಾರ ನೀಡುವ ಮೂಲಕ ಜಿಲ್ಲೆಗೆ ಒಳ್ಳೆಯ ಹೆಸರು ತರೋಣ ಎಂದರು.

          ಸ್ಪೂರ್ತಿ ಸೇವಾ ಸಂಸ್ಥೆಯ ರೂಪಾ ನಾಯ್ಕ್ ಮಾತನಾಡಿ, ನಿಕಟಪೂರ್ವ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಮಕ್ಕಳು, ಮಹಿಳೆಯರು ಮತ್ತು ರೈತರ ಸಮಸ್ಯೆಗಳಿಗೆ ನಿರಂತರ ಸ್ಪಂದಿಸುತ್ತಿದ್ದರು. ಇವರ ಪರಿಶ್ರಮದ ಕಾರಣದಿಂದ ಜಿಲ್ಲೆಯಲ್ಲಿರುವ ಐದು ವರ್ಷದೊಳಗಿನ ವಿಕಲಚೇತನ ಮಕ್ಕಳಿಗೆ ಅಂಗವಿಕಲರ ಗುರುತಿನ ಚೀಟಿ ಕೊಡಿಸುವ ಮೂಲಕ ಪಿಂಚಣಿ ಸಿಗುವಂತೆ ಮಾಡಿದ್ದಾರೆ. ಅಲ್ಲದೆ, ಬಗರ್‍ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 2 ವರ್ಷದ 3 ತಿಂಗಳ ಅವಧಿಯಲ್ಲಿ ರಮೇಶ್ ಅವರು ಎಲ್ಲಾ ವರ್ಗದ ಜನರನ್ನು ಸ್ಪಂದಿಸಿದ್ದಾರೆ. ಹೊಸ ಜಿಲ್ಲಾಧಿಕಾರಿಗಳು ಸಹ ಮಾದರಿ ಜಿಲ್ಲೆನ್ನಾಗಿ ರೂಪಿಸಲು ಸಹಕರಿಸಿ ಎಂದರು.
ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ವಿಭಾಗೀಯ ಅಧಿಕಾರಿ ಎನ್.ಟಿ.ಯರ್ರಿಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ.ಪಟ್ಟಸ್ವಾಮಿ, ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್ ಮತ್ತಿತರರು ಮಾತನಾಡಿದರು.

       ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಡಿ.ಎಸ್.ರಮೇಶ್ ಅವರ ಪತ್ನಿ ಶೋಭಾ ರಮೇಶ್, ಚಿನ್ಮಯಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap