ಪಿಯು ಬೋರ್ಡ್‍ನಲ್ಲೂ ಅಕಾಡೆಮಿಕ್ ಕೌನ್ಸಿಲ್ ಸ್ಥಾಪಿಸಿ

0
10

ದಾವಣಗೆರೆ :

       ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಹಾಗೂ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕಾದರೆ ಪಿಯು ಬೋರ್ಡ್‍ನಲ್ಲಿ ಅಕಾಡೆಮಿಕ್ ಕೌನ್ಸಿಲ್ ಸ್ಥಾಪನೆಯಾಗಬೇಕೆಂದು ಶಿಕ್ಷಣ ತಜ್ಞ, ಅಂಕಣಕಾರ ಡಾ.ಗುರುರಾಜ ಕರ್ಜಗಿ ಪ್ರತಿಪಾದಿಸಿದರು.

         ನಗರದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿ, ಅವರು ಮಾತನಾಡಿದರು.

          ವಿಶ್ವವಿದ್ಯಾನಿಲಯಗಳಲ್ಲಿರುವ ಅಕಾಡೆಮಿಕ್ ಕೌನ್ಸಿಲ್ ಒಪ್ಪಿದರೆ ಮಾತ್ರ ಪಠ್ಯ ಪುಸ್ತಕಗಳ ಬದಲಾವಣೆ ಆಗುತ್ತದೆ. ಅದೇರೀತಿ ಪಿಯು ಬೋರ್ಡ್‍ನಲ್ಲೂ ಅಕಾಡೆಮಿಕ್ ಕೌನ್ಸಿಲ್ ಸ್ಥಾಪನೆಯಾದರೆ, ಪಠ್ಯ ಪುಸ್ತಕ ಬದಲಾವಣೆಯ ಸಂದರ್ಭದಲ್ಲಿ ವಿಷಯವಾರು ಉಪನ್ಯಾಸಕರಿಂದ ಮಾಹಿತಿ ಪಡೆದು, ಅನುಕೂಲಕರ ಮಾಹಿತಿಗಳನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಪಿಯು ಬೋರ್ಡ್‍ನಲ್ಲಿ ಅಕಾಡೆಮಿಕ್ ಕೌನ್ಸಿಲ್ ಸ್ಥಾಪನೆಗಾಗಿ ಚಿಂತನೆ ನಡೆಸಬೇಕೆಂದು ಒತ್ತಾಯಿಸಿದರು.

          ಕೇವಲ ಪಠ್ಯಪುಸ್ತಕ ಬದಲಾವಣೆ ಮಾತ್ರ ಅಕಾಡೆಮಿಕ್ ಕೌನ್ಸಿಲ್‍ನ ಕೆಲಸ ಆಗಬಾರದು. ಅದರ ಜೊತೆಗೆ ಶಿಕ್ಷಣ ಪ್ರಸಾರ ಹಾಗೂ ಜ್ಞಾನಸೃಷ್ಠಿಗೂ ಒತ್ತು ನೀಡಬೇಕು. ಈ ಕೌನ್ಸಿಲ್‍ನಲ್ಲಿ ಶಿಕ್ಷಣ ತಜ್ಞರು ಇದ್ದರೆ, ಪಠ್ಯ ರಚನೆಯ ಸಂದರ್ಭದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದರು.

         ಹೊಸ ಶಿಕ್ಷಕರಲ್ಲಿ ಆತ್ಮವಿಶ್ವಾಸ ತುಂಬಿ, ಹಳೆಯ ಶಿಕ್ಷಕರಿಗೆ ಹೊಸ ಪಠ್ಯದ ತರಬೇತಿ ನೀಡಲು ತಾಲೂಕುವಾರು ತರಬೇತಿ ಶಿಬಿರಗಳನ್ನು ಸಹ ಆಯೋಜಿಸಬೇಕಾಗಿದೆ. ಇದಾದಾಗ ಮಾತ್ರ ಶಿಕ್ಷಣದ ಗುಣಮಟ್ಟ ಸುಧಾರಣೆ ಆಗಲು ಸಾಧ್ಯವಾಗಲಿದೆ ಎಂದರು.
ಐಎಎಸ್ ಓದಿರುವ ಅಧಿಕಾರಿಗಳಿಂದ ಶಿಕ್ಷಣದ ಗುಣಮಟ್ಟ ಸುಧಾರಿಸಲು ಸಾಧ್ಯವೇ ಇಲ್ಲ. ಇವರಿಗೆ ವರ್ಗಾವಣೆ ಅನಿವಾರ್ಯ ಆಗಿರುವ ಕಾರಣ, ಇರುವಷ್ಟು ದಿನ ಆಡಳಿತದಲ್ಲಿ ತಮ್ಮದೇ ಛಾಪು ಮೂಡಿಸಲು ತಮಗೆ ತಿಳಿದ ಮಟ್ಟದಲ್ಲಿ ಕೆಲ ನೀತಿ ಜಾರಿಗೆ ತಂದು ಬಿಡುತ್ತಾರೆ. ಹೀಗಾಗಿ ಇವರು ವರ್ಗಾವಣೆಯಾಗಿ ಹೋದ ನಂತರ ಹೊಸದಾಗಿ ಬರುವ ಅಧಿಕಾರಿಗಳಿಗೆ ಅರ್ಥವಾಗದೇ, ಗೊಂದಲಕ್ಕೆ ಒಳಗಾಗುವುದರಿಂದ ಶಿಕ್ಷಣ ಅಧೋಗತಿಗೆ ಇಳಿಯುತ್ತಿದೆ ಎಂದು ಹೇಳಿದರು.

       ಶಿಕ್ಷಕ ವೃತ್ತಿಗೆ ಗೌರವ ತಂದುಕೊಡಬೇಕಾದರೆ, ಜೀವನದಲ್ಲಿ ಮತ್ತು ವೃತ್ತಿಯಲ್ಲಿ ಒಂದೇ ತರಹನಾಗಿರಬೇಕು. ಶಾಲೆಯಲ್ಲಿ ಒಂದು ರೀತಿ, ಹೊರಗಡೆಯಲ್ಲಿ ಮತ್ತೊಂದು ರೀತಿಯಲ್ಲಿ ಇರಬಾರದು. ವಿದ್ಯಾರ್ಥಿಗಳು ಶಿಕ್ಷಕರ ಮಾತಿಗಿಂತ ಅವರ ವರ್ತನೆ ಮೇಲೆ ಹೆಚ್ಚು ನಿಗಾ ಇಟ್ಟಿರುತ್ತಾರೆ. ಹೀಗಾಗಿ ಶಿಕ್ಷಕರ ವರ್ತನೆಯನ್ನೇ ವಿದ್ಯಾರ್ಥಿಗಳು ಸಹ ಅನುಕರಿಸುತ್ತಾರೆ. ಶಾಲೆಗೆ ಸರಿಯಾದ ಸಮಯಕ್ಕೆ, ಪೂರ್ವ ತಯಾರಿಯೊಂದಿಗೆ ಬಂದು ವಿದ್ಯಾರ್ಥಿಗಳ ಮನ ಮುಟ್ಟುವಂತೆ ಉತ್ತಮವಾಗಿ ಪಾಠ ಮಾಡಬೇಕೆಂದು ಕಿವಿಮಾತು ಹೇಳಿದರು.

       ಶಿಕ್ಷಕರು ಮಕ್ಕಳನ್ನು ತಮ್ಮ ಮಕ್ಕಳೆಂದೇ ಭಾವಿಸಬೇಕು. ಮಕ್ಕಳಲ್ಲಿ ಜಾಣ ಹಾಗೂ ದಡ್ಡ ಎಂಬುದಾಗಿ ವಿಂಗಡಿಸಬಾರದು. ಎಲ್ಲಾ ಮಕ್ಕಳಲ್ಲೂ ಒಂದಿಲ್ಲೊಂದು ರೀತಿಯ ಪ್ರತಿಭೆ ಇದ್ದೇಇರುತ್ತದೆ. ಅದನ್ನು ಗುರುತಿಸಿ, ಆ ಪ್ರತಿಭೆ ಅನಾವರಣಕ್ಕೆ ಸೂಕ್ತ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಯಶಸ್ವಿ ಶಿಕ್ಷಕರಾಗಲು ಸಾಧ್ಯ ಎಂದರು.

      ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ದೇಶದಲ್ಲಿ 400ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು, 270ಕ್ಕೂ ಹೆಚ್ಚು ವೈಜ್ಞಾನಿಕ ಸಂಶೋಧನಾ ಕೇಂದ್ರಗಳು, ಹಲವಾರು ಶೈಕ್ಷಣಿಕ ಅಭಿವೃದ್ಧಿ ಕೇಂದ್ರಗಳಿವೆ. ಆದರೂ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಉನ್ನತ ಶಿಕ್ಷಣದಲ್ಲೂ ಗುಣಮಟ್ಟ ಕ್ಷೀಣಿಸುತ್ತಿರುವುದರಿಂದ, ಯುವಕರಲ್ಲಿ ಕೌಶಲ್ಯದ ಕೊರತೆ ಎದುರಾಗಿ ನಿರುದ್ಯೋಗ ಸಮಸ್ಯೆ ದೇಶದಲ್ಲಿ ಮನೆ ಮಾಡಿದೆ ಎಂದರು.

        ಪ್ರಾಸ್ತಾವಿಕ ಮಾತನಾಡಿದ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ತಿಮಯ್ಯ ಪುರ್ಲೆ, ಗುರುಭವನದ ಮಾದರಿಯಲ್ಲಿ ಪದವಿ ಪೂರ್ವ ಶಿಕ್ಷಣದ ಶೈಕ್ಷಣಿಕ ಕಾರ್ಯಕ್ರಮ ಆಯೋಜಿಸಲು ಉಪನ್ಯಾಸಕರ ಭವನ ನಿರ್ಮಿಸಿಕೊಡಬೆಕು. ಉಪನ್ಯಾಸಕರು ಹಾಗೂ ಪ್ರಾಂಶುಪಾಲರ ವೇತನಕ್ಕೆ ಸಂಬಂಧಿಸಿದಂತೆ ಕುಮಾರ ನಾಯಕ್ ವರದಿಯ ಶಿಫಾರಸುಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು. ಪ್ರೌಢ ಶಾಲೆಗಳಿಂದ ಪದವಿ ಪೂರ್ವ ಕಾಲೇಜುಗಳಿಗೆ ಬಡ್ತಿ ಹೊಂದಿರುವ ಉಪನ್ಯಾಸಕರಿಗೆ ಪ್ರೌಢಶಾಲೆಯಲ್ಲಿ ಸೇವೆ ಆರಂಭಿಸಿದಾಗಿನಿಂದ ಕಾಲಮಿತಿ ವೇತನ ಬಡ್ತಿಯನ್ನು ಮಂಜೂರು ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು.ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ ಕಾರ್ಯಕ್ರಮ ಉದ್ಘಾಟಿಸಿದರು.

          ಕಾರ್ಯಕ್ರಮದಲ್ಲಿ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಹಾಲೇಶಪ್ಪ, ನೀಲಗಿರಿಯಪ್ಪ, ತಿಪ್ಪೇಸ್ವಾಮಿ ರೇವಣಸಿದ್ದಪ್ಪ, ಎಂ.ಶಿವಮೂರ್ತಿ, ಮಂಜುನಾಥ ಐರಣಿ, ಸಂಘದ ಜಿಲ್ಲಾ ಅಧ್ಯಕ್ಷ ಬಿ.ಪಾಲಾಕ್ಷಿ, ಸಂಘದ ಕಾರ್ಯಾಧ್ಯಕ್ಷ ಪಿ.ನಾಗಪ್ಪ, ಡಾ.ದಾದಾಪೀರ್ ನವಿಲೇಹಾಳ್, ಎಸ್.ಆರ್.ವೆಂಕಟೇಶ್, ಎಂ.ಜಯಣ್ಣ, ಎಂ.ಪಿ.ಕರಿಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here