ಕಾರ್ಖಾನೆ, ಸಂಭವನೀಯ ರಾಸಾಯನಿಕ ವಿಪತ್ತು ತಡೆಗೆ ವಿಶೇಷ ಕಾಳಜಿ ವಹಿಸಲು ಡಿಸಿ ಸೂಚನೆ

ಹಾವೇರಿ

         ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಗಳ ಸಂಭವನೀಯ ರಾಸಾಯನಿಕ ವಿಪತ್ತುಗಳ ತಡೆಗೆ ವಿಶೇಷ ಕಾಳಜಿ, ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವಂತೆ ಕಾರ್ಖಾನೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಸೂಚನೆ ನೀಡಿದರು.

         ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪಾಯಕಾರಿ ಕಾರ್ಯಾಚರಣೆ ಹೊಂದಿರುವ ಕಾರ್ಖಾನೆಗಳ ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

          ಜಿಲ್ಲೆಯಲ್ಲಿ ಯಾವುದೇ ರೀತಿಯ ವಿಪತ್ತುಗಳು ಸಂಭವಿಸಬಾರದು. ಅಪಾಯಕಾರಿಯಾದ ರಾಸಾಯನಿಕ ಪದಾರ್ಥಗಳ ಬಳಕೆಯಿಂದ ಯಾವುದೇ ತರದ ಅವಘಡಗಳು ಜರುಗದಂತೆ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು. ವೈಜ್ಞಾನಿಕವಾಗಿ ಸಂಭವನೀಯ ಅವಘಡಗಳನ್ನು ತಡೆಯುವಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತಂತೆ ಸೂಕ್ತ ತರಬೇತಿ, ಉಪಕರಣಗಳು ಸೇರಿದಂತೆ ವಿಪತ್ತು ಯೋಜನೆಗಳನ್ನು ರೂಪಿಸಿಕೊಂಡು ಸದಾ ಸನ್ನದ್ಧರಾಗುವಂತೆ ಕಾರ್ಖಾನೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

         ವಿಪತ್ತು ಜರುಗದಂತೆ ತಡೆಯುವುದು, ವಿಪತ್ತಿನ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳು, ವಿಪತ್ತಿನ ನಂತರ ಪರಿಹಾರ ಕಾರ್ಯಗಳ ಕುರಿತಂತೆ ಕಾಲಕಾಲಕ್ಕೆ ಸಭೆ ನಡೆಸಿ ರಾಷ್ಟ್ರೀಯ ವಿಪತ್ತು ನಿರ್ವಹಣೆಯ ಅಡಿಯಲ್ಲಿ ಮಾರ್ಗಸೂಚಿಯಂತೆ ಯೋಜಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

         ಅತೀ ಹೆಚ್ಚು ಪರಿಣಾಮ ಬೀರುವ ರಾಸಾಯನಿಕ ಬಳಕೆಯ ಕಾರ್ಖಾನೆಗಳನ್ನು ಗುರುತಿಸಿಕೊಳ್ಳಬೇಕು. ಕಾಲಕಾಲಕ್ಕೆ ತಪಾಸಣೆ ನಡೆಸಬೇಕು. ಅಪಘಾತ ತಡೆಯುವ ನಿಟ್ಟಿನಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಕುರಿತಂತೆ ಪರಿಶೀಲನೆ, ವಿಪತ್ತು ತಡೆಯ ಪಡೆಯ ಮಾನವ ಸಂಪನ್ಮೂಲ, ಉಪಕರಣಗಳ ಸಿದ್ಧತೆ ಹಾಗೂ ಅಪಾಯಕಾರಿ ಸ್ಥಳದಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಕುರಿತಂತೆ ಕಾರ್ಖಾನೆಗಳು, ಬಾಯ್ಲರ್‍ಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಚಿನ್ಮಯಿ ತೋರ್ಗಲ್ ಹಾಗೂ ಪರಿಸರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

         ಗ್ರಾಸೀಂ ಕಂಪನಿಯಲ್ಲಿ ಬಳಕೆಮಾಡುತ್ತಿರುವ ಅಪಾಯಕಾರಿ ಕೆಮಿಕಲ್‍ಗಳ ಸುರಕ್ಷತಾ ನಿರ್ವಹಣೆ ಕುರಿತಂತೆ ಗರಿಷ್ಠ ಎಚ್ಚರ ವಹಿಸಲು ಸೂಚನೆ ನೀಡಿದರು. ಕ್ಲೋರಿನ್ ದಾಸ್ತಾನು, ಕಾರ್ಬನ್ ಸಲ್ಪೇಟ್‍ಗಳ ದಾಸ್ತಾನು ಪ್ರಮಾಣ ಹಾಗೂ ನಿರ್ವಹಣೆಯನ್ನು ಮಾರ್ಗಸೂಚಿ ಅನುಸಾರ ಕೈಗೊಳ್ಳಬೇಕು. ಸುರಕ್ಷತಾ ನಿರ್ವಹಣೆಯ ಅಧಿಕಾರಿಗಳ ಆರೋಗ್ಯ ಹಾಗೂ ದಾಸ್ತಾನು ಸ್ಥಳದ ಸುರಕ್ಷತೆ ಕುರಿತಂತೆ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

         ಆಕಸ್ಮಿಕ ಅವಘಡ ಸಂಭವಿಸಿದರೆ ಬಾಧಿತವಾಗುವ ಹಳ್ಳಿಗಳ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣೆ ಕುರಿತಂತೆ ಜಾಗೃತಿ ಮೂಡಿಸಬೇಕು. ಸ್ಥಳೀಯ ಸಂಘ-ಸಂಸ್ಥೆಗಳು ನಾಗರಿಕರು, ಸ್ಥಳೀಯ ಗ್ರಾಮ ಪಂಚಾಯತಿಗಳ ಸಹಯೋಗದಲ್ಲಿ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು ಹಾಗೂ ಕಾರ್ಖಾನೆಯಲ್ಲಿ ಮಾಕ್ ಡ್ರೀಲ್ ಮೂಲಕ ವಿಪತ್ತು ನಿರ್ವಹಣೆಯ ಅಣುಕು ಕಾರ್ಯಾಗಾರವನ್ನು ಕನಿಷ್ಠ ವರ್ಷಕ್ಕೆ ಎರಡುಬಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

         ಸಭೆಯಲ್ಲಿ ನಗರಸಭೆ ಪರಿಸರ ಅಧಿಕಾರಿಗಳು, ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಗ್ರಾಸೀಂ ಕಾರ್ಖಾನೆಯ ಅಧಿಕಾರಿಗಳು ಒಳಗೊಂಡಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap