ಜನರನ್ನು ಜಾಗೃತಗೊಳಿಸುವ ಮಹತ್ವದ ಕಾರ್ಯವನ್ನು ಎನ್ನೆಸ್ಸೆಸ್ ಮಾಡುತ್ತದೆ

ಹೊನ್ನಾಳಿ:

       ಸಮುದಾಯದತ್ತ ತೆರಳಿ ಸೇವೆ ಸಲ್ಲಿಸುವ, ಜನರನ್ನು ಜಾಗೃತಗೊಳಿಸುವ ಮಹತ್ವದ ಕಾರ್ಯವನ್ನು ಎನ್ನೆಸ್ಸೆಸ್ ಮಾಡುತ್ತದೆ ಎಂದು ಕೂಲಂಬಿ-ಕುಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಆರ್. ಭೀಮಾನಾಯ್ಕ ಹೇಳಿದರು.

       ಗುರುವಾರ ತಾಲೂಕಿನ ಕೂಲಂಬಿ-ಕುಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ “ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವನೆಗಾಗಿ ವಿದ್ಯಾರ್ಥಿಗಳು” ಎಂಬ ಶೀರ್ಷಿಕೆಯಡಿ ಕೂಲಂಬಿ ಮತ್ತು ಕುಂದೂರು ಗ್ರಾಮಗಳಲ್ಲಿ ಹಮ್ಮಿಕೊಂಡ ಎನ್ನೆಸ್ಸೆಸ್ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

      ಎನ್ನೆಸ್ಸೆಸ್ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಗ್ರಾಮೀಣ ಪ್ರದೇಶದ ಬದುಕನ್ನು ಎಲ್ಲರಿಗೂ ಪರಿಚಯಿಸುವುದೇ ಶಿಬಿರದ ಗುರಿಯಾಗಿದೆ. ಹಾಗಾಗಿ, ಎಲ್ಲರೂ ಸಕ್ರಿಯವಾಗಿ ಶಿಬಿರದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

       ನಾನು ಈ ರೀತಿ ಕೆಲಸ ಮಾಡುತ್ತೇನೆ, ನೀವೂ ನಿಮ್ಮ ನಿಮ್ಮ ಕೆಲಸಗಳನ್ನು ಇದೇ ರೀತಿ ಮಾಡಿ ಮಾಡಿಕೊಳ್ಳಿ ಎಂದು ತಿಳಿಸುವುದೇ ಎನ್ನೆಸ್ಸೆಸ್‍ನ ಗುರಿಯಾಗಿದೆ. ಮಹಾತ್ಮ ಗಾಂಧಿ ಅವರ ನಿಲುವು ಕೂಡ ಇದೇ ಆಗಿತ್ತು. ಜನರಿಗಾಗಿ ನಾವು ಸೇವೆ ಮಾಡಬೇಕು ಎಂಬುದನ್ನು ಸಬರಮತಿ ಆಶ್ರಮದಲ್ಲಿ ಅವರು ತಿಳಿಸುತ್ತಿದ್ದರು. ಗಾಂಧಿ ಕೇವಲ ಬೇರೆಯವರಿಗೆ ಉಪದೇಶ ಮಾಡುತ್ತಿರಲಿಲ್ಲ. ಸ್ವತಃ ತಾವೂ ಕೆಲಸ ಮಾಡುತ್ತಿದ್ದರು.

       ಆಶ್ರಮದಲ್ಲಿನ ಶೌಚಾಲಯಗಳನ್ನೂ ಸ್ವಚ್ಛಗೊಳಿಸುತ್ತಿದ್ದರು. ಅದೇ ರೀತಿ ಮದರ್ ಥೆರೇಸಾ ಪಾಶ್ಚಾತ್ಯರಾದರೂ ಭಾರತದ ಕರ್ಮಭೂಮಿಯಲ್ಲಿ ಅನನ್ಯ ಸೇವೆ ಮಾಡುವ ಮೂಲಕ ಜನರ ಪ್ರೀತಿ ಗಳಿಸಿದರು. ಕೊಳಚೆಪ್ರದೇಶಗಳ ರೋಗಿಗಳು, ದೀನ-ದುರ್ಬಲರ ಸೇವೆ ಸೇವೆ ಮಾಡಿದರು. ಈ ರೀತಿ ಹಲವಾರು ವ್ಯಕ್ತಿಗಳು, ಸಾಧಕರು ಸೇವೆ ಸಲ್ಲಿಸಿದ್ದಾರೆ. ಇದು ನಮೆಗೆಲ್ಲರಿಗೂ ಮಾದರಿಯಾಗಬೇಕು ಎಂದು ವಿವರಿಸಿದರು.

       ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಮಂಜುನಾಥ್ ಐರಣಿ ಮಾತನಾಡಿ, ಎನ್ನೆಸ್ಸೆಸ್ ಶಿಬಿರಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ರಾಮಪ್ಪ ಪಾಟೀಲ್, ಒ. ಕುಮಾರ್, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ಎನ್.ವಿ. ವರಗಿರಿ, ಬಸವರಾಜಪ್ಪ, ಕೆ. ಉಮಾಪತಿ, ಬಿ.ಎಸ್. ಅಜ್ಜಯ್ಯ, ಪ್ರಕಾಶ್, ಕೂಲಂಬಿ ಹಾಗೂ ಕುಂದೂರು ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.ಪೂಜಾ, ಶಾಲಿನಿ ಪ್ರಾರ್ಥಿಸಿದರು. ಪವನ್ ಸ್ವಾಗತಿಸಿದರು. ರಂಜಿತ ನಿರೂಪಿಸಿದರು. ಕಾವ್ಯ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap