ಅಪೂರ್ಣ ಕಾಮಗಾರಿಗಳಿಗೂ ಬಿಲ್ ಪಾವತಿಸಿರುವ ಹಿನ್ನೆಲೆ ಜಿ.ಪಂ. ಉಪ ವಿಭಾಗಕ್ಕೆ ಶಾಸಕರ ದಿಢೀರ್ ಭೇಟಿ

0
7

ಶಿರಾ

          ವಿಧಾನಸಭಾ ಕ್ಷೇತ್ರ ಚುನಾವಣೆಯ ನಂತರ ತಾಲ್ಲೂಕಿನಲ್ಲಿ ಅಪೂರ್ಣಗೊಂಡ ಕಾಮಗಾರಿಗಳಿಗೂ ವರ್ಗಾವಣೆಗೊಂಡ ಕೆಲ ಎಂಜಿನಿಯರ್‍ಗಳು ಬಿಲ್ ಪಾವತಿಸಿದ್ದಾರೆಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಶಾಸಕ ಬಿ.ಸತ್ಯನಾರಾಯಣ್ ಇಲ್ಲಿನ ಜಿ.ಪಂ. ಎಂಜಿನಿಯರ್ ಉಪ ವಿಭಾಗಕ್ಕೆ ಶುಕ್ರವಾರ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು.

           ಇಲ್ಲಿನ ಜಿ.ಪಂ. ಉಪ ವಿಭಾಗಕ್ಕೆ ವಿವಿಧ ಯೋಜನೆಗಳಡಿಯಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾದ ಲಕ್ಷಾಂತರ ರೂ.ಗಳ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಕೈಗೊಳ್ಳದಿದ್ದರೂ ಇಲ್ಲಿಂದ ಇತ್ತೀಚೆಗಷ್ಟೇ ವರ್ಗಾವಣೆಗೊಂಡ ಎಂಜಿನಿಯರ್‍ಗಳ ಮೇಲೆ ಒತ್ತಡ ತಂದು, ಕೆಲ ಗುತ್ತಿಗೆದಾರರು ಬಿಲ್ ಪಾವತಿ ಮಾಡಿಕೊಂಡ ಹಿನ್ನೆಲೆಯಲ್ಲಿ ಶಾಸಕರು ಕಚೇರಿಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ಮಾಡಲು ಕಾರಣವಾಗಿತ್ತು.

            ಕಡತಗಳ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ, ಪಿ.ಎಂ.ಜಿ.ಎಸ್.ವೈ. ಯೋಜನೆಯ ಹಣವನ್ನು ಗುಣಮಟ್ಟದ ಕಾಮಗಾರಿ ಕೈಗೊಂಡು ಸದ್ಬಳಕೆ ಮಾಡಿಕೊಳ್ಳಬೇಕಿತ್ತು. ಆದರೆ ಕಾಮಗಾರಿ ಅಪೂರ್ಣಗೊಂಡರೂ ಬಿಲ್ ಪಾವತಿಸಿರುವ ಬಗ್ಗೆ ಮಾಹಿತಿ ಇದ್ದು ಇ.ಇ. ಹಾಗೂ ಎ.ಇ.ಇ. ಅಧಿಕಾರಿಗಳ ಸಮಕ್ಷಮದಲ್ಲಿ ಅಧಿಕಾರಿಗಳೊಟ್ಟಿಗೆ ನಾನೂ ಕೂಡ ತೆರಳಿ ಸ್ಥಳ ತನಿಖೆ ಮಾಡಿ ವರದಿ ಬರುವವರೆಗೂ ಅಧಿಕಾರಿಗಳು ಈ ಸಂಬಂಧ ಯಾವುದೇ ಬಿಲ್ ಪಾವತಿ ಮಾಡದಂತೆ ಸೂಚಿಸಲಾಗಿದೆ ಎಂದು ಶಾಸಕ ಸತ್ಯನಾರಾಯಣ್ ತಿಳಿಸಿದರು.

          ಕಳೆದ 10 ವರ್ಷಗಳಿಂದ ಜಡ್ಡುಗಟ್ಟಿದ ತಾಲ್ಲೂಕು ಆಡಳಿತಕ್ಕೆ ಚುರುಕು ಮುಟ್ಟಿಸುವ ಹೊಣೆ ನಮ್ಮದು. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಯೋಜನೆಯ ಅನುದಾನವನ್ನಾಗಲಿ ಗುಣಮಟ್ಟವನ್ನು ಕಾಯ್ದು ಕೊಳ್ಳಬೇಕು. ಇಲ್ಲವಾದಲ್ಲಿ ಶಿಸ್ತುಕ್ರಮ ಕೈಗೊಳ್ಳುವುದು ಖಚಿತ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here