ನಗರದಲ್ಲಿ ಮತ್ತೆ ಪಾಲಿಕೆಯಿಂದ ಕಾರ್ಯಾಚರಣೆ: ವಿವಿಧೆಡೆ 70 ಹಂದಿಗಳನ್ನು ಹಿಡಿದ ತಂಡ

ತುಮಕೂರು

            ನಗರದಲ್ಲಿ ಹಂದಿ ಹಾವಳಿ ನಿಯಂತ್ರಿಸಲು ಸತತ ಪ್ರಯತ್ನ ನಡೆಸುತ್ತಿರುವ ತುಮಕೂರು ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯು ಬುಧವಾರ ಬೆಳಗ್ಗೆ ಪೊಲೀಸರ ಬೆಂಗಾವಲಿನಲ್ಲಿ ನಗರದ ವಿವಿಧೆಡೆ ಹಠಾತ್ ಕಾರ್ಯಾಚರಣೆ ನಡೆಸಿದ್ದು, ಒಟ್ಟು 70 ಹಂದಿಗಳು ಸಿಕ್ಕಿವೆ. ಕಾರ್ಯಾಚರಣೆಯನ್ನು ಅಡ್ಡಿಪಡಿಸಲು ಕಲ್ಲೆಸೆದ ಈರ್ವರು ಯುವಕರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

            ಈ ಬಾರಿ ಹಂದಿಹಿಡಿಯಲು ಹುಬ್ಬಳ್ಳಿಯ ತಂಡವನ್ನು ಪಾಲಿಕೆಯು ಬಳಸಿಕೊಂಡಿದ್ದು, ಈ ತಂಡ ಬುಧವಾರ ಬೆಳಗ್ಗೆ 6 ಗಂಟೆಯಿಂದಲೇ ದೊಡ್ಡ ದೊಡ್ಡ ಬಲೆಗಳು ಮತ್ತಿತರ ಸಾಮಗ್ರಿಗಳೊಂದಿಗೆ ಕಾರ್ಯಾಚರಣೆ ಕೈಗೊಂಡಿತು.

            ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಟಿ. ನಾಗೇಶ್ ಕುಮಾರ್ ನೇತೃತ್ವದಲ್ಲಿ ಆರೋಗ್ಯ ನಿರೀಕ್ಷಕರುಗಳಾದ ಷಡಕ್ಷರಿ, ಕೃತಿಕ್, ಸಂತೋಷ್, ನಟೇಶ್ ಹಾಗೂ ಸಿಬ್ಬಂದಿಯವರು ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡಿದರು.

            ನಗರದ ಕುವೆಂಪು ನಗರ, ಭಾರತಿ ನಗರ, ಗುರುಲೇಔಟ್, ಬಟವಾಡಿ, ಗೋಕುಲ ಬಡಾವಣೆ, ಮಹಾಲಕ್ಷ್ಮಿ ನಗರ, ಶೆಟ್ಟಿಹಳ್ಳಿಯ ಟೂಡಾ ಲೇಔಟ್ ಸುತ್ತ ಮುತ್ತ ಬೀಡಾಡಿ ಹಂದಿಗಳನ್ನು ಸದರಿ ಹುಬ್ಬಳ್ಳಿ ತಂಡವು ಹಿಡಿದು, ವಾಹನದಲ್ಲಿ ತುಂಬಿಕೊಂಡು ಸಾಗಿಸಿತು.

            ಕಲ್ಲೆಸೆದ ಈರ್ವರು ವಶಕ್ಕೆ

            ಪೊಲೀಸರ ಬಿಗಿ ಭದ್ರತೆಯೊಂದಿಗೆ ಪಾಲಿಕೆಯು ಹಂದಿ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದರೂ, ಮಂಜುನಾಥ ನಗರದಲ್ಲಿ ಬೈಕ್‌ನಲ್ಲಿ ಬಂದ ಈರ್ವರು ಯುವಕರು ಹಂದಿ ಹಿಡಿಯುವ ತಂಡದ ಮೇಲೆ ಕಲ್ಲೆಸೆದು ಕಾರ್ಯಾಚರಣೆಗೆ ಅಡ್ಡಿಪಡಿಸಲು ಯತ್ನಿಸಿದ ಪ್ರಸಂಗವೂ ಜರುಗಿತು. ಅಷ್ಟರಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಿ ಸದರಿ ಇಬ್ಬರು ಯುವಕರನ್ನು ಬೈಕ್ ಸಮೇತ ವಶಕ್ಕೆ ತೆಗೆದುಕೊಂಡು, ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

            ಹಂದಿ ಹಾವಳಿ ತಡೆಗೆ ಸಾರ್ವಜನಿಕರಿಂದ ತೀವ್ರ ಒತ್ತಡ, ಒತ್ತಾಯ ಬಂದ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯು ಹಂದಿ ಹಿಡಿಯುವ ಕಾರ್ಯಾಚರಣೆಯನ್ನು ಆರಂಭಿಸಿದೆ. ಹಂದಿ ಸಾಕಾಣಿಕೆದಾರರಿಂದ ಕಲ್ಲೆಸೆತ ಮತ್ತಿತರ ಅಡಚಣೆ ಆಗುವ ಆತಂಕ ಇರುವುದರಿಂದ ಪೊಲೀಸ್ ಇಲಾಖೆಯು ಇದಕ್ಕೆ ಪೂರ್ಣ ಬೆಂಬಲ ನೀಡಿ, ಬಿಗಿ ಭದ್ರತೆ ಒದಗಿಸುತ್ತಿದೆ. ತಮಿಳುನಾಡಿನ ತಂಡ, ಚಿಕ್ಕನಾಯಕನಹಳ್ಳಿ ತಂಡಗಳು ಈಗಾಗಲೇ ಆಗಮಿಸಿ ನಗರದ ವಿವಿಧೆಡೆ ಬೀಡಾಡಿ ಹಂದಿಗಳನ್ನು ಹಿಡಿದು ಸಾಗಿಸಿವೆ. ಇದೀಗ ಹುಬ್ಬಳ್ಳಿ ತಂಡವು ಬಂದು ಹಂದಿಗಳನ್ನು ಹಿಡಿದು ಒಯ್ದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap