ಯುವ ಕಾಂಗ್ರೆಸ್‍ನಿಂದ ಕರಾಳ ದಿನಾಚರಣೆ

0
6

ದಾವಣಗೆರೆ:

         ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏಕಾಏಕಿ ನೋಟು ಅಮಾನ್ಯೀಕರಣಗೊಳಿಸಿ, ದೇಶದ ಜನತೆಯನ್ನು ಸಂಕಷ್ಠಕ್ಕೆ ತಳ್ಳಿದ ದಿನವಾಗಿರುವ ನವೆಂಬರ್ 8ನ್ನು ಯುವ ಕಾಂಗ್ರೆಸ್‍ನ ದಕ್ಷಿಣ ಕ್ಷೇತ್ರದ ಕಾರ್ಯಕರ್ತರು ಗುರುವಾರ ನಗರದಲ್ಲಿ ಕರಾಳ ದಿನಾಚರಣೆಯನ್ನಾಗಿ ಆಚರಿಸಿದರು.

       ಇಲ್ಲಿನ ಚಾಮರಾಜ್ ಪೇಟೆಯ ಸಿಂಡಿಕೇಟ್ ಬ್ಯಾಂಕ್ ಎದುರು ಜಮಾಯಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

       ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ಪೂರ್ವ ತಯಾರಿ ಇಲ್ಲದೇ, 2016ರ ನವೆಂಬರ್ 8ರಂದು ಏಕಾಏಕಿಯಾಗಿ ನೋಟು ಅಮಾನ್ಯೀಕರಣ ಮಾಡುವ ಮೂಲಕ ದೇಶದ ಜನಸಾಮಾನ್ಯರನ್ನು ಬೀದಿಗೆ ತಂದಿದ್ದಾರೆ. ಅಲ್ಲದೆ, ದೇಶದ ಆರ್ಥಿಕ ಪರಿಸ್ಥಿತಿಯೂ ಸಂಪೂರ್ಣ ಹದಗೆಟ್ಟು ಹೋಗಿ, ಸಣ್ಣ ಮತ್ತು ಮಧ್ಯಮ ವರ್ಗದ ಅಸಂಖ್ಯಾತ ಕೈಗಾರಿಕೆಗಳು ಮುಚ್ಚಲ್ಪಟ್ಟಿರುವುದರಿಂದ ಆ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ಒಪ್ಪೊತ್ತಿನ ಕೂಳಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

         ನೋಟು ಅಮಾನ್ಯೀಕರಣದಿಂದ ದೇಶ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದು, ಅಂದಿನಿಂದ ಇಂದಿನ ವರೆಗೂ ದೇಶ ಆರ್ಥಿಕವಾಗಿ ಚೇತರಿಸಿಕೊಂಡಿಲ್ಲ. ದೇಶದ ಬಡಜನರು, ನಿರ್ಗತಿಕರು, ಅಸಹಾಯಕರು ದೀನ ದಲಿತರಿಗೆ ರೂಪಾಯಿ ಮೌಲ್ಯ ಕ್ಷೀಣಿಸಿದ್ದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೇ, ನೋಟು ರದ್ಧತಿ ಎಂಬ ಕರಾಳ ಕ್ರಮದಿಂದಾಗಿ ಇಡೀ ದೇಶದ ಆರ್ಥಿಕ ಸ್ಥಿತಿಯೇ ಅಲ್ಲೋಲ ಕಲ್ಲೋಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

          ಕಳೆದ 2 ವರ್ಷಗಳ ಹಿಂದೆ ಇದೇ ದಿನ ಸಂಜೆ ದಿಢೀರನೇ ಮಾಧ್ಯಮಗಳ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ನೋಟು ಬ್ಯಾನ್ ಘೋಷಿಸುವ ಮೂಲಕ ಇಡೀ ದೇಶಕ್ಕೆ ಶಾಕ್ ನೀಡಿದ್ದರು. ಅಂದಿನ ದುಡಿಮೆಯನ್ನೇ ನಂಬಿ ಜೀವನ ನಡೆಸುವ ಅದೆಷ್ಟೋ ಕುಟುಂಬಗಳು ಕೇಂದ್ರ ಸರ್ಕಾರದ ಇಂತಹ ಬೇಜಾವಾಬ್ಧಾರಿ ಕ್ರಮದಿಂದ ಇಂದಿಗೂ ಬಡತನ, ಸಂಕಷ್ಟದ ಸುಳಿಗೆ ಸಿಲುಕಿ ಪರದಾಡುವಂತಾಗಿದೆ. ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ನೋಟು ಬ್ಯಾನ್ ಮಾಡಿ ಜನ ವಿರೋಧಿ ಧೋರಣೆ ಅನುಸರಿಸಿದ್ದ ಮೋದಿ ಸರ್ಕಾರ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಜನರಿಗೆ ಗಾಯದ ಮೇಲೆ ಮತ್ತೊಂದು ಮಗದೊಂದು ಬರೆ ಹಾಕುತ್ತಲೇ ಸಾಗಿವೆ. ಇನ್ನೂ ಕೂಡ ಪ್ರಧಾನಿ ಮೋದಿ ಸರ್ಕಾರ ಬೆಲೆ ಏರಿಕೆಗೆ ಕಡಿವಾಣಹಾಕುವ ಮನಸ್ಸು ಮಾಡುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶದ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದರು.

       ಪ್ರತಿಭಟನೆಯಲ್ಲಿ ಪಕ್ಷದ ಯುವ ಮುಖಂಡರಾಜ ಮಹಮ್ಮದ್ ಸಾಧಿಕ್ ಸದ್ದಾಂ, ಮೈನುದ್ದೀನ್, ಅಯಾಜ್, ಮುಕ್ರುಂ, ಸುಹೇಲ್ ಅಹಮ್ಮದ್, ಅಯಾಜ್ ಅಹಮ್ಮದ್, ಸಾದಿಕ್ ಖಾನ್, ಮೊಹೀನ್ ಖಾನ್, ಸಂತೋಷ್, ವಾಸಿಂ ಅಕ್ರಂ, ಇಮ್ರಾನ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here