ಷಡ್ಯಂತರದಿಂದ ಸರ್ದಾರ್‍ಗೆ ತಪ್ಪಿದ ಪ್ರಧಾನಿ ಪಟ್ಟ

0
7

ದಾವಣಗೆರೆ:

      ರಾಜಕೀಯ ಷಡ್ಯಂತರದಿಂದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಪ್ರಧಾನಿ ಆಗುವ ಅವಕಾಶವನ್ನು ತಪ್ಪಿಸಿದ್ದು ದುರಂತದ ಸಂಗತಿಯಾಗಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಬೇಸರ ವ್ಯಕ್ತಪಡಿಸಿದರು.

        ಬುಧವಾರ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಬಿಜೆಪಿಯಿಂದ ಏರ್ಪಡಿಸಿದ್ದ ಏಕತಾ ಓಟದ ನಂತರ ನಗರದ ಜಯದೇವ ವೃತ್ತದಲ್ಲಿ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

         ಉಕ್ಕಿನ ಮನುಷ್ಯ ಸರ್ಧಾರ್ ವಲ್ಲಭಭಾಯಿ ಪಟೇಲ್ ಅವರು ಉಪ ಪ್ರಧಾನಿಗಳಾಗಿ, ಗೃಹ ಸಚಿವರಾಗಿ ಒಳ್ಳೆಯ ಆಡಳಿತವನ್ನು ನೀಡಿದ್ದಾರೆ. ಅವರು ಪ್ರಧಾನಮಂತ್ರಿ ಆಗಬೇಕಿತ್ತು. ಆದರೆ, ಆಗ ನಡೆದ ಕೆಲ ರಾಜಕೀಯ ಷಡ್ಯಂತರದಿಂದ ಅವರಿಗೆ ಪ್ರಧಾನಿ ಪಟ್ಟ ಕೈ ತಪ್ಪಿರುವುದು ಎಲ್ಲಾ ಜನರಿಗೂ ಗೊತ್ತಿರುವ ಸಂಗತಿಯೇ ಆಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

         ಭಾರತ ಸ್ವಾತಂತ್ರ್ಯ ಪಡೆದ ನಂತರದಲ್ಲಿ ಹರಿದು ಹಂಚಿ ಹೋಗಿದ್ದ 550 ಸಾಮ್ರಾಜ್ಯಗಳನ್ನು ಒಗ್ಗೂಡಿಸುವ ಕೆಲಸ ಮಾಡುವ ಮೂಲಕ ದೇಶದ ಏಕತೆಗಾಗಿ ಶ್ರಮಿಸಿದ್ದರು. ಇದರ ಪ್ರತೀಕವಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‍ನ ನರ್ಮದಾ ನದಿ ತೀರದಲ್ಲಿ ಸರ್ದಾರ್ ಪಟೇಲರ ಜಗತ್ತಿನಲ್ಲಿಯೇ ಅತೀ ಎತ್ತರವಾದ ಏಕತೆಯ ಪ್ರತಿಮೆಯನ್ನು ನಿರ್ಮಿಸುವ ಮೂಲಕ ಪಟೇಲರಿಗೆ ಗೌರವ ಸಮರ್ಪಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

         ಇಂದು ಲೋರ್ಕಾಪಣೆಗೊಳ್ಳುತ್ತಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ 182 ಮೀಟರ್ (520 ಅಡಿ) ಎತ್ತರವಿದ್ದು, ಈ ಪ್ರತಿಮೆಯ ನಿರ್ಮಾಣಕ್ಕಾಗಿ ಬಿಜೆಪಿ ರೈತ ಮೋರ್ಚಾದಿಂದ ದೇಶಾದ್ಯಂತ ರೈತರು ಬಳಸಿದ ಕೃಷಿ ಪರಿಕರಗಳ ಕಬ್ಬಿಣದ ತುಂಡುಗಳನ್ನು ಸಂಗ್ರಹಿಸಿ ಕಳುಹಿಸಿದ್ದು, ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಏಕತಾ ಪ್ರತಿಮೆ ನಿರ್ಮಾಣಕ್ಕಾಗಿ 3 ಸಾವಿರ ಕೋಟಿಗೂ ಹೆಚ್ಚು ಅನುದಾನ ವಿನಿಯೋಗಿಸಿ, 3 ಸಾವಿರ ಕಾರ್ಮಿಕರನ್ನು ಬಳಿಸಿಕೊಂಡು ಸುಮಾರು ಮೂರುವರೆ ವರ್ಷಗಳಲ್ಲಿಯೇ ಬೃಹತ್ ಪ್ರತಿಮೆಯನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

         ದೇಶದ ಏಕತೆಗಾಗಿ ಶ್ರಮಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನದ ಪ್ರಯುಕ್ತ ಬಿಜೆಪಿಯು ಪ್ರತಿ ವರ್ಷವೂ ಏಕತಾ ಓಟ ನಡೆಸುವ ಮೂಲಕ ಗೌರವಿಸುತ್ತಿದೆ ಎಂದರು.

          ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ ಮಾತನಾಡಿ, ಭಾರತದ ಏಕತೆಗಾಗಿ ಸರ್ದಾರ್ ವಲ್ಲಭಭಾಯಿ ಪಟೇಲರು ಹೋರಾಟ ಮಾಡಿದಂತಹ ಮಹಾನ್ ನಾಯಕರಾಗಿದ್ದಾರೆ. ಪ್ರಪಂಚದ ಇತಿಹಾಸದಲ್ಲೇ ಅವರ ಹೆಸರು ಅಜರಾಮರವಾಗಿದೆ. ರೈತರ ಕಲ್ಯಾಣಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿ. ಪಟೇಲರ ವ್ಯಕ್ತಿತ್ವಕ್ಕೆ ತಕ್ಕಂತೆ ಪ್ರತಿಮೆ ನಿರ್ಮಿಸಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದರು.

           ಏಕತಾ ಓಟದಲ್ಲಿ ಬಿಜೆಪಿ ಮುಖಂಡರುಗಳಾದ ವೈ.ಮಲ್ಲೇಶ್, ಹೆಚ್.ಎನ್.ಶಿವಶಂಕರ್, ಎನ್.ರಾಜಶೇಖರ್, ಬಿ.ರಮೇಶ್ ನಾಯ್ಕ, ಪಿ.ಸಿ.ಶ್ರೀನಿವಾಸ್, ಶಿವನಗೌಡ ಪಾಟೀಲ್, ಹೇಮಂತಕುಮಾರ್, ತರಕಾರಿ ಶಿವು, ಟಿಂಕರ್ ಮಂಜಣ್ಣ, ಪ್ರಭು ಕಲ್ಬುರ್ಗಿ, ಡಿ.ಎಸ್.ಶಿವಶಂಕರ್, ಪೈಲ್ವಾನ್ ವೀರೇಶ್, ಗಂಗಾಧರ ನಾಯ್ಕ, ಎಂ.ಮನು ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here