ಯಶಸ್ವಿ ಕೃಷಿಯತ್ತ ರೈತ ಮಹಿಳೆ

0
4

ದಾವಣಗೆರೆ

       ‘ಬೇಸಾಯ, ನೀಸಾಯ, ಮನೆಮಂದಿ ಎಲ್ಲಾ ಸಾಯ’ ಎಂಬ ಮಾತೊಂದಿದೆ. ಬೆಳೆಯುತ್ತಿರುವ ಆಧುನಿಕತೆಯಿಂದಾಗಿ ಕೃಷಿ ಸಂಕಟಕ್ಕೆ ತುತ್ತಾಗಿರುವ ರೈತರು, ಕೃಷಿ ತೊರೆದು ನಗರೀಕರಣದತ್ತ ಮುಖ ಮಾಡಿರುವ ಸಂದರ್ಭದಲ್ಲಿ ತಾಲೂಕಿನ ರೈತ ಮಹಿಳೆಯೊಬ್ಬರು ಬಹು ಬೆಳೆ ಬೆಳೆಯುವ ಮೂಲಕ ಯಶಸ್ವಿ ಕೃಷಿಯಲ್ಲಿ ತೊಡಗಿದ್ದಾರೆ.

      ಹೌದು… ತಾಲೂಕಿನ ಕೊಡಗನೂರು ಗ್ರಾಮದ ರೇಣುಕಾರವರು ತಮಗಿರುವ ಮೂರು ಎಕರೆ ಜಮೀನಿನಲ್ಲಿ ಕೃಷಿ ಇಲಾಖೆಯ ಸಹಕಾರದೊಂದಿಗೆ ಸಹಜ ಕೃಷಿಯ ಮೂಲಕ ರಾಗಿ, ಅಲಸಂಧಿ, ಮೆಕ್ಕೆಜೋಳ, ಅವರೇಕಾಳು, ತೆಂಗು ಹೀಗೆ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಸ್ವಾವಲಂಬಿಯಾಗಿ ಜೀವನ ರೂಪಿಸಿಕೊಂಡಿದ್ದಾರೆ.

       ಮೂಲತಹ ಕೃಷಿ ಆಧಾರಿತ ಕುಟುಂಬದಲ್ಲಿ ಜನಸಿದ ರೇಣುಕಾ ಮೊದಲೇ ಕೃಷಿಯಲ್ಲಿ ಪರಿಣಿತಿ ಹೊಂದಿದ್ದರು. ಅಲ್ಲದೆ, ಇವರನ್ನು ರೈತ ಕುಟುಂಬಕ್ಕೆ ಮದುವೆ ಮಾಡಿಕೊಟ್ಟಿದ್ದು, ಕೃಷಿಯಲ್ಲಿ ತೊಡಗಿಸಿಕೊಳ್ಳಲು ಮತ್ತಷ್ಟು ನೆರವಾಗಿದ್ದು, ಕುಟುಂಬದ ಸಹಕಾರದಿಂದಾಗಿ ಈಗ ಕೃಷಿ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.

      ಆರಂಭದಲ್ಲಿ ಕೇವಲ ತರಕಾರಿ ಮಾತ್ರ ಬೆಳೆಯುತ್ತಿದ್ದ ರೇಣುಕಾರುವು ಅತಿವೃಷ್ಟಿ, ಅನಾವೃಷ್ಟಿಯ ಕಾರಣಕ್ಕೆ ಬೆಳೆ ನಾಶವಾಗಿ, ಜಮೀನಿಗೆ ಸುರಿದಿದ್ದ ಬಂಡವಾಳವೂ ಬಾರದೇ, ಕೈ ಸುಟ್ಟಿಕೊಂಡಿದ್ದರು. ಆದರೂ ಧೃತಿಗೆಡದೇ, ಕೃಷಿಯಲ್ಲಿ ಏನನ್ನಾದರೂ ಸಾಧನೆ ಮಾಡಬೇಕೆಂಬ ಛಲದಿಂದ ಕೃಷಿಯಲ್ಲಿ ಬಹು ಬೆಳೆ ಪದ್ದತಿಯನ್ನು ಅಳವಡಿಸಿಕೊಂಡು, ಕಡಿಮೆ ನೀರು ಬೇಡುವ ರಾಗಿ, ಅಲಸಂಧಿ, ಮೆಕ್ಕೆಜೋಳ, ಅವರೇಕಾಳು ಸೇರಿದಂತೆ ಇತರೆ ಬೆಳೆ ಬೆಳೆಯಲು ಆರಂಭಿಸಿದ್ದಾರೆ. ಅಲ್ಲದೆ, ಮೌಲ್ಯವರ್ಧನ ಘಟಕ ಸ್ಥಾಪಿಸಿ ರಾಗಿ ಹಿಟ್ಟು, ಕಾರದ ಪುಡಿ, ತೆಂಗಿನ ಎಣ್ಣಿ ಉತ್ಪಾದನೆ ಮಾಡುವುದರ ಜತೆಗೆ ಸಿರಿಧಾನ್ಯಗಳಿಗೂ ಅವರೇ ಮಾರುಕಟ್ಟೆ ಕಂಡುಕೊಂಡಿರುವುದು ಲಾಭಗಳಿಕೆಗೆ ಕಾರಣವಾಗಿದೆ.

        ಇವರ ಸಾಧನೆ ಗುರುತಿಸಿ 2013-14ರಲ್ಲಿ ಶಿವಮೊಗ್ಗ ವಿಶ್ವವಿದ್ಯಾನಿಲಯ “ಪ್ರಗತಿಪರ ರೈತ ಮಹಿಳೆ” ಪ್ರಶಸ್ತಿಯನ್ನು ಸಹ ಪ್ರದಾನ ಮಾಡಿ ಗೌರವಿಸಿದೆ.ಅತೀಯಾದ ರಾಸಾಯನಿಕ ಗೊಬ್ಬರ, ಕ್ರಿಮಿ ನಾಶಕಗಳ ಬಳಕೆಯಿಂದ ಆಹಾರಧಾನ್ಯ ವಿಷಪೂರಿತ ಆಗುವುದಲ್ಲದೇ, ರೈತರಿಗೆ ಆರ್ಥಿಕ ಹೊರೆಯೂ ಆಗಲಿದೆ. ಅಲ್ಲದೆ, ಭೂಮಿಯ ಫಲವತ್ತತೇ ಸಹ ಕಳೆದುಕೊಳ್ಳುತ್ತದೆ. ಆದ್ದರಿಂದ ಸಾವಯವ ಕೃಷಿ ಕೈಗೊಂಡರೆ, ಶುದ್ಧ ಆಹಾರ ಪದಾರ್ಥ ದೊರೆಯಲಿದೆ. ಅಲ್ಲದೆ, ರೈತರಿಗೆ ಆರ್ಥಿಕ ಹೊರೆ ತಗ್ಗುವುದರ ಜತೆಗೆ ಭೂಮಿಯ ಕಸುವು ಕಾಪಾಡಿಕೊಳ್ಳಬಹುದು. ಆದ್ದರಿಂದ ರೈತರು ಸಾವಯವ ಕೃಷಿಯತ್ತ ಮುಖ ಮಾಡಬೇಕೆಂದು ಸಲಹೆ ನೀಡುತ್ತಾರೆ ರೈತ ಮಹಿಳೆ ರೇಣುಕಾ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here