ಭಾರತ್ ಬಂದ್ : ಏನಿರುತ್ತೇ ,ಏನಿರಲ್ಲ????

0
492

ಬೆಂಗಳೂರು

         ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆ ವಿರೋಧಿಸಿ ಸಾರಿಗೆ ಇಲಾಖೆ ಕಾರ್ಮಿಕ ಸಂಘಟನೆಗಳು ಮಂಗಳವಾರ ಹಾಗೂ ಬುಧವಾರ ಎರಡು ದಿನ ಕೇಂದ್ರ ಸರ್ಕಾರದ ವಿರುದ್ಧ ಭಾರತ್‍ಬಂದ್‍ಗೆ ಕರೆ ನೀಡಿರುವುದರಿಂದ ಬಿಎಂಟಿಸಿ ಹಾಗೂ ಕೆಎಸ್‍ಆರ್‍ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಬಸ್‍ಗಳ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

        ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್‍ನಲ್ಲಿ ಕಾರ್ಮಿಕ ಸಂಘಟನೆಗಳು ಪಾಲ್ಗೊಳ್ಳಲಿದ್ದು ಜ.8 ಮತ್ತು 9 ಬಿಎಂಟಿಸಿ ಹಾಗೂ ಕೆಎಸ್‍ಆರ್ ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಬಸ್‍ಗಳು ಸ್ತಬ್ಧವಾಗಲಿದೆ ಎಂದು ಸಿಐಟಿಯು ಉಪಾಧ್ಯಕ್ಷ ಅನಂತ್ ಸುಬ್ಬರಾವ್ ತಿಳಿಸಿದ್ದಾರೆ.

        ಮಂಗಳವಾರ ಬೆಳಗ್ಗೆ ಆರು ಗಂಟೆಯಿಂದ ಬುಧವಾರ ಸಂಜೆ ಐದು ಗಂಟೆಯವರೆಗೂ ಬಂದ್ ನಡೆಯಲಿದೆ ಮೋಟಾರು ವಾಹನ ತಿದ್ದುಪಡಿ ಮಸೂದೆ -2017ರನ್ನು ಹಿಂಪಡೆಯಲು, ಸಾರಿಗೆ ಉದ್ದಿಮೆಯನ್ನ ರಕ್ಷಿಸಲು ಮತ್ತು ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸಲು ಬಂದ್‍ಗೆ ಕರೆ ಮಾಡಲಾಗಿದೆ.

ಬಂದ್ ದಿನ ಏನಿರಲ್ಲ

        ಆಟೋ ಸಂಘಟನೆಯಿಂದ ಬೆಂಬಲ ಇರುವುದರಿಂದ ಆಟೋ ಕೂಡ ಸಿಗಲ್ಲ. ಇತ್ತ ಓಲಾ ಮತ್ತು ಊಬರ್ ಕ್ಯಾಬ್‍ಗಳು ಸಿಗುವುದಿಲ್ಲ. ಮುಷ್ಕರದಲ್ಲಿ ಬ್ಯಾಂಕ್ ನೌಕರರು ಕೂಡ ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ಬ್ಯಾಂಕ್ ಸೇವೆಯಲ್ಲೂ ವ್ಯತ್ಯಯವಾಗುವ ಸಾಧ್ಯತೆಗಳು ಇವೆ. ಎಪಿಎಂಸಿ ಲಾರಿ ಸಿಬ್ಬಂದಿ ಪಾಲ್ಗೊಳ್ಳುವುದರಿಂದ ಎಪಿಎಂಸಿ ಸ್ತಬ್ಧಗೊಳ್ಳುವ ಸಾಧ್ಯತೆ ಇದೆ.ಆಸ್ಪತ್ರೆಗಳು, ಮೆಡಿಕಲ್ ಶಾಪ್, ಅಂಗಡಿ ಮುಂಗಟ್ಟುಗಳು ಇರುತ್ತದೆ. ಜೊತೆಗೆ ಅಂಬುಲೆನ್ಸ್ ಸೇವೆ, ಮೆಟ್ರೋ ಮತ್ತು ರೈಲು ಸೇವೆ ಎಂದಿನಂತಿರಲಿದೆ

50- 50 ಬೆಂಬಲ

       ನಿರ್ಧಾರ ಪ್ರಕಟಿಸದ ಹೋಟೆಲ್ ಮಾಲೀಕರು ನೈತಿಕ ಬೆಂಬಲದ ಘೋಷಣೆ ಮಾಡಿದ್ದು, ಚಿತ್ರೋದ್ಯಮದ ನೈತಿಕ ಬೆಂಬಲ, ಚಿತ್ರ ಪ್ರದರ್ಶನ ಬಂದ್ ಮಾಡುವ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಇನ್ನೂ ಶಾಲಾ ಕಾಲೇಜುಗಳ ವಾಹನಗಳು ಸ್ತಬ್ಧವಾಗುವುದರಿಂದ ಆಯಾಯ ಜಿಲ್ಲಾಧಿಕಾರಿಗಳು ಶಾಲಾ -ಕಾಲೇಜು ಬಂದ್ ನಿರ್ಣಯ ಕೈಗೊಳ್ಳಲಿದ್ದಾರೆ.

        ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸುವುದು ಸೇರಿ 12 ಬೇಡಿಕೆಗಳನ್ನು ಮುಂದಿಟ್ಟು ಎಐಟಿಯುಸಿ, ಸಿಐಟಿಯು, ಐಎನ್‍ಟಿಯುಸಿ, ಎಲ್‍ಪಿಎಫ್ ಇನ್ನಿತರ ಸಂಘಟನೆಗಳು ಬಂದ್‍ನಲ್ಲಿ ಭಾಗಿಯಾಗಲಿವೆ.

ಮುಷ್ಕರ ಬೆಂಬಲಿಸಿ ಪ್ರತಿಭಟನೆ

       ಬರುವ ಮಂಗಳವಾರ ಹಾಗೂ ಬುಧವಾರ ಕರೆ ನೀಡಿರುವ ರಾಷ್ಟ್ರವಾಪ್ತಿ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಎಡ ಪಕ್ಷದ ಸದಸ್ಯರು ಹಾಗೂ ಪ್ರಗತಿಪರರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

       ಪುರಭವನದ ಮುಂಭಾಗದ ಸಿಪಿಐ(ಎಂಎಲ್) ಲಿಬರೇಶನ್, ಸಿಯುಸಿಐ(ಸಿ) ಕಾರ್ಯಕರ್ತರು ಪ್ರತಿಭಟನಕಾರರು ಸೇರಿ ಎಲ್ಲಾ ಕಾರ್ಮಿಕರಿಗೆ 18 ರೂ. ಕನಿಷ್ಠ ವೇತನ ನಿಗದಿಪಡಿಸಬೇಕು. ಗುತ್ತಿಗೆ ಕಾರ್ಮಿಕ ಪದ್ದತಿಯನ್ನು ನಿಷೇಧಿಸಬೇಕು. ಬಹುರಾಷ್ಟ್ರೀಯ ಕಂಪನಿಗಳ ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಬಾರದು ಎಂದು ಒತ್ತಾಯಿಸಿದರು.

      ಕೇಂದ್ರ ಸರ್ಕಾರದ ಬೆಲೆ ಏರಿಕೆ, ನೋಟು ಅಮಾನ್ಯಿಕರಣ ಮತ್ತು ಜಿಎಸ್‍ಟಿ ನೀತಿಯಿಂದ ರೈತರು, ಕಾರ್ಮಿಕರು ಸಂಕಷ್ಟಕ್ಕಿಡಾಗಿದ್ದಾರೆ. ಕಾರ್ಮಿಕರ ಹಿತಕ್ಕೆ ಇದ್ದ ಕಾಯಿದೆಗಳನ್ನು ಕಾಪೆರ್ರೇಟ್ ಹಿತಕ್ಕೆ ಬದಲಾಯಿಸಲಾಗಿದೆ. ದೇಶದ ಜನತೆಗೆ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ಪ್ರಧಾನ ಮಂತ್ರಿ ವಿಫಲವಾಗಿದ್ದಾರೆ ಎಂದು ಪ್ರತಿಭಟನಾಕಾರರು ಟೀಕಿಸಿದರು.

       ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾರ್ಮಿಕರ ಮುಖಂಡ ಉಮೇಶ್, ಕೇಂದ್ರ ಸರ್ಕಾರದ ನೀತಿಯಿಂದ ಆರ್ಥಿಕ ಮುಗ್ಗಟ್ಟು ಉಂಟಾಗುತ್ತಿದೆ. ಆಧುನಿಕ ತಂತ್ರಜ್ಞಾನದ ಅವೈಜ್ಞಾನಿಕ ಬಳಕೆಯಿಂದ ಇರುವ ಉದ್ಯೊಗ ಕಸಿದುಕೊಳ್ಳುವ ಕೆಲಸ ನಡೆಯುತ್ತಿದೆ. ಇದರಿಂದ ಕಾರ್ಮಿಕರ ಬದುಕು ದುಸ್ಥಿತಿಗೆ ಇಳಿದಿದೆ. ಬೆಲೆ ಏರಿಕೆ ತಡೆದು ದೇಶದ ದುಡಿಯುವ ಕಾರ್ಮಿಕರಿಗೆ ನೀಡಿದಂತೆ ಹೊಸ ಉದ್ಯೊಗಗಳನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

       ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಿ, ಅವರಿಗೆ ಸುಪ್ರಿಂ ಕೋರ್ಟ್ ತೀರ್ಪಿನಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ನಿಧಿಯನ್ನು ಸ್ಥಾಪಿಸಿ ಅದಕ್ಕೆ ಬಜೆಟ್ ನೆರವು ನೀಡಬೇಕು. ಎಲ್ಲಾ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಭವಿಷ್ಯನಿಧಿ, ಪಿಂಚಣಿ ಯೋಜನೆ ರೂಪಿಸಬೇಕು ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here