ಕಾನ್ಶಿರಾಂ 85 ನೆ ಜನ್ಮದಿನಾಚರಣೆ

ಶಿರಾ

        ಎಸ್‍ಸಿ, ಎಸ್‍ಟಿ, ಓಬಿಸಿಯ ಮತಗಳು ಮಾರಾಟಕ್ಕಿಲ್ಲ ಎಂದು ತಿಳಿಸಿದ ಆಧುನಿಕ ರಾಜಕೀಯ ತಜ್ಞ ಕಾನ್ಶಿರಾಂ ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಸಿ.ರಂಗಧಾಮಯ್ಯ ತಿಳಿಸಿದರು.ಅವರು ರಂಗನಾಥ ನಗರದ ಬಯಲು ರಂಗಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬಿಎಸ್‍ಪಿ ಸಂಸ್ಥಾಪಕ ಕಾನ್ಶಿರಾಂ ಅವರ 85 ನೆ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

        ಅಂಬೇಡ್ಕರ್, ಬುದ್ಧ ಜಯಂತಿಗೆ ರಜೆ ನೀಡದೆ ಇದ್ದುದನ್ನು ಪ್ರಶ್ನಿಸಿ, ಪ್ರತಿಭಟಿಸಿ, ರಕ್ಷಣಾ ಇಲಾಖೆಯ ಸಂಶೋಧನಾ ಇಲಾಖೆಯಲ್ಲಿ ಕೆಲಸ ಬಿಟ್ಟ ಕಾನ್ಶಿರಾಂ ಅವರು, ಇಡೀ ದೇಶದಲ್ಲಿ ಪ್ರಪ್ರಥಮ ಬಾರಿಗೆ ಮಂಡಲ್ ವರದಿಯ ಜಾಗೃತಿ ಮೂಡಿಸುತ್ತ, ಮಂಡಲ್ ವರದಿ ಜಾರಿ ಕರೋ ನಹಿತೋ ಕುರ್ಚಿ ಖಾಲಿ ಕರೋ ಎಂಬ ಘೋಷಣೆಯ ಮೂಲಕ ಇಡೀ ಭಾರತ ದೇಶ ಸುತ್ತಿ ಅದು ಜಾರಿಗೆ ಬರಲು ಮಹತ್ತರ ಪಾತ್ರ ವಹಿಸಿದ್ದರು ಎಂದರು.

        ದಲಿತ ಸಂಘರ್ಷ ಸಮಿತಿಯ ಸಂಚಾಲಕ ಟೈರ್ ರಂಗನಾಥ್ ಅವರು ಮಾತನಾಡಿ, ಶೋಷಿತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಅಧಿಕಾರದ ಚುಕ್ಕಾಣಿ ಹಿಡಿಯಬೇಕು. ಎಲ್ಲರೊಂದಿಗೆ ಸಮಾನತೆ ಸಾಧಿಸಬೇಕು ಎಂಬ ಮಹತ್ತರ ಉದ್ದೇಶದಿಂದ ಡಾ. ಬಿ.ಆರ್. ಅಂಬೇಡ್ಕರ್‍ರವರು ಎಳೆದು ತಂದಿದ್ದ ಸಮಾನತೆಯ ರಥವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಮಹತ್ತರ ಕಾಣಿಕೆ ನೀಡಿ ಅಂಬೇಡ್ಕರ್‍ರವರ ಆಶಯ ಈಡೇರಿಸಲು ಕಾರಣರಾಗಿದ್ದಾರೆ.

       ದೇಶಾದ್ಯಂತ ಶೇ. 80 ರಷ್ಟಿರುವ ಶೋಷಿತ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಸಂಪತ್ತು ಶೇ. 20 ರಷ್ಟಿರುವ ಜನರ ಕೈಯಲ್ಲಿ ಇರುವ ಬಗ್ಗೆ ಸದಾ ಚಿಂತಿಸುತ್ತಿದ್ದ ಕಾನ್ಶಿರಾಂ ಶೇ. 80 ರಷ್ಟಿರುವ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸಂಪತ್ತನ್ನು ಗಳಿಸುವ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಅನೇಕ ಕಾರ್ಯಕ್ರಮ, ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತಂದಿದ್ದರು ಎಂದರು.

         ಮಾನವ ಬಂಧುತ್ವ ವೇದಿಕೆಯ ಧರಣಿ ಕುಮಾರ್ ಮಾತನಾಡಿ, ಈ ದೇಶದ ರಾಜಕೀಯ ಪಿತಾಮಹರಾಗಿದ್ದ ಸಾಹೆಬ್ ಕಾನ್ಶಿರಾಂ ಅವರು ರಾಜಕಾರಣದ ಪ್ರಮುಖ ಚಿಂತನೆಗಳ ಮೂಲಕ ರಾಜಕೀಯ ಮುನ್ನುಡಿ ಬರೆದು ಎರಡನೆ ಅಂಬೇಡ್ಕರ್ ಸ್ಥಾನವನ್ನು ಅಲಂಕರಿಸಿದ್ದರು. ಶೋಷಿತ ವರ್ಗದ ಧ್ವನಿಯಾಗಿದ್ದ ಕಾನ್ಶಿರಾಂ ಅವರು ತಳವರ್ಗದ ಜನರನ್ನು ಉನ್ನತ ಸ್ಥಾನಕ್ಕೆ ತರಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಇಂತಹ ಮಹಾನ್ ನಾಯಕರ ಅಗತ್ಯತೆ ಪ್ರಸ್ತುತವಾಗಿ ಅವಶ್ಯಕತೆ ಇದೆ ಎಂದರು.

         ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆಯ ರಂಗರಾಜು, ನವೋದಯ ಯುವ ವೇದಿಕೆ ಅಧ್ಯಕ್ಷ ಜಯರಾಮಕೃಷ್ಣ, ಸಾಹಿತಿ ಕೃಷ್ಣಪ್ಪ, ಶಂಕರ್, ಶಿವಾಜಿ ನಗರ ತಿಪ್ಪೇಸ್ವಾಮಿ, ಕರಿರಾಮನಹಳ್ಳಿ ಭೂತರಾಜು, ಮಜರ್ ಸಾಬ್, ರವಿಕುಮಾರ್.ಜಿ.ಎಂ, ರಾಜು.ಕೆ, ಕೆಂಪನಹಳ್ಳಿ ಶಾಂತಕುಮಾರ್, ಕಾರೆಹಳ್ಳಿ ರಂಗನಾಥ್, ಕಾರ್ತಿಕ್ ಸೇರಿದಂತೆ ಹಲವರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap