ಸಮಾಜದ ನೆಮ್ಮದಿ ಹಾಗೂ ಶಾಂತಿಯುತ ಬದುಕಿಗೆ ಪೊಲೀಸರ ಸೇವೆ ಅನನ್ಯ

ಹಾವೇರಿ

       ದಿನದ 24 ಗಂಟೆ ಹಾಗೂ ವರ್ಷದ 365 ದಿನ ಜನಸಮಾನ್ಯರೊಂದಿಗೆ ಸ್ಪಂದಿಸುತ್ತ, ಸಮಾಜದ ನೆಮ್ಮದಿ ಹಾಗೂ ಶಾಂತಿಯುತ ಬದುಕಿಗೆ ಹಗಲಿರುಳು ಶ್ರಮಿಸುತ್ತಿರುವ ಪೊಲೀಸರ ಸೇವೆ ಅನನ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಹೇಳಿದರು.
ರವಿವಾರ ಕೆರೆಮತ್ತಿಹಳ್ಳಿ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಲಾದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

        ಪೊಲೀಸರು ಸುಸ್ಥಿರ ಸಮಾಜದ ಆಧಾರ ಸ್ತಂಭಗಳು. ಸೈನಿಕರು ಹೊರಗಿನ ಶತ್ರುಗಳಿಂದ ದೇಶವನ್ನು ರಕ್ಷಿಸಿದರೆ ಪೊಲೀಸರು ಆಂತರಿಕ ಶತ್ರುಗಳಿಂದ ಸಂರಕ್ಷಣೆ ಮಾಡುತ್ತಾರೆ. ದೇಶಕ್ಕಾಗಿ ಹಲವಾರು ಪೊಲೀಸರು ಧೈರ್ಯ ಮತ್ತು ಶೌರ್ಯದಿಂದ ಪ್ರಾಣ ತ್ಯಾಗಮಾಡಿದ್ದಾರೆ. ಅವರ ಸ್ಮರಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಹಾಗೂ ಎಲ್ಲರಿಗೂ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸೋಣ ಎಂದರು.
ಪೊಲೀಸರ ಜೀವನದಲ್ಲಿ ಒತ್ತಡ ಸಹಜ, ಪೊಲೀಸರು ಒತ್ತಡ ರಹಿತ ಜೀವನಶೈಲಿ ರೂಢಿಸಿಕೊಳ್ಳಬೇಕು. ಪೊಲೀಸರ ಸಮಸ್ಯೆಗಳ ನಿವಾವರಣೆಗೆ ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ಹೇಳಿದರು.

        ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಅವರು ದೇಶದಲ್ಲಿ ದಿನಾಂಕ 01-09-2017 ರಿಂದ 31-08-2018ರವರೆಗೆ ಕರ್ತವ್ಯದ್ದಲಿದ್ದಾಗ ಹುತಾತ್ಮರಾದ ರಾಜ್ಯದ 15 ಜನ ಪೊಲೀಸರು ಸೇರಿ ದೇಶದ 414 ಪೊಲೀಸರ ನಾಮಸ್ಮರಣೆ ಮಾಡಿದರು.

        21 ಅಕ್ಟೋಬರ್ 1959 ರಂದು ಹಾಟ್ ಸ್ಟ್ರಿಂಗ್ಸ್ ಪೋಸ್ಟ್ ಹತ್ತಿರ ಗಡಿ ಭಾಗದಲ್ಲಿ ಭಾರತದ ಸಿ.ಆರ್.ಪಿ.ಎಫ್. ಪೊಲೀಸ್ ದಳ ಡಿ.ಎಸ್.ಪಿ. ಕರಣ್‍ಸಿಂಗ್ ಅವರ ನೇತೃತ್ವದಲ್ಲಿ ಪಹರೆ ಮಾಡುತ್ತಿರುವ ಸಂದರ್ಭದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಚೈನಾ ಸೈನಿಕರು ಹಠಾತ್ ದಾಳಿ ನಡೆಸಿದರು. ಆದರೆ ನಮ್ಮ ಸಿ.ಆರ್.ಪಿ.ಎಫ್. ಪೊಲೀಸರು ತಮ್ಮ ಹತ್ತಿರವಿದ್ದ ಕೆಲವೇ ರೈಫ್‍ಗಳಿಂದ ತಮ್ಮ ಜೀವನದ ಹಂಗನ್ನು ತೊರೆದು ಕೊನೆಯ ಉಸಿರಿರುವರೆಗೆ ಹೋರಾಡಿದರು. ಈ ಸಮಯದಲ್ಲಿ 10 ಜನ ಪೊಲೀಸರು ಹುತಾತ್ಮರಾದರು.

         ದೇಶಕ್ಕಾಗಿ ಹೋರಾಡುತ್ತಾ ವೀರ ಮರಣಹೊಂದಿದ್ದ ಪೊಲೀಸರ ಸ್ಮರಣೆಗಾಗಿ ಸ್ಮಾರಕವನ್ನು ಲಡಾಕ್‍ನಲ್ಲಿ ಬಾಸಿ ಚೀನಾ ಭಾಗದಲ್ಲಿ ಸ್ಥಾಪಿಸಲಾಗಿದೆ. ಈ ಹುತಾತ್ಮರ ಸ್ಮರಣೆಗಾಗಿ ದೇಶಾದ್ಯಂತ ಪ್ರತಿ ವರ್ಷ ಅಕ್ಟೋಬರ್ 21 ರಂದು ಪೊಲೀಸ್ ಹುತ್ಮಾತರ ದಿನಾಚರಣೆ ಆಚರಿಸಲಾಗುತ್ತಿದೆ ಹಾಗೂ ಕರ್ತವ್ಯದಲ್ಲಿದ್ದಾಗ ಹುತಾತ್ಮರರಾದ ಪೊಲೀಸರುಗಳನ್ನು ದೇಶದದ್ಯಂತ ಎಲ್ಲ ಘಟಕಗಳಲ್ಲಿ ಸ್ಮರಿಸಲಾಗುತ್ತಿದೆ ಎಂದು ಹೇಳಿದರು.

        ಪುಷ್ಪ ನಮನ: ಇದೇ ಸಂದರ್ಭದಲ್ಲಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೆ.ಪರಶುರಾಮ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ವಿವಿಧ ಪೊಲೀಸ್ ಅಧಿಕಾರಿಗಳಾದ ಬಿ.ಎಂ.ಪಾಟೀಲ, ಎಂ.ಎಸ್.ಹೆಗಡೆ, ಶ್ರೀಮತಿ ಭಾರತಿ ಹೆಗಡೆ, ಶ್ರೀಮತಿ ಅನ್ನಪೂರ್ಣ ಹುಲಗೂರ, ಎಂ.ಎಸ್.ಕಲ್ಲೇದೇವರ, ಬಿ.ಎ.ಬೆಟಗೇರಿ, ಎ.ಎಂ.ಪವಾರ, ಎಂ.ಪಾಶಾ, ಶ್ರೀಮತಿ ಜಯಾ ಕುಲಕರ್ಣಿ, ಜಿ.ಎಸ್.ಕೂಡ್ಲಗಿ, ಕಾರಾಗೃಹ ಅಧೀಕ್ಷಕ ಟಿ.ಬಿ.ಭಜಂತ್ರಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನಮಠದ, ನಗರಸಭೆ ಸದಸ್ಯ ಸಾತೇನಹಳ್ಳಿ, ಮುಖಂಡರಾದ ಶಿವರಾಜ ಮರ್ತೂರ, ಹೊನ್ನಪ್ಪ ತಗಡಿನಮನಿ ಸೇರಿದಂತೆ ಹಲವರು ಪುಷ್ಪನಮನ ಸಲ್ಲಿಸಿದರು. ಶಿಕ್ಷಕ ನಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap